ನಟಿ ಕೃತಿಕಾ ಹತ್ಯೆ:ಮಾಜಿ ಪತಿಯ ಪಾತ್ರ?ಡ್ರಗ್ಸ್ ಜಾಲದ ನಂಟು?
Team Udayavani, Jun 17, 2017, 5:13 PM IST
ಮುಂಬಯಿ: ಕಿರುತೆರೆ ನಟಿ ಕೃತಿಕಾ ಚೌಧರಿಯನ್ನು ಹತ್ಯೆ ಮಾಡಲಾಗಿದೆ ಎಂಬುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾಬೀತಾದ ಬೆನ್ನಲ್ಲೇ ಹತ್ಯೆಯ ಹಿಂದೆ ಆಕೆಯ ಮಾಜಿ ಪತಿಯ ಪಾತ್ರವಿರುವ ಬಗ್ಗೆ ಶಂಕೆ ಮೂಡಿದೆ.
ಆತನನ್ನು ವಿಜಯ್ ದ್ವಿವೇದಿ ಎಂದು ಗುರುತಿಸಲಾಗಿದೆ. ಈತನು ಕಾಂಗ್ರೆಸ್ ನಾಯಕ ಜನಾದìನ ದ್ವಿವೇದಿಯ ಪುತ್ರ ಎಂದು ಹೇಳಿಕೊಳ್ಳುತ್ತ ಚಿತ್ರರಂಗದ ಹಲವು ವ್ಯಕ್ತಿಗಳಿಗೆ ಹಾಗೂ ರಾಜಕೀಯ ನಾಯಕರಿಗೆ ವಂಚಿಸಿರುವ ಆರೋಪದಲ್ಲಿ 2012ರಲ್ಲಿ ಮುಂಬಯಿ ಪೊಲೀಸ್ ಅಪರಾಧ ಶಾಖೆಯವರು ಬಂಧಿಸಿದ್ದರು.
2012ರಲ್ಲಿ ಅಕ್ಕ ದ್ವಿವೇದಿಗೆ ವಿಚ್ಛೇದನ ನೀಡಿದ್ದಳು ಎಂದು ಕೃತಿಕಾ ಚೌಧರಿ ಸಹೋದರ ದೀಪಕ್ (25) ತಿಳಿಸಿದ್ದಾರೆ. ದ್ವಿವೇದಿ ವಿರುದ್ಧ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.
ಜನಾರ್ದನ ದ್ವಿವೇದಿಯ ಸಂಬಂಧಿಕನೆಂದು ಹೇಳಿಕೊಳ್ಳುತ್ತ, 2010ರ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ವಿಐಪಿ ಟಿಕೆಟ್‌ಗಳನ್ನು ಪಡೆದುಕೊಂಡಿರುವ ಪ್ರಕರಣದಲ್ಲೂ ವಿಜಯ್ ಆರೋಪಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ದ್ವಿವೇದಿ ಚೌಧರಿಗೆ ಬಾಲಿವುಡ್‌ನಲ್ಲಿ ಅವಕಾಶ ಗಳನ್ನು ನೀಡುವ ಭರವಸೆ ನೀಡಿ, ಆಕೆಗೆ ಮುಂಬಯಿಗೆ ಸ್ಥಳಾಂತರ ಹೊಂದುವಂತೆ ಒತ್ತಾಯ ಮಾಡಿದ. ತದನಂತರ, ಇಲ್ಲಿ ಆಕೆಯೊಂದಿಗೆ ವಿವಾಹ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚ್ಛೇದನದ ಬಳಿಕ ಚೌಧರಿ ಜತೆಗಿನ ಸಂಬಂಧಗಳ ಕುರಿತು ದ್ವಿವೇದಿಯನ್ನು ಪ್ರಶ್ನಿಸ ಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬುಧವಾರ ಬೆಳಗ್ಗೆ ತಮ್ಮ ತಾಯಿಯೊಂದಿಗೆ ಇಲ್ಲಿಗೆ ಆಗಮಿಸಿರುವ ದೀಪಕ್ ಅವರು, ಯಾರೂ ಯಾವ ಕಾರಣಕ್ಕಾಗಿ ಇದನ್ನು (ಹತ್ಯೆ) ಮಾಡಿದ್ದಾರೆ ಎಂದು ನಮಗೆ ಗೊತ್ತಿಲ್ಲ. ನಾನು ಕಳೆದ ಜೂ. 7ರಂದು ಆಕೆಯೊಂದಿಗೆ ಕೊನೆಯ ಬಾರಿಗೆ ಮಾತನಾಡಿದ್ದೆ. ಇದಾದ ಕೆಲವು ದಿನಗಳ ಬಳಿಕ ಆಕೆ ತನ್ನ ಫೋನ್‌ಗೆ ಉತ್ತರಿಸಿರಲಿಲ್ಲ. ಆದರೆ, ನಾವು ಏನೋ ತಪ್ಪು ನಡೆದಿದೆ ಎಂದು ಭಾವಿಸಿರಲಿಲ್ಲ. ಪೊಲೀಸರು ಸೋಮವಾರ ನಮಗೆ ಕರೆ ಮಾಡಿ ಕೃತಿಕಾ ಸತ್ತಿರುವ ಬಗ್ಗೆ ತಿಳಿಸಿದರು ಎಂದರು.
ಜೂ. 12ರಂದು ನಟಿ ಕೃತಿಕಾ ಚೌಧರಿಯ ಶವ ಉಪನಗರ ಅಂಧೇರಿ ಪಶ್ಚಿಮದಲ್ಲಿರುವ ಆಕೆಯ ಫ್ಲ್ಯಾಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೂಲತಃ ಹರಿದ್ವಾರ ನಿವಾಸಿಯಾಗಿರುವ ಕೃತಿಕಾ ಚೌಧರಿ, ಅಂಧೇರಿ ಪಶ್ಚಿಮದ ಫೋರ್ ಬಂಗ್ಲೋಸ್‌ನಲ್ಲಿರುವ ಎಸ್‌ಆರ್‌ಎ ಕಟ್ಟಡದ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದಳು. ನಟಿ ಕೃತಿಕಾ ನಿಗೂಢ ಸಾವಿನ ಕುರಿತಂತೆ ಅಂಬೋಲಿ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೈದ್ಯರಿಂದ ಲಭ್ಯವಾಗಿರುವ ಮರಣೋತ್ತರ ಪರೀಕ್ಷೆಯ ಆರಂಭಿಕ ವರದಿಯಲ್ಲಿ ಕೃತಿಕಾ ಚೌಧರಿಯನ್ನು ಐದೂ ಬೆರಳುಗಳಿಗೆ ತೊಡಿಸಬಲ್ಲ ಹರಿತವಾದ ಆಯುಧವೊಂದರಿಂದ ಹತ್ಯೆ ಮಾಡಲಾಗಿರುವುದು ತಿಳಿದುಬಂದಿದೆ. ಪೊಲೀಸರು ಹತ್ಯೆಗೆ ಬಳಸಲಾದ ಆಯುಧವನ್ನೂ ವಶಪಡಿಸಿಕೊಂಡಿದ್ದಾರೆ. ಮೃತ ದೇಹದ ಮೇಲೆ ಹಲವು ಗಾಯಗಳು ಕಂಡುಬಂದಿದ್ದು, ಇದರಿಂದ ಕೃತಿಕಾಳನ್ನು ಸಾಯಿಸುವ ಮೊದಲು ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವುದು ಸ್ಪಷ್ಟವಾಗುತ್ತದೆ ಎಂದು ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರ ತಂಡ ತಿಳಿಸಿದೆ.
ಸಿಸಿಟಿವಿ ದೃಶ್ಯಾವಳಿಯ ಪರಿಶೀಲನೆ ಹಾಗೂ ಕಟ್ಟಡದ ನಿವಾಸಿಗರ ವಿಚಾರಣೆಯ ಬಳಿಕ ಪೊಲೀಸರು ಈ ಪ್ರಕರಣದಲ್ಲಿ ಈರ್ವರು ವ್ಯಕ್ತಿಗಳನ್ನೂ ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಅವರ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿರುವ ಈರ್ವರು ವ್ಯಕ್ತಿಗಳ ಪಾತ್ರವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬಂಧಿತರಲ್ಲಿ ಓರ್ವ ಕಟ್ಟಡದ ವಾಚ್‌ಮ್ಯಾನ್ ಎಂದು ಹೇಳಲಾಗುತ್ತಿದೆ.
ದಯಾ ನಾಯಕ್‌ಗೆ ಪ್ರಕರಣದ ತನಿಖೆಯ ಜವಾಬ್ದಾರಿ
ಕಿರುತೆರೆ ನಟಿ ಕೃತಿಕಾ ಚೌಧರಿ ಹತ್ಯೆಯ ಹಿಂದಿನ ರಹಸ್ಯವನ್ನು ಪತ್ತೆಹಚ್ಚುವ ಜವಾಬ್ದಾರಿಯನ್ನು ಮುಂಬಯಿ ಪೊಲೀಸರು ತಮ್ಮ ಸೂಪರ್ ಕಾಪ್ ಮತ್ತು ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರಿಗೆ ವಹಿಸಿದ್ದಾರೆ. ಪ್ರಕರಣದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ದಯಾ ನಾಯಕ್ ನೇತೃತ್ವದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸ್ ತಂಡದ ಬಳಿ ಮಾಹಿತಿಗಳಿದ್ದು, ಅದರ ಆಧಾರದ ಮೇಲೆ ಮುಂದಿನ ತನಿಖೆ ನಡೆಯಲಿದೆ ಎಂದು ಎಸಿಪಿ ಅರುಣ್ ಚವಾಣ್ ತಿಳಿಸಿದ್ದಾರೆ.
ಮಾದಕ ವಸ್ತು ಮಾರಾಟ ಜಾಲದ ನಂಟು?
ಶವದ ಸಮೀಪವೇ ಬಿಳಿ ಪೌಡರ್‌ನ ಪ್ಯಾಕ್ ಒಂದು ಪತ್ತೆಯಾಗಿದ್ದು ಕೃತಿಕಾ ಕೊಲೆಗೂ ಮಾದಕ ವಸ್ತು ಮಾರಾಟ ವ್ಯವಹಾರಕ್ಕೂ ನಂಟು ಇರುವ ಶಂಕೆ ಯನ್ನು ಪೊಲೀಸರು ಇದೀಗ ವ್ಯಕ್ತಪಡಿಸಿದ್ದಾರೆ.
ಕೃತಿಕಾ ಶವದ ಬಳಿ ಪತ್ತೆಯಾಗಿದ್ದ ಬಿಳಿ ಪೌಡರ್‌ನ ಮಾದರಿಯನ್ನು ಪೊಲೀಸರು ವಿಧಿವಿಜ್ಞಾನ ಪ್ರಯೋ ಗಾಲಯಕ್ಕೆ ರವಾನಿಸಿದ್ದು ಪ್ರಾಥಮಿಕ ಪರೀಕ್ಷಾ ವರದಿಯ ಪ್ರಕಾರ ಈ ಪೌಡರ್ ಮಾದಕವಸ್ತುವಾಗಿರುವ ಮಿಯಾಂವ್ ಮಿಯಾಂವ್ ಆಗಿದೆ ಎನ್ನಲಾಗಿದೆ.
ಆದರೆ ಈ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕೃತ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಕಟ್ಟಡದ ಮಾಜಿ ಕಾವಲುಗಾರ ನಾಪತ್ತೆ
ಏತನ್ಮಧ್ಯೆ ಕಟ್ಟಡದ ಮಾಜಿ ಕಾವಲುಗಾರ ನಾಪತ್ತೆ ಯಾಗಿದ್ದು ಈತನ ಮೇಲೆ ಇದೀಗ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದ ಹಣಕಾಸು ವ್ಯವಹಾರದ ಹಿನ್ನೆಲೆಯಲ್ಲಿ ಕೃತಿಕಾಳ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂಬ ಅನುಮಾನಗಳನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ. ಈತನ ಪತ್ತೆಗಾಗಿ ಪೊಲೀಸರು ಉತ್ತರಪ್ರದೇಶದ ಲಕ್ನೋಗೆ ತಂಡವೊಂದನ್ನು ಕಳುಹಿಸಿದ್ದಾರೆ.
ಕೃತಿಕಾಳ ಶವ ಕೊಳೆತ ಸ್ಥಿತಿಯಲ್ಲಿ ಆಕೆಯ ಫ್ಲ್ಯಾಟ್‌ನಲ್ಲಿ ಪತ್ತೆಯಾದ ಬಳಿಕ ಪೊಲೀಸರು ಕಟ್ಟಡದ ಕಾವಲುಗಾರ, ಮನೆಕೆಲಸದಾಳು, ಕೃತಿಕಾಳ ಆಪ್ತ ಸ್ನೇಹಿತರು, ನೆರೆಮನೆಯವರು, ವಾಟ್ಸಾಪ್‌ನಲ್ಲಿ ಆಕೆಯೊಂದಿಗೆ ಸಂಪರ್ಕ ಹೊಂದಿದ್ದವರ ಸಹಿತ 20ಕ್ಕೂ ಅಧಿಕ ಮಂದಿಯನ್ನು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.