ಮತ್ತೆ ಶುರುವಾಯ್ತು ಪ್ರೇಮ್ “ಗಾಂಧಿಗಿರಿ’
Team Udayavani, Nov 21, 2018, 11:08 AM IST
ಸದ್ಯ “ದಿ ವಿಲನ್’ ಮೂಡ್‌ನಿಂದ ಹೊರಬಂದಿರುವ ನಿರ್ದೇಶಕ ಪ್ರೇಮ್, ಮತ್ತೆ ಕ್ಯಾಮರಾ ಮುಂದೆ ನಿಂತಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆ ಪ್ರೇಮ್ ನಾಯಕ ನಟನಾಗಿ ಆರಂಭವಾಗಿದ್ದ “ಗಾಂಧಿಗಿರಿ’ ಚಿತ್ರಕ್ಕೆ ಇದೀಗ ಮತ್ತೆ ಚಾಲನೆ ಸಿಕ್ಕಿದೆ. ನಿನ್ನೆಯಿಂದ ಮೈಸೂರಿನಲ್ಲಿ “ಗಾಂಧಿಗಿರಿ’ ಚಿತ್ರದ ಶೂಟಿಂಗ್ ಪುನಃ ಪ್ರಾರಂಭವಾಗಿದೆ. ಸುಮಾರು 30 ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಯಲಿದ್ದು, ಮತ್ತೆ ಜೋಗಿ ಪ್ರೇಮ್ ತೆರೆಮೇಲೆ ಹೊಸ ಗೆಟಪ್‌ನಲ್ಲಿ ತೆರೆಮೇಲೆ ಬರುತ್ತಿದ್ದಾರೆ.
2017ರ ಫೆಬ್ರವರಿಯಲ್ಲಿ “ಗಾಂಧಿಗಿರಿ’ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು. ಆದರೆ ಅದೇ ಸಮಯದಲ್ಲಿ ಪ್ರೇಮ್ ನಿರ್ದೇಶನದಲ್ಲಿ “ದಿ ವಿಲನ್’ ಚಿತ್ರ ಕೂಡ ಆರಂಭವಾಗಿದ್ದರಿಂದ, ಪ್ರೇಮ್ ನಾಯಕ ನಟನಾಗಿ ನಟಿಸಬೇಕಿದ್ದ “ಗಾಂಧಿಗಿರಿ’ ಚಿತ್ರ ಬಹುತೇಕ ನಿಂತೇ ಹೋಗಿತ್ತು. ಇನ್ನು ಗಾಂಧಿನಗರದಲ್ಲೂ ಈ ಚಿತ್ರ ಮತ್ತೆ ಮುಂದುವರೆಯುವುದು ಕಷ್ಟ ಎನ್ನುವ ಮಾತುಗಳೇ ಹೆಚ್ಚಾಗಿ ಕೇಳಿ ಬಂದಿದ್ದವು. ಆದರೆ ಈಗ ನಿಂತು ಹೋಗಿದ್ದ “ಗಾಂಧಿಗಿರಿ’ಗೆ ಮತ್ತೆ ಜೀವ ಬಂದಿದ್ದು, ಪ್ರೇಮ್ ಮತ್ತು ಚಿತ್ರತಂಡ ಹೊಸ ಜೋಶ್‌ನಲ್ಲಿ ಚಿತ್ರೀಕರಣ ಶುರು ಮಾಡಿದೆ.
“ಗಾಂಧಿಗಿರಿ’ ಚಿತ್ರವನ್ನು ರಘು ಹಾಸನ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ಜೋಗಿ ಪ್ರೇಮ್‌ಗೆ ತಾಯಿಯಾಗಿ ಅರುಂಧತಿ ನಾಗ್ ನಟಿಸುತ್ತಿದ್ದು, ರಾಗಿಣಿ ದ್ವಿವೇದಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಒಟ್ಟಾರೆ ಪ್ರೇಮ್ “ಗಾಂಧಿಗಿರಿ’ ಹೇಗಿರಲಿದೆ ಎಂದು ತಿಳಿಯಬೇಕಾದರೆ, ಇನ್ನೂ ಮೂರ್‍ನಾಲ್ಕು ತಿಂಗಳು ಕಾಯಬೇಕು ಎನ್ನುತ್ತಿದೆ ಚಿತ್ರತಂಡ.