ಮದಗಜನ ಮನದನ್ನೆಯಾಗಲು ಆಶಿಕಾ ರೆಡಿ
Team Udayavani, Feb 16, 2020, 7:00 AM IST
ನಮ್ಮ ಚಿತ್ರಕ್ಕೆ ತೆಲುಗಿನ ಸ್ಟಾರ್ ನಟಿ ಹೀರೋಯಿನ್ ಆಗಲಿದ್ದಾರೆ, ಮತ್ತೂಂದು ಪಾತ್ರಕ್ಕೆ ತಮಿಳಿನ ಸ್ಟಾರ್ ಹೀರೋಯಿನ್ ಬರುತ್ತಿದ್ದಾರೆ. ಇನ್ನೊಂದು ಸ್ಪೆಷಲ್ ಹಾಡಿಗೆ ಬಾಲಿವುಡ್ ಹೀರೋಯಿನ್ ಒಬ್ಬರು ಹೆಜ್ಜೆ ಹಾಕಲಿದ್ದಾರೆ. ಒಟ್ಟಾರೆ ಪರಭಾಷಾ ನಟಿಯರು ಸಿನಿಮಾದ ರಂಗೇರಿಸಲಿದ್ದಾರೆ. ಇಂಥ ಮಾತುಗಳನ್ನು ಕನ್ನಡದ ಅನೇಕ ಚಿತ್ರ ನಿರ್ದೇಶಕರ ಬಾಯಲ್ಲಿ ಆಗಾಗ್ಗೆ ಕೇಳುತ್ತಲೇ ಇರುತ್ತೇವೆ.
ಹೀಗೆ ಹೇಳುವ ನಿರ್ದೇಶಕರಲ್ಲಿ ಕೆಲವೇ ಕೆಲವು ಬೆರಳೆಣಿಯಷ್ಟು ನಿರ್ದೇಶಕರು ಮಾತ್ರ ಇಂಥ ಸಾಹಸಗಳನ್ನು ಮಾಡಿ ಸೈ ಎನಿಸಿಕೊಂಡಿರುತ್ತಾರೆಯೇ ಹೊರತು, ಉಳಿದ ಬಹುತೇಕರು ತಮ್ಮ ಚಿತ್ರಕ್ಕೆ ಒಂದಷ್ಟು ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳಲಷ್ಟೆ ಯಶಸ್ವಿಯಾಗಿರುತ್ತಾರೆ. ಕೊನೆಗೆ ಡೇಟ್ಸ್ ಪ್ರಾಬ್ಲಿಂನಿಂದಾಗಿ ನಾವು ಹೇಳಿದ ಹೀರೋಯಿನ್ಸ್ ನ ಕರೆತರಲು ಸಾಧ್ಯವಾಗಲಿಲ್ಲ ಅಂಥ ಹಲ್ಲು ಕಿರಿದು ಪ್ರೇಕ್ಷಕರ ನಿರೀಕ್ಷೆಗೆ ಒಮ್ಮೆಲೆ ತಣ್ಣೀರು ಎರೆಚಿ ಬಿಡುತ್ತಾರೆ.
ಅಂದಹಾಗೆ, ಇದೆಲ್ಲ ಕನ್ನಡ ಚಿತ್ರರಂಗಕ್ಕೆ ಹೊಸದೇನಲ್ಲ. ಇದಕ್ಕೂ ಕೂಡ ದಶಕಗಳ ಇತಿಹಾಸವಿದೆ. ಈಗ ಯಾಕೆ ಇಷ್ಟೆಲ್ಲ ಮಾತು ಅಂತೀರಾ? ಅದಕ್ಕೊಂದು ಕಾರಣವಿದೆ. “ಭರಾಟೆ’ ಚಿತ್ರದ ನಂತರ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ “ಮದಗಜ’ ಚಿತ್ರ ಸೆಟ್ಟೇರಲು ಸಿದ್ಧವಾಗುತ್ತಿರುವುದು ಗೊತ್ತೇ ಇದೆ. “ಅಯೋಗ್ಯ’ ಚಿತ್ರದ ಮಹೇಶ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಇತರೆ ಚಿತ್ರಗಳಂತೆ ಈ ಚಿತ್ರಕ್ಕೂ ಕೂಡ ಆರಂಭದಲ್ಲಿ ಕೀರ್ತಿ ಸುರೇಶ್, ಸಾಯಿ ಪಲ್ಲವಿ, ನಯನಾ ತಾರಾ ಹೀಗೆ ಕಾಲಿವುಡ್, ಟಾಲಿವುಡ್‌ನಿಂದ ಹಿಡಿದು ಬಾಲಿವುಡ್‌ವರೆಗೆ ಹತ್ತಾರು ಹೀರೋಯಿನ್ಸ್ ಹೆಸರು ಕೇಳಿಬಂದಿದ್ದವು. “ಮದಗಜ’ನಿಗೆ ಅವರು ಹೀರೋಯಿನ್ ಅಂತೆ, ಇವರು ಹೀರೋಯಿನ್ ಅಂತೆ ಅಂಥ ಹತ್ತಾರು ಸುದ್ದಿಗಳು ಆಗಾಗ್ಗೆ ಗಾಂಧಿನಗರದಲ್ಲಿ ಹರಿದಾಡುತ್ತಲೇ ಇದ್ದವು. ಆದರೆ ಈಗ ಅದೆಲ್ಲದಕ್ಕೂ ಫುಲ್‌ಸ್ಟಾಪ್ ಬಿದ್ದಿದೆ.
ಚಿತ್ರಕ್ಕೆ ನಾಯಕಿಯಾಗಿ ಅಪ್ಪಟ ಕನ್ನಡದ ಹುಡುಗಿ ಆಶಿಕಾ ರಂಗನಾಥ್ ಆಯ್ಕೆಯಾಗಿದ್ದಾರೆ. ಇದೇ ಫೆ. 14ರ ಪ್ರೇಮಿಗಳ ದಿನಕ್ಕೆ ಚಿತ್ರದ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ, “ಮುಗುಳು ನಗೆ’ ಖ್ಯಾತಿಯ ಚೆಲುವೆ ಆಶಿಕಾ ರಂಗನಾಥ್ ಅವರನ್ನು “ಮದಗಜ’ನಿಗೆ ನಾಯಕಿ ಎಂದು ಅನೌನ್ಸ್ ಮಾಡಿದೆ. ಇನ್ನು ಆಶಿಕಾ, ಈ ಚಿತ್ರದಲ್ಲಿ ಹಳ್ಳಿ ಜೀವನದ ಬಗ್ಗೆ ಒಲವಿರುವ, ಕೃಷಿ ಬಗ್ಗೆ ಆಸಕ್ತಿ ಇರುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ಸದ್ಯ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಲಂಗ-ದಾವಣಿ ಧರಿಸಿ, ಕೈಯಲ್ಲಿ ಬುಟ್ಟಿ-ಸಲಿಕೆ ಹಿಡಿದುಕೊಂಡು ಪಕ್ಕಾ ಕನ್ನಡದ ಸೊಗಡಿನ ಹಳ್ಳಿ ಹುಡುಗಿಯಾಗಿ ಆಶಿಕಾ ಗೆಟಪ್ ಗಮನ ಸೆಳೆಯುತ್ತಿದೆ. ಈಗಾಗಲೇ ಕನ್ನಡದಲ್ಲಿ ಹಲವು ಚಿತ್ರಗಳ ಮೂಲಕ ತನ್ನ ಪ್ರತಿಭೆಯನ್ನು ಪರಿಚಯಿಸಿರುವ ಆಶಿಕಾ ರಂಗನಾಥ್, ಕೊನೆಗೂ ಕನ್ನಡದ ಮತ್ತೂಬ್ಬ ಬಿಗ್ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾಗುತ್ತಿರುವುದು ನಿಜಕ್ಕೂ ಒಳ್ಳೆಯ ವಿಚಾರ.
ಆದರೆ ಕನ್ನಡದಲ್ಲಿ ಹಲವಾರು ಪ್ರತಿಭಾನ್ವಿತ ನಾಯಕಿಯರಿರುವಾಗ ಅವರನ್ನೆಲ್ಲ ಬಿಟ್ಟು ಏಕಾಏಕಿ ತಮ್ಮ ಚಿತ್ರಕ್ಕೆ ಪರಭಾಷಾ ನಟಿಯರನ್ನು ಕರೆತರುತ್ತೇವೆ ಎಂದು ಸುದ್ದಿ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಲ್ಲೋ ಹೋಗಿ ಆಕಾಶಕ್ಕೆ ಏಣಿ ಹಾಕಿ ಚಂದ್ರನನ್ನು ಕರೆತರುವ ಮಾತುಗಳನ್ನಾಡುವ ಮೊದಲು ನಮ್ಮ ಮನೆಯ ಅಂಗಳದಲ್ಲಿ ಮಿಂಚುವ ನಕ್ಷತ್ರಗಳನ್ನು ಗುರುತಿಸದೇ ಹೋದರೆ ಹೇಗೆ? ಎನ್ನುವುದು ಕನ್ನಡ ಪ್ರೇಕ್ಷಕರ ಪ್ರಶ್ನೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.