ಮತ್ತೆ ಬಂದರು ತಾರಾ ಮಾಸ್ಟರ್
Team Udayavani, Mar 12, 2018, 11:18 AM IST
ಅವರೊಬ್ಬ ಯಶಸ್ವಿ ನೃತ್ಯ ನಿರ್ದೇಶಕಿ. ಕಪ್ಪು-ಬಿಳುಪು ಕಾಲದಿಂದಲೂ ಇದ್ದವರು. ವಯಸ್ಸು 70 ಪ್ಲಸ್. ಚಿತ್ರರಂಗದಲ್ಲಿ ಸುಮಾರು 54 ವರ್ಷಗಳ ಸುಧೀರ್ಘ ಪಯಣ. ಇಂದಿಗೂ ಬತ್ತದ ಉತ್ಸಾಹ. ಕನ್ನಡ, ತಮಿಳು, ತೆಲುಗು ಹಾಗು ಮಲಯಾಳಂ ಚಿತ್ರಗಳು ಸೇರಿದಂತೆ ಈವರೆಗೆ ಬರೋಬ್ಬರಿ 3 ಸಾವಿರ ಹಾಡುಗಳಿಗೆ ನೃತ್ಯ ಸಂಯೋಜಿಸಿರುವ ಖ್ಯಾತಿ ಅವರದು. ಅವರು ಬೇರಾರೂ ಅಲ್ಲ, ತಾರಾ ಅಲಿಯಾಸ್ ತಾರಾ ಮಾಸ್ಟರ್!
ಹೌದು, ಸಿನಿಮಾ ರಂಗದವರಿಗೆ ಈ ಹೆಸರು ಗೊತ್ತಿರದೇ ಇರದು. ತಾರಾ ಐದು ವರ್ಷಗಳ ಬಳಿಕ ಪುನಃ ಕನ್ನಡಕ್ಕೆ ಕಾಲಿಟ್ಟಿದ್ದಾರೆ. “ಆದಿ ಪುರಾಣ’ ಚಿತ್ರದ ಮೂಲಕ ಹೊಸ ಇನ್ನಿಂಗ್ಸ್ ಶುರು ಮಾಡಿರುವ ತಾರಾ, ಆ ಚಿತ್ರದಲ್ಲಿರುವ ಕ್ಯಾಬರೆ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಹಳೇ ಕಾಲದ ಸೆಟ್ಟು, ಕಾಸ್ಟೂಮ್ಸ್ ಹಾಕಿಸಿ, ಹಳೇ ಕಾಲದಲ್ಲಿ ಮಾಡುತ್ತಿದ್ದ ಕ್ಯಾಬರೆ ಡ್ಯಾನ್ಸ್ ಬೇಕು ಎಂಬ ಕಾರಣಕ್ಕೆ ನಿರ್ದೇಶಕ ಮೋಹನ್ ಮತ್ತು ನಿರ್ಮಾಪಕ ಶಮಂತ್ ಅವರು ತಾರಾ ಅವರನ್ನು ಕರೆತಂದಿದ್ದಾರೆ.
ಈಗಾಗಲೇ ಆ ಹಾಡನ್ನು ಚಿತ್ರೀಕರಿಸಿರುವ ಚಿತ್ರತಂಡ ಫುಲ್ ಹ್ಯಾಪಿ ಮೂಡ್‌ನಲ್ಲಿದೆ. ಅಂದಹಾಗೆ, ಹಿರಿಯ ನೃತ್ಯ ನಿರ್ದೇಶಕಿ ತಾರಾ ಅವರು ತಮ್ಮ ಸಿನಿಪಯಣ ಕುರಿತು ಹೇಳಿಕೊಂಡಿದ್ದು ಹೀಗೆ. “ನನಗಂತೂ ಪ್ರತಿ ನಿತ್ಯ ಹೊಸ ಅನುಭವ ಆಗುತ್ತಿದೆ. ಕನ್ನಡಕ್ಕೆ ನಾಲ್ಕೈದು ವರ್ಷಗಳ ಬಳಿಕ ಬಂದಿದ್ದೇನೆ. ಯಾಕೆ ಇಲ್ಲಿ ಗ್ಯಾಪ್ ಆಯ್ತು ಗೊತ್ತಿಲ್ಲ. ನಾನಂತೂ ಉತ್ಸಾಹದಿಂದಲೇ ಎದುರು ನೋಡುತ್ತಿದ್ದೆ. ಆದರೆ, ಯಾವ ಅವಕಾಶವೂ ಸಿಗಲಿಲ್ಲ.
“ಆದಿ ಪುರಾಣ’ ಮೂಲಕ ಕನ್ನಡಕ್ಕೆ ಬಂದಿದ್ದು ಖುಷಿಕೊಟ್ಟಿದೆ. ಬೇರೆ ಭಾಷೆ ಚಿತ್ರಗಳಲ್ಲಿ ಈಗಲೂ ಕೆಲಸ ಮಾಡುತ್ತಲೇ ಇದ್ದೇನೆ. ಆದರೆ, ಕನ್ನಡದಿಂದ ಯಾಕೆ ಅವಕಾಶ ಬರಲಿಲ್ಲ ಎಂಬ ಬೇಸರವಂತೂ ಇತ್ತು. ಯಾಕೆಂದರೆ, ಕನ್ನಡ ನನ್ನ ಮನೆ ಇದ್ದಂತೆ. ಇಲ್ಲಿನ ನೆಲ ನಂಗಿಷ್ಟ. ಇಲ್ಲಿನ ಊಟ ಅಚ್ಚುಮೆಚ್ಚು. ಓದಿದ್ದು ಇಲ್ಲೇ, ಬೆಳೆದಿದ್ದೂ ಇಲ್ಲೇ. ಬದುಕು ಕಲಿತದ್ದೂ ಇಲ್ಲೇ. 1964ರಿಂದ ನನ್ನ ಸಿನಿಪಯಣ ಶುರು ಮಾಡಿದೆ.
1975ರವರೆಗೆ ಸಹಾಯಕಿಯಾಗಿ ಕೆಲಸ ಮಾಡಿ, ಆ ಬಳಿಕ ನೃತ್ಯ ನಿರ್ದೇಶಕಿಯಾಗಿ ಇಲ್ಲಿಯವರೆಗೂ ಕೆಲಸ ಮಾಡುತ್ತಲೇ ಇದ್ದೇನೆ. ಎಂಜಿಆರ್, ಶಿವಾಜಿ ಗಣೇಶನ್, ಎನ್‌ಟಿಆರ್, ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ದರ್ಶನ್ ಸೇರಿದಂತೆ ಬಹುತೇಕ ಹೀರೋಗಳ ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದೇನೆ.
ಇದುವರೆಗೆ 3 ಸಾವಿರ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದೇನೆ. ಗಿನ್ನೆಸ್ ದಾಖಲೆಗೆ ಕಳುಹಿಸಿಕೊಡಿ ಅಂತ ಕೆಲವರು ಹೇಳುತ್ತಿದ್ದಾರೆ. ಆ ತಯಾರಿ ನಡೆಯುತ್ತಿದೆ. ಡಾ.ರಾಜ್‌ಕುಮಾರ್ ಅವರ “ಚಲಿಸುವ ಮೋಡಗಳು’, “ಯಾರಿವನು’, “ಶ್ರಾವಣ ಬಂತು’ ಸೇರಿದಂತೆ ಸುಮಾರು 80 ಚಿತ್ರಗಳಿಗೆ ನೃತ್ಯ ನಿರ್ದೇಶಿಸಿದ್ದೇನೆ. “ಜನುಮದ ಜೋಡಿ’ ಚಿತ್ರದ ಎಲ್ಲಾ ಹಾಡುಗಳಿಗೂ ನಾನೇ ನೃತ್ಯ ಸಂಯೋಜಿಸಿದ್ದೆ. ತೆಲುಗಿನ ನಟ ಚಿರಂಜೀವಿ ಅವರ 75ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜಿಸಿದ್ದೇನೆ.
ಈಗಿನ ಹತ್ತು, ಹನ್ನೆರೆಡು ಹೀರೋಗಳನ್ನು ಹೊರತುಪಡಿಸಿದರೆ ಬಹುತೇಕ ಹೀರೋಗಳ ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ ಹೆಮ್ಮೆ ನನ್ನದು’ ಎನ್ನುತ್ತಾರೆ ತಾರಾ. “ಆದಿ ಪುರಾಣ’ ಚಿತ್ರದಲ್ಲಿ ಕ್ಯಾಬರೆ ಹಾಡಿಗೆ ಸ್ಟೆಪ್ ಹಾಕಿಸಿದ್ದೇನೆ. ಹೀರೋಗೆ ಹೊಸ ಸ್ಟೆಪ್ ಹಾಕಿಸಿರುವುದು ವಿಶೇಷ. ಈಗಿನ ಹಾಡುಗಳಿಗೆ ಮಾಡುವ ನೃತ್ಯ ಸಂಯೋಜನೆ ಗಮನಿಸುತ್ತಿದ್ದೇನೆ. ಸ್ವಲ್ಪ ಬದಲಾವಣೆ ಬೇಕಿದೆ. ನಾಯಕಿಯರಿಗೆ ಕ್ಲೋಸ್ ಅಪ್ ಇಡುವುದೇ ಇಲ್ಲ. ಅವರ ಕಣ್ಣು, ಮೂಗು ಚೆನ್ನಾಗಿದ್ದರೂ, ದೂರದಲ್ಲೆಲ್ಲೋ ಪಾಸಿಂಗ್ ಮೂವ್‌ಮೆಂಟ್ ಸೆರೆಹಿಡಿಯುತ್ತಾರೆ.
ಒಂದೇ ಶೈಲಿ ಬಿಟ್ಟು, ಬೇರೆ ಶೈಲಿಯ ಸ್ಟೆಪ್ಸ್ ಹಾಕಿಸಬೇಕು ಎಂಬುದು ತಾರಾ ಮಾತು. ಅದೇನೆ ಇರಲಿ, ತಾರಾ ಕನ್ನಡದಲ್ಲಿ ಕೆಲಸ ಮಾಡಬೇಕು ಅಂದರೆ, ಎಷ್ಟೇ ಬಿಜಿ ಇದ್ದರೂ ಬಂದು ಮಾಡುವ ಗುಣ ಬೆಳೆಸಿಕೊಂಡಿದ್ದಾರಂತೆ. ಆದರೆ,ಯಾರೂ ಕರೆಯೋದಿಲ್ಲ ಎಂಬ ಬೇಸರವೊಂದು ಅವರನ್ನು ಸದಾ ಕಾಡುತ್ತಿದೆಯಂತೆ. ಕನ್ನಡದಲ್ಲೇ ಗೆಜ್ಜೆ ಕಟ್ಟಿ ಕುಣಿದ ನನಗೆ ಕನ್ನಡವೇ ಎಲ್ಲಾ ಎಂಬುದನ್ನ ಮಾತ್ರ ಮರೆಯಲಿಲ್ಲ ಅವರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.