ಮಾತಿನಂತೆ ನಡೆದುಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್
Team Udayavani, Apr 13, 2018, 3:25 PM IST
ಚಿತ್ರರಂಗದಲ್ಲಿ ಬೇಡಿಕೆ ಕಡಿಮೆಯಾದ ಕಾರಣ ಹಿರಿಯ ನಟ ಅಶ್ವಥ್ ಪುತ್ರ ಶಂಕರ್ ಅಶ್ವಥ್ ಜೀವನ ನಡೆಸಲು ಕ್ಯಾಬ್ ಒಡಿಸುತ್ತಿದ್ದ ಸುದ್ದಿಯನ್ನು ನೀವು ಈ ಹಿಂದೆ ಓದಿರುತ್ತೀರಿ. ಅಲ್ಲದೇ ಒಬ್ಬ ದೊಡ್ಡ ನಟನ ಮಗನ ಪರಿಸ್ಥಿತಿ ನೋಡಿ ಎಲ್ಲರೂ ಬೇಸರಗೊಂಡಿದ್ದರು. ಇದೀಗ ಅವರ ಮೊಗದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್.
ಹೌದು! ಕನ್ನಡದ ಸ್ಟಾರ್ ನಟನಾದರೂ, ತಮ್ಮ ಸಹಕಾರ ಗುಣದಿಂದ ಕೋಟ್ಯಾಂತರ ಜನರ ಮನಸ್ಸು ಗೆದ್ದಿರೋ ಕಲಾವಿದ. ದರ್ಶನ್ ತನ್ನ ಅಭಿಮಾನಿಗಳ ಕಷ್ಟವನ್ನು ತಮ್ಮ ಕಷ್ಟವೆಂದು ಭಾವಿಸೋ ವ್ಯಕ್ತಿ. ಕಷ್ಟ ಅಂತಾ ಯಾರೇ ಬಂದ್ರೂ, ಅವರನ್ನು ಸಂತೈಸೋ ದೊಡ್ಡ ಗುಣ ಅವರದ್ದು. ಈ ಹಿಂದೆ ಶಂಕರ್ ಅಶ್ವಥ್ ಅವರ ಪರಿಸ್ಥಿತಿ ಕಂಡು ಮರುಕಪಟ್ಟಿದ ದರ್ಶನ್ ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು.
ಈಗ ತಮ್ಮ ಮಾತಿನಂತೆ ಅವರು ನಡೆದುಕೊಂಡಿದ್ದಾರೆ. ದರ್ಶನ್ ನಟಿಸುತ್ತಿರುವ “ಯಜಮಾನ’ ಚಿತ್ರದಲ್ಲಿ ಶಂಕರ್ ಅಶ್ವಥ್ ಅವರಿಗೆ ಅವಕಾಶ ನೀಡಿದ್ದಾರೆ. ಹಾಗೂ ಈ ಹಿಂದೆ ಬಿಗ್‍ಬಾಸ್ ವಿನ್ನರ್ ಪ್ರಥಮ್ ಕೂಡಾ ತಮ್ಮ ಮುಂಬರುವ ಚಿತ್ರದಲ್ಲಿ ಶಂಕರ್ ಅಶ್ವಥ್ ಅವರಿಗೆ ಅವಕಾಶ ನೀಡುವುದಾಗಿ ಹೇಳಿದ್ದರು.
ಇನ್ನು “ಯಜಮಾನ’ ಚಿತ್ರವನ್ನು ಬಿ.ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಿಸುತ್ತಿದ್ದು, ಪಿ.ಕುಮಾರ್ ಈ ಸಿನಿಮಾದ ನಿರ್ದೇಶಕರು. ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ,”ಬಹದ್ದೂರ್’ ಚೇತನ್ ಸಂಭಾಷಣೆ, ಶ್ರೀಶ ಕೂದುವಳ್ಳಿ ಛಾಯಾಗ್ರಹಣವಿದೆ. ಚಿತ್ರದಲ್ಲಿ ರವಿಶಂಕರ್, ದೇವರಾಜ್, ಧನಂಜಯ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.