ಬಣ್ಣದ ಕೋಟೆಯಲ್ಲಿ ಚಿಣ್ಣರ ಸಡಗರ
Team Udayavani, Oct 15, 2017, 11:06 AM IST
ಬಲು ಮಾತುಗಾರ, ನಟ ಹಾಗು ನಿರ್ದೇಶಕ ನಾಗರಾಜ್‌ಕೋಟೆ ಈಗ ಖುಷಿಯಲ್ಲಿದ್ದಾರೆ. ಅವರ ಖುಷಿಗೆ ಕಾರಣ, ಅವರ ಚೊಚ್ಚಲ ಚಿತ್ರ “ಬಾನಾಡಿ’ ಚಿತ್ರಕ್ಕೆ ಇತ್ತೀಚೆಗೆ ಪ್ರಶಸ್ತಿ ಸಿಕ್ಕಿದ್ದು ಒಂದು ಕಾರಣವಾದರೆ, ಹೊಸಕೆರೆಹಳ್ಳಿ ಕ್ರಾಸ್‌ನಲ್ಲಿರುವ ಅವರ ಕನಸಿನ “ಬಣ್ಣ’ ನಟನಾ ಶಾಲೆ ಕೂಡ ಉತ್ತಮ ಬೆಳವಣಿಯಲ್ಲಿದೆ ಎಂಬುದು ಮತ್ತೂಂದು ಕಾರಣ. ರಂಗಭೂಮಿ ಹಾಗು ಸಿನಿಮಾ ರಂಗದಲ್ಲಿ ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸುತ್ತ ಬಂದಿರುವ ನಾಗರಾಜ್‌ಕೋಟೆ, ಇದುವರೆಗೆ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 150 ಕ್ಕೂ ಹೆಚ್ಚು ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದಾರೆ. ಆ ಪೈಕಿ “ಸಂಕ್ರಾಂತಿ’,” ರಂಗೋಲಿ’ ಧಾರಾವಾಹಿಗಳು ನಾಗರಾಜ್‌ಕೋಟೆಗೆ ಹೆಸರು ತಂದುಕೊಟ್ಟಿವೆ. ಅಭಿನಯದಲ್ಲೇ ಮುಂದುವರೆದಿದ್ದ ನಾಗರಾಜ್‌ಕೋಟೆ, ಪ್ರೀತಿಯಿಂದ ಒಂದು “ಬಣ್ಣ’ ಹೆಸರಿನ ನಟನೆ ಶಾಲೆ ಶುರು ಮಾಡಿದ್ದಾರೆ. ಅವರ “ಬಣ್ಣ’ದಲ್ಲೀಗ ನೂರಾರು ವಿದ್ಯಾರ್ಥಿಗಳ ಕಲರವ ಕೇಳಿ ಬರುತ್ತಿದೆ. “ಬಣ್ಣ’ದಲ್ಲಿ ನಟನೆ, ನೃತ್ಯ, ಗಿಟಾರ್,ಮಕ್ಕಳ ರಂಗ’ ಹೀಗೆ ತರಹೇವಾರಿ ಕಲಾಚಟುವಟಿಕೆಗಳು ನಡೆಯುತ್ತಿವೆ. ಆ ಕುರಿತು ನಾಗರಾಜ್‌ಕೋಟೆ “ರೂಪತಾರಾ’ದಲ್ಲಿ ಮಾರಾಡಿದ್ದಾರೆ.
ನಾಗರಾಜ್‌ಕೋಟೆ ಅವರಿಗೆ ಒಂದು ಅಭಿನಯ ತರಬೇತಿ ಶಾಲೆಯೊಂದನ್ನು ಶುರುಮಾಡಬೇಕು ಎಂಬುದು ಹದಿನೈದು ವರ್ಷಗಳ ಹಿಂದಿನ ಕನಸಾಗಿತ್ತಂತೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ಹೇಗೋ, ಬೆಂಗಳೂರಿಗೆ ಬಂದ ಅವರಿಗೆ, ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಯ ನಂಟು ಬೆಳೆದಿದೆ. ಆ ಸಂದರ್ಭದಲ್ಲೇ ನಾಗರಾಜ್‌ಕೋಟೆ ಕೆಲವು ನಟನಾ ಶಾಲೆಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ನಟನೆ ಬಗ್ಗೆ ತರಬೇತಿ ಕೊಡುತ್ತಿದ್ದರಂತೆ. ಆ ಸಮಯದಲ್ಲಿ ವಿದ್ಯಾರ್ಥಿಗಳ ಜತೆ ಕೆಲಸ ಮಾಡುವಾಗ, ಅವರ ಹಿಂದಿನ ನಟನೆ ಶಾಲೆ ಶುರು ಮಾಡುವ ಕನಸು ಪುನಃ ಶುರುವಾಯ್ತಂತೆ. ಕೊನೆಗೆ, ನಾನೇ ಯಾಕೆ, ಬೆಂಗಳೂರಲ್ಲೊಂದು ನಟನಾ ತರಬೇತಿ ಶಾಲೆ ಆರಂಭಿಸಬಾರದು ಅಂದುಕೊಂಡು, 2011, ಏಪ್ರಿಲ್ 21 ರಂದು ತಮ್ಮ ಕನಸಿನ “ಬಣ್ಣ’ ನಟನಾ ಶಾಲೆಯನ್ನು ಪ್ರಾರಂಭಿಸಿದರಂತೆ. ಚಿತ್ರೀಕರಣವಿದ್ದಾಗ, ಬಿಜಿಯಾಗಿರುತ್ತಿದ್ದ ಅವರು, ಇಲ್ಲದ ಸಮಯದಲ್ಲಿ ಸುಮ್ಮನೆ ಸಮಯ ಕಳೆಯುತ್ತಿದ್ದರಂತೆ. ಆ ಸಮಯ ವ್ಯರ್ಥ ಆಗಬಾರದು ಎಂಬ ಉದ್ದೇಶದಿಂದ “ಬಣ್ಣ’ ನಟನೆ ಶಾಲೆ ಶುರುಮಾಡಿದ್ದಾರೆ. ಆರಂಭದಲ್ಲಿ ಅವರಿಗೆ “ಬಣ್ಣ’ ಸಕ್ಸಸ್ ಆಗುತ್ತೋ ಇಲ್ಲವೋ ಎಂಬ ಗೊಂದಲವಿತ್ತಂತೆ. ಏನೋ, ಒಂದು ಕಚೇರಿ ಮಾಡಿಕೊಂಡು, ಅದರ ಬಾಡಿಗೆ ಹಾಗು ಕರೆಂಟ್ ಬಿಲ್‌ಗೆ ವರ್ಕ್‌ಔಟ್ ಆಗಿಬಿಟ್ಟರೆ ಅಷ್ಟು ಸಾಕು, ವಿದ್ಯಾರ್ಥಿಗಳಿಗೆ ನಟನೆ ತರಬೇತಿ ಕೊಟ್ಟಂಗೂ ಆಗುತ್ತೆ. ಸಮಯ ಕೂಡ ಅದಕ್ಕೆ ಮೀಸಲಿಟ್ಟಂತೆ ಆಗುತ್ತೆ ಅಂತ ಅಂದುಕೊಂಡು “ಬಣ್ಣ’ ಶಾಲೆ ಆರಂಭಿಸಿದ್ದರು. ಶಾಲೆ ಶುರುವಾದಾಗ, ಅವರಿಗೆ ಜವಾಬ್ದಾರಿ ಹೆಚ್ಚುತ್ತಾ ಹೋಯ್ತು. ಮತ್ತಷ್ಟು ಪಕ್ವಗೊಂಡರು.
ನಟನೆ ಶಾಲೆಯನ್ನೇನೋ ಶುರುಮಾಡಿದರು. ಆದರೆ, ಆ ಶಾಲೆಗೆ ಆರಂಭದಲ್ಲಿ ಸೇರಿದ್ದು ಕೇವಲ ಮೂರು ವಿದ್ಯಾರ್ಥಿಗಳು ಮಾತ್ರ! ಮೂರು ಜನರ ಬ್ಯಾಚನ್ನ ಹೇಗೆ ಶುರುಮಾಡೋದು ಅನ್ನೋ ಸಣ್ಣ ಅಳುಕಿನಲ್ಲೇ ತರಬೇತಿಗೆ ಅಣಿಯಾಗಿಬಿಟ್ಟರು ನಾಗರಾಜ್‌ಕೋಟೆ. ಕೊನೆಗೆ ಆ ಮೂವರು ವಿದ್ಯಾರ್ಥಿಗಳಿಗೆ ಮೂರು ತಿಂಗಳ ಕಾಲ ನಟನೆ ಪಾಠ ಹೇಳಿಕೊಟ್ಟರಂತೆ. ನಿಧಾನವಾಗಿ, ಮೂರು ಜನರಿದ್ದ ಬ್ಯಾಚ್‌ಗೆ ಹನ್ನೊಂದು ವಿದ್ಯಾರ್ಥಿಗಳು ಸೇರ್ಪಡೆಗೊಂಡರು. “ಬಣ್ಣ’ದ ಕನಸು ಕೂಡ ಚಿಗುರುತ್ತಾ ಹೋಯ್ತು. ಈ ಐದು ವರ್ಷದಲ್ಲಿ ಇಪ್ಪತ್ತು ಬ್ಯಾಚ್‌ಗೆ ಪಾಠ ಮಾಡಿದ್ದಾರೆ. ಪ್ರತಿಯೊಂದು ಬ್ಯಾಚ್‌ನಲ್ಲಿ ಇಪ್ಪತ್ತು ವಿದ್ಯಾರ್ಥಿಗಳು ಇದ್ದದ್ದು ವಿಶೇಷವಂತೆ.
ಅವರ ನಟನಾ ಶಾಲೆಯಲ್ಲಿ ಸುಮಾರು ನಲವತ್ತು ಸಬೆjಕ್ಟ್ ಆಯ್ಕೆ ಮಾಡಿಕೊಂಡು, ನೀನಾಸಂನ ಪ್ರವೀಣರನ್ನೂ ಕರೆಸಿ, ಕ್ಯಾಮೆರಾ ವಿಭಾಗದ ನುರಿತ ತಜ್ಞರು, ಚಿತ್ರರಂಗದ ಇತಿಹಾಸ ಬಲ್ಲವರು, ನಟನೆ, ರಂಗಭೂಮಿ ಹೀಗೆ ಎಲ್ಲಾ ವಿಭಾಗಗಳಿಂದಲೂ ಸುಮಾರು 8 ಜನ ಅಧ್ಯಾಪಕರನ್ನು ಆಯ್ಕೆ ಮಾಡಿಕೊಂಡು, ಅವರೊಟ್ಟಿಗೆ ಚರ್ಚೆ ನಡೆಸಿ ತರಬೇತಿ ಕೊಡಿಸಲು ಮುಂದಾಗಿದ್ದಾಗಿ ಹೇಳುವ ನಾಗರಾಜ್‌ಕೋಟೆ, ಆರಂಭದಲ್ಲಿ ನಾನು ಬಾಡಿಗೆಗೆ ಹಣ ಬಂದರೆ ಸಾಕು ಅಂದುಕೊಂಡಿದ್ದೆ. ಈಗ ಅದರಿಂದ ನನ್ನ ಬದುಕು ಕೂಡ ನಡೆಯುತ್ತಿದೆ. ಸಣ್ಣದ್ದಾಗಿ ಕಟ್ಟಿಕೊಂಡ “ಬಣ್ಣ’ ಶಾಲೆ ಈಗ ಬೃಹತ್ ಆಗಿ ಬೆಳೆಯುತ್ತಿದೆ. ಈಗ ನೃತ್ಯ, ಮಕ್ಕಳ ರಂಗ, ಗಿಟಾರ್, ಕೀ ಬೋರ್ಡ್ ಹೀಗೆ ಹಲವು ವಿಭಾಗಗಳಲ್ಲಿ ಪಾಠ ಹೇಳಿಕೊಡಲಾಗುತ್ತಿದೆ. ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು “ಬಣ್ಣ’ದಿಂದ ತರಬೇತಿ ಪಡೆದು ಹೊರಬಂದಿದ್ದಾರೆ ಎನ್ನುತ್ತಾರೆ ನಾಗರಾಜ್‌ಕೋಟೆ,
ಅನುಭವ ಮಂಟಪ
“ಬಣ್ಣ’ದಲ್ಲಿ ವಿಶೇಷ ತರಗತಿಯೂ ನಡೆಯಲಿದೆ. ತಿಂಗಳಿಗೊಂದು ದಿನ “ಅನುಭವ ಮಂಟಪ’ ಎಂಬ ಕ್ಲಾಸ್ ನಡೆಯುತ್ತದೆ. ಚಿತ್ರರಂಗದ ಅನೇಕ ಹಿರಿಯ ನಟರು, ನಿರ್ದೇಶಕರನ್ನು ಆಹ್ವಾನಿಸಿ ಅವರಿಂದ ಪಾಠ ಹೇಳಿಕೊಡಲಾಗುತ್ತದೆ. ಹಿರಿಯ ನಿರ್ದೇಶಕ ನಾಗಾಭರಣ ಹಿರಿಯ ಕಲಾವಿದರಾದ ಶಿವರಾಮಣ್ಣ ಸೇರಿದಂತೆ ಹಲವರು ಬಂದು ಚಿತ್ರರಂಗದಲ್ಲಿ ಸವೆಸಿದ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಅದೀಗ ಕ್ಲಿಕ್ ಆಗಿದೆ ಎಂಬುದೇ ಸಂತಸದ ವಿಚಾರ ಎನ್ನುತ್ತಾರೆ “ಬಣ್ಣ’ದ ರೂವಾರಿ ನಾಗರಾಜ್‌ಕೋಟೆ.
“ಬಣ್ಣ’ದಲ್ಲಿ ಎರಡು ತರಗತಿಗಳನ್ನು ಮಾಡಿದ್ದಾರೆ. ಕೆಲಸಕ್ಕೆ ಹೋಗೋರು, ಸಾಫ್ಟ್ವೇರ್ ಮಂದಿಗೆ ಶನಿವಾರ ಹಾಗು ಭಾನುವಾರ ಬೆಳಗ್ಗೆ 8 ರಿಂದ 10 ರವೆಗೆ ವೀಕೆಂಡ್ ಕ್ಲಾಸ್ ನಡೆಸಲಾಗುತ್ತೆ. ಇದು ಕೂಡ ಆರು ತಿಂಗಳ ಕೋರ್ಸ್. ಮತ್ತು ಕಾಲೇಜ್ ವಿದ್ಯಾರ್ಥಿಗಳಿಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಜೆ 6 ರಿಂದ 8 ರವರೆಗೆ ತರಗತಿ ನಡೆಸಲಾಗುತ್ತದೆ. ಎಲ್ಲರಿಗೂ ಒಂದೇ ಸಬೆjಕ್ಟ್ ಪಾಠ ಮಾಡಲಾಗುತ್ತದೆ. ಆರು ತಿಂಗಳ ಕೋರ್ಸ್ ಮುಗಿದ ಬಳಿಕ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ನಾಟಕ ಮಾಡಿಸಿ ಕಳುಹಿಸುವುದು “ಬಣ್ಣ’ದ ಗುರಿ. ಐದು ತಿಂಗಳ ಕಾಲ ಸಿಲಬಸ್ ಮುಗಿಸಿ, ಒಂದು ತಿಂಗಳ ಕಾಲ ನಾಟಕದ ರಿಹರ್ಸಲ್ ನಡೆಸಲಾಗುವುದು. ನಾನೇ ಕೆಲಸ ನಾಟಕಗಳನ್ನು ನಿರ್ದೇಶಿಸುತ್ತೇನೆ. ವಿದ್ಯಾರ್ಥಿಗಳು ಪಕ್ವಗೊಂಡ ಬಳಿಕ ಒಂದು ದಿನ ನಾಟಕ ಪ್ರದರ್ಶನ ಏರ್ಪಡಿಸಿ, ಅಂದು ಎಲ್ಲರಿಗೂ ಆರು ತಿಂಗಳ ಅರ್ಹತಾ ಪತ್ರ ವಿತರಿಸಲಾಗುವುದು ಎಂದು ವಿವರ ಕೊಡುತ್ತಾರೆ ನಾಗರಾಜ್‌ಕೋಟೆ.
ಎಲ್ಲರೂ ಆ್ಯಕ್ಟೀವ್ ಆಗಿದ್ದಾರೆ
“ಬಣ್ಣ’ ಶಾಲೆಯಲ್ಲಿ ಕಲಿತು ಹೊರಬಂದಿರುವ ವಿದ್ಯಾರ್ಥಿಗಳು ಈಗ ಹಲವು ಧಾರಾವಾಹಿಗಳು, ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಎಷ್ಟೋ ಮಂದಿ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ. ವಿದ್ಯಾರ್ಥಿಯೊಬ್ಬ ಕನ್ನಡದ ಧಾರಾವಾಹಿಯಲ್ಲಿ ನಟಿಸುತ್ತಿದ್ದವನು, ತೆಲುಗಿನ ನಾಗಾರ್ಜುನ ಅವರ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಇನ್ನು, ರವಿಚೇತನ್ ಎಂಬ ವಿದ್ಯಾರ್ಥಿ ‘ಆ ರಾತ್ರಿ’ ಎಂಬ ಚಿತ್ರದಲ್ಲಿ ಹೀರೋ. ಉಳಿದಂತೆ ಹಲವು ವಿದ್ಯಾರ್ಥಿಗಳು ಬಿ.ಜಯಶ್ರೀ ತಂಡದಲ್ಲಿದ್ದಾರೆ. ಕೆಲವರು ಬೀದಿ ನಾಟಕಗಳಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟಾರೆ, ಇಲ್ಲಿ ನಟನೆಯಲ್ಲಿ ಪಕ್ವಗೊಳಿಸುವುದರ ಜತೆಯಲ್ಲಿ ಸಾಮಾಜಿಕ ಜ್ಞಾನದ ಬಗ್ಗೆಯೂ ತಿಳಿಹೇಳಲಾಗುತ್ತಿದೆ ಎಂಬ ತೃಪ್ತಿ ನಮಗಿದೆ ಎನ್ನುತ್ತಾರೆ ಕೋಟೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.