ಚೌಕ ಚಿತ್ರಕ್ಕೆ ಕತ್ತರಿ ಪ್ರಯೋಗ
Team Udayavani, Feb 7, 2017, 11:49 AM IST
“ಚೌಕ’ ಚಿತ್ರ ನೋಡಿ ಬಂದವರು, ವಿಮರ್ಶೆ ಮಾಡಿದವರ ಅನಿಸಿಕೆಗಳಲ್ಲಿ ಎದ್ದು ಕಂಡ ಒಂದು ವಿಷಯವೆಂದರೆ ಅದು ಚಿತ್ರದ ಲೆಂಥ್. ಸುಮಾರು 178 ನಿಮಿಷದ ಚಿತ್ರವನ್ನು ಒಂದಿಷ್ಟು ಕತ್ತರಿಸಬಹುದು ಎಂಬ ಅಭಿಪ್ರಾಯ ಎಲ್ಲೆಡೆಯಿಂದ ಕೇಳಿ ಬಂದಿತ್ತು. ಈ ಅನಿಸಿಕೆಯನ್ನು ಚಿತ್ರತಂಡದವರು ಗಂಭೀರವಾಗಿ ಪರಿಗಣಿಸಿದ್ದು, ಚಿತ್ರವನ್ನು ಟ್ರಿಮ್ ಮಾಡಿದ್ದಾರೆ.
ಪ್ರೇಮ್, ವಿಜಯ್ ರಾಘವೇಂದ್ರ, ದಿಗಂತ್ ಮತ್ತು ಪ್ರಜ್ವಲ್ ಅಭಿನಯದ ಹಾಗೂ ದ್ವಾರಕೀಶ್ ನಿರ್ಮಾಣದ 50ನೇ ಚಿತ್ರವಾದ “ಚೌಕ’, ಸುಮಾರು 20 ನಿಮಿಷ ಟ್ರಿಮ್ ಆಗಿದೆ. ಅದಕ್ಕೆ ಕಾರಣ ಚಿತ್ರದ ಪ್ರದರ್ಶನಗಳು ತಡವಾಗುತ್ತಿದ್ದುದು. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲವು ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿರುವ ಚಿತ್ರತಂಡದವರು, ಚಿತ್ರದ ಹೊಸ ಅವತರಣಿಕೆಯನ್ನು ಇಂದಿನಿಂದ ಚಿತ್ರಮಂದಿರಗಳಲ್ಲಿ ತೋರಿಸಲಿದ್ದಾರೆ.
ಇದುವರೆಗೂ ಸುಮಾರು ಮೂರು ಗಂಟೆ ಅವಧಿಯಿದ್ದ ಚಿತ್ರವು, 20 ನಿಮಿಷ ಹಗುರವಾಗಿ ಪ್ರದರ್ಶನವಾಗಲಿದೆ. ಕಳೆದ ಶುಕ್ರವಾರ ರಾಜ್ಯಾದ್ಯಂತ 214 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಎಲ್ಲ ಕಡೆ ಒಳ್ಳೆಯ ಪ್ರತಿಕ್ರಿಯೆಗಳು ಸಿಗುತ್ತಿದ್ದು, ಇನ್ನಷ್ಟು ಟ್ರಿಮ್ ಮಾಡಿದರೆ, ಇನ್ನೂ ಒಳ್ಳೆಯ ಮಾತುಗಳು ಕೇಳಿ ಬರಬಹುದು ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ.
ಅಂದಹಾಗೆ, ಕಳೆದ ಶುಕ್ರವಾರ ಕರ್ನಾಟಕದಲ್ಲಿ ಮಾತ್ರ ಚಿತ್ರ ಬಿಡುಗಡೆಯಾಗಿತ್ತು. ಈ ವಾರದಿಂದ ಚಿತ್ರವನ್ನು ಹೈದರಾಬಾದ್, ಚೆನ್ನೈ, ಮುಂಬೈ ಮುಂತಾದ ಕಡೆಗಳಲ್ಲೂ ಬಿಡುಗಡೆ ಮಾಡುವುದಕ್ಕೆ ಯೋಚಿಸುತ್ತಿದ್ದಾರೆ ಚಿತ್ರದ ವಿತರಕರಾದ ಜಾಕ್ ಮಂಜು. ಇನ್ನು ಹೊರದೇಶಗಳ ಬಿಡುಗಡೆ ಬಗ್ಗೆ ಹೇಳುವುದಾದರೆ, ಚಿತ್ರವು ಮುಂದಿನ ವಾರದಿಂದ ದುಬೈನಲ್ಲಿ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.