ನಾಗವಲ್ಲಿಗೆ ಸಿನಿಮಾದವರ ಕಾಟ!
Team Udayavani, Oct 3, 2017, 10:00 PM IST
– ನಟಿ ಸೌಂದರ್ಯ ಸಾವಿಗೆ ನಾಗವಲ್ಲಿ ಕಾರಣನಾ?
– ಡಾ.ವಿಷ್ಣುವರ್ಧನ್ ಸಾವಿನಲ್ಲೂ ನಾಗವಲ್ಲಿ ಪಾತ್ರವಿದೆಯಾ?
– 2011 ರಲ್ಲಿ ರಜನಿಕಾಂತ್‌ಗೆ ತೀವ್ರ ಅನಾರೋಗ್ಯ ಕಾಣಿಸಿಕೊಳ್ಳಲು ನಾಗವಲ್ಲಿ ಕಾರಣನಾ? ನಾಗವಲ್ಲಿ ಕಾಟದಿಂದ ಮುಕ್ತರಾಗಲು ರಜನಿ ಹಿಮಾಲಯಕ್ಕೆ ಹೋಗಿ ಬಾಬಾರಿಂದ ವಿಶೇಷ ಶಕ್ತಿಪಡೆದುಕೊಂಡು ಬಂದರಾ?
ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಎತ್ತಿರೋದು ನಾವಲ್ಲ. ನಿರ್ದೇಶಕ ಶಂಕರ್ ಅರುಣ್. ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿಕೊಂಡು ಅದಕ್ಕೆ ಉತ್ತರ ಹುಡುಕುವುದನ್ನೇ ಸಿನಿಮಾ ಮಾಡಿದ್ದಾರೆ. ಆ ಸಿನಿಮಾಕ್ಕೆ ಅವರಿಟ್ಟ ಹೆಸರು “ನಾಗವಲ್ಲಿ ವರ್ಸಸ್ ಆಪ್ತಮಿತ್ರರು’. ಚಿತ್ರದ ಟೈಟಲ್ ಡಿಸೈನ್ ಅನ್ನು “ಆಪ್ತಮಿತ್ರ-2′ ಎಂದು ಕಾಣುವಂತೆ ಮಾಡಿದ್ದಾರೆ. ಹಾಗಂತ ಆ ಸಿನಿಮಾದ ಕಥೆ ಇಲ್ಲಿ ಮುಂದುವರಿಯೋದಿಲ್ಲ.
ಆ ಸಿನಿಮಾದಲ್ಲಿ ನಟಿಸಿರುವ ಸೌಂದರ್ಯ ಹಾಗೂ ವಿಷ್ಣುವರ್ಧನ್ ಅವರ ಸಾವಿನ ವಿಷಯವೇ ಇವರ ಸಿನಿಮಾದ ಕಥೆ. ಅವರಿಬ್ಬರ ಸಾವಿಗೆ ನಾಗವಲ್ಲಿ ಕಾರಣನಾ ಎಂಬುದನ್ನು ಹುಡುಕುತ್ತಾ ಹೋಗೋದೇ ಸಿನಿಮಾ. ಈ ಇನ್ವೆಸ್ಟಿಗೇಶನ್‌ನ ಫೈನಲ್ ರಿಪೋರ್ಟ್ ಏನು ಎಂಬುದನ್ನು ನೀವು ತೆರೆಮೇಲೆಯೇ ನೋಡಬೇಕು. ನಾಗವಲ್ಲಿ ಚಿತ್ರರಂಗ ಬಿಟ್ಟು ಹೋಗುತ್ತೇನೆಂದರೂ ಚಿತ್ರರಂಗದವರು ಮಾತ್ರ ಆಕೆಯನ್ನು ಮತ್ತೆ ಎಳೆದು ತರುತ್ತಿದ್ದಾರೆ.
ನಾಗವಲ್ಲಿಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಹಾರರ್ ಸಿನಿಮಾ ಎಂದಾಕ್ಷಣ “ನಮಗೂ ಏನೇನೋ ಅನುಭವವಾಯಿತು’ ಎಂಬುದು ಪ್ರತಿ ಚಿತ್ರತಂಡ ಹೇಳುವ ಮಾತು. ಈಗ ನಿರ್ದೇಶಕ ಶಂಕರ್ ಅರುಣ್‌ಗೂ ಅಂತಹ ಅನುಭವಾಯಿತಂತೆ. ಅದು ಅವರು ಒಂದು ಡೈಲಾಗ್ ಬರೆದ ಮರುಕ್ಷಣದಿಂದ. “ಹೇ ನಾಗವಲ್ಲಿ ನಮ್ಮ ವಿಷ್ಣುದಾದ ಸಾವಿಗೆ ನೀನೇ ಕಾರಣವಾಗಿದ್ರೆ, ನಿನ್ನನ್ನು ಬಿಡೋ ಛಾನ್ಸೇ ಇಲ್ಲ …’ ಎಂದು ಬರೆದ ದಿನ ಸಂಜೆಯೇ ಶಂಕರ್‌ಗೆ ಅಪಘಾತವಾಯಿತಂತೆ.
ಆ ನಂತರ ಏರ್‌ಫೋರ್ಟ್‌ಗೆ ಹೋಗುವಾಗಲೂ ಅವರಿದ್ದ ಕಾರು ಪಲ್ಟಿಯಾಗಿ ಶಂಕರ್‌ಗೆ ಏಟಾಯಿತಂತೆ. ಅದಕ್ಕೆ ಸಾಕ್ಷಿಯಾಗಿ ಶಂಕರ್ ತಾನು ಆಸ್ಪತ್ರೆಯಲ್ಲಿ ಮಲಗಿರುವ ಫೋಟೋ ತೋರಿಸುತ್ತಾರೆ. ಅಪಘಾತವೇನೋ ನಿಜ, ಇವಕ್ಕೆಲ್ಲಾ ನಾಗವಲ್ಲಿನೇ ಕಾರಣ ಎಂದು ಹೇಗೆ ಹೇಳುತ್ತೀರಿ ಎಂದರೆ, ಶಂಕರ್ ಬಳಿ ಉತ್ತರವಿಲ್ಲ.
ಅಷ್ಟಕ್ಕೂ ನಾಗವಲ್ಲಿ ಇದ್ದಳಾ, ಆಕೆಯ ಸುತ್ತ ಹುಟ್ಟಿಕೊಂಡಿದ್ದ ಕಥೆ ನಿಜನಾ ಎಂದರೆ, ಶಂಕರ್, ನಾಗವಲ್ಲಿ ಇದ್ದ ಕೇರಳದ ಅನಂತ ಪದ್ಮನಾಭ ಅರಮನೆಗೆ ಭೇಟಿ ನೀಡಿದ್ದಲ್ಲದೇ ಅವಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾಗಿ ಹೇಳುತ್ತಾರೆ. ಆ ಮಾಹಿತಿ ಏನೆಂಬುದನ್ನು ನೀವು ತೆರೆಮೇಲೆಯೇ ನೋಡಬೇಕು. ಅದೇನೇ ಆಗಲಿ, ಚಿತ್ರರಂಗದ ಮಂದಿಯ ಪಾಲಿಗೆ ನಾಗವಲ್ಲಿ ಜೀವಂತವಾಗಿದ್ದಾಳೆ. “ನೂವಾ, ನೇನಾ?’ ಎಂದು ಕೇಳುತ್ತಿದ್ದಾಳೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.