“ದಶರಥ’ ಬಿಡುಗಡೆ ಈ ಬಾರಿ ಪಕ್ಕಾ
ಬಿಡುಗಡೆ ತಡವಾಗೋದು ಚಿತ್ರರಂಗದಲ್ಲಿ ಸಹಜ...
Team Udayavani, Jul 22, 2019, 3:03 AM IST
ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗಾಗಲೇ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ “ದಶರಥ’ ಚಿತ್ರ ತೆರೆಕಂಡು ಹಲವು ತಿಂಗಳುಗಳೇ ಕಳೆದಿರಬೇಕಿತ್ತು. ಮೂಲಗಳ ಪ್ರಕಾರ ಕಳೆದ ವರ್ಷಾಂತ್ಯಕ್ಕೆ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿದ್ದ “ದಶರಥ’ನನ್ನು ಈ ವರ್ಷದ ಏಪ್ರಿಲ್ ಅಂತ್ಯದೊಳಗೆ ತೆರೆಗೆ ತರಲು ನಿರ್ಧರಿಸಲಾಗಿತ್ತು. ಬಳಿಕ ಏನಾಯ್ತೋ, ಏನೋ “ದಶರಥ’ ಅಂದುಕೊಂಡ ಸಮಯಕ್ಕೆ ತೆರೆಗೆ ಬರಲೇ ಇಲ್ಲ.
ಎರಡು-ಮೂರು ಬಾರಿ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದರೂ, “ದಶರಥ’ ಪ್ರೇಕ್ಷಕರಿಗೆ ನಿಗದಿತ ದಿನಗಳಂದು ದರ್ಶನ ಕೊಡಲೇ ಇಲ್ಲ. ಹಾಗಾದರೆ “ದಶರಥ’ ತೆರೆಗೆ ಬರಲು ಸಾಧ್ಯವಾಗದಿರುವುದಕ್ಕೆ ಕಾರಣಗಳೇನು ಎನ್ನುವುದರ ಬಗ್ಗೆ ಚಿತ್ರತಂಡ ಮತ್ತು ಗಾಂಧಿನಗರದಿಂದ ಒಂದಷ್ಟು ಮಾತುಗಳು ಕೇಳಿ ಬರುತ್ತಿರುವುದಂತೂ ಸುಳ್ಳಲ್ಲ. ಈ ಬಗ್ಗೆ ಸ್ವತಃ ಚಿತ್ರದ ನಿರ್ದೇಶಕ ಎಂ.ಎಸ್.ರಮೇಶ್ ಮಾತನಾಡಿದ್ದು, ಈ ಬಾರಿ “ದಶರಥ’ನ ದರ್ಶನ ಪಕ್ಕಾ ಎನ್ನುತ್ತಿದ್ದಾರೆ.
“ದಶರಥ’ನ ಮೇಲೆ ಬೇಸರಗೊಂಡರಾ ರವಿಮಾಮ ಮತ್ತವರ ಫ್ಯಾನ್ಸ್?: ಯಾವುದೇ ಚಿತ್ರವಾಗಲಿ ಅದರ ಬಿಡುಗಡೆಗೆ ಅದರದ್ದೇ ಆದ ಕಾಲಮಿತಿ ಇರುತ್ತದೆ. ಆ ಕಾಲಮಿತಿಯೊಳಗೆ ಚಿತ್ರ ತೆರೆಗೆ ಬಂದರೆ ಅದರ ಮೇಲಿನ ಕುತೂಹಲದಿಂದ ಚಿತ್ರವನ್ನು ಪ್ರೇಕ್ಷಕರು ನೋಡುತ್ತಾರೆ. ಚಿತ್ರದ ವ್ಯಾಪಾರ-ವಹಿವಾಟನ್ನು ಕೂಡ ನಿರ್ಮಾಪಕರು, ವಿತರಕರು ಅಂದುಕೊಂಡಂತೆ ನಡೆಸಬಹುದು.
ಅದರ ಕಲಾವಿದರು ಮತ್ತು ತಂತ್ರಜ್ಞರಿಗೂ ಕೂಡ ತಮ್ಮ ಮುಂದಿನ ಚಿತ್ರಗಳಲ್ಲಿ ತೊಡಗಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ಚಿತ್ರವೊಂದು ಸಿದ್ಧಗೊಂಡು ಸರಿಯಾದ ಸಮಯಕ್ಕೆ ತೆರೆಗೆ ಬಾರದೇ ಹೋದರೆ ಸಹಜವಾಗಿಯೇ ಚಿತ್ರದ ಕಲಾವಿದರಿಗೆ ಅವರ ಅಭಿಮಾನಿಗಳಿಗೆ ಚಿತ್ರದ ಮೇಲಿನ ಕುತೂಹಲ, ನಿರೀಕ್ಷೆ ಕಡಿಮೆಯಾಗುತ್ತದೆ ಎನ್ನುವುದು ಚಿತ್ರರಂಗದಲ್ಲಿ ಎಲ್ಲರೂ ಒಪ್ಪುವಂಥ ಮಾತು.
ಇಂಥದ್ದೇ ಮಾತುಗಳು ಈ ಬಾರಿ “ದಶರಥ’ನ ಬಗ್ಗೆಯೂ ಕೇಳಿಬರುತ್ತಿದೆ. “ದಶರಥ’ನ ಬಿಡುಗಡೆ ತಡವಾಗಿರುವುದು “ದಶರಥ’ನ ಅವತಾರದಲ್ಲಿ ಕರಿಕೋಟು ತೊಟ್ಟು, ಬಿಗ್ ಸ್ಕ್ರೀನ್ ಮೇಲೆ ಎಂಟ್ರಿಕೊಡಲು ರೆಡಿಯಾಗಿದ್ದ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತವರ ಅಭಿಮಾನಿಗಳು “ದಶರಥ’ನ ಬಿಡುಗಡೆ ತಡವಾಗಿರುವದರ ಬಗ್ಗೆ ಬೇಸರಗೊಂಡಿದ್ದಾರೆ ಎನ್ನುವುದು ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಮಾತು.
“ದಶರಥ’ ತಡವಾಗಿರುವುದಕ್ಕೆ ನಿರ್ದೇಶಕರು ಏನಂತಾರೆ?: “ದಶರಥ’ ಚಿತ್ರದ ನಿರ್ದೇಶಕ ಎಂ.ಎಸ್ ರಮೇಶ್ “ದಶರಥ’ನ ಬಿಡುಗಡೆ ತಡವಾಗಿರುವುದಕ್ಕೆ ಹಲವು ಕಾರಣಗಳನ್ನು ಮುಂದಿಡುತ್ತಾರೆ. ಈ ಬಗ್ಗೆ ಮಾತನಾಡುವ ಎಂ.ಎಸ್ ರಮೇಶ್, “ಚಿತ್ರರಂಗದಲ್ಲಿ ಒಂದು ಚಿತ್ರದ ಬಿಡುಗಡೆ ವೇಳೆ ಈ ಥರ ಆಗೋದು ಸಹಜ.
ನಾವು ಅಂದುಕೊಂಡ ಪ್ರಕಾರ ಇಷ್ಟೊತ್ತಿಗೆ “ದಶರಥ’ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಹಣಕಾಸು ಸಮಸ್ಯೆ ಸೇರಿದಂತೆ ಕೆಲವೊಂದು ಸಮಸ್ಯೆಗಳು ಎದುರಾದ ಕಾರಣ ಚಿತ್ರದ ಬಿಡುಗಡೆಯನ್ನು ಕೆಲಕಾಲ ಮುಂದೂಡಬೇಕಾಯಿತು. ಈಗ ನಮ್ಮ ಅನುಕೂಲ ನೋಡಿಕೊಂಡು ಚಿತ್ರದ ಬಿಡುಗಡೆ ಮಾಡುತ್ತಿದ್ದೇವೆ.
ದೊಡ್ಡ ಸ್ಟಾರ್‌ಗಳ ಸಿನಿಮಾಗಳು ಅಂದುಕೊಂಡ ಸಮಯಕ್ಕೆ ರಿಲೀಸ್ ಆಗದಿದ್ದರೆ, ಅವರಿಗೂ ಅವರ ಅಭಿಮಾನಿಗಳಿಗೂ ಬೇಸರವಾಗೋದು ಸಹಜ. ಆದರೆ ಉದ್ದೇಶಪೂರ್ವಕವಾಗಿ ಚಿತ್ರದ ರಿಲೀಸ್ ವಿಳಂಬ ಮಾಡಿಲ್ಲ. ಹಾಗಾಗಿ “ದಶರಥ’ನ ರಿಲೀಸ್ ತಡವಾಗಿರುವುದಕ್ಕೆ ಅವರಲ್ಲಿ ನಾವು ವಿಷಾದಿಸಿ, ಕ್ಷಮೆ ಕೇಳಬಹುದುದೇ ಹೊರತು ಅದಕ್ಕಿಂತ ಹೆಚ್ಚಾಗಿ ಏನೂ ಮಾಡಲಾಗದು’ ಎನ್ನುವ ಉತ್ತರ ನೀಡುತ್ತಾರೆ.
ಜು. 26 “ದಶರಥ’ದರ್ಶನ ಪಕ್ಕಾ: ಇನ್ನು “ದಶರಥ’ ಚಿತ್ರದ ಬಿಡುಗಡೆಯನ್ನು ಮತ್ತೂಮ್ಮೆ ಘೋಷಿಸಿರುವ ಚಿತ್ರತಂಡ, ಇದೇ ಜುಲೈ 26ರಂದು “ದಶರಥ’ನನ್ನು ತೆರೆಮೇಲೆ ತರುತ್ತಿದ್ದೇವೆ ಎಂದಿದೆ. ಸುಮಾರು 200ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ “ದಶರಥ’ ಬಿಡುಗಡೆಗೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಸದ್ಯ ಚಿತ್ರದ ಪ್ರಮೋಶನ್ ಕೆಲಸಗಳು ಜೋರಾಗಿ ನಡೆಯುತ್ತಿದ್ದು ಈ ಬಾರಿ “ದಶರಥ’ನ ದರ್ಶನ ಪಕ್ಕಾ ಎನ್ನುತ್ತಾರೆ ನಿರ್ದೇಶಕ ಎಂ.ಎಸ್ ರಮೇಶ್.
ಒಟ್ಟಾರೆ ಪ್ರೇಮಲೋಕದ ಸರದಾರನನ್ನು ತೆರೆಮೇಲೆ ನೋಡಿ ಬಹಳ ಸಮಯವಾಯಿತು ಎನ್ನುತ್ತಿದ್ದ ಅಭಿಮಾನಿಗಳ ಮುಂದೆ ರವಿಚಂದ್ರನ್ “ದಶರಥ’ ರೂಪದಲ್ಲಿ ತೆರೆಮೇಲೆ ದರ್ಶನ ಕೊಡೋದಕ್ಕೆ ರೆಡಿಯಾಗಿದ್ದು, “ದಶರಥ’ ಎಷ್ಟರ ಮಟ್ಟಿಗೆ ಪ್ರೇಕ್ಷಕ ಪ್ರಭುಗಳಿಗೆ ಇಷ್ಟವಾಗುತ್ತಾನೆ ಅನ್ನೋದು ಇದೇ ತಿಂಗಳಾಂತ್ಯಕ್ಕೆ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.