ಸಾಕ್ಷ್ಯಚಿತ್ರ ವಲ್ಲಗೈರು ಪ್ರದರ್ಶನ!
Team Udayavani, Oct 26, 2017, 10:49 AM IST
ಬೆಂಗಳೂರು: ವಿಧಾನಸೌಧದ ವಜ್ರ ಮಹೋತ್ಸವ ಅಂಗವಾಗಿ ಬಾಂಕ್ವೆಟ್ ಸಭಾಂಗಣದಲ್ಲಿ ನಿಗದಿಯಾಗಿದ್ದ ಸಾಕ್ಷ್ಯಾಚಿತ್ರ ಹಾಗೂ ವಿಧಾನಸೌಧ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಚಿವರು-ಶಾಸಕರು ಗೈರು ಹಾಜರಿ ಎದ್ದುಕಾಣುತ್ತಿತ್ತು. ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಯವರ ಭಾಷಣ ಮುಗಿದು ಪೋಟೋ ಸೆಷನ್ ಮುಗಿದ ನಂತರ ಬಹುತೇಕ ಶಾಸಕರು, ವಿಧಾನಪರಿಷತ್ ಸದಸ್ಯರು ನಿರ್ಗಮಿಸಿದರು. ಬಾಂಕ್ವೆಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಭೋಜನ ಕೂಟಕ್ಕೂ ಬೆರಳಣಿಕೆಯಷ್ಟು ಮಂದಿ ಮಾತ್ರ ಹಾಜರಾಗಿದ್ದರು.
ಕಾಡಿದ ಅವ್ಯವಸ್ಥೆ: ಬಾಂಕ್ವೆಟ್ ಸಭಾಂಗಣದಲ್ಲಿ ಸಾಕ್ಷ್ಯಾಚಿತ್ರ ಪ್ರದರ್ಶನ ವೇಳೆ ಸಚಿವ ಆಂಜನೇಯ ಹಾಗೂ ನಗರದ ಶಾಸಕರು ಅದರಲ್ಲೂ ಕಾಂಗ್ರೆಸ್ ಶಾಸಕರು ಮಾತ್ರ ಭಾಗವಹಿಸಿದ್ದರು. ವಿಧಾನಸೌಧ ವಜ್ರ ಮಹೋತ್ಸವ ಹಿನ್ನೆಲೆಯಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಸಾಕ್ಷ್ಯಚಿತ್ರಗಳ ಪ್ರದರ್ಶನವನ್ನು ಬ್ಯಾಂಕ್ವೆಟ್ ಸಭಾಂಗಣದಲ್ಲಿ ಬುಧವಾರ ಮಧ್ಯಾಹ್ನ 3ರಿಂದ 5 ಗಂಟೆವರೆಗೆ ಆಯೋಜಿಸಲಾಗಿತ್ತು. ಆದರೆ ಮಧ್ಯಾಹ್ನ 1.45ರ ಹೊತ್ತಿಗೆ ಸಾಕ್ಷ್ಯಚಿತ್ರ ಪ್ರದರ್ಶನ ಆರಂಭವಾಗಿತ್ತು. ಹೀಗಾಗಿ ಮೂರು ಗಂಟೆ ಹೊತ್ತಿಗೆ ಆಗಮಿಸಿದವರು ಗೊಂದಲಗೊಂಡರು. 3.45ರ ವೇಳೆಗೆ ನಿರ್ದೇಶಕರಾದ ಟಿ.ಎನ್.ಸೀತಾರಾಂ, ಗಿರೀಶ್ ಕಾಸರವಳ್ಳಿ ಅವರು ನಿರ್ಮಿಸಿದ್ದ ಸಾಕ್ಷ್ಯಚಿತ್ರಗಳ ಪ್ರದರ್ಶನ ಮುಕ್ತಾಯವಾಯಿತು. ಬಳಿಕ ಮುಖ್ಯಮಂತ್ರಿಗಳು ಇತರೆ ಗಣ್ಯರು ತೆರಳಿದರು. ಪ್ರೇಕ್ಷಕರ ಮನವಿ ಮೇರೆಗೆ ಮತ್ತೆ ಎರಡೂ ಸಾಕ್ಷ್ಯಚಿತ್ರಗಳನ್ನು ಮರು ಪ್ರಸಾರ ಮಾಡಲಾಯಿತು. ಬಹಳಷ್ಟು ಸಚಿವರು, ಶಾಸಕರು ಗೈರಾಗಿದ್ದರು.
ವಿಧಾನಸೌಧ ಮುಂಭಾಗ ಸಂಜೆ ಆಯೋಜನೆಯಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗೆ ಸಚಿವರು, ಶಾಸಕರಿಗೆ ಆಸನಗಳನ್ನು ಕಾಯ್ದಿರಿಸಲಾಗಿತ್ತು. ಆದರೆ ಕಾರ್ಯಕ್ರಮ ಶುರುವಾದರೂ ಬಹಳಷ್ಟು ಸಚಿವರು, ಶಾಸಕರ ಸುಳಿವಿರಲಿಲ್ಲ. ಇದರಿಂದ ಬಹಳ ಹೊತ್ತಿನವರೆಗೆ ಆಸನಗಳು ಖಾಲಿ ಇದ್ದವು. ಪ್ರಾರಂಭದಲ್ಲಿ ಸಚಿವರಾರೂ ಇರಲಿಲ್ಲ.
3ಡಿ ವಚ್ಯುಯೆಲ್ ವಿಡಿಯೋ ಪ್ರದರ್ಶನ: ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮೇಲೆ ಅಳವಡಿಸಲಾಗಿದ್ದ ಪರದೆಯ ಮೇಲೆ ಮೂಡಿಬಂದ 3ಡಿ ವರ್ಚ್ಯಯೆಲ್ ವಿಡಿಯೋ ಮೂಲಕ ವಿಧಾನಸೌಧದ ಒಳನೋಟವನ್ನು ಬಿಂಬಿಸಲಾಯಿತು. ಮಾಸ್ಟರ್ ಕಿಶನ್ ನಿರ್ದೇಶನದಲ್ಲಿ ತೆರೆಕಂಡ ಈ ವಿಶೇಷ ಪ್ರಯೋಗ ವೀಕ್ಷಕರನ್ನು ಬೆರಗುಗೊಳಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಚಿವ ಟಿ.ಬಿ.ಜಯಚಂದ್ರ ಅವರು 3ಡಿ ತಂತ್ರಜ್ಞಾನ ವಿಡಿಯೋ ವೀಕ್ಷಣೆಯ ವಿಶೇಷ ಉಪಕರಣ ಬಳಸಿ ವೀಕ್ಷಿಸಿದರು
ಫಲಕ ಕಿತ್ತು ಬಿಸಾಡಿದ ರಾಜಣ್ಣ
ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಯಾಗಿದ್ದ ವಿಧಾನಸೌಧ ಮೆಟ್ಟಿಲುಗಳ ಮುಂಭಾಗ ಸ್ಪೀಕರ್, ಸಭಾಪತಿ, ಮುಖ್ಯಮಂತ್ರಿಗಳು, ಸಚಿವರು, ಅತಿ ಗಣ್ಯರಿಗೆ ವಿಶೇಷ ಆಸನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಯಾರೊಬ್ಬ ಸಚಿವರೂ ಆಗಮಿಸಿರಲಿಲ್ಲ. ಈ ನಡುವೆ ಶಾಸಕರಾದ ಕೆ.ಎನ್.ರಾಜಣ್ಣ, ಸಿ.ಎನ್. ಬಾಲಕೃಷ್ಣ ಆಗಮಿಸಿದರು. ಆಗ ಮಾರ್ಷಲ್‌ಗಳು ಗಣ್ಯರ ಆಸನ ಹೊರತುಪಡಿಸಿ ಹಿಂದಿನ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಕೋರಿದರು. ಆದರೆ ಅದನ್ನು ಲೆಕ್ಕಿಸದ ರಾಜಣ್ಣ ಸಚಿವರಿಗೆ ಕಾಯ್ದಿರಿಸಿದ್ದ ಆಸನದ ಕಡೆಗೆ ನಡೆದರು. ಆಗಲೂ ಮಾರ್ಷಲ್‌ಗಳು ಮನವಿ ಮಾಡಿದಾಗ ಕೋಪಗೊಂಡ ರಾಜಣ್ಣ, “ಸಚಿವರಿಗೆ’ ಎಂದು ಆಸನಕ್ಕೆ ಅಂಟಿಸಿದ್ದ ಹಾಳೆಯನ್ನು ಕಿತ್ತು ಮಾರ್ಷಲ್ ಕಡೆಗೆ ಎಸೆದು ಅದೇ ಆಸನದಲ್ಲಿ ಕುಳಿತರು.
ಪೋಷಕರಿಂದ ತಪ್ಪಿಸಿಕೊಂಡ ಮಗು : ವಿಧಾನಸೌಧದ ವಜ್ರಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮುಗಿದು ಮೂವರು ಮಾಜಿ ಮುಖ್ಯಮಂತ್ರಿಗಳ ಕುಟುಂಬದ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮದ ವೇಳೆ ಸುಮಾರು 2 ವರ್ಷದ ಮಗುವೊಂದು ತನ್ನ ಪಾಲಕರಿಂದ ತಪ್ಪಿಸಿಕೊಂಡಿತು. ಕಾರ್ಯಕ್ರಮದ ನಿರೂಪಕರು ಆ ಮಗುವನ್ನು ವೇದಿಕೆಗೆ ತಂದು ಈ ಮಗು ಸಿಕ್ಕಿದೆ. ದಯವಿಟ್ಟು ಪಾಲಕರು ಬಂದು ಕರೆದುಕೊಂಡು ಹೋಗಬೇಕು ಎಂದು ಪ್ರಕಟಿಸಿದರು. ಸ್ವಲ್ಪ ಹೊತ್ತಿನ ಬಳಿಕ ಮತ್ತೇ ಅದನ್ನೇ ಪ್ರಕಟಿಸಿದ ನಿರೂಪಕರು ಇನ್ನೂ ಪಾಲಕರು ಬರದಿರುವುದು ಆತಂಕದ ವಿಷಯ. ದೃಶ್ಯ ಮಾಧ್ಯಮಗಳು ಈ ಸುದ್ದಿಯನ್ನು ಬಿತ್ತರಿಸಿ ಎಂದು ಮನವಿ ಮಾಡಿದರು. ಬಳಿಕ ಪಾಲಕರು ಆ ಮಗುವನ್ನು ಕರೆದುಕೊಂಡು ಹೋದರು ಎನ್ನಲಾಗಿದೆ.
ಸಾಂಸ್ಕೃತಿಕ ಪ್ರದರ್ಶನ: ವಿಧಾನಸೌಧ ವಜ್ರಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಅನಾವರಣಗೊಳಿಸಲಾಯಿತು. ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಸುಮಾರು 250ಕ್ಕೂ ಹೆಚ್ಚು ಕಲಾವಿದರು ನಿರೂಪಿಸಿದ ಸಾಂಸ್ಕೃತಿಕ ಪ್ರದರ್ಶನವು ನೋಡುಗರ ಮನಸೂರೆಗೊಂಡಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಂಜೆ 5:30ಕ್ಕೆ ಆರಂಭವಾದ ಕಾರ್ಯಕ್ರಮದಲ್ಲಿ ಪೂಜಾ ಕುಣಿತ, ಪಟ ಕುಣಿತ, ಕಂಸಾಳೆ, ಲಂಬಾಣಿ, ಚಿಟ್ಟಿಮೇಳ, ತಮಟೆ, ವೀರಗಾಸೆ, ಗೊರವರ ಕುಣಿತ, ಜೋಗತಿ, ಕಂಗೀಲು, ಹಾಲಕ್ಕಿ ಸುಗ್ಗಿ ಕುಣಿತ, ವೀರಭದ್ರ ಕುಣಿತವನ್ನು ಕಲಾವಿದರು ತಂಡೋಪತಂಡವಾಗಿ ಪ್ರದರ್ಶಿಸಿದರು. ಡೊಳ್ಳು ಕುಣಿತ, ಜಗ್ಗಲಿಗೆ, ತಮಟೆ ವಾದನ ತಂಡದ ಜುಗಲ್‌ಬಂದಿ ನೋಡುಗರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಎಲ್ಲ ತಂಡಗಳ 250ಕ್ಕೂ ಹೆಚ್ಚು ಕಲಾವಿದರು ಒಟ್ಟಿಗೆ ವೇದಿಕೆಯಲ್ಲಿ ಒಟ್ಟುಗೂಡಿ ಗೀತೆಯೊಂದಕ್ಕೆ ಹೆಜ್ಜೆ ಹಾಕುವ ಮೂಲಕ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರೆ ಎಳೆದರು.
ಹಂಸಲೇಖ ತಂಡದಿಂದ ರಸಮಂಜರಿ
ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ಅವರ ತಂಡ ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮ ಆಕರ್ಷಕವಾಗಿತ್ತು. ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆ, ವರನಟ ಡಾ. ರಾಜ್‌ಕುಮಾರ್ ಹಾಗೂ ನಾಡಪ್ರಭು ಕೇಂಪೇಗೌಡರ ಕಿರುಪರಿಚಯ ಮತ್ತು ರಾಜ್ಯ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ ಸೇರಿದಂತೆ ಪ್ರಮುಖ ಯೋಜನೆಗಳ ಯಶೋಗಾಥೆಯನ್ನು ವಿಧಾನಸೌಧದ ಮುಂಭಾಗದ ಮೇಲೆ ಮೂಡಿಸಿದ್ದು ವಿಶೇಷವಾಗಿತ್ತು. ಬಳಿಕ ವಿಧಾನಸೌಧದ ವಜ್ರಮಹೋತ್ಸವಕ್ಕೆ ವಿಶೇಷವಾಗಿ ರಚಿಸಿದ ಗೀತೆಯನ್ನು ಹಂಸಲೇಖ ತಂಡ ಹಾಡಿತು. ಬಳಿಕ ರಸ ಮಂಜರಿ ಕಾರ್ಯಕ್ರಮ ಮುಂದುವರಿಯಿತ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.