“ಎರಡನೇ ಸಲ’ ಈ ಶುಕ್ರವಾರದಿಂದ ಚಿತ್ರಮಂದಿರದಲ್ಲಿ ಇರೋದಿಲ್ಲ
Team Udayavani, Mar 8, 2017, 11:32 AM IST
“ಎರಡನೇ ಸಲ’ ಚಿತ್ರವನ್ನು ನೋಡದಿದ್ದವರು ಬೇಗನೇ ನೋಡಿಕೊಂಡು ಬಿಡಿ. ಮುಂದಿನ ಶುಕ್ರವಾರದಿಂದ ಆ ಚಿತ್ರ ನಿಮಗೆ ಸಿಗುವುದಿಲ್ಲ! ಬಿಡುಗಡೆಯಾಗಿ ಒಂದೇ ವಾರಕ್ಕೆ ಚಿತ್ರ ಎತ್ತಂಗಡಿಯಾಯಿತಾ, ಮೆಚ್ಚುಗೆ ವ್ಯಕ್ತವಾದರೂ ಸಿನಿಮಾ ಥಿಯೇಟರ್‌ನಲ್ಲಿ ನಿಲ್ಲಲಿಲ್ವಾ ಎಂಬ ಪ್ರಶ್ನೆಗಳು ಬರೋದು ಸಹಜ. ಸಿನಿಮಾ ಒಂದೇ ವಾರಕ್ಕೆ ಎತ್ತಂಗಡಿಯಾಗಿಲ್ಲ, ಚಿತ್ರದ ನಿರ್ಮಾಪಕರೇ ಆ ಸಿನಿಮಾವನ್ನು ಎಲ್ಲಾ ಥಿಯೇಟರ್‌ನಿಂದಲೂ ಹಿಂಪಡೆಯುತ್ತಿದ್ದಾರೆ.
ಅದು ತುಂಬಾ ಬೇಸರದಿಂದ. ಈ ವಿಷಯವನ್ನು ಸ್ವತಃ ಆ ಚಿತ್ರದ ನಿರ್ಮಾಪಕ ಯೋಗೇಶ್ ನಾರಾಯಣ್ ಘೋಷಿಸಿದ್ದಾರೆ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ “ನಾನು ತುಂಬಾ ಬೇಸರದಿಂದ, ನೋವಿನಿಂದ ಹೇಳುತ್ತಿದ್ದೇನೆ, “ಎರಡನೇ ಸಲ’ ಚಿತ್ರವನ್ನು ಎಲ್ಲಾ ಥಿಯೇಟರ್‌ನಿಂದ ವಿತ್‌ಡ್ರಾ ಮಾಡುತ್ತಿದ್ದೇನೆ’.
ಯೋಗೇಶ್ ನಾರಾಯಣ್ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಮುಖ್ಯವಾಗಿ ಮೂರು ಕಾರಣ; ದೊಡ್ಡ ಸಿನಿಮಾವೊಂದು ಬಿಡುಗಡೆಯಾದ ಬೆನ್ನಲ್ಲೇ ರಿಲೀಸ್ ಮಾಡಿದ್ದು ಮತ್ತು ಕನ್ನಡದ ಜನ ಹೆಚ್ಚಿರುವ ಜಾಗಗಳಲ್ಲಿರುವ ಒಳ್ಳೆಯ ಥಿಯೇಟರ್ ಸಿಗದಿರುವುದು. ನಟ, ನಿರ್ಮಾಪಕರು ಎಷ್ಟೇ ಪ್ರಚಾರ ಮಾಡಿದರೂ, ಮಾಧ್ಯಮಗಳಿಂದ ಒಳ್ಳೆಯ ಮಾತು ಕೇಳಿಬಂದರೂ ಸಿನಿಮಾ ಜನರಿಗೆ ತಲುಪದಿರುವುದು ಹಾಗೂ ನಿರ್ದೇಶಕ ಗುರುಪ್ರಸಾದ್ ಅವರ ಗೈರು ಹಾಜರಿ.
ಈ ಮೂರು ಕಾರಣಗಳಿಂದಾಗಿ “ಎರಡನೇ ಸಲ’ ಚಿತ್ರ ಸೊರಗಿದೆಯಂತೆ. ಒಂದಷ್ಟು ದೊಡ್ಡ ಸಿನಿಮಾಗಳು ಥಿಯೇಟರ್‌ನಲ್ಲಿ ಕಚ್ಚಿಕೊಂಡಿರುವಾಗ ಹಾಗೂ “ಎರಡನೇ ಸಲ’ ಚಿತ್ರ ಜನರನ್ನು ತಲುಪದೇ ಇರುವಾಗ ಥಿಯೇಟರ್‌ನಲ್ಲಿ ಮುಂದುವರೆಸುವುದರಲ್ಲಿ ಅರ್ಥವಿಲ್ಲ ಎಂಬ ಕಾರಣಕ್ಕೆ ಈಗ ನಿರ್ಮಾಪಕರು ಚಿತ್ರವನ್ನು ಹಿಂದಕ್ಕೆ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. “ಸಿನಿಮಾ ಪಬ್ಲಿಕ್‌ಗೆ ತಲುಪಿಲ್ಲ. ಮಲ್ಟಿಪ್ಲೆಕ್ಸ್‌ಗಳಲ್ಲೂ ಪ್ರೈಮ್ ಟೈಮ್‌ನ ಶೋ ಸಿಕ್ಕಿಲ್ಲ.
ಒಳ್ಳೊಳ್ಳೆ ಸಿಂಗಲ್ ಸ್ಕ್ರೀನ್ ಕೂಡಾ ಇಲ್ಲ. ಹೀಗಿರುವಾಗ ಸಿನಿಮಾವನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಈಗ ವಿತ್‌ಡ್ರಾ ಮಾಡುತ್ತಿದ್ದೇನೆ. ಮುಂದೆ ಒಂದೂವರೆ, ಎರಡು ತಿಂಗಳೊಳಗಾಗಿ ಒಂದು ಒಳ್ಳೆಯ ಸಮಯ ನೋಡಿಕೊಂಡು ರೀ ರಿಲೀಸ್ ಮಾಡುತ್ತೇನೆ’ ಎನ್ನುತ್ತಾರೆ ಯೋಗೇಶ್ ನಾರಾಯಣ್. ಅಷ್ಟೇ ಅಲ್ಲ, ನಿರ್ಮಾಪಕ ಯೋಗೇಶ್ ನಾರಾಯಣ್, ನಿರ್ದೇಶಕ ಗುರುಪ್ರಸಾದ್ ಮೇಲೆ ಬೇಸರವಾಗಿದ್ದಾರೆ.
ಚಿತ್ರದ ಬಿಡುಗಡೆಗೆ ಸಹಕರಿಸದ ಜೊತೆಗೆ ನಿರ್ದೇಶಕನಾಗಿ ತನ್ನ ಜವಾಬ್ದಾರಿ ಪೂರೈಸಿಲ್ಲ ಎಂದು ಬೇಸರಗೊಂಡಿರುವ ಯೋಗೇಶ್ ನಾರಾಯಣ್, ಗುರುಪ್ರಸಾದ್ ವಿರುದ್ಧ ತನಗಾದ ನಷ್ಟವನ್ನು ಭರಿಸಿಕೊಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಮಂಡಳಿ ಇಂದು ಇಬ್ಬರನ್ನು ಕರೆಸಿ ಸಭೆ ನಡೆಸಲಿದೆ. ಗುರುಪ್ರಸಾದ್ ಬಗ್ಗೆ ಮಾತನಾಡುವ ಯೋಗೇಶ್, “ನಾಲ್ಕು ವರ್ಷ ಕಾದೆ.
ಸಿನಿಮಾ ಬೇಗ ಮುಗಿಸಿಕೊಡಿ ಎಂದಿದ್ದೇ ಗುರುಪ್ರಸಾದ್ ಸಿಟ್ಟಿಗೆ ಕಾರಣವಾಗಿರಬಹುದೇನೋ. ನಾನು ಯಾವ ತಪ್ಪು ಮಾಡಿಲ್ಲ. ಗುರುಪ್ರಸಾದ್ ಅವರನ್ನು ನಂಬಿ, ಅವರು ಕೇಳಿದ ಎಲ್ಲಾ ಸಹಕಾರ ಕೊಟ್ಟಿದ್ದೇ ನಾನು ಮಾಡಿದ ತಪ್ಪು ಇರಬೇಕು. ಆರಂಭದಲ್ಲಿ 9 ತಿಂಗಳಲ್ಲಿ ಸಿನಿಮಾ ಮುಗಿಸಿಕೊಡುತ್ತೇನೆ ಎಂದಿದ್ದರು. ಆಗ ಅವರಲ್ಲಿ ಸ್ಕ್ರಿಪ್ಟ್ ರೆಡಿ ಇರಲಿಲ್ಲ. ಆಗ ನಾನು ಭಾವಿಸಿದೆ, 9 ಆಗದಿದ್ದರೂ 18 ತಿಂಗಳಲ್ಲಾದರೂ ಸಿನಿಮಾ ಮುಗಿಯಬಹುದೆಂದು.
ಆದರೆ ಈಗ ನಾಲ್ಕು ವರ್ಷ ಆಗಿದೆ. ಜೊತೆಗೆ ಸಿನಿಮಾವನ್ನು ಕೈ ಬಿಟ್ಟು ಹೋಗಿದ್ದಾರೆ. ಅವರು ಕೇಳಿದ ಪ್ಯಾಕೇಜ್ ಕೊಟ್ಟಿದ್ದೇನೆ. ಅವರ ಕ್ರಿಯೇಟಿವ್ ವಿಚಾರದಲ್ಲಿ ನಾನು ತಲೆಹಾಕಿಲ್ಲ. ಆದರೆ ಅವರು ಈ ಸಿನಿಮಾ ಆರಂಭವಾದ ನಂತರ ಆರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದರೆ ಹೊರತು ಸಿನಿಮಾ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ನನ್ನಂತಹ ನಿರ್ಮಾಪಕನಿಗೆ ಹೀಗಾದರೆ ಮುಂದೆ ನಾನು ಸಿನಿಮಾ ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸುವ ಯೋಗೇಶ್, ಗುರುಪ್ರಸಾದ್ ಜೊತೆಗಿನ ತಮ್ಮ ಮತ್ತಷ್ಟು ಬೇಸರವನ್ನು ಹೊರಹಾಕುತ್ತಾರೆ.
ಗುರುಪ್ರಸಾದ್ ಅವರ ಪ್ರತಿಭೆ ಬಗ್ಗೆ ತನ್ನ ಯಾವುದೇ ತಕರಾರಿಲ್ಲ, ಒಳ್ಳೆಯ ಸಿನಿಮಾ ಮಾಡಿಕೊಟ್ಟಿದ್ದಾರೆ, ಅವರು ಬುದ್ಧಿವಂತರು ಕೂಡಾ ಎನ್ನುವ ನಿರ್ಮಾಪಕ ಯೋಗೇಶ್‌ಗೆ, ಗುರುಪ್ರಸಾದ್ ಅವರ ಈ ನಡವಳಿಕೆ ಬಗ್ಗೆ ಬೇಸರವಿದೆ ತಂದಿದೆಯಂತೆ. “ನಾನು ಗುರುಪ್ರಸಾದ್ ಜೊತೆ ಸಿನಿಮಾ ಮಾಡಿದ್ದೇ ಬ್ರಾಂಡ್ ಇಮೇಜ್‌ಗಾಗಿ. ಆದರೆ ಈಗ ಅದೇ ವಕೌìಟ್ ಆಗಿಲ್ಲ. ಇನ್ನು, ಗುರುಪ್ರಸಾದ್ ಅವರು, “ನಾನು ಕೂಡಾ ಆ ಸಿನಿಮಾದ ನಿರ್ಮಾಪಕ’ ಎಂದಿದ್ದಾರೆ.
ಅವರು ಈ ಸಿನಿಮಾಕ್ಕೆ ನಿರ್ಮಾಪಕ ಅಲ್ಲ. ನಾನೇ ನಿರ್ಮಾಪಕ. ಸಿನಿಮಾದಲ್ಲಿ ಗುರುಪ್ರಸಾದ್ ಇಂಕ್ ಎಂಬುದನ್ನು ಬಳಸಿಕೊಂಡಿದ್ದು ಬಿಝಿನೆಸ್‌ಗೆ ಸಹಾಯವಾಗಲಿ ಎಂಬ ಕಾರಣಕ್ಕೆ. ಅವರು ಕೇವಲ ಈ ಸಿನಿಮಾದ ಕ್ರಿಯೇಟಿವ್ ಪಾರ್ಟ್ ಅಷ್ಟೇ. ನಿರ್ಮಾಣಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ’ ಎನ್ನುತ್ತಾರೆ ಯೋಗೇಶ್. ಇನ್ನು, ಗುರುಪ್ರಸಾದ್, ಚಿತ್ರದ ನಟ-ನಟಿಯರನ್ನು ಕೂಡಾ ಆಡಿಯೋ ರಿಲೀಸ್‌ಗೆ, ಚಿತ್ರದ ಪ್ರಮೋಶನ್‌ಗೆ ಹೋಗಬೇಡಿ ಎಂದು ಹೇಳಿದ್ದರಂತೆ. ಇದು ಕೂಡಾ ಯೋಗೇಶ್‌ಗೆ ಬೇಸರವಾಗಿದೆ.
“ನನ್ನ ನಾಲ್ಕು ವರ್ಷದ ಶ್ರಮಕ್ಕೆ, ಇನ್ವೆಸ್ಟ್‌ಮೆಂಟ್‌ಗೆ ಬೆಲೆ ಇಲ್ವಾ. ನನ್ನ ಅಪ್ಪ ಕೇಳುತ್ತಾರೆ, ನಿನ್ನ ಆಯಸ್ಸಿನ ನಾಲ್ಕು ವರ್ಷವನ್ನು ಗುರುಪ್ರಸಾದ್ ಕಿತ್ತುಕೊಂಡರಲ್ಲ, ಅದನ್ನು ವಾಪಾಸ್ ಕೊಡೋಕೆ ಸಾಧ್ಯನಾ ಎಂದು. ಚಿಕ್ಕ ವಿಷಯಗಳನ್ನು ಗುರುಪ್ರಸಾದ್ ದೊಡ್ಡದು ಮಾಡಿ, ಸಿನಿಮಾಕ್ಕೆ ಎಫೆಕ್ಟ್ ಮಾಡಿದ್ದಾರೆ. ನಾನು ಶೂಸ್ ನೆಕ್ಕಬಲ್ಲೆ. ಆದರೆ ಹಿಲ್ಡ್ಸ್ ನೆಕ್ಕಲಾರೆ. ನನಗೂ ಸ್ವಾಭಿಮಾನವಿದೆ’ ಎಂದು ತಮ್ಮ ಬೇಸರ ಹೊರಹಾಕಿದರು ಯೋಗೇಶ್ ನಾರಾಯಣ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.