ಸ್ನೇಹದ ಕಡಲಲ್ಲಿ
Team Udayavani, Oct 5, 2018, 6:00 AM IST
ಅಂದು ರವಿವಾರ. ಕೋಚಿಂಗ್ ಮುಗಿಸಿ ಮನೆಗೆ ಬಂದವಳೇ ಕಿವಿಗಳಿಗೆ ಇಯರ್‌ಫೋನ್ ಅನ್ನು ಜೋತುಹಾಕಿ ಅಂಗಳದಲ್ಲಿ ಬಂದು ಕುಳಿತೆ. ಆ ಕ್ಷಣ ಕಿವಿಗೆ ಬಿದ್ದ ಹಾಡು “ರಕ್ತ ಸಂಬಂಧಗಳ ಮೀರಿದ ಬಂಧವಿದು’ - ಸ್ನೇಹದ ಅರ್ಥ ತಿಳಿಸುವ ಈ ಸುಮಧುರ ಹಾಡು ಮುಗಿಯುವಷ್ಟರಲ್ಲಿ ಕಣ್ಣಂಚಿನ ಹನಿ ಕೆನ್ನೆಗಳ ಮೇಲುರುಳಿ ನನ್ನ ಕೈಯಲ್ಲಿದ್ದ ಫೋಟೋ ಒಂದರ ಮೇಲೆ ಬಿತ್ತು. ಆ ಫೋಟೋದಲ್ಲಿದ್ದದ್ದು ನಾನು, ನನ್ನ ಸ್ನೇಹಿತೆ ಜೀವಿತಾ !
ನಾನು ಜೀವಿತಾಳನ್ನು ಭೇಟಿ ಮಾಡಿದ್ದು ಒಂದು ವರುಷದ ಹಿಂದೆ ಕಾಲೇಜಿನಲ್ಲಿ. ಅಲ್ಲಿಯವರೆಗೆ ನಾವು ಎಂದಿಗೂ ಒಬ್ಬರನ್ನೊಬ್ಬರು ಕಂಡವರೂ ಅಲ್ಲ. ಪ್ರಥಮ ಪಿಯುಸಿ ಪ್ರಾರಂಭವಾಗಿ ಒಂದೆರಡು ತಿಂಗಳ ನಂತರ ಬೆಸೆದ ಬಂಧ ಈ ಸ್ನೇಹ. ಮೊದಮೊದಲು ಹೆಚ್ಚು ಮಾತಿರಲಿಲ್ಲ. ಇಬ್ಬರಿಂದಲೂ ಯಥಾಚಾರ ವರ್ತನೆ, ಔಪಚಾರಿಕೆಯಷ್ಟೆ. ಅಚ್ಚರಿಯ ವಿಷಯವೆಂದರೆ, ಈ ಸ್ನೇಹ ಎಲ್ಲಿ, ಯಾವಾಗ, ಹೇಗೆ ಬೆಸೆಯಿತು ಎಂಬ ಸಣ್ಣ ಸುಳಿವು ಸಹ ನಮ್ಮಲ್ಲಿಲ್ಲ. ಆದರೂ ಒಬ್ಬರನ್ನೊಬ್ಬರು ಅರಿತು, ಬೆರೆತು ಎಂದೆಂದಿಗೂ ಒಂದಾಗಿರುವ ವಾಗ್ಧಾನ ನೀಡಿ, ಹೃದಯಕ್ಕೆ ಬೆಚ್ಚನೆಯ ಅನುಭವ ನೀಡಿದ ಗೆಳೆತನ ಅವಳದು.
“ಶುದ್ಧ ಹಾಲಿನಲ್ಲಿ ನೊರೆ ಜಾಸ್ತಿ. ಶುದ್ಧ ಹೃದಯದಲ್ಲಿ ಪ್ರೀತಿ ಜಾಸ್ತಿ. ಶುದ್ಧ ಸ್ನೇಹದಲ್ಲಿ ಜಗಳ ಜಾಸ್ತಿ’ ಎಂಬ ಮಾತಿನಂತೆ ಬಹುಶಃ ನಾವು ಜಗಳವಾಡದೇ ಇರುವ ದಿನವೇ ಇಲ್ಲ. ಪ್ರತಿ ಬಾರಿ ಕಿತ್ತಾಡಿಕೊಂಡಾಗಲೂ ಸಹ “ನಂಗೊತ್ತು, ನಿನಗೆ ನಾನಂದ್ರೆ ಇಷ್ಟ ಇಲ್ಲ!’ ಎಂದು ಮುಗ್ಧ ಮಕ್ಕಳಂತೆ ಉದ್ಗರಿಸಿ, ಬೆನ್ನಿಗೆ ಎರಡು ಗುದ್ದನ್ನೂ ಹಾಕುತ್ತಾಳೆ. ನಮ್ಮ ಈ ಅವಸ್ಥೆ ಕಂಡು, ನಮ್ಮ ಸಹಪಾಠಿಗಳು “ಟಾಮ್ ಆ್ಯಂಡ್ ಜೆರಿ’ ಎಂದು ನಾಮಕರಣವನ್ನೂ ಮಾಡಿದ್ದಾರೆ. ಅವಳೆಷ್ಟು ಕೀಟಲೆಗಳನ್ನು ಮಾಡಿದರೂ ಸಹ, ಅವಳಿಲ್ಲದೇ ಒಂದು ದಿನವನ್ನೂ ಕಳೆಯುವುದು ಕಠಿಣ. ಶತ್ರುವಿನ ಮಾತಿಗಿಂತ ಮಿತ್ರನ ಮೌನ ಮನಸ್ಸಿಗೆ ಅಪಾರ ನೋವು ನೀಡುತ್ತದೆ. ನನ್ನ ಗೆಳತಿ ಮೌನಿಯಾದಾಗ ಇಡೀ ಜಗತ್ತೇ ಹಸಿರು ನಿಶಾನೆ ಕಳೆದುಕೊಂಡ ಬರಡು ಭೂಮಿಯಂತೆ ತೋರುತ್ತದೆ. ಆಕೆಗೂ ನಾನು ಬೇರೆಯವರೊಂದಿಗೆ ಹೆಚ್ಚು ಸಮಯ ಕಳೆದರೆ, ಬರುವ ಸಿಟ್ಟಿಗೆ ಪಾರವೇ ಇಲ್ಲ. ಹುಬ್ಬುಗಳನ್ನೇರಿಸಿ ಕೆಂಗಣ್ಣಿನಿಂದ ದಿಟ್ಟಿಸಿ ನೋಡಿದಾಕ್ಷಣ, ಏನೂ ಅರಿಯದವಳಂತೆ ನಾನು ಅವಳ ಸನಿಹ ಹೋಗಬೇಕಾದುದು ಅನಿವಾರ್ಯ!
ನಾನು ಜೀವಿತಾಳೊಂದಿಗೆ ಕಳೆದ ಸಮಯ ಒಂದೇ ವರುಷವಾದರೂ ಸಹ, ಒಡಹುಟ್ಟಿದವರಂತೆ ಪ್ರೀತಿಯನ್ನು ಧಾರೆಯೆರೆವ ಸಂಗಾತಿಯವಳು. ಒಂದೇ ತಾಯಿಯ ಮಕ್ಕಳಂತೆ, ಜೀವನದ ಪ್ರತಿ ಹೆಜ್ಜೆಯಲ್ಲೂ ಆಕೆಯೊಂದಿಗೆ ಇರಬೇಕೆಂಬ ದೃಢ ಹಂಬಲ. ಅವಳಿಲ್ಲದೇ ತರಗತಿಯಲ್ಲಿ ಕೂರುವ ಬಗ್ಗೆ ಯೋಚಿಸಲೂ ನನ್ನಿಂದಾಗದು. ಅವಳೊಂದಿಗಿನ ನನ್ನ ಸ್ನೇಹ ಸಂಬಂಧ ಎಷ್ಟು ಗಾಢವಾಗಿತ್ತು ಎಂದರೆ, ಬರೀ ಒಂದೇ ವರುಷದಲ್ಲಿ ನಾವು ಒಬ್ಬರನ್ನೊಬ್ಬರ ಮೊದಲ ಆದ್ಯತೆಗಳಾಗಿದ್ದೆವು. ನನ್ನಲ್ಲಿ ಅವಳಿಗೆ ಅರಮನೆ ಕಟ್ಟಿಸುವಂತಹ ಸಿರಿತನವಿಲ್ಲ. ಆದರೆ, ಕಣ್ಣೀರು ಒರೆಸುವಂತಹ ಗೆಳತನವಿದೆ ಎಂಬುವುದರ ಬಗ್ಗೆ ಬಹಳ ಹೆಮ್ಮೆಯಿದೆ.
ಶಿವರಂಜನಿ
ದ್ವಿತೀಯ ಪಿಯುಸಿ, ಗೋವಿಂದದಾಸ ಪ.ಪೂ. ಕಾಲೇಜು, ಸುರತ್ಕಲ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.