ಸಾಯೋ ಪಾತ್ರ ಮಾತನಾಡಿದ್ದು ತಾನೇ?
Team Udayavani, Mar 12, 2018, 11:18 AM IST
“ನಮ್ಗೂ ಒಬ್ಬ — ಗುರು ಇದ್ದ ಗುರು. ಇಷ್ಟುದ್ಧ ಗಡ್ಡ ಬಿಟ್ಟುಬಿಟ್ರೆ ಬುದ್ಧಿವಂತರಾಗಲ್ಲ. ಗಡ್ಡ ಬಿಟ್ಟೋರೆಲ್ಲಾ ಬುದ್ಧಿವಂತರಾದರೆ, ಕರಡಿ ಜಗತ್ತಿನ ಅತೀ ದೊಡ್ಡ ಬುದ್ಧಿವಂತ ಪ್ರಾಣಿ …’ “ಟಗರು’ ಚಿತ್ರದಲ್ಲಿ ಡಾಲಿ ಪಾತ್ರ ಈ ಡೈಲಾಗು ಹೊಡೆಯುತ್ತದೆ. ಈ ಡೈಲಾಗು ಕೇಳುತ್ತಿದ್ದಂತೆಯೇ ಪ್ರೇಕ್ಷಕರು, ಧನಂಜಯ್ ಈ ಡೈಲಾಗ್ ಮೂಲಕ ನಿರ್ದೇಶಕ ಗುರುಪ್ರಸಾದ್‌ಗೆ ಟಾಂಗ್ ಕೊಡುತ್ತಿದ್ದಾರೆ ಅನ್ನೋಕೆ ಶುರು ಮಾಡಿದರು.
ಅದಕ್ಕೆ ಕಾರಣವೂ ಇದೆ. ಧನಂಜಯ್ ಲಾಂಚ್ ಆಗಿದ್ದು, ಗುರುಪ್ರಸಾದ್ ಅವರ “ಡೈರೆಕ್ಟರ್ ಸ್ಪೆಷಲ್’ ಚಿತ್ರದಿಂದ. ಆ ನಂತರ ಗುರುಪ್ರಸಾದ್ ಅವರ “ಎರಡನೇ ಸಲ’ ಚಿತ್ರದ ವೇಳೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ, ಗುರುಪ್ರಸಾದ್, ಧನಂಜಯ್ ಅವರನ್ನು “ಗುರುದ್ರೋಹಿ’ ಎಂದು ಕರೆದಿದ್ದು, ಅದಕ್ಕೆ ಧನಂಜಯ್ ಕೂಡಾ ಪ್ರತ್ಯುತ್ತರ ಕೊಟ್ಟಿದ್ದು ನಿಮಗೆ ನೆನಪಿರಬಹುದು.
ಈಗ “ಟಗರು’ ಚಿತ್ರದಲ್ಲಿ ಧನಂಜಯ್ ಪಾತ್ರ ಅಂಥದ್ದೊಂದು ಸಂಭಾಷಣೆ ಹೇಳಿದ್ದು ಗುರು ಅವರನ್ನು ಗಮನದಲ್ಲಿಟ್ಟುಕೊಂಡೇ ಎಂಬಂತೆ ಬಿಂಬಿತವಾಗಿದೆ. ಈಗಾಗಲೇ ಧನಂಜಯ್ ಈ ಕುರಿತು ಮಾತನಾಡಿ, “ತಾವು ಯಾರನ್ನೂ ಗುರಿಯಾಗಿಸಿಕೊಂಡು ಹೇಳಿದ್ದಲ್ಲ. ಒಂದು ಪಾತ್ರ ಇನ್ನೊಂದು ಪಾತ್ರದ ಕುರಿತಾಗಿ ಹೇಳುವ ಸಂಭಾಷಣೆ ಅದು. ಬರೆದುಕೊಟ್ಟಿದ್ದನ್ನು ಹೇಳಿದೆ’ ಎಂದು ಹೇಳಿದ್ದರು. ಆ ಸಂಭಾಷಣೆ ಈಗ ಗುರುಪ್ರಸಾದ್ ಅವರ ಕಿವಿಗೂ ಬಿದ್ದಿದೆ.
ಅನೇಕರು ಗುರು ಹತ್ತಿರ ಹೋಗಿ, “ಧನಂಜಯ್ ಚಿತ್ರದಲ್ಲಿ ನಿಮ್ಮ ಬಗ್ಗೆ ಹೀಗೆ ಹೇಳಿದ್ದಾರೆ’ ಅಂತ ಹೇಳಿದ್ದಾರಂತೆ. ಈ ಕುರಿತು ಮಾತನಾಡುವ ಗುರುಪ್ರಸಾದ್, ಈ ಬಗ್ಗೆ ತಮಗೆ ಯಾವುದೇ ಬೇಸರವಿಲ್ಲ ಎಂದು ಹೇಳಿಕೊಂಡಿದ್ದಾರೆ. ಶುಕ್ರವಾರ ಸಂಜೆ ನಡೆದ “ನಮೋ’ ಚಿತ್ರದ ಪತ್ರಿಕಾಗೋಷ್ಠಿಗೂ ಮುನ್ನ “ಉದಯವಾಣಿ’ ಜೊತೆಗೆ ಮಾತನಾಡಿದ ಅವರು, “ಒಳ್ಳೆಯದಾಗಲಿ, ಚೆನ್ನಾಗಿ ಬೆಳೀಲಿ.
ಸಿನಿಮಾದ ಡೈಲಾಗ್‌ನಲ್ಲಿ ನನಗೆ ಟಾಂಗ್ ಕೊಟ್ಟಿದ್ದಾನೆ ಎಂದು ಯಾರೋ ಹೇಳಿದ್ದನ್ನು ಕೇಳಿದೆ. ನಾನು ಸಿನಿಮಾ ನೋಡಿಲ್ಲ. ನನಗೆ ಆ ಬಗ್ಗೆ ಬೇಸರವಿಲ್ಲ. ಏಕೆಂದರೆ, ಮಾತನಾಡಿರೋದು ವಿಲನ್ ಪಾತ್ರ ಮತ್ತು ಸಾಯುವಂತಹ ಪಾತ್ರ. ಹಾಗಾಗಿ, ನನಗೆ ಆ ಬಗ್ಗೆ ನೋವಿಲ್ಲ’ ಎನ್ನುತ್ತಾರೆ ಗುರು.
ಹೀರೋ ಹನಿಮೂನ್ ಮುಗಿದ ಬಳಿಕ ಚಿತ್ರೀಕರಣ: ನಿರ್ದೇಶಕ ಗುರುಪ್ರಸಾದ್ “ಅದೇಮಾ’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಈ ಸಿನಿಮಾವನ್ನು ಡಿಸೆಂಬರ್ ಒಳಗೆ ಮುಗಿಸುವುದಾಗಿ ಹೇಳಿಕೊಂಡಿದ್ದರು. ಈ ಹಿಂದಿನ ಸಿನಿಮಾಗಳಂತೆ ಈ ಚಿತ್ರ ತಡವಾಗುವುದಿಲ್ಲ ಎಂಬ ಭರವಸೆಯನ್ನೂ ಕೊಟ್ಟಿದ್ದರು. ಆದರೆ, ಡಿಸೆಂಬರ್ ಹೋಗಿ ಈಗ ಮಾರ್ಚ್ ಬಂದಿದೆ.
ಈ ಕುರಿತು ಮಾತನಾಡುವ ಅವರು, “ಚಿತ್ರೀಕರಣ ಆರಂಭವಾಗಿದ್ದು, ಶೇ 30 ರಷ್ಟು ಮುಗಿದಿದೆ. ನಾನು ಡಿಸೆಂಬರ್‌ನಲ್ಲಿ ಸಿನಿಮಾ ಮುಗಿಸಬೇಕೆಂದುಕೊಂಡಿದ್ದು ನಿಜ. ಆದರೆ, ಬರವಣಿಗೆ ಸೇರಿದಂತೆ ಇತರ ಅಂಶಗಳಿಂದ ತಡವಾಯಿತು. ಈಗ ನಮ್ಮ ಹೀರೋ ಮದುವೆಯಾಗಿದ್ದಾರೆ. ಅವರು ಹನಿಮೂನ್ ಮುಗಿಸಿಕೊಂಡು ಬಂದು ಈ ತಿಂಗಳ ಕೊನೆಯಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಆರಂಭದಲ್ಲಿ ಚಿತ್ರದ ಕಲಾವಿದರ ಆಯ್ಕೆಯಲ್ಲೂ ಸ್ವಲ್ಪ ಸಮಯ ಹಿಡಿಯಿತು. ಈಗ ಚಿತ್ರಕ್ಕೆ ಚೈತ್ರಾ ಎಂಬಾಕೆ ನಾಯಕಿಯಾಗಿದ್ದಾಳೆ. ಇನ್ನು, ಜನವರಿಯಲ್ಲಿ ನನ್ನ ತಂದೆ ತೀರಿಕೊಂಡರು. ಹಾಗಾಗಿ, ಒಂದೂವರೆ ತಿಂಗಳು ಚಿತ್ರೀಕರಣ ಮಾಡಲು ಸಾಧ್ಯವಾಗಲಿಲ್ಲ. ರಾತ್ರಿ ವೇಳೆ ಚಿತ್ರೀಕರಣ ಹೆಚ್ಚಿರುವುದರಿಂದಲೂ ಸಿನಿಮಾ ತಡವಾಗುತ್ತಿದೆ’ ಎನ್ನುತ್ತಾರೆ ಗುರುಪ್ರಸಾದ್.
“ಡೈರೆಕ್ಟರ್ ಸ್ಪೆಷಲ್’ ಸಿನಿಮಾದ ಕಥೆ ಇದಾಗಬೇಕಿತ್ತು: ಸಾಮಾನ್ಯವಾಗಿ ಗುರುಪ್ರಸಾದ್ ಸಿನಿಮಾ ಒಂದು ಮನೆಯೊಳಗೆ ನಡೆಯುತ್ತದೆ. ಔಟ್‌ಡೋರ್ ಚಿತ್ರೀಕರಣದಿಂದ ದೂರವೇ ಇದ್ದ ಗುರುಪ್ರಸಾದ್ ಈ ಬಾರಿ “ಅದೇಮಾ’ ಸಿನಿಮಾದ ಸಂಪೂರ್ಣ ಚಿತ್ರೀಕರಣವನ್ನು ಔಟ್‌ಡೋರ್‌ನಲ್ಲಿ ಮಾಡುತ್ತಿದ್ದಾರೆ. ಅದರಲ್ಲೂ ಸ್ಮಶಾನದಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದೆ.
“ಅದೇಮಾ ಒಂದು ಬ್ಯೂಟಿಫುಲ್ ಕಾನ್ಸೆಪ್ಟ್ ಸಿನಿಮಾ. ಸುಮಾರು ವರ್ಷಗಳಿಂದ ಈ ಕಥೆ ನನ್ನ ತಲೆಯಲ್ಲಿ ಓಡಾಡುತ್ತಿತ್ತು. ನಿಜ ಹೇಳಬೇಕೆಂದರೆ “ಡೈರೆಕ್ಟರ್ ಸ್ಪೆಷಲ್’ ಸಿನಿಮಾದ ಕಥೆ ಇದಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಆಗ ಮಾಡಲಾಗಲಿಲ್ಲ. ಈ ಚಿತ್ರದ ಯಾವುದೇ ದೃಶ್ಯವನ್ನು ಊಹಿಸಿಕೊಳ್ಳಲಾಗುವುದಿಲ್ಲ. ಆ ತರಹದ ಒಂದು ಕಥೆ’ ಎಂದು “ಅದೇಮಾ’ ಬಗ್ಗೆ ಹೇಳುತ್ತಾರೆ.
ಬರವಣಿಗೆಗೆ ಸಮಯ ಹಿಡಿಯುತ್ತೆ: ಗುರುಪ್ರಸಾದ್ ಸಿನಿಮಾ ಆರಂಭಿಸಿ, ಆ ನಂತರ ರಿಯಾಲಿಟಿ ಶೋಗೆ ಹೋಗುತ್ತಾರೆ, ಸಿನಿಮಾ ಬೇಗ ಮುಗಿಸಲ್ಲ ಎಂಬ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಅದಕ್ಕೂ ಗುರುಪ್ರಸಾದ್ ಉತ್ತರಿಸುತ್ತಾರೆ. “ರಿಯಾಲಿಟಿ ಶೋನಿಂದ ನನ್ನ ಸಿನಿಮಾಗಳಿಗೆ ಸಮಸ್ಯೆಯಾಗಿಲ್ಲ. ಅದು ವಾರದಲ್ಲಿ ಒಂದು ದಿನ ಇರುತ್ತದೆ. ವಾಹಿನಿಯವರು ನಮ್ಮ ಸಿನಿಮಾದ ಸ್ಯಾಟ್‌ಲೆಟ್ ತಗೋತ್ತಾರೆ.
ಅವರು ವರ್ಷಕ್ಕೊಂದು ರಿಯಾಲಿಟಿ ಶೋಗೆ ಕರೆದಾಗ ಇಲ್ಲ ಎನ್ನಲಾಗುವುದಿಲ್ಲ. ನನಗೆ ಸಮಯ ಹಿಡಿಯೋದು ಬರವಣಿಗೆಗೆ. ಬರವಣಿಗೆ ಪಕ್ಕಾ ಆಗದೇ ನಾನು ಸಿನಿಮಾ ಮಾಡೋದಿಲ್ಲ. ಬೇರೆಯವರ ಕೈಯಲ್ಲಿ ಬರೆಸಿದರೆ ನನ್ನ ಶೈಲಿ ಬರಲ್ಲ. ಆದರೂ, ಒಂದಷ್ಟು ಬೇಗ ಸಿನಿಮಾ ಮಾಡಬೇಕು, ನಾನೂ ಸ್ಪೀಡ್ ಆಗಬೇಕೆಂದು ನನ್ನ ಹುಡುಗರಿಗೆ ಕಥೆ ಹೇಳಿ ಸೀನ್ ಮಾಡಿಕೊಡುವಂತೆ ಹೇಳಿದೆ.
ಆದರೆ, ಅವರು ಮಾಡಿದ್ದು ತುಂಬಾ ಪೇಲವವಾಗಿ ಕಾಣಿಸಿತು. ಹಾಗೆ ಸಿನಿಮಾ ಮಾಡಿದರೆ ವರ್ಷದ ಕೊನೆಗೆ ಪ್ರೇಕ್ಷಕ ನನ್ನನ್ನು ಮರೆತು ಬಿಡುತ್ತಾನೆ. ರೀಮೇಕ್ ಸಿನಿಮಾವಾದರೆ ವರ್ಷಕ್ಕೆ ಮೂರು ಸಿನಿಮಾ ಮಾಡಿಕೊಡಬಲ್ಲೆ. ಆದರೆ, ನಾನು ರೀಮೇಕ್ ಮಾಡಲ್ಲ. ನನಗೆ ತೃಪ್ತಿಯಾಗುವವರೆಗೆ ಬರೆದು ಆ ನಂತರವೇ ನಾನು ಸಿನಿಮಾ ಮಾಡೋದು’ ಎಂದು ಸಿನಿಮಾ ತಡವಾಗುವ ಬಗ್ಗೆ ಮಾತನಾಡುತ್ತಾರೆ ಗುರುಪ್ರಸಾದ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.