Sandalwood: ʼಹೆಜ್ಜಾರುʼ ನಂಬಿದ ತಂಡ.. ಹೊಸ ಅನುಭವ ನೀಡುವ ಸಿನಿಮಾವಿದು
Team Udayavani, Jul 16, 2024, 10:40 AM IST
![10](https://www.udayavani.com/wp-content/uploads/2024/07/10-14-620x372.jpg)
![10](https://www.udayavani.com/wp-content/uploads/2024/07/10-14-620x372.jpg)
ಕನ್ನಡ ಚಿತ್ರರಂಗದಲ್ಲಿ ಹೊಸದನ್ನು ನೀಡಬೇಕು, ಈ ಮೂಲಕ ಸಿನಿಪ್ರಿಯರನ್ನು ಸೆಳೆಯಬೇಕು ಎಂಬ ಹಂಬಲದಿಂದ ಬರುವ ನಿರ್ದೇಶಕರ ಸಂಖ್ಯೆ ಹೆಚ್ಚುತ್ತಲೇ ಇದೆ.
ಈ ಸಾಲಿಗೆ ಸೇರುವ ಹೊಸ ಹೆಸರು ಹರ್ಷಪ್ರಿಯ. ಯಾರು ಈ ಹರ್ಷಪ್ರಿಯ ಎಂದರೆ “ಹೆಜ್ಜಾರು’ ಸಿನಿಮಾ ಬಗ್ಗೆ ಹೇಳಬೇಕು. ಅನೇಕ ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ “ಹೆಜ್ಜಾರು’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಜು.19ರಂದು ತೆರೆಕಾಣುತ್ತಿದೆ. ಈ ಸಿನಿಮಾ ಮೂಲಕ ಹರ್ಷಪ್ರಿಯ ಅವರ ಕನಸು ಈಡೇರುತ್ತಿದೆ.
ಕಿರುತೆರೆಯಲ್ಲಿ ಹಾಡು, ಸಂಭಾಷಣೆ, ರಿಯಾಲಿಟಿ ಶೋಗಳಲ್ಲಿ ಅನುಭವ ಪಡೆದಿರುವ ಹರ್ಷಪ್ರಿಯ ಆ ಅನುಭವದೊಂದಿಗೆ ನಿರ್ದೇಶಿಸಿರುವ ಸಿನಿಮಾ “ಹೆಜ್ಜಾರು’. ತಮ್ಮ ಮೊದಲ ನಿರ್ದೇಶನದಲ್ಲೇ ಒಂದು ಹೊಸ ಬಗೆಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದು ಪ್ಯಾರಲಲ್ ಲೈಫ್ ಸ್ಟೋರಿ. ಕನ್ನಡ ಚಿತ್ರರಂಗದ ಮೊದಲ ಪ್ಯಾರಲಲ್ ಲೈಫ್ ಸಿನಿಮಾ ಎಂಬುದು ತಂಡದ ಮಾತು.
ಇತ್ತೀಚೆಗೆ ಮಾಧ್ಯಮ ಮುಂದೆ ಬಂದಿದ್ದ ತಂಡ ತಮ್ಮ ಕನಸಿನ ಬಗ್ಗೆ ಮಾತನಾಡಿತು. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಹರ್ಷಪ್ರಿಯ, ಮೊದಲು ತಮಗೆ ಅವಕಾಶ ಕೊಟ್ಟ ರವಿ ಗರಣಿ, ರಾಮ್ ಜೀ ಅವರಿಗೆ ಥ್ಯಾಂಕ್ಸ್ ಹೇಳುತ್ತಲೇ ಮಾತಿಗಿಳಿದರು.
“ಹೊಸದೇನೋ ಮಾಡಬೇಕೆಂಬ ಕನಸಿನೊಂದಿಗೆ ಮಾಡಿದ ಸಿನಿಮಾ ಹೆಜ್ಜಾರು. ಪ್ಯಾರಲಲ್ ಲೈಫ್ ಕಥೆಯೊಂದಿಗೆ ಚಿತ್ರ ಸಾಗುತ್ತದೆ. ಇಬ್ಬರ ಬದುಕಿನಲ್ಲಿ ಒಂದೇ ರೀತಿಯ ಘಟನೆಗಳು ನಡೆಯುತ್ತಿರುತ್ತವೆ. ಚಿತ್ರದ ಕಥೆ 1965 ಹಾಗೂ 1995ರ ಕಾಲಘಟ್ಟದಲ್ಲಿದ್ದು, ಪ್ರೇಕ್ಷಕರಿಗೆ ಕುತೂಹಲದ ಜೊತೆಗೆ ಒಂದಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿಕೊಂಡು ಈ ಚಿತ್ರ ಸಾಗುತ್ತದೆ. ಇದು ಗಂಭೀರ ಕಥಾಹಂದರವೊಂದಿರುವ ಸಿನಿಮಾ ಆಗಿರುವುದರಿಂದ ಇಲ್ಲಿ ಕಾಮಿಡಿಗೆ ಜಾಗವಿಲ್ಲ. ಮಲೆನಾಡಿನ ಹಿನ್ನೆಲೆಯಲ್ಲಿ ಸಿನಿಮಾ ಸಾಗುವುದರಿಂದ ದಕ್ಷಿಣ ಕನ್ನಡದ ಮಡಂತ್ಯಾರು, ಉಜಿರೆ, ಬಂಟ್ವಾಳ, ಕಾರಿಂಜದಲ್ಲಿ ಚಿತ್ರೀಕರಣ ಮಾಡಲಾಗಿದೆ’ ಎಂದರು.
ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ರಾಮ್‌ಜೀ ಈ ಸಿನಿಮಾದ ನಿರ್ಮಾಪಕರು. ನಿರ್ದೇಶಕ ಹರ್ಷಪ್ರಿಯ ಅವರ ವ್ಯಕ್ತಿತ್ವ ಹಾಗೂ ಅವರು ಮಾಡಿಕೊಂಡಿರುವ ಕಥೆ ಎರಡೂ ಇಷ್ಟವಾಗಿ ಈ ಸಿನಿಮಾ ನಿರ್ಮಿಸಿದ್ದಾಗಿ ಹೇಳಿದ ಅವರು, “ತಾನು ಈ ಸಿನಿಮಾದ ನಿರ್ಮಾಣದಲ್ಲಿ ಬಿಟ್ಟರೆ ಮಿಕ್ಕಂತೆ ಯಾವುದರಲ್ಲೂ ತೊಡಗಿಕೊಂಡಿಲ್ಲ. ಮೊದಲ ದಿನ ಹರ್ಷಪ್ರಿಯ “ಆ್ಯಕ್ಷನ್’ ಎಂದಾಗ ಅವರ ಧ್ವನಿಯಲ್ಲಿದ್ದ ವಿಶ್ವಾಸ ನೋಡಿ, “ಮುಂದೆ ಇವರು ಎಲ್ಲವನ್ನು ಮಾಡುತ್ತಾರೆ’ ಎಂಬ ನಂಬಿಕೆ ಬಂತು ಎನ್ನುವುದು ರಾಮ್ ಜೀ ಮಾತು. ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ಸ್ವತಃ ರಾಮ್‌ಜೀ ಅವರೇ ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ಭಗತ್ ಆಳ್ವ ನಾಯಕ. ಇದು ಇವರ ಚೊಚ್ಚಲ ಚಿತ್ರ. ಮೊದಲ ಚಿತ್ರದಲ್ಲಿ ಒಂದು ಹೊಸ ಬಗೆಯ ಪಾತ್ರ ಸಿಕ್ಕ ಬಗ್ಗೆ ಹಾಗೂ ಅದರ ಹಿಂದಿನ ತಯಾರಿಯ ಬಗ್ಗೆ ಮಾತನಾಡಿದರು.
ಶ್ವೇತಾ ಈ ಸಿನಿಮಾದ ನಾಯಕಿ. ಚಿತ್ರದಲ್ಲಿ ಜಾನಕಿ ಎಂಬ ಪಾತ್ರ ಮಾಡಿದ್ದಾರೆ. ರೆಗ್ಯುಲರ್ ಶೈಲಿ ಬಿಟ್ಟ ಪಾತ್ರ ಎಂಬ ಖುಷಿ ಅವರದು. ಉಳಿದಂತೆ ಚಿತ್ರದಲ್ಲಿ ನವೀನ್ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.