ನಾನು ಚಿತ್ರ ನೋಡುವುದಕ್ಕೆ ಬಹಳ ಕಾತುರನಾಗಿದ್ದೀನಿ
Team Udayavani, Feb 21, 2018, 11:40 AM IST
“ಕಡ್ಡಿಪುಡಿ’ ಚಿತ್ರದ ಸಂತೋಷಕೂಟದಲ್ಲೇ ಶಿವರಾಜಕುಮಾರ್ ಒಂದು ಮಾತು ಹೇಳಿದ್ದರು. ಇನ್ನೊಮ್ಮೆ ನಿರ್ದೇಶಕ ಸೂರಿ ಜೊತೆಗೆ ಕೆಲಸ ಮಾಡಬೇಕೆಂದು. ಅವರಿಬ್ಬರನ್ನು ಮತ್ತೂಮ್ಮೆ ಯಾರು ಸೇರಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಈಗ ಅದು ಈಡೇರಿದೆ. ಸೂರಿ ನಿರ್ದೇಶನದಲ್ಲಿ ಶಿವರಾಜಕುಮಾರ್ ನಟಿಸಿರುವ “ಟಗರು’ ಚಿತ್ರವು ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
“ನಾನು ಮಾಡಿರುವ ಚಿತ್ರಗಳಲ್ಲೇ “ಕಡ್ಡಿಪುಡಿ’ ಒಂದು ಫೈನೆಸ್ಟ್ ಸಿನಿಮಾ. ಅದೊಂದು ಕಲ್ಟ್ ಚಿತ್ರ. ಟೆನ್ನಿಸ್ ಸ್ಟಾರ್ ಮಹೇಶ್ ಭೂಪತಿಯವರೂ ಸಹ ಚಿತ್ರ ನೋಡಿ ಅದ್ಭುತವಾಗಿದೆ ಎಂದು ಹೇಳಿದ್ದರು. ಅದಕ್ಕೂ ಮುನ್ನವೇ ಸೂರಿ ಜೊತೆಗೆ ಇನ್ನೊಂದು ಸಿನಿಮಾ ಮಾಡುವ ಬಗ್ಗೆ ಹೇಳಿದ್ದೆ. ಆಮೇಲೆ “ಟಗರು’ ಬಂತು. ಇದೊಂದು ವಿಭಿನ್ನ ಸಿನಿಮಾ. ಸೂರಿ ಬ್ರಾಂಡಿನ ಪೆಕ್ಯೂಲಿಯರ್ ಸಿನಿಮಾ.
“ಟಗರು – ಮೈಯೆಲ್ಲಾ ಪೊಗರು’ ಎಂಬ ಹೆಸರೇ ಹೇಳುವಂತೆ, ಇಲ್ಲಿ ಹೀರೋನ ಆ್ಯಟಿಟ್ಯೂಡ್ ಬಹಳ ವಿಭಿನ್ನ. ಅವನ ವರ್ತನೆ ವಿಭಿನ್ನ ಅಂದರೆ, 80 ಸೀನ್‌ಗಳಲ್ಲೂ ತಲೆ ಕೆಟ್ಟೋನ ತರಹ ಆಡ್ತಾನೆ ಅಂತಲ್ಲ. ಪರಿಸ್ಥಿತಿಗೆ ತಕ್ಕಂತೆ ಅವನ ಆ್ಯಟಿಟ್ಯೂಡ್ ತೋರಿಸುತ್ತಾನೆ. ಈ ತರಹ ಸಿನಿಮಾ ಬಂದಿಲ್ಲ ಅಂತಲ್ಲ. ಬಂದಿದ್ದರೂ ಜನ ಕನೆಕ್ಟ್ ಆಗುತ್ತಾರೆ’ ಎಂಬ ನಂಬಿಕೆ ಶಿವರಾಜಕುಮಾರ್ ಅವರಿಗಿದೆ.
“ಟಗರು – ಮೈಯೆಲ್ಲಾ ಪೊಗರು’ ಶುರುವಾಗಿದ್ದು ಕಳೆದ ನವೆಂಬರ್‌ನಲ್ಲಿ. ಸ್ವಲ್ಪ ನಿಧಾನವಾಯ್ತಲ್ಲ ಎಂದರೆ, ಅದಕ್ಕೆ ಕಾರಣ- ಚಿತ್ರದ ಪೋಸ್ಟರ್‌ಗಳು ಎನ್ನುತ್ತಾರೆ ಅವರು. “ನಾವು ಆರಂಭದಲ್ಲಿ ಫೋಟೋ ಶೂಟ್ ಮಾಡಿ ಪೋಸ್ಟರ್‌ಗಳನ್ನ ಬಿಟ್ಟೆವು. ಆ ಪೋಸ್ಟರ್‌ಗಳು ಯಾವ ಮಟ್ಟಿಗೆ ಹಿಟ್ ಆಯಿತು ಎಂದರೆ, ಇದಕ್ಕೆ ಇಷ್ಟೇ ಸಾಲಲ್ಲ, ಇನ್ನೇನೋ ಬೇಕು ಅಂತ ಸೂರಿಗೆ ಅನಿಸೋಕೆ ಶುರುವಾಯ್ತು.
ಜನ ಇಟ್ಟ ನಂಬಿಕೆ ಮತ್ತು ನಿರೀಕ್ಷೆಗಳು ಮಿಸ್‌ಫೈರ್ ಆಗಬಾರದು ಎಂಬ ಕಾರಣಕ್ಕೆ ಸೂರಿ ಕೂತು ಇನ್ನಷ್ಟು ವರ್ಕ್ ಮಾಡಿದರು. ಆಮೇಲೆ ಚಿತ್ರ ಇನ್ನೊಂದು ಲೆವೆಲ್‌ಗೆ ಹೋಯಿತು. ಚಿತ್ರ ನೋಡಿದವರು, ಪೊಗರು ಚೆನ್ನಾಗಿದೆ ಎಂದು ಖಂಡಿತಾ ಮಾತಾಡುತ್ತಾರೆ ಎಂಬ ನಂಬಿಕೆ ನನಗಿದೆ’ ಎನ್ನುತ್ತಾರೆ ಅವರು. ಇಷ್ಟಕ್ಕೂ “ಟಗರು’ ಚಿತ್ರದ ಕಥೆ ಏನು? ಕಥೆಯನ್ನು ಶಿವರಾಜಕುಮಾರ್ ಅವರು ಬಿಟ್ಟುಕೊಡುವುದಿಲ್ಲ.
ಬರೀ ಚಿತ್ರದ ಒನ್‌ಲೈನ್ ಅಷ್ಟೇ ಹೇಳುತ್ತಾರೆ.”ಚೇಸಿಂಗ್ ದಿ ಕ್ರೈಮ್ ಅನ್ನೋದು ಈ ಚಿತ್ರದ ಹಿನ್ನೆಲೆ. ಇಲ್ಲಿ ನಾಯಕ ಕ್ರೈಮ್‌ನ ಯಾವ್ಯಾವ ರೀತಿಯಲ್ಲಿ ಬೆನ್ನು ಹತ್ತುತ್ತಾನೆ ಅನ್ನೋದು ಕಥೆ. ಇಲ್ಲಿ ಸಂಗೀತ ಬಹಳ ಮುಖ್ಯವಾದ ಪಾತ್ರ ವಹಿಸಿದೆ. ಚಿತ್ರವನ್ನು ಸಂಗೀತ ಇನ್ನೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗಬಹುದು ಎಂದು ನಿರೀಕ್ಷೆ ಮಾಡಿರಲಿಲ್ಲ. ಆದರೆ, ಚರಣ್‌ರಾಜ್ ಬಹಳ ಅದ್ಭುತವಾಗಿ ಕೆಲಸ ಮಾಡಿದ್ದಾರೆ.
ಇಡೀ ಚಿತ್ರದ ಸೌಂಡಿಂಗ್ ಬಹಳ ಚೆನ್ನಾಗಿ ಬಂದಿದೆ. ಪದೇಪದೇ ಕೇಳಬೇಕು ಅನಿಸುತ್ತೆ’ ಎಂಬುದು ಶಿವರಾಜಕುಮಾರ್ ಅವರ ಅಭಿಪ್ರಾಯ. ಇನ್ನು ಸೂರಿ ನಿರ್ದೇಶನ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಾರೆ ಶಿವರಾಜಕುಮಾರ್. “ಇಂಥದ್ದೊಂದು ಒಳ್ಳೆಯ ತಂಡವನ್ನು ಜೊತೆಗೆ ಸೇರಿಸಿದ್ದು ಸೂರಿ.
ನಾನೊಬ್ಬನೇ ಏನೋ ವಿಭಿನ್ನವಾಗಿ ಮಾಡ್ತೀನಿ ಅಂತ ಮಾಡೋಕೆ ಆಗಲ್ಲ. ಒಂದು ಬೇರೆ ಪ್ರಯತ್ನ ಮಾಡಬೇಕು ಎಂದರೆ ಈ ತರಹದ ಜನ ಬೇಕು. ಎಲ್ಲರೂ ಒಟ್ಟಾದಾಗಲೇ ಅದೊಂದು ಸಿನಿಮಾ ಆಗೋಕೆ ಸಾಧ್ಯ. ನಾವೇನೋ ವಿಭಿನ್ನ ಸಿನಿಮಾ ಮಾಡ್ತೀವಿ ಎಂದರೆ ಸಾಲದು. ಜನರಿಗೂ ನಾವು ವಿಭಿನ್ನವಾಗಿ ಏನೋ ಮಾಡಿದ್ದೀವಿ ಎನಿಸಬೇಕು. ಅದಕ್ಕೆ ಎಲ್ಲರ ಸಾಥ್ ಬೇಕು.
ಈ ಚಿತ್ರದಲ್ಲಿ ಅದಾಗಿದೆ. ಧನಂಜಯ್, ವಸಿಷ್ಠ ತರಹದ ಒಳ್ಳೆಯ ಕ್ಯಾಲಿಬರ್‌ನ ಕಲಾವಿದರಿದ್ದಾರೆ. ಭಾವನಾ ಮೆನನ್, ದೇವರಾಜ್, ಮಾನ್ವಿತಾ ಹೀಗೆ ಹೊಸಬರು, ಹಳಬರು ಎಲ್ಲಾ ಸೇರಿ ಈ ಚಿತ್ರ ಮಾಡಿದ್ದಾರೆ. ಒಂದೊಂದು ಫ್ರೆಮ್ ಅನ್ನೂ ಮಹೇಂದ್ರ ಸಿಂಹ ಮತ್ತು ಸೂರಿ ಬಹಳ ಅದ್ಭುತವಾಗಿ ಡಿಸೈನ್ ಮಾಡಿದ್ದಾರೆ. ಇದೆಲ್ಲಾ ಕಾರಣಗಳಿಗೆ ಚಿತ್ರದಲ್ಲಿ ನಟಿಸಿರುವುದಕ್ಕೆ ಬಹಳ ಖುಷಿ ಇದೆ.
ಕೆಲವು ಸಿನಿಮಾಗಳು ಮುಗಿದರೆ ಸಾಕು ಅಂತ ಅನ್ನಿಸೋದು ಉಂಟು. ಆದರೆ, ಈ ಚಿತ್ರ ಮಾತ್ರ ಇದುವರೆಗೂ ಸಾಕು ಎನಿಸಿಲ್ಲ. ನಿಜ ಹೇಳಬೇಕೆಂದರೆ, ಈ ಚಿತ್ರ ಹೇಗೆ ಬಂದಿದೆ ಅಂತ ನನಗೇ ತುಂಬಾ ಕುತೂಹಲವಿದೆ. ಹಾಗಾಗಿ ನಾನು ಚಿತ್ರ ನೋಡುವುದಕ್ಕೆ ಬಹಳ ಕಾತುರನಾಗಿದ್ದೀನಿ’ ಎನ್ನುತ್ತಾರೆ ಶಿವರಾಜಕುಮಾರ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.