ಉಪ್ಪಿ ಅಭಿಮಾನಿಗಳಿಂದ “ಐ ಲವ್ ಯು’ ಸಂಭ್ರಮ
ಜೂನ್ 10 ರಂದು ತ್ರಿವೇಣಿ ಮುಂದೆ ಕಟೌಟ್ ಅನಾವರಣ- ಆಂಧ್ರದಲ್ಲೂ ಉಪ್ಪಿ ಹವಾ
Team Udayavani, Jun 8, 2019, 3:00 AM IST
ಆರ್.ಚಂದ್ರು ನಿರ್ಮಾಣ, ನಿರ್ದೇಶನದ ಚಿತ್ರದ “ಐ ಲವ್ ಯು’ ಚಿತ್ರ ಜೂನ್ 14 ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿರುವುದು ನಿಮಗೆ ಗೊತ್ತೇ ಇದೆ. ಆದರೆ, ಚಿತ್ರ ಬಿಡುಗಡೆಗೆ ನಾಲ್ಕು ದಿನ ಮುನ್ನವೇ ಉಪ್ಪಿ ಅಭಿಮಾನಿಗಳು ಸಂಭ್ರಮಾಚರಣೆಗೆ ಮುಂದಾಗಿದ್ದಾರೆ. ಅದು ವಿಭಿನ್ನ ಶೈಲಿಯ ಕಟೌಟ್ ಕಟ್ಟುವ ಮೂಲಕ.
ಹೌದು, ಉಪೇಂದ್ರ ಅವರ ಸಿನಿಮಾ ಬಿಡುಗಡೆಯಾಗದೇ ದೊಡ್ಡ ಗ್ಯಾಪ್ ಆಗಿದೆ. ಈಗ “ಐ ಲವ್ ಯು’ ಬಿಡುಗಡೆಯಾಗುತ್ತಿರುವುದು ಉಪ್ಪಿ ಅಭಿಮಾನಿಗಳ ಸಂತಸಕ್ಕೆ ಒಂದು ಕಾರಣವಾದರೆ, ಚಿತ್ರದ ಟ್ರೇಲರ್, ಹಾಡುಗಳು ಹಿಟ್ ಆಗಿ ದೊಡ್ಡ ನಿರೀಕ್ಷೆ ಹುಟ್ಟಿಸಿರುವುದು ಮತ್ತೂಂದು ಕಾರಣ. ಈ ಖುಷಿಯನ್ನು ಜೂನ್ 10 ರಂದು ಬೆಳಗ್ಗೆ ರಾಜ್ಯಾದ್ಯಂತದ ಉಪೇಂದ್ರ ಅಭಿಮಾನಿಗಳು ಒಟ್ಟಾಗಿ ಸಂಭ್ರಮಿಸಲಿದ್ದಾರೆ.
“ಐ ಲವ್ ಯು’ ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರತಂಡ ವಿಭಿನ್ನವಾದ ಕಟೌಟ್ ಡಿಸೈನ್ ಮಾಡಿಸಿದ್ದು, ಈ ಕಟೌಟ್ ಅನ್ನು ಜೂನ್ 10 ರಂದು ತ್ರಿವೇಣಿ ಚಿತ್ರಮಂದಿರದ ಮುಂದೆ ನಿಲ್ಲಿಸಲಾಗುವುದು. ಈ ಸಂಭ್ರಮಕ್ಕೆ ಉಪ್ಪಿ ಅಭಿಮಾನಿಗಳು ಒಟ್ಟಾಗಿದ್ದು, ಗಾಂಧಿನಗರದ ಅಣ್ಣಮ್ಮ ದೇವಸ್ಥಾನ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ, ಚಿತ್ರಮಂದಿರದ ಮುಂದೆ ಸಂಭ್ರಮಿಸಲಿದ್ದಾರೆ.
ಇದೇ ವೇಳೆ ಚಿತ್ರದ ಮೊದಲ ಟಿಕೆಟ್ ಅನ್ನು ಬಿಡ್ ಮಾಡಲಿದ್ದು, ಆ ಟಿಕೆಟ್ ಎಷ್ಟು ಮೊತ್ತಕ್ಕೆ ಮಾರಾಟವಾಗುತ್ತೋ, ಆ ಹಣವನ್ನು ಅನಾಥಶ್ರಮಕ್ಕೆ ನೀಡುವ ಉದ್ದೇಶ ಕೂಡಾ ಉಪೇಂದ್ರ ಅಭಿಮಾನಿಗಳದ್ದು. ಇನ್ನು, ಚಿತ್ರ ಕರ್ನಾಟಕದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದ್ದು, ಸುಮಾರು 400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಮೋಹನ್ ಹಾಗೂ ಧೀರಜ್ ಫಿಲಂಸ್ ಚಿತ್ರದ ವಿತರಣೆ ಪಡೆದುಕೊಂಡಿದ್ದಾರೆ. ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿರುವುದರಿಂದ ಚಿತ್ರಮಂದಿರದ ಸಂಖ್ಯೆಯೂ ಏರಿಕೆಯಾಗುತ್ತಿದೆ. ಚಿತ್ರ ಏಕಕಾಲಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ ತೆಲುಗಿನಲ್ಲೂ ಚಿತ್ರಕ್ಕೆ ಬೇಡಿಕೆ ಹೆಚ್ಚಿದ್ದು, ಆಂದ್ರ-ತೆಲಂಗಾಣದಲ್ಲಿ ಸುಮಾರು 600ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಈ ಮೂಲಕ ಕನ್ನಡ ಚಿತ್ರವೊಂದು ಪರಭಾಷೆಯಲ್ಲೂ ಬೇಡಿಕೆ ಪಡೆದುಕೊಂಡಿದೆ. ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದು, ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸೋನು ಕೂಡಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.