ಇಮೇಜ್ ಬದಲಿಸುವ ಸಿನ್ಮಾ
Team Udayavani, Apr 2, 2018, 11:16 AM IST
“ಡಾರ್ಲಿಂಗ್ ಡಾರ್ಲಿಂಗ್ ಕಮ್ ಕಮ್ ಡಾರ್ಲಿಂಗ್…’ ಈ ಹಾಡು ಕೇಳಿದವರಿಗೆ ಹಾಗೊಮ್ಮೆ ಹೀರೋ “ಮದರಂಗಿ’ ಕೃಷ್ಣ ಅವರ ನೆನಪಾಗದೇ ಇರದು. ಬಹಳ ದಿನಗಳ ಬಳಿ ಕೃಷ್ಣ ಪುನಃ ಸುದ್ದಿಯಾಗುತ್ತಿದ್ದಾರೆ. ಅದಕ್ಕೆ ಕಾರಣ, “ಹುಚ್ಚ 2′. ಹೌದು, ಓಂ ಪ್ರಕಾಶ್‌ರಾವ್ ನಿರ್ದೇಶನದ ಈ ಚಿತ್ರದಲ್ಲಿ ಮದರಂಗಿ ಕೃಷ್ಣ ಹೀರೋ. ಈ ವಾರ ರಾಜ್ಯಾದ್ಯಂತ ಚಿತ್ರ ತೆರೆಕಾಣುತ್ತಿದೆ. “ಹುಚ್ಚ 2′ ಪಾತ್ರದ ಕುರಿತು ಸ್ವತಃ ಕೃಷ್ಣ ಅವರು ಉದಯವಾಣಿಯ “ಚಿಟ್‌ಚಾಟ್’ನಲ್ಲಿ ಮಾತನಾಡಿದ್ದಾರೆ.
* ನಿಮ್ಮ “ಹುಚ್ಚ 2′ ಜರ್ನಿ ಬಗ್ಗೆ ಹೇಳಿ?
ನನಗೆ ಈ ಅವಕಾಶ ಬಂದಾಗ, ನಿರ್ದೇಶಕರು ಒಂದು ಹೊಟೇಲ್‌ಗೆ ಕರೆಸಿ ಕಥೆ ಹೇಳಿದ್ರು. ಟೈಟಲ್ ಏನು ಅಂದಾಗ, “ಹುಚ್ಚ 2′ ಅಂದ್ರು. ಆಗ ಗಾಬರಿಯಾಗಿದ್ದಂತೂ ನಿಜ. ಯಾಕಂದ್ರೆ, “ಹುಚ್ಚ’ ಅನ್ನೋದೇ ಒಂದು ಪವರ್‌ಫುಲ್ ಟೈಟಲ್. ಅದರಲ್ಲೂ ಆ ಹೆಸರು ಕೇಳಿದೊಡನೆ ಸುದೀಪ್ ಸರ್ ನೆನಪಾಗುತ್ತೆ. ಅಂಥದ್ದೊಂದು ಟೈಟಲ್‌ನಡಿ ಸಿನಿಮಾ ಮಾಡುವಾಗ, ಎಲ್ಲರಿಗೂ ನಿರೀಕ್ಷೆ ಇದ್ದೇ ಇರುತ್ತೆ. ಆ ಜವಾಬ್ದಾರಿ ನನಗೂ ಇತ್ತು. ಮೊದಲ ದಿನದ ಚಿತ್ರೀಕರಣದಲ್ಲೇ ಗೊಂದಲವಿತ್ತು. ಒಂದಷ್ಟು ಎಡವಟ್ಟು ಆಗೋಯ್ತು. ಸುಮಾರು 25 ಟೇಕ್ ತಗೊಂಡೆ. ಎಲ್ಲೋ ಒಂದು ಕಡೆ ನನಗೆ ಆ್ಯಕ್ಟಿಂಗ್ ಬರಲ್ವಾ ಅಥವಾ ಆ ಪಾತ್ರ ನಿರ್ವಹಿಸೋಕೆ ಆಗ್ತಾ ಇಲ್ವಾ ಎಂಬ ಪ್ರಶ್ನೆ ಕಾಡಿತು. ಅಷ್ಟೊಂದು ಪಕ್ವತೆ ಬರೋವರೆಗೂ ನಿರ್ದೇಶಕರು ಬಿಡಲಿಲ್ಲ. ಎರಡನೇ ದಿನದಿಂದ ಪಾತ್ರಕ್ಕೆ ಹೊಂದಿಕೊಂಡೆ. ಅದೊಂದು ಮರೆಯಲಾಗದ ಜರ್ನಿ.
* ನಿಮ್ಮ ಪಾತ್ರ ತುಂಬಾ ವಿಚಿತ್ರವಾಗಿದೆಯಂತಲ್ಲಾ?
ಹೌದು, ಅದೊಂದು ಅಬ್‌ನಾರ್ಮಲ್ ಹುಡುಗನ ಪಾತ್ರ. ಹುಟ್ಟಿದಾಗಿನಿಂದಲೂ ಅವನೊಂಥರಾ ವಿಚಿತ್ರ ಮ್ಯಾನರಿಸಂ ಹುಡುಗ. ಆ ಪಾತ್ರಕ್ಕೆ ಓವರ್ ಮಾಡಂಗಿಲ್ಲ. ನೋಡಿದವರು ಇನ್ನೇನೋ ಅಂದುಕೊಳ್ಳುತ್ತಾರೆ ಎಂಬ ಭಯವಿತ್ತು. ಇನ್ನು, ಅಂಡರ್‌ಪ್ಲೇ ಕೂಡ ಮಾಡಂಗಿಲ್ಲ. ಅದಕ್ಕೆ ಇನ್ನೊಂದು ಭಯ ಕಾಡುತ್ತಿತ್ತು. ನಿರ್ದೇಶಕರು ಪ್ರತಿಯೊಂದು ದೃಶ್ಯದಲ್ಲೂ ಹೀಗೇ ಇರಬೇಕು, ಹೀಗೇ ಬರಬೇಕು ಅಂತ ಸ್ವತಃ ಆ್ಯಕ್ಟ್ ಮಾಡಿ ತೋರಿಸೋರು. ಸಂಜೆಯಾಗುತ್ತಿದ್ದಂತೆಯೇ, ಇವತ್ತು ನಿಮ್ಮ ನಟನೆ ಚೆನ್ನಾಗಿತ್ತು. ನೀವು ಒಳ್ಳೇ ಆರ್ಟಿಸ್ಟ್ ಅನ್ನುವ ಕಾರಣಕ್ಕೆ ನಾನು ಹಾಕಿಕೊಂಡೆ ಅಂತ ಹೇಳ್ಳೋರು. ಮರುದಿನ ನಾನು ಒಳ್ಳೇ ಆರ್ಟಿಸ್ಟ್ ಅನ್ನುವುದನ್ನು ಸಾಬೀತುಪಡಿಸಬೇಕಿತ್ತು. ಹಾಗಾಗಿ, ಆ ಪಾತ್ರವನ್ನು ತುಂಬಾ ಜೀವಿಸಿ ಮಾಡಿದ್ದೇನೆ.
* ಓಂ ಪ್ರಕಾಶ್‌ರಾವ್ ಅವರ ಜೊತೆಗಿನ ಕೆಲಸ ಹೇಗಿತ್ತು?
ನಿಜವಾದ ಚಿತ್ರೀಕರಣ ಅಂದರೆ, ಓಂ ಪ್ರಕಾಶ್‌ರಾವ್ ನಿರ್ದೇಶನದಲ್ಲಿ ಗೊತ್ತಾಯ್ತು. ಶೂಟಿಂಗ್ ಟೈಮ್ ಅಂದರೆ ಟೈಮ್. ಹಿರಿಯ ನಿರ್ದೇಶಕರು ಅಷ್ಟೇ ಜೋಶ್‌ನಿಂದ ಕೆಲಸ ಮಾಡೋರು. ಬೇರೆ ಸಿನಿಮಾ ಮಾಡುವಾಗ ಮುಂದಿನ ಚಿತ್ರ ಯಾವುದು ಅಂತಂದಾಗ, “ಹುಚ್ಚ 2′ ಮಾಡುತ್ತಿದ್ದೇನೆ. ಓಂ ಪ್ರಕಾಶ್‌ರಾವ್ ನಿರ್ದೇಶಕರು ಅನ್ನುತ್ತಿದ್ದಂತೆಯೇ, ಎಷ್ಟೋ ಮಂದಿ ಹೆದರಿಸಿದ್ದು ನಿಜ. ಶೂಟಿಂಗ್ ಹೋಗು ನಿಂಗೆ ಐತೆ ಅಂತ ಹೆದರಿಸಿದವರೇ ಹೆಚ್ಚು. ಆದರೆ, ಶೂಟಿಂಗ್‌ಗೆ ಹೋದಾಗಲಷ್ಟೇ ಗೊತ್ತಾಗಿದ್ದು, ನಿರ್ದೇಶಕರ ಕೆಲಸ ಹೇಗೆಂಬುದು. 55 ದಿನಗಳ ಚಿತ್ರೀಕರಣದಲ್ಲಿ ಒಂದು ದಿನವೂ ಬೇಸರವಾಗದಂತೆ ನೋಡಿಕೊಂಡಿದ್ದಾರೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಆದರೆ ಅವರಿಂದ ಬೈಯಿಸಿಕೊಳ್ಳುವುದನ್ನಂತೂ ತಪ್ಪಿಸಿಕೊಂಡಿದ್ದೇನೆ.
* “ಹುಚ್ಚ 2’ನಿಂದ ಹೊಸ ಇಮೇಜ್ ಸಿಗಬಹುದಾ?
ನನ್ನ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, ಇದು ಬೇರೆ ರೀತಿಯ ಚಿತ್ರವಾಗಿ ನಿಲ್ಲುತ್ತೆ. ಅದು ಕಥೆಯಾಗಲಿ, ಅಭಿನಯವಿರಲಿ, ತಾಂತ್ರಿಕತೆಯಲ್ಲೇ ಇರಲಿ, ನಾನು ಇದುವರೆಗೆ ಮಾಡಿರುವ ಚಿತ್ರಗಳಿಗಿಂತಲೂ ದಿ ಬೆಸ್ಟ್ ಚಿತ್ರವಿದು. ಬಹುಶಃ ಮುಂದೆಂದೂ ಇಂತಹ ಪಾತ್ರ ಸಿಗಲಿಕ್ಕಿಲ್ಲ. ಕಷ್ಟಪಟ್ಟು ಚಿತ್ರ ಮಾಡಿದ್ದೇವೆ. ಮಿಕ್ಕಿದ್ದು ಜನರಿಗೆ ಬಿಟ್ಟಿದ್ದೇವೆ. ಒಂದಂತೂ ನಿಜ, ಈ ಚಿತ್ರ ನನಗೊಂದು ರೀ ಬರ್ತ್ ಇದ್ದಂತೆ. ನಾನೂ ಚಿತ್ರ ಎದುರು ನೋಡುತ್ತಿದ್ದೇನೆ. ನಿರ್ಮಾಪಕ ಉಮೇಶ್‌ರೆಡ್ಡಿ ಅವರ ಪ್ರೀತಿಯಿಂದ ಈ ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ. ನನ್ನ ತಂದೆ ಬಿಟ್ಟರೆ, ಅವರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದೇನೆ. ಒಬ್ಬ ನಿರ್ಮಾಪಕರಾಗಿ ಒಂದು ಸಿನಿಮಾ ಹೇಗೆ ಮಾಡಬೇಕು ಎಂಬುದಕ್ಕೆ ಅವರು ಉದಾಹರಣೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.