ಕಲರ್ ಫುಲ್ ವೇದಿಕೆಯಲ್ಲಿ ಕಬ್ಜ ಹಾಡು; ‘ಚುಮ್ ಚುಮ್ ಚಳಿ’ಗೆ ಕೇಳುಗರು ಫಿದಾ
Team Udayavani, Feb 28, 2023, 1:09 PM IST
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ “ಕಬ್ಜ’ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಪಡ್ಡೆ ಹುಡುಗರ ನಿದ್ದೆಗೆಡಿಸುವಂತಹ “ಚುಮ್ ಚುಮ್ ಚಳಿ…’ ಎಂಬ ಹಾಡನ್ನು ಇತ್ತೀಚೆಗೆ ಆರ್.ಚಂದ್ರು ಅವರ ತವರು ಶಿಡ್ಲಘಟ್ಟದಲ್ಲಿ ಬಿಡುಗಡೆ ಮಾಡಲಾಯಿತು.
ಪ್ರಮೋದ್ ಮರವಂತೆ ಬರೆದಿರುವ ಈ ಹಾಡನ್ನು ಐರಾ ಉಡುಪಿ, ಮನೀಶ್ ದಿನಕರ್ ಹಾಗೂ ಸಂತೋಷ್ ವೆಂಕಿ ಹಾಡಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿರುವ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಶಿಡ್ಲಘಟ್ಟದ ಜೂನಿಯರ್ ಕಾಲೇಜ್ ನೆಹರು ಮೈದಾನದಲ್ಲಿ ನಡೆದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಶಿಡ್ಲಘಟ್ಟದ ಶಾಸಕ ಮುನಿಯಪ್ಪ ಸೇರಿದಂತೆ ಅನೇಕ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಗುರುಕಿರಣ್ ಗಾಯನ, ರೋಬೋ ಗಣೇಶ್ ಡ್ಯಾನ್ಸ್ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವ ಕೆ. ಸುಧಾಕರ್ ಮಾತನಾಡಿ, ಇದು “ಕಬ್ಜ’ ಸಿನಿಮಾದ ಹಬ್ಬ. ಈ ಹಾಡು ಬಿಡುಗಡೆ ಸಮಾರಂಭವನ್ನು ಚಂದ್ರು ಅವರಿಗೆ ನಮ್ಮ ಚಿಕ್ಕಬಳ್ಳಾಪುರದಲ್ಲಿ ಮಾಡೋಣ ಎಂದಿದ್ದೆ. ಆದರೆ, ಅವರು ತಮ್ಮ ತವರಲ್ಲಿ ಮಾಡಿದ್ದಾರೆ. ಈ ಮೊದಲು ನಾನು ಆರ್‌ಆರ್‌ಆರ್ ಚಿತ್ರದ ಆಡಿಯೋ ಲಾಂಚ್ ಮಾಡಿದ್ದೆ. ಅದು ಹಿಟ್ ಆಯ್ತು. ಅದಕ್ಕಿಂತ ದೊಡ್ಡ ಮಟ್ಟದಲ್ಲಿ “ಕಬ್ಜ’ ಗೆಲ್ಲಬೇಕು. ಇದೊಂದು ಸದಭಿರುಚಿಯ ಯುವಕರ ಸಿನಿಮಾ ಎನ್ನಬಹುದು. ಸಿನಿಮಾ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಲಿ. ಇಂದು ಎಲ್ಲಾ ಕಡೆ ಕನ್ನಡ ಸಿನಿಮಾಗಳನ್ನು ಜನ ನೋಡಿ, ಮೆಚ್ಚಿಕೊಳ್ಳುತ್ತಿದ್ದಾರೆ ಎಂದರು.
ಈಗಾಗಲೇ ನಾವು ಎರಡು ಗೀತೆಗಳನ್ನು ಹೈದರಾಬಾದ್, ಚೆನ್ನೈನಲ್ಲಿ ಬಿಡುಗಡೆ ಮಾಡಿದ್ದು. ಈ ಹಾಡನ್ನು ನಮ್ಮೂರು ಶಿಡ್ಲಘಟ್ಟದಲ್ಲಿ ಬಿಡುಗಡೆ ಮಾಡಿದ್ದೇವೆ. ಎಲ್ಲಾ ಅತಿಥಿಗಳು ಬಂದಿರುವುದು ತುಂಬಾ ಖುಷಿಯಾಗಿದೆ. ಅದರಲ್ಲೂ ಗೀತಕ್ಕ ಅವರು ನಮ್ಮ ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಬ್ಯಾನರ್ ಅನ್ನು ಬಿಡುಗಡೆ ಮಾಡಿದ್ದರು. ಅವರು ಇಂದು ಈ ಸಮಾರಂಭಕ್ಕೆ ಬಂದಿರುವುದು ವಿಶೇಷ. ದೊಡ್ಡ ಮಟ್ಟದಲ್ಲಿ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ’ ಸದ್ದು ಮಾಡುತ್ತಿದೆ. ಬಾಲಿವುಡ್‌ನಲ್ಲಿ ಸುಮಾರು 1800 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ನಮ್ಮ “ಕಬ್ಜ’ ಬಿಡುಗಡೆ ಆಗಲಿದೆ’ ಎಂದು ಮಾಹಿತಿ ನೀಡಿದರು ನಿರ್ಮಾಪಕ, ನಿರ್ದೇಶಕ ಆರ್.ಚಂದ್ರು.
ಅಂದ ಹಾಗೆ ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜಇದೇ ಮಾರ್ಚ್ 17ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮುಖ್ಯವಾದ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ಅಭಿನಯ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.