3ನೇ ವಯಸ್ಸಿಗೆ ರೂಪದರ್ಶಿಯಾಗಿದ್ದ ಪುಟ್ಟ ಪೋರಿ ಹಲವು ಹಿಟ್ ಸಿನಿಮಾಗಳ ನಾಯಕಿಯಾಗಿದ್ದಳು!
5ನೇ ವಯಸ್ಸಿಗೆ ಮಗಳು ಜಯಶ್ರೀಯನ್ನು ತಾಯಿ ನೃತ್ಯ ತರಬೇತಿ ತರಗತಿಗೆ ಸೇರಿಸಿದ್ದರು
ನಾಗೇಂದ್ರ ತ್ರಾಸಿ, Dec 14, 2019, 7:35 PM IST
ಕನ್ನಡ ಚಿತ್ರರಂಗ ಕಂಡ ಸುಂದರ ನಟಿಯರಲ್ಲಿ ಜಯಶ್ರೀ ಕೂಡಾ ಒಬ್ಬರು. ರೂಪದರ್ಶಿಯಾಗಿ, ನಟಿಯಾಗಿ ಜನಪ್ರಿಯತೆ ಕಂಡಿದ್ದ ಈ ನಟಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಜಯಶ್ರೀ ಅಲಿಯಾಸ್ ಸುಧಾರಾಣಿ ಮೂರು ದಶಕಗಳ ಸಿನಿ ಪಯಣದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ. ನಟ ಸಾರ್ವಭೌಮ ಡಾ.ರಾಜ್ ಕುಮಾರ ಬಗ್ಗೆ ಚಿಕ್ಕಂದಿನಿಂದಲೇ ಅಪಾರ ಅಭಿಮಾನ ಹೊಂದಿದ್ದ ಈಕೆಗೆ ಕಾಕತಾಳೀಯ ಎಂಬಂತೆ ಸಿನಿಮಾರಂಗದಲ್ಲಿ ನೆಲೆಯೂರುವಂತೆ ಅವಕಾಶ ಮಾಡಿಕೊಟ್ಟಿದ್ದು ಕೂಡಾ ಡಾ.ರಾಜ್ ದಂಪತಿ ಎಂಬುದು ವಿಶೇಷ.
3ನೇ ವಯಸ್ಸಿಗೆ ರೂಪದರ್ಶಿ!
ಗೋಪಾಲಕೃಷ್ಣ ಮತ್ತು ನಾಗಲಕ್ಷ್ಮಿ ದಂಪತಿಯ ಪುತ್ರಿ ಜಯಶ್ರೀ(1973) ಚಿಕ್ಕಂದಿನಿಂದಲೇ ಚೂಟಿಯಾಗಿದ್ದಳು. ಜಯಶ್ರೀ ಕನ್ನಡ ಚಿತ್ರರಂಗದ ಜನಪ್ರಿಯ ಚಿ.ಉದಯ್ ಶಂಕರ್ ಅವರ ಸಂಬಂಧಿ. ತನ್ನ 3ನೇ ವಯಸ್ಸಿಗೇ ಮುದ್ರಣ ಮಾಧ್ಯಮದ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಳ್ಳುವ ಮೂಲಕ ಮಾಡೆಲಿಂಗ್ ಆರಂಭಿಸಿದ್ದಳು. 5ನೇ ವಯಸ್ಸಿಗೆ ಮಗಳು ಜಯಶ್ರೀಯನ್ನು ತಾಯಿ ನೃತ್ಯ ತರಬೇತಿ ತರಗತಿಗೆ ಸೇರಿಸಿದ್ದರಂತೆ! ಏಳನೇ ವಯಸ್ಸಿಗೆ ಕೂಚುಪುಡಿ ಹಾಗೂ ಭರತನಾಟ್ಯ ಪ್ರವೀಣೆಯಾಗಿದ್ದಳು. ಬಾಲ್ಯದಲ್ಲಿಯೇ ಒಂದೊಂದೇ ಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದ ಜಯಶ್ರೀಗೆ ಸಹೋದರ ನಿರ್ಮಿಸಿದ ಕಿರುಚಿತ್ರದಲ್ಲಿಯೂ ನಟಿಸಿದ್ದಳು. ಚೈಲ್ಡ್ ಇಸ್ ಹಿಯರ್ ಎಂಬ ಮಕ್ಕಳ ಕಿರುಚಿತ್ರ ಇದಾಗಿದ್ದು, ಈ ಕಿರುಚಿತ್ರ ಅಂತಾರಾಷ್ಟ್ರೀಯ ಪ್ರಶಸ್ತಿಗೂ ಭಾಜನವಾಗಿತ್ತು.
ಉಪನಯನ ಸಮಾರಂಭದ ವಿಡಿಯೋವನ್ನು ವೀಕ್ಷಿಸಿಸುತ್ತಿದ್ದ ಪಾರ್ವತಮ್ಮ ರಾಜ್ ಕುಮಾರ್ ಈಕೆಯನ್ನು ಗಮನಿಸಿದ್ದರು. ಆಗ ಜಯಶ್ರೀ ವಯಸ್ಸು ಕೇವಲ 12ವರ್ಷ. ನಂತರ ಡಾ.ರಾಜ್ ಕುಮಾರ್ ಅವರು ಆನಂದ್ (1986) ಸಿನಿಮಾಕ್ಕೆ ಜಯಶ್ರೀಯನ್ನು ಹೀರೋಯಿನ್ ಆಗಿ ಆಯ್ಕೆ ಮಾಡಿದ್ದರು.
ಆನಂದ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಜತೆ ಹೀರೋಯಿನ್ ಆಗಿ ಅಭಿನಯಿಸಿದ ನಂತರ ಮನ ಮೆಚ್ಚಿದ ಹುಡುಗಿ, ಸಮರ, ಆಸೆಗೊಬ್ಬ ಮೀಸೆಗೊಬ್ಬ, ಅಣ್ಣ ತಂಗಿ, ಮಿಡಿದ ಶ್ರುತಿ ಸಿನಿಮಾದಲ್ಲಿ ನಟಿಸಿದ್ದರು.. ಹೀಗೆ ನಾಯಕಿ ನಟಿಯಾಗಿ ಗುರುತಿಸಿಕೊಂಡ ಸುಧಾರಾಣಿ ಕನ್ನಡ ಚಿತ್ರರಂಗದ ಅಪರೂಪದ ಮತ್ತು ಚೆಲುವಿನ ನಟಿ 90ರ ದಶಕದಲ್ಲಿ ಬೇಡಿಕೆಯ ಉತ್ತುಂಗದಲ್ಲಿದ್ದರು.
1989ರಲ್ಲಿ ಸುಧಾರಾಣಿ ತಮಿಳಿನ ಅಣ್ಣಾಕಿಲಿ ಸೋನ್ನಾ ಕಥೈ ಸಿನಿಮಾದಲ್ಲಿ ನಟಿಸಿದ್ದು, ಮೂರು ವರ್ಷದ ಬಳಿಕ ವಸಂತಕಾಲ ಪರವೈ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಯಶಸ್ವಿಯಾಗಿತ್ತು. ನಂತರ ತಮಿಳಿನ ಹತ್ತು ಸಿನಿಮಾಗಳಲ್ಲಿ ನಟಿಸಿದ್ದರು.
ಕನ್ನಡದಲ್ಲಿ ಪಂಚಮವೇದ ಸಿನಿಮಾ ಸುಧಾರಾಣಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಈ ಸಿನಿಮಾದಲ್ಲಿ ರಮೇಶ್ ಅರವಿಂದ್ ಮತ್ತು ಸುಧಾರಾಣಿ ಜೋಡಿ ಪ್ರೇಕ್ಷಕರನ್ನು ಬಹುವಾಗಿ ಆಕರ್ಷಿಸಿತ್ತು. ಈ ನಿಟ್ಟಿನಲ್ಲಿ ಸುಧಾರಾಣಿ ಮತ್ತು ರಮೇಶ್ ಅರವಿಂದ್ ಜೋಡಿ ಸುಮಾರು ಎಂಟಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಶ್ರೀಗಂಧ, ಅರಗಿಣಿ, ಗಂಡ ಮನೆ ಮಕ್ಕಳು, ವರಗಳ ಬೇಟೆ, ಬಾಳೊಂದು ಚದುರಂಗ, ಆ್ಯಕ್ಸಿಡೆಂಟ್ ಮತ್ತು ಅನುರಾಗ ಅರಳಿತು ಸಿನಿಮಾದಲ್ಲಿ ಈ ಜೋಡಿ ಕನ್ನಡ ಚಿತ್ರಪ್ರೇಮಿಗಳ ಮನಗೆದ್ದಿದ್ದರು.
ವಿಚ್ಚೇದನ, ಅಮೆರಿಕ ವಾಸ ಮತ್ತೆ ಸ್ಯಾಂಡಲ್ ವುಡ್ ಗೆ:
ಸ್ಯಾಂಡಲ್ ವುಡ್ ನಲ್ಲಿ ಸುಧಾರಾಣಿ ಬಹುಬೇಡಿಕೆಯ ನಟಿಯಾಗಿದ್ದಾಗಲೇ ಅಮೆರಿಕ ಮೂಲದ ಅನಸ್ತೇಶಿಯಾ ತಜ್ಞ ಡಾ.ಸಂಜಯ್ ಅವರನ್ನು ವಿವಾಹವಾಗಿದ್ದರು. ಬಳಿಕ ಸುಧಾರಾಣಿ ಚಿತ್ರರಂಗ ತೊರೆದು ಅಮೆರಿಕಕ್ಕೆ ತೆರಳಿದ್ದರು. ಆದರೆ ಅಮೆರಿಕ ವಾಸ, ದಾಂಪತ್ಯದ ನಡುವಿನ ವಿರಸ, ಒಂಟಿತನ ಬಾಧಿಸತೊಡಗಿದ್ದವಂತೆ. ಕೊನೆಗೆ ತನ್ನ ಮನದಾಳವನ್ನು ಹಿರಿಯರ ಬಳಿ ಹಂಚಿಕೊಂಡು ಸಲಹೆ ಕೇಳಿದ್ದರಂತೆ. ಆ ನಂತರ ಪತಿ ಸಂಜಯ್ ಗೆ ವಿಚ್ಚೇದನ ನೀಡಿದ್ದರು. ಹೀಗೆ ಐದು ವರ್ಷಗಳ ಅಮೆರಿಕ ಅಜ್ಞಾತವಾಸ ಅಂತ್ಯಗೊಂಡಿತ್ತು.
ಬೆಂಗಳೂರಿಗೆ ವಾಪಸ್ ಆದ ಮೇಲೆ ಸಂಬಂಧಿ ಗೋವರ್ಧನ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ನಿಧಿ ಎಂಬ ಮಗಳಿದ್ದಾಳೆ. ದೀರ್ಘಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಸುಧಾರಾಣಿ ಮತ್ತೆ ಕನ್ನಡ ಚಿತ್ರದಲ್ಲಿ ನಟನೆಯನ್ನು ಮುಂದುವರಿಸಿದ್ದಾರೆ. ತಾಂತ್ರಿಕವಾಗಿ ಸಿನಿಮಾ ಜಗತ್ತು ಮುಂದುವರಿದಿದೆ. ಆದರೆ ಯಶಸ್ವಿ ಹಾಗೂ ಗುಣಮಟ್ಟದ ಚಿತ್ರದ ಬಗ್ಗೆ ಗಮನಹರಿಸಬೇಕಾಗಿದೆ ಎಂಬುದು ಸುಧಾರಾಣಿ ಮನದಾಳದ ಮಾತಾಗಿದೆ.
ನಾನು ನಿಜಕ್ಕೂ ಅದೃಷ್ಟವಂತೆ ಯಾಕೆಂದರೆ ಅಂದು ಒಂದು ಸಿನಿಮಾ 25 ವಾರಗಳ ಕಾಲ ಅಥವಾ 365 ದಿನಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿತ್ತು. ಇಂದು ಅಮೋಘ ಎರಡನೇ ವಾರ ಅಂತ ಸಂಭ್ರಮ ಪಡುವಂತಾಗಿದೆ ಎಂದು ಸಂದರ್ಶನವೊಂದರಲ್ಲಿ ಸುಧಾರಾಣಿ ಮನದಾಳದ ಮಾತನ್ನು ಹೊರಹಾಕಿದ್ದರು.
ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಕಾಳಜಿ, ಪ್ರೀತಿಯನ್ನು ಇಟ್ಟುಕೊಂಡಿರುವ ಸುಧಾರಾಣಿ ಪ್ರತಿಷ್ಠಿತ ಆರ್ಯಭಟ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದು, ಸ್ಯಾಂಡಲ್ ವುಡ್ ನಲ್ಲಿ ಇನ್ನಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ಉತ್ತುಂಗಕ್ಕೇರುವಂತಾಗಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.