ಖಡಕ್ ಹುಡುಗನ ಖದರ್ ಸ್ಟೋರಿ
Team Udayavani, Apr 1, 2017, 4:19 PM IST
ಆತ ಸೈಕೋನಾ ಈತ ಸೈಕೋನಾ. ಇಲ್ಲಿ ನಿಜವಾದ ಸೈಕೋ ಯಾರು? ಇಬ್ಬರ ವರ್ತನೆ ಕೂಡಾ ತುಂಬಾ
ವಿಚಿತ್ರವಾಗಿದೆ. ಮೇಲ್ನೋಟಕ್ಕೆ ಅವರ ಉದ್ದೇಶ ಅರ್ಥಮಾಡಿಕೊಳ್ಳೋದು ಕಷ್ಟ. ಈ ಇಬ್ಬರು ಏನು ಮಾಡಲು ಹೊರಟಿದ್ದಾರೆ? ಪ್ರೇಕ್ಷಕ ಇಂತಹ ಒಂದು ಕುತೂಹಲದೊಂದಿಗೆ ಸಿನಿಮಾವನ್ನು ಕಣ್ತುಂಬಿಕೊಳ್ಳುತ್ತಾನೆ. ಹೀರೋ ಹಾಗೂ ವಿಲನ್‌ನ ಈ ವಿಚಿತ್ರ ವರ್ತನೆಯಲ್ಲಿ ಇರುವ ಏಕೈಕ ಸಾಮ್ಯತೆ ಎಂದರೆ ಅದು ಒಂದು ಹೆಸರು. ವ್ಯಕ್ತಿಗಳು ಬೇರೆಯಾದರೂ ಹೆಸರು ಮಾತ್ರ ಒಂದೇಯಾಗಿರುವುದೇ ಇಬ್ಬರ ವರ್ತನೆಗೆ ಕಾರಣವಾಗುತ್ತದೆ. ಅಷ್ಟಕ್ಕೂ ಆ ಹೆಸರು
ಕೇಳಿದರೆ ಯಾಕೆ ಅವರಿಬ್ಬರು ಹಾಗೆ ವರ್ತಿಸುತ್ತಾರೆ ಎಂದರೆ ಅದಕ್ಕೊಂದು ಫ್ಲ್ಯಾಶ್‌ಬ್ಯಾಕ್ ಇದೆ. ಅದನ್ನು
ಹೇಳುವುದಕ್ಕಿಂತ ನೀವೇ ನೋಡಿ.
ಪುರಿ ಜಗನ್ನಾಥ್ “ರೋಗ್’ನಲ್ಲಿ ರಗೆಡ್ ಲವ್ ಸ್ಟೋರಿಯೊಂದನ್ನು ಹೇಳಲು ಹೊರಟಿದ್ದಾರೆ. ಆ ಲವ್‌ಸ್ಟೋರಿಯನ್ನು ಸುಲಭವಾಗಿ ಮತ್ತು ನೇರವಾಗಿ ಹೇಳಿದರೆ ಮಜಾ ಇರೋದಿಲ್ಲ ಎಂಬ ಕಾರಣಕ್ಕೆ ಆರಂಭದಿಂದಲೇ ಒಂದಷ್ಟು ಟ್ವಿಸ್ಟ್ ಕೊಡುತ್ತಾ ಹೋಗಿದ್ದಾರೆ. ಹಾಗೆ ನೋಡಿದರೆ, ನಾಯಕನ ಲವ್‌ಸ್ಟೋರಿ ಆರಂಭವಾದಷ್ಟೇ ವೇಗದಲ್ಲಿ ಮುಗಿದು ಹೋಗುತ್ತದೆ. ಅಲ್ಲಿಂದ ನಿಜವಾದ ಕಥೆ ತೆರೆದುಕೊಳ್ಳುತ್ತದೆ. ಹಾಗಂತ “ರೋಗ್’ನ ಕಥೆ ತೀರಾ ಹೊಸದೇನಲ್ಲ. ಆದರೆ, ಯಾವುದೇ ಕಥೆಯನ್ನಾದರೂ ಮಜಾವಾಗಿ ಹೇಳುವುದು ಪುರಿ ಜಗನ್ನಾಥ್ ಅವರಿಗೆ ಗೊತ್ತಿದೆ. ಅದು ಇಲ್ಲೂ ಮುಂದುವರಿದಿದೆ. ಲವ್ ಸ್ಟೋರಿಯೊಂದಿಗೆ ಆರಂಭವಾಗುವ ಕಥೆಗೆ ಆ್ಯಕ್ಷನ್ ಟಚ್ ಕೊಡುವುದರಲ್ಲಿ ಪುರಿ ಜಗನ್ನಾಥ್ ಎತ್ತಿದ ಕೈ. ಈ ಸಿನಿಮಾದಲ್ಲೂ ಅದು ಮುಂದುವರಿದಿದೆ.
ಪ್ರೀತಿಸಿದ ಹುಡುಗಿಗಾಗಿ ಮದುವೆ ಮನೆಗೆ ನುಗ್ಗಿ ಹೊಡೆಯುವ ಭರದಲ್ಲಿ ಕಾನ್ಸ್‌ಟೇಬಲ್ ಒಬ್ಬನ ಕಾಲು ಮುರಿದು ಹಾಕಿರುತ್ತಾನೆ ನಾಯಕ ಜಯ್ ಅಲಿಯಾಸ್ ರೋಗ್. ಪರಿಣಾಮ ಜೈಲು ಪಾಲಾಗುತ್ತಾನೆ. ಜೈಲಿನಲ್ಲಿ ಆತನ ವರ್ತನೆ
ನೋಡಿದ ಕೈದಿಗಳು ಆತನಿಗೆ “ರೋಗ್’ ಎಂದು ಅಡ್ಡ ಹೆಸರಿಡುತ್ತಾರೆ. ಜೈಲಿನಿಂದ ಮನೆಗೆ ಬಂದ ರೋಗ್‌ಗೆ ತಾನು ಕಾಲು ಮುರಿದ ಕಾನ್ಸ್‌ಟೇಬಲ್‌ನ ಮನೆಯ ಪರಿಸ್ಥಿತಿಯ ಅರಿವಾಗುತ್ತದೆ. ವಿಚಿತ್ರ ವರ್ತನೆಯ ರೋಗ್ ಒಂದು ನಿರ್ಧಾರಕ್ಕೆ ಬರುತ್ತಾನೆ. ಆ ಕಾನ್ಸ್‌ಟೇಬಲ್ ಚೇತರಿಸಿಕೊಂಡು ಮತ್ತೆ ಕೆಲಸಕ್ಕೆ ಹೋಗುವವರೆಗೆ ಆತನ ಕುಟುಂಬವನ್ನು ಮತ್ತು ಆತ ಮಾಡಿದ ಸಾಲವನ್ನು ತಾನೇ ತೀರಿಸುತ್ತೇನೆಂದು ಹೋಗಿ ಅವರ ಮನೆ ಮುಂದಿನ ಭಿಕ್ಷುಕರ ಸಮೂಹದಲ್ಲಿ
ವಾಸ ಮಾಡುತ್ತಾನೆ. ಹೀಗೆ ಆರಂಭವಾಗುವ ರೋಗ್‌ಗೆ ತನಗೆ ಗೊತ್ತಿಲ್ಲದಂತೆ ಒಂದೊಂದೇ ಸಮಸ್ಯೆಗಳು
ಎದುರಾಗುತ್ತಾ ಹೋಗುತ್ತವೆ.ಅವೆಲ್ಲವನ್ನು ರೋಗ್ ಹೇಗೆ ಎದುರಿಸುತ್ತಾನೆ ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನಾ ಅನ್ನೋದೇ ಕಥೆ.
ಮೊದಲೇ ಹೇಳಿದಂತೆ ಕಥೆಯ ವಿಷಯದಲ್ಲಿ “ರೋಗ್’ ತೀರಾ ಹೊಸದೇನಲ್ಲ. ಒಂದು ಯೂತ್‌ಫುಲ್ ಸ್ಟೋರಿಯನ್ನು ತಮ್ಮದೇ ಶೈಲಿಯಲ್ಲಿ ಹೇಳುತ್ತಾ ಹೋಗಿದ್ದಾರೆ ಪುರಿ ಜಗನ್ನಾಥ್. ಹೀಗೆ ಹೇಳುವ ಭರದಲ್ಲಿ ಕೆಲವು ಉತ್ತರ ಸಿಗದ ಪ್ರಶ್ನೆಗಳು ಕೂಡಾ ಸಿಗುತ್ತವೆ. ಅವೆಲ್ಲದಕ್ಕೆ ಉತ್ತರ, ಲಾಜಿಕ್ ಹುಡುಕುವ ಪ್ರಯತ್ನ ಮಾಡದೇ ಸಿನಿಮಾವನ್ನು
ಕಣ್ತುಂಬಿಕೊಳ್ಳಬೇಕು. ಮೊದಲರ್ಧ ನಾಯಕನ ಪ್ರಾಯಶ್ಚಿತದ ಕಥೆಯಾದರೆ, ದ್ವಿತೀಯಾರ್ದ ನಾಯಕ ಹಾಗೂ ವಿಲನ್ ನಡುವಿನ ಜಿದ್ದಾಜಿದ್ದಿಯಲ್ಲೇ ಮುಗಿದು ಹೋಗುತ್ತದೆ. ಇಬ್ಬರ ವರ್ತನೆ ಕೂಡಾ ವಿಚಿತ್ರವಾಗಿರುವುದರಿಂದ ಮುಂದೇನಾಗಬಹುದೆಂಬ ಕುತೂಹಲವಂತೂ ಪ್ರೇಕ್ಷಕನಿಗೆ ಕಾಡಬಹುದು.
ಹೊಸ ಹುಡುಗನ ಲಾಂಚ್‌ಗೆ ಏನು ಬೇಕೋ ಆ ಎಲ್ಲಾ ಅಂಶಗಳನ್ನು ನೀವು “ರೋಗ್’ನಲ್ಲಿ ನೋಡಬಹುದು. ಮುಖ್ಯವಾಗಿ ಆ್ಯಕ್ಷನ್ ದೃಶ್ಯಗಳು. ಇಲ್ಲಿ ಪುರಿ ಜಗನ್ನಾಥ್ ಕಥೆಗಿಂತ ನಾಯಕನ ಲುಕ್, ಗೆಟಪ್ ಹಾಗೂ ಸ್ಟೈಲ್‌ಗೆ ಹೆಚ್ಚು ಒತ್ತು
ಕೊಟ್ಟಿದ್ದು ಕೂಡಾ ಎದ್ದು ಕಾಣುತ್ತದೆ. ಹಾಗಾಗಿಯೇ ನಾಯಕ ಇಶಾನ್ ತೆರೆಮೇಲೆ ತುಂಬಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಹೇರ್ ಸ್ಟೈಲ್‌ನಿಂದ ಹಿಡಿದು ಕಾಸ್ಟೂéಮ್‌ವರೆಗೂ ಚೆನ್ನಾಗಿ ಹೊಂದಿಕೊಂಡಿದೆ. ಹಾಗಾಗಿಯೇ ಇಶಾನ್ ತೆರೆಮೇಲೆ ಆರಡಿ ಹೀರೋ ಆಗಿ ಮಿಂಚಿದ್ದಾರೆ. ನಾಯಕನ ಗುಣ ನೇರಾನೇರ ಆಗಿರುವುದರಿಂದ
ಪುರಿ ಜಗನ್ನಾಥ್ ಇಲ್ಲಿ ಸಂಭಾಷಣೆಗೆ ಹೆಚ್ಚು ಮಹತ್ವ ಕೊಟ್ಟಂತಿಲ್ಲ. ಎರಡು ಟ್ರ್ಯಾಕ್‌ನಲ್ಲಿ ಸಾಗುವ ಕಥೆಯನ್ನು ಅಂತಿಮವಾಗಿ ಒಟ್ಟು ಸೇರಿಸಿದ್ದಾರೆ. ಚಿತ್ರದಲ್ಲಿ ಸಾಧು ಕೋಕಿಲಾ ಅವರ ಕಾಮಿಡಿ ಟ್ರ್ಯಾಕ್ ಇದ್ದರೂ ಹೆಚ್ಚೇನು ಮೋಡಿ ಮಾಡುವುದಿಲ್ಲ. ನಾಯಕ ಇಶಾನ್ ಮೊದಲ ಚಿತ್ರದಲ್ಲೇ ಚಿತ್ರರಂಗದಲ್ಲಿ ನೆಲೆನಿಲ್ಲುವ ಸೂಚನೆ ನೀಡಿದ್ದಾರೆ.
ಅವರ ಲುಕ್, ಮ್ಯಾನರೀಸಂ ಎಲ್ಲವೂ ಪಾತ್ರಕ್ಕೆ ಹೊಂದಿಕೊಂಡಿದೆ. ಆ್ಯಕ್ಷನ್ ದೃಶ್ಯಗಳಲ್ಲಿ ಇಶಾನ್ ಮಿಂಚಿದ್ದಾರೆ. ಆದರೆ, ಡೈಲಾಗ್ ಡೆಲಿವರಿಯಲ್ಲಿ ಮತ್ತಷ್ಟು ಸುಧಾರಿಸಬೇಕಿದೆ. ನಾಯಕಿಯರಾದ ಮನ್ನಾರಾ ಚೋಪ್ರಾ ಕೊಟ್ಟ ಪಾತ್ರಕ್ಕೆ ನ್ಯಾಯ
ಒದಗಿಸಿದರೆ, ಏಂಜೆಲಾ ಹಾಗೆ ಬಂದು ಹೀಗೆ ಹೋಗಿದ್ದಾರಷ್ಟೇ. ವಿಲನ್ ಆಗಿ ಕಾಣಿಸಿಕೊಂಡಿರುವ ಅನೂಪ್ ಸಿಂಗ್ ಠಾಕೂರ್ “ಸೈಕೋ’ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಚಿತ್ರದ ಹಾಡುಗಳಿಗೆ ತಕ್ಕಂತೆ ಸುಂದರ ತಾಣಗಳನ್ನು ಕೂಡಾ ಕಟ್ಟಿಕೊಡಲಾಗಿದೆ. ಇಡೀ ಸಿನಿಮಾ ಕಲ್ಕತ್ತಾ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುತ್ತದೆ ಎನ್ನುವುದು ವಿಶೇಷ.
– ರವಿಪ್ರಕಾಶ್ ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.