ಕನ್ನಡಕ್ಕೆ ಆರು ರಾಷ್ಟ್ರ ಪ್ರಶಸ್ತಿ ಗರಿ
Team Udayavani, Apr 8, 2017, 11:19 AM IST
64ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪಟ್ಟಿಯ ಒಂದು ವಿಶೇಷತೆಯೆಂದರೆ, ಕನ್ನಡಕ್ಕೆ ಒಟ್ಟು ಆರು ಪ್ರಶಸ್ತಿಗಳು ಬಂದಿರುವುದು. ಅದರಲ್ಲಿ ಎರಡು ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಗಳಲ್ಲದೆ ಕನ್ನಡಕ್ಕೆ ಅತ್ಯುತ್ತಮ ಸಂಗೀತ, ಪ್ರಸಾಧನ ಮತ್ತು ಅತ್ಯುತ್ತಮ ಬಾಲನಟ ಪ್ರಶಸ್ತಿಯೂ ಸಿಕ್ಕಿದೆ. ಈ ಪೈಕಿ ಜನಪ್ರಿಯ ಕೊಳಲು ವಾದಕ ಬಾಪು ಪದ್ಮನಾಭ್ ಮೊದಲ ಬಾರಿಗೆ ಸಂಗೀತ ಸಂಯೋಜಿಸಿರುವ “ಅಲ್ಲಮ’ ಚಿತ್ರದ ಸಂಗೀತಕ್ಕಾಗಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಂಗೀತದ ವಿಷಯದಲ್ಲಿ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿಯೊಂದು ಬರದೆ, ಬಹಳ ವರ್ಷಗಳೇ ಆಗಿದ್ದವು.
ಈಗ ಬಾಪು ಪದ್ಮನಾಭ್ ಮೂಲಕ ಕನ್ನಡಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಬಂದಿದೆ. ಇನ್ನು ಹಿರಿಯ ರಂಗಕರ್ಮಿ ಮತ್ತು ಪ್ರಸಾಧನ ಕಲಾವಿದರಾದ ಎನ್.ಕೆ. ರಾಮಕೃಷ್ಣ ಅವರಿಗೆ ಅತ್ಯುತ್ತಮ ಮೇಕಪ್ ಕಲಾವಿದ ಪ್ರಶಸ್ತಿ ಬಂದಿದೆ. ಕೆಲವು ವರ್ಷಗಳ ಹಿಂದಷ್ಟೇ “ನಾನು ಅವನಲ್ಲ ಅವಳು’ ಚಿತ್ರದ ಪ್ರಸಾಧನಕ್ಕಾಗಿ ಅತ್ಯುತ್ತಮ ಪ್ರಸಾಧನ ರಾಷ್ಟ್ರಪ್ರಶಸ್ತಿ ಬಂದಿತ್ತು. ಈಗ ಮತ್ತೂಮ್ಮೆ ಕನ್ನಡಕ್ಕೆ ಅದೇ ವಿಭಾಗದಲ್ಲಿ ಪ್ರಶಸ್ತಿ ಬಂದಿದೆ. ಇದರ ಜೊತೆಗೆ “ರೈಲ್ವೇ ಚಿಲ್ಡ್ರನ್’ ಎಂಬ ಮಕ್ಕಳ ಚಿತ್ರದಲ್ಲಿನ ಅಭಿನಯಕ್ಕಾಗಿ ಮನೋಹರ್‌ಗೆ ಅತ್ಯುತ್ತಮ ಬಾಲನಟ ಪ್ರಶಸ್ತಿ ಸಿಕ್ಕಿದೆ.
ಈ ಮೂರೂ ಪ್ರಶಸ್ತಿ ವಿಜೇತರಿಗೆ ರಜತ ಕಮಲದ ಜೊತೆಗೆ ತಲಾ 50 ಸಾವಿರ ನಗದು ಸಿಗಲಿದೆ. ಇನ್ನು ಪ್ರಾದೇಶಿಕ ಚಿತ್ರಗಳ ಪೈಕಿ ಕನ್ನಡದ ನಿಖೀಲ್ ಮಂಜು ನಿರ್ದೇಶನದ “ರಿಸರ್ವೇಶನ್’ ಮತ್ತು ತುಳುವಿನ ಚೇತನ್ ಮುಂಡಾಡಿ ನಿರ್ದೇಶನದ “ಮದಿಪು’ ಎಂಬ ಎರಡು ಚಿತ್ರಗಳಿಗೆ ಅತ್ಯುತ್ತಮ ಪ್ರಾದೇಶಿಕ ಚಿತ್ರಪ್ರಶಸ್ತಿಗಳು ಸಂದಾಯವಾಗಿದೆ. ಈ ಎರಡೂ ಚಿತ್ರಗಳಿಗೆ ರಜತ ಕಮಲ ಪ್ರಶಸ್ತಿಗಳ ಜೊತೆಗೆ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ತಲಾ ಒಂದೊಂದು ಲಕ್ಷ ನಗದು ಸಿಗಲಿದೆ.
ಪ್ರಶಸ್ತಿ ವಿಜೇತರ ಪ್ರತಿಕ್ರಿಯೆಗಳು:-
ನಿರೀಕ್ಷೆ ಮಾಡಿರಲಿಲ್ಲ
ನಾವು ಪ್ರಶಸ್ತಿಯ ನಿರೀಕ್ಷೆಯಲ್ಲಿರಲಿಲ್ಲ. ಒಳ್ಳೆಯ ಸಿನಿಮಾ ಮಾಡಿದ ಖುಷಿಯಷ್ಟೇ ಇತ್ತು. ಆದರೆ ಈಗ ನಮ್ಮ ಪ್ರಯತ್ನವನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ. ಸಹಜವಾಗಿಯೇ ಖುಷಿಯಾಗಿದ್ದೇವೆ. ಮುಖ್ಯವಾಗಿ ಇದು ಟೆಕ್ನಿಷಿಯನ್ಸ್ ಸಿನಿಮಾ. ಯಾರೂ ಕೂಡಾ ದುಡ್ಡಿಗಾಗಿ ಮಾಡಿದ ಸಿನಿಮಾವಲ್ಲ ಇದು. ಬಹುತೇಕರು ಉಚಿತವಾಗಿ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಮಾಧ್ಯಮಗಳು ಕೂಡಾ ನಮ್ಮ ಪ್ರಯತ್ನವನ್ನು ಪ್ರೋತ್ಸಾಹಿಸಿವೆ. ಈ ಸಂದರ್ಭದಲ್ಲಿ ಚಿತ್ರಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ.
– ಚೇತನ್ ಮುಂಡಾಡಿ, “ಮದಿಪು’ ಸಿನಿಮಾ ನಿರ್ದೇಶಕ
ಜವಾಬ್ದಾರಿ ಹೆಚ್ಚಿದೆ
ನಾನು ಸಂಗೀತ ನಿರ್ದೇಶನ ಮಾಡಿದ ಮೊದಲ ಸಿನಿಮಾ “ಅಲ್ಲಮ’. ಆ ಚಿತ್ರದ ಮೇಲೆ ನಂಬಿಕೆ ಇತ್ತು. ಆದರೆ, ನನ್ನ ಸಂಗೀತ ಗುರುತಿಸಿ, ರಾಷÅಪ್ರಶಸ್ತಿ ಹುಡುಕಿ ಬರುತ್ತೆ ಅಂತ ಗೊತ್ತಿರಲಿಲ್ಲ. ಸಹಜವಾಗಿಯೇ ನನಗೆ ತುಂಬಾ ಸಂತೋಷವಾಗಿದೆ. ಈ ರೀತಿಯ ಸಿನಿಮಾ ಮಾಡಿ ಗುರುತಿಸಿಕೊಂಡಿದ್ದರಿಂದ ಹೆಮ್ಮೆ ಇದೆ. ಶಾಸ್ತ್ರೀಯ ಸಂಗೀತವನ್ನಿಲ್ಲಿ ಬಳಸಿದ್ದೆ. ಗುಣಮಟ್ಟವನ್ನೂ ಉಳಿಸಿಕೊಂಡಿದ್ದೆ. ಆ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಈ ಪ್ರಶಸ್ತಿಯಿಂದ ನನಗೆ ಮತ್ತಷ್ಟು ಜವಾಬ್ದಾರಿಯೂ ಹೆಚ್ಚಿದೆ. ನನಗೆ ಅವಕಾಶ ಕೊಟ್ಟ ನಿರ್ದೇಶಕ ನಾಗಾಭರಣ ಮತ್ತು ನಿರ್ಮಾಪಕ ಹರಿಖೋಡೆ ಅವರಿಗೆ ಥ್ಯಾಂಕ್ಸ್ ಹೇಳ್ತೀನಿ. ಅವರು ಪೂರ್ಣ ಸ್ವತಂತ್ರ ಕೊಟ್ಟಿದ್ದರಿಂದಲೇ ಹಲವು ವಾದ್ಯಗಳನ್ನಿಲ್ಲಿ ಬಳಸಿಕೊಂಡು ಪ್ರಯೋಗ ಮಾಡಲು ಸಾಧ್ಯವಾಗಿದೆ.
– ಬಾಪು ಪದ್ಮನಾಭ್, ಸಂಗೀತ ನಿರ್ದೇಶಕರು
ಪೈಪೋಟಿಯಲ್ಲಿ ಗೆದ್ದಿರುವ ಖುಷಿ
ಈ ವರ್ಷ ಪ್ರಶಸ್ತಿ ಸ್ಪರ್ಧೆಯಲ್ಲಿ ಕನ್ನಡದ ಅತ್ಯುತ್ತಮ ಚಿತ್ರಗಳೇ ಇದ್ದವು. ಆ ಪೈಕಿ “ರಿಸರ್ವೇಷನ್’ ಚಿತ್ರ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಕನ್ನಡದ ಅದ್ಭುತ ಸಿನಿಮಾಗಳ ನಡುವೆ ಪೈಪೋಟಿ ನಡೆಸಿ ಆವಾರ್ಡ್ ಪಡೆದಿದ್ದು ಸಂತಸವಾಗಿದೆ. ಈ ಚಿತ್ರದಲ್ಲಿ ಸರ್ಕಾರದ ಯೋಜನೆಗಳು ಹೇಗೆಲ್ಲಾ ದುರುಪಯೋಗ ಆಗುತ್ತದೆ ಎಂಬುದರ ಬಗ್ಗೆ ಹೇಳಲಾಗಿದೆ.
– ನಿಖೀಲ್ ಮಂಜು, ನಿರ್ದೇಶಕರು
ಶ್ರಮ ಸಾರ್ಥಕವಾಯಿತು
“ರೈಲ್ವೆ ಚಿಲ್ಡ್ರನ್’ ಸಿನಿಮಾದ ನಟನೆಗೆ ಚಿಕ್ಕಬಳ್ಳಾಪುರದ ಹುಡುಗ ಮನೋಹರ್‌ಗೆ ಬಾಲನಟ ಪ್ರಶಸ್ತಿ ಸಿಕ್ಕಿರುವುದು ನಿಜವಾಗಿಯೂ ಖುಷಿ ಕೊಟ್ಟಿದೆ. ಇದು ಕ್ರೌಡ್ ಫಂಡಿಂಗ್ ಸಿನಿಮಾ. ಮನೆಬಿಟ್ಟ ಮತ್ತು ಅನಾಥ ಹುಡುಗರು ರೈಲ್ವೆ ಫ್ಲಾಟ್‌ಫಾರಂನಲ್ಲಿ ಬದುಕು ನಡೆಸುವ ಕುರಿತ ಕಥೆ ಇದು. ಅವರ ಬದುಕು, ಬವಣೆ ಮೇಲೆ ಮಾಡಿದ ಸಿನಿಮಾ ಇದಾಗಿದ್ದು, ಇಲ್ಲಿ ಡಾನ್‌ಬಾಸ್ಕೋ ಹಾಗೂ ಕೆಲ ಎನ್‌ಜಿಓ ಸಂಸ್ಥೆಗಳಲ್ಲಿ ನಡೆಯುತ್ತಿರುವ ಕೇಸ್‌ಗಳ ಘಟನೆ ಇಟ್ಟುಕೊಂಡು ಮಾಡಿದ್ದೇನೆ. ಇತ್ತೀಚೆಗೆ ಮುಂಬೈ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರೀಮಿಯರ್ ಆಗಿತ್ತು. ಇಷ್ಟರಲ್ಲೇ ಯುರೋಪಿಯನ್ ಫಿಲ್ಮ್ಫೆಸ್ಟಿವಲ್‌ಗೂ ಹೋಗಲಿದೆ. ಅದಾದ ಬಳಿಕ ಚಿತ್ರವನ್ನು ಬಿಡುಗಡೆ ಮಾಡಲಿದ್ದೇನೆ.
– ಪೃಥ್ವಿ ಕೊಣನೂರು ನಿರ್ದೇಶಕರು, “ರೈಲ್ವೆ ಚಿಲ್ಡ್ರನ್’
ಪ್ರಶಸ್ತಿ ನಿರೀಕ್ಷಿಸಿರಲಿಲ್ಲ
ಈವರೆಗೆ ನನಗೆ ಅಕಾಡೆಮಿ ಪ್ರಶಸ್ತಿ ಬಿಟ್ಟರೆ, ಬೇರೆ ಯಾವ ಪ್ರಶಸ್ತಿಯೂ ಸಿಕ್ಕಿರಲಿಲ್ಲ. ಕಳೆದ ನಾಲ್ಕು ದಶಕಗಳಿಂದಲೂ ನಾನು ಮೇಕಪ್ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ನೂರಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ನನ್ನ ಮೇಕಪ್ ಕೆಲಸಕ್ಕೆ ಮೊದಲ ಸಲ ಅವಾರ್ಡ್ ಸಿಕ್ಕಿರುವುದನ್ನು ಸಂಭ್ರಮಿಸುತ್ತೇನೆ. ಇದುವರೆಗೆ ನಾನು ಮಾಡಿದ ಸಿನಿಮಾಗಳಿಗೆ ಅವಾರ್ಡ್‌ಗಳು ಸಿಗುತ್ತಿದ್ದವು. ಚಿತ್ರರಂಗದಲ್ಲಿ ನಾಲ್ಕು ದಶಕ ಕೆಲಸ ಮಾಡಿದ್ದರಿಂದ, ನಾನೂ ಕೂಡ ಪ್ರಶಸ್ತಿಗಳ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಈಗ ನಿವೃತ್ತಿ ಹಂತ ತಲುಪಿದ್ದೇನೆ. ಸಿಕ್ಕ ಸಿನಿಮಾಗಳನ್ನು ಒಪ್ಪಿ ಕೆಲಸ ಮಾಡುತ್ತಿದ್ದೆ. ಆದರೆ, “ಅಲ್ಲಮ’ದಲ್ಲಿ ನಾಗಾಭರಣ ಅವರು ನನಗೆ ಕೆಲಸ ಕೊಟ್ಟರು. ಅದೊಂದು ಐತಿಹಾಸಿಕ ಸಿನಿಮಾ ಆಗಿದ್ದರಿಂದ ನನಗೂ ಚಾಲೆಂಜಿಂಗ್ ಎನಿಸಿತ್ತು. ಎಲ್ಲರ ಸಹಕಾರವಿತ್ತು. ಹಾಗಾಗಿಯೇ, ಚೆನ್ನಾಗಿ ಕೆಲಸ ಮಾಡಿದ್ದೆ. ಈಗ ಪ್ರಶಸ್ತಿ ಸಿಕ್ಕಿದೆ. ಇದಕ್ಕಿಂತ ಖುಷಿ ಮತ್ತೂಂದಿಲ್ಲ.
– ಮೇಕಪ್ ರಾಮಕೃಷ್ಣ
ಮೊದಲ ಸಿನಿಮಾಗೆ ಪ್ರಶಸ್ತಿ ಬಂತು
“ನನಗೆ ನಟನೆ ಗೊತ್ತಿಲ್ಲ. ಆದರೂ “ರೈಲ್ವೇ ಚಿಲ್ಡ್ರನ್’ ಎಂಬ ಚಿತ್ರದಲ್ಲಿ ಮೊದಲ ಸಲ ನಟಿಸಿದ್ದೇನೆ. ನಿರ್ದೇಶಕ ಪೃಥ್ವಿ ಸರ್ ಹೇಳಿದಂಗೆ ಕ್ಯಾಮೆರಾ ಮುಂದೆ ನಿಂತು ನಟನೆ ಮಾಡಿದೆ. ಈಗ ಅವಾರ್ಡ್ ಬಂದಿದೆ ಅಂತ ಗೊತ್ತಾಗಿ ಖುಷಿಯಾಗುತ್ತಿದೆ. ನಮ್ಮದು ರೈತ ಕುಟುಂಬ. ದೊಡ್ಡ ಬಳ್ಳಾಪುರ ಸಮೀಪವಿರುವ ಸಾಸಲು ಬಳಿಯ ತೋಳಲಬಂಡೆ ಎಂಬ ಹಳ್ಳಿಯವನು ನಾನು. ಅಪ್ಪ, ಅಮ್ಮ ಹಸುಗಳನ್ನು ನೋಡಿಕೊಂಡು ಜೀವನ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಒಂಭತ್ತನೆ ತರಗತಿ ಓದುವಾಗ, ಈ ಸಿನಿಮಾದಲ್ಲಿ ನಟಿಸುವ ಅವಕಾಶಬಂತು. ನಿರ್ದೇಶಕರು ಸಾಕಷ್ಟು ಶಾಲೆ ವಿದ್ಯಾರ್ಥಿಗಳನ್ನು ನೋಡಿದ್ದರಂತೆ. ಆದರೆ, ಅವರ ಪಾತ್ರಕ್ಕೆ ಯಾರೂ ಸರಿಹೊಂದದ್ದಿದ್ದರಿಂದ ಕೊನೆಗೆ ನನ್ನನ್ನು ನೋಡಿ ಆಯ್ಕೆ ಮಾಡಿದರು. ಬೆಂಗಳೂರಿನ ಡಾನ್ ಬಾಸ್ಕೋದಲ್ಲಿ ನನಗೆ ವರ್ಕ್‌ಶಾಪ್ ಮಾಡಿಸಿದರು. ಈಗ ಆ ಸಿನಿಮಾದಲ್ಲಿ ನಟಿಸಿದ್ದಕ್ಕೆ ಅವಾರ್ಡ್ ಬಂದಿದೆ. ನಿಜಕ್ಕೂ ಖುಷಿಯಾಗುತ್ತಿದೆ. ಓದಿನ ಜತೆಗೆ ಸಿನಿಮಾವನ್ನೂ ಮುಂದುವರೆಸಿಕೊಂಡು ಹೋಗುತ್ತೇನೆ. ನನಗೆ ಪೊಲೀಸ್ ಆಫೀಸರ್ ಆಗುವ ಆಸೆ ಇದೆ. ಮೊದಲ ಸಿನಿಮಾಗೇ ಪ್ರಶಸ್ತಿ ಬಂದಿದೆ ಅಂತ ಕೇಳಿ ಖುಷಿಯಾಗಿದೆ.
– ಮನೋಹರ, ಬಾಲನಟ ಪ್ರಶಸ್ತಿ ವಿಜೇತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.