

Team Udayavani, Jan 30, 2025, 11:31 AM IST
ಬೆಂಗಳೂರು: ಕಿಚ್ಚ ಸುದೀಪ್ (Kiccha Sudeep) ಬಿಗ್ ಬಾಸ್ ಬಳಿಕ ಸಿಸಿಎಲ್ (Celebrity Cricket League) ಗೆ ಸಜ್ಜಾಗಿದ್ದಾರೆ.
ಸುದೀಪ್ ಈ ಬಾರಿಯೂ ಕರ್ನಾಟಕ ಬುಲ್ಡೋಜರ್ ತಂಡವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ಬುಲ್ಡೋಜರ್ ತಂಡದ ಸದಸ್ಯರು ಅಭ್ಯಾಸ ಆರಂಭಿಸಿದ್ದಾರೆ. ಬುಧವಾರ (ಜ.29ರಂದು) ಈ ವರ್ಷದ ಜೆರ್ಸಿ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಕರ್ನಾಟಕ ಬುಲ್ಡೋಜರ್ ತಂಡದ ಸರ್ವ ಸದಸ್ಯರು ಹಾಗೂ ಮಾಲಕರು ಭಾಗಿಯಾಗಿದ್ದರು.
ಸಿಸಿಎಲ್ ಆರಂಭದ ಅಂಗವಾಗಿ ಕಿಚ್ಚ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಕಿಚ್ಚ ಗರಂ ಆಗಿದ್ದಾರೆ.
ಇತ್ತೀಚೆಗೆ ಸುದೀಪ್ ರಾಜ್ಯ ಸರ್ಕಾರ ಕೊಡಮಾಡುವ ರಾಜ್ಯ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು. ಇದೇ ವಿಚಾರವಾಗಿ ಸಿಸಿಎಲ್ ಪ್ರೆಸ್ ಮೀಟ್‌ನಲ್ಲಿ ಒಬ್ಬರು ಪ್ರಶ್ನೆ ಕೇಳಿದ್ದು, ಕಿಚ್ಚ ಅವರು ಗರಂ ಆಗುವಂತೆ ಮಾಡಿದೆ.
ರಾಜ್ಯ ಪ್ರಶಸ್ತಿಯನ್ನು ಯಾಕೆ ನಿರಾಕರಿಸಿದ್ದೀರಿ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಕಿಚ್ಚ “ಅದು ಅದು ಸಿಸಿಎಲ್ ಕಪ್ ಅಲ್ವಲ್ಲ. ರಾಜ್ಯ ಪ್ರಶಸ್ತಿ ಸಿಸಿಎಲ್ ಕಪ್ ಅಲ್ಲ ಅಂತ ಅಂದೆ ಅಷ್ಟೇ. ಇಲ್ಲಿ ಯಾವುದಾದ್ರು ಸ್ಟೇಟ್ ಅವಾರ್ಡ್ ಇಂಟರ್ ವ್ಯೂ ನಡೆಯುತ್ತಾ ಇದೆಯಾ? ಎಲ್ಲಿ, ಯಾವಾಗ, ಏನು ಮಾತನಾಡಬೇಕು ಅದನ್ನೇ ಮಾತನಾಡಬೇಕು. ಅದರಲ್ಲಿ ಒಂದು ಪತ್ರ ಬರೆದಿದ್ದೀನಿ ಅದನ್ನು ಬೇಕಾದ್ರೆ ಕನ್ನಡದಲ್ಲಿ ತರ್ಜುಮೆ ಮಾಡಿ ಹೇಳ್ತೀನಿ. ನೀವು ಅದನ್ನು ತುಂಬಾ ಚೆನ್ನಾಗಿ ಓದಿ. ಅದರ ಮೇಲೆ ಪ್ರಶ್ನೆನೇ ಬರಬಾರದು. ಅದು ನನ್ನ ವೈಯಕ್ತಿಕ. ಈ ವೇದಿಕೆ ಆದಲ್ಲ. ಈ ಟಾಪಿಕ್ ನಾನು ಎತ್ತಿದ್ನಾ? ಅಧಿಕ ಪ್ರಸಂಗ ಯಾಕೆ? ಅದು ನನ್ನ ವೈಯಕ್ತಿಕ. ಅದನ್ನು ನೀವು ಇಲ್ಲಿ ಕೇಳುವ ಆಗಿಲ್ಲ ಎಂದು ಕಿಚ್ಚ ಹೇಳಿದ್ದಾರೆ.
ಸಿಸಿಎಲ್ 2025ರ ಪಂದ್ಯಗಳು ಫೆಬ್ರವರಿ 8ರಿಂದ ಬೆಂಗಳೂರಿನಿಂದ ಆರಂಭ ಆಗುತ್ತಿದೆ. ಪ್ರತಿ ವೀಕೆಂಡ್‌ನಲ್ಲೂ ಪಂದ್ಯಗಳನ್ನು ನಡೆಯಲಿವೆ.
You seem to have an Ad Blocker on.
To continue reading, please turn it off or whitelist Udayavani.