ಕಿರಿಕ್ ಪಾರ್ಟಿಯ ಆರ್ಯ, ಪಡ್ಡೆಗಳ ರಸಗವಳ: ಸಂಯುಕ್ತ ಕರ್ನಾಟಕ!
Team Udayavani, Sep 15, 2017, 1:44 PM IST
ನೀವೇನಾದರೂ “ಕಿರಿಕ್ ಪಾರ್ಟಿ’ ಸಿನಿಮಾ ನೋಡಿದ್ದರೆ ಖಂಡಿತಾ ನಿಮಗೆ ಈ ಹುಡುಗಿ ಇಷ್ಟವಾಗಿರುತ್ತಾಳೆ. ಚಿತ್ರದ ದ್ವಿತೀಯಾರ್ಧದಲ್ಲಿ ಎಂಟ್ರಿಕೊಡುವ ಈ ಹುಡುಗಿ ಸಖತ್ ಬೋಲ್ಡ್ ಹಾಗೂ ಅಷ್ಟೇ ಜೋಶ್‌ನಿಂದ ನಟಿಸುವ ಮೂಲಕ ಮೊದಲ ಸಿನಿಮಾದಲ್ಲೇ ಮೆಚ್ಚುಗೆ ಪಡೆದಿದ್ದಾರೆ. ಅಷ್ಟಕ್ಕೂ ಯಾರೀವಳೀ ಹುಡುಗಿ ಎಂದರೆ ಸಂಯುಕ್ತಾ ಹೆಗಡೆ ಎನ್ನಬೇಕು. ಕೆಲವರು ಹಾಗೆನೇ. ಮೊದಲ ಸಿನಿಮಾದಲ್ಲೇ ಎಲ್ಲರ ಮೆಚ್ಚುಗೆ ಪಡೆದು ಚಿತ್ರರಂಗದಲ್ಲಿ ಬೇಗನೇ ಕ್ಲಿಕ್ ಆಗುತ್ತಾರೆ. ಸಂಯುಕ್ತಾ ಕೂಡಾ ಇದೇ ಕೆಟಗರಿಗೆ ಸೇರುವ ಹುಡುಗಿ. “ಕಿರಿಕ್ ಪಾರ್ಟಿ’ ಸಿನಿಮಾ ನೋಡಿದವರು ಈಕೆಯ ಅಭಿನಯ ಇಷ್ಟಪಟ್ಟಿದ್ದಾರೆ. ತರೆಲತನ, ಪಟಪಟನೇ ಮಾತನಾಡುತ್ತಲೇ ಭಾವನೆಗಳನ್ನು ಬಿಚ್ಚಿಡುವ ಪರಿ ಎಲ್ಲದರಲ್ಲೂ ಸಂಯುಕ್ತಾ ಹೆಗಡೆ ಫುಲ್ ಮಾರ್ಕ್ಸ್ ಸ್ಕೋರ್ ಮಾಡಿದ್ದಾರೆ. ಹಾಗಂತ ಸಂಯುಕ್ತಾ ಹೆಗಡೆ ಅನುಭವಿ ನಟಿಯೇನಲ್ಲ. ಇದು ಆಕೆಯ ಮೊದಲ ಸಿನಿಮಾ ಎಂಬುದು ನಿಮ್ಮ ಗಮನಕ್ಕಿರಲಿ. ಮೊದಲ ಸಿನಿಮಾದಲ್ಲೇ ಗಮನ ಸೆಳೆಯುವ ಮೂಲಕ ಸಂಯುಕ್ತಾ ಚಿತ್ರರಂಗದಲ್ಲಿ ಗಟ್ಟಿನೆಲೆ ನಿಲ್ಲುವ ವಿಶ್ವಾಸ ಮೂಡಿಸಿದ್ದಾರೆ. ಸದ್ಯ ಸಂಯುಕ್ತಾ ಪಾತ್ರ ನೋಡಿದವರು ಈಕೆಗೆ ಚಿತ್ರರಂಗದಲ್ಲಿ ಒಳ್ಳೆಯ ಭವಿಷ್ಯವಿದೆ ಎನ್ನುತ್ತಿದ್ದಾರೆ.
ಕೈ ಹಿಡಿದ ಅದೃಷ್ಟ
ಕೆಲವರು ಎಷ್ಟೆಷ್ಟೋ ಪ್ರಯತ್ನಪಟ್ಟು ಅವಕಾಶಗಿಟ್ಟಿಸಿದರೂ ಅದರಿಂದ ಯಾವುದೇ ಲಾಭವಾಗುವುದಿಲ್ಲ. ಅವಕಾಶ ಸಿಗುತ್ತದೆಯೇ ಹೊರತು ಸಿಕ್ಕ ಅವಕಾಶವನ್ನು ಬಳಸಿಕೊಂಡು ತಮ್ಮ ಪ್ರತಿಭೆ ತೋರಿಸೋದಿಲ್ಲ. ಆದರೆ, ಸಂಯುಕ್ತಾ ಮಾತ್ರ ಸಿಕ್ಕ ಅವಕಾಶವನ್ನು ಚಿಂದಿ ಉಡಾಯಿಸಿಬಿಟ್ಟಿದ್ದಾರೆಂಬ ಮಾತಿದೆ. ಹಾಗಂತ ಸಂಯುಕ್ತಾ ಅವಕಾಶಕ್ಕಾಗಿ ಯಾರಲ್ಲೂ ಕೈ ಚಾಚಿಲ್ಲ. “ಕಿರಿಕ್ ಪಾರ್ಟಿ’ ಸಿನಿಮಾದ ಅವಕಾಶ ಸಿಕ್ಕಿದ್ದು ಕೂಡಾ ಅಚಾನಕ್ ಆಗಿ ಎಂದರೆ ನೀವು ನಂಬಲೇಬೇಕು. ಹೌದು, ಆಗಷ್ಟೇ “ಕಿರಿಕ್ ಪಾರ್ಟಿ’ ಚಿತ್ರದ ಕಥೆ ಫೈನಲ್ ಆಗಿ ನಾಯಕಿಗಾಗಿ ಹುಡುಕುತ್ತಿದ್ದಾಗ ಚಿತ್ರತಂಡಕ್ಕೆ ಫೋಟೋವೊಂದು ಕಾಣುತ್ತದೆ. ಫೋಟೋ ನೋಡಿದ ಕೂಡಲೇ ಈ ಹುಡುಗಿಯ ಲುಕ್ ತಮ್ಮ ಕಥೆಗೆ ಹೊಂದಿಕೆಯಾಗುತ್ತದೆಂದುಕೊಂಡು ನೇರವಾಗಿ ಕರೆಸಿ ಆಡಿಷನ್ ಕೊಡುತ್ತಾರೆ. ಸಂಯುಕ್ತಾ ಆಡಿಷನ್‌ನಲ್ಲಿ ಹಿಂದೆ ಬೀಳುವುದಿಲ್ಲ. ಮತ್ತೂಮ್ಮೆ ಎಲ್ಲರಿಂದಲೂ ಮೆಚ್ಚುಗೆ ಪಡೆದ ಸಂಯುಕ್ತಾ ನೇರವಾಗಿ “ಕಿರಿಕ್’ ತಂಡ ಸೇರಿಕೊಳ್ಳುತ್ತಾರೆ. “ನನ್ನ ಫೋಟೋ ನೋಡಿ ನನಗೆ ಆಡಿಷನ್‌ಗೆ ಕರೆದರು. ಆಡಿಷನ್ ನಂತರ ನೇರವಾಗಿ ಸೆಲೆಕ್ಟ್ ಆದೆ. ಈ ಸಿನಿಮಾದಲ್ಲಿ ನಾನು ನಟಿಸುತ್ತೇನೆ, ನನಗೆ ಅವಕಾಶ ಸಿಗುತ್ತದೆ. ಇಷ್ಟೊಂದು ಮೆಚ್ಚುಗೆ ಸಿಗುತ್ತದೆ ಎಂದು ನಾನಂದುಕೊಂಡಿರಲಿಲ್ಲ’ ಎಂದು ತಮಗೆ ಸಿಕ್ಕ ಅವಕಾಶದ ಬಗ್ಗೆ ಹೇಳುತ್ತಾರೆ. ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ಇವರ ಪಾತ್ರ ಇಡೀ ಸಿನಿಮಾವನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಪ್ರಮುಖವಾಗಿದೆ. ನಾಯಕನನ್ನು ಲವ್ ಮಾಡುತ್ತಲೇ ಆತನ ಭಾವನೆಗಳಿಗೆ ಸ್ಪಂದಿಸುವ ಪಾತ್ರದಲ್ಲಿ ಸಂಯುಕ್ತಾ ತುಂಬಾ ಚೆನ್ನಾಗಿ ನಟಿಸುವ ಮೂಲಕ ಗಾಂಧಿನಗರದಲ್ಲಿ ಭರವಸೆ ಮೂಡಿಸಿದ್ದಾರೆ.
ಕೆಲವೊಮ್ಮೆ ಒಂದು ಸಣ್ಣ ಮೆಚ್ಚುಗೆ, ಭರವಸೆಗಳು ಅನೇಕರ ಕೈ ಹಿಡಿಯುತ್ತವೆ. ಇವತ್ತು ಚಿತ್ರರಂಗದಲ್ಲಿ ಸ್ಟಾರ್ ಎನಿಸಿಕೊಂಡಿರುವ ಅನೇಕರಿಗೆ ಆರಂಭದಲ್ಲಿ ಸಿಕ್ಕಿದ್ದು ಇಂತಹ ಒಂದು ಮೆಚ್ಚುಗೆಯೇ. ಈಗ ಸಂಯುಕ್ತಾಗೂ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಹಾಗಂತ ಸಂಯುಕ್ತಾ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ.
ತರೆಲಯಾಗಿ ಮೆಚ್ಚುಗೆ
ನೀವು “ಕಿರಿಕ್ ಪಾರ್ಟಿ’ ಸಿನಿಮಾ ನೋಡಿದರೆ ನಿಮಗೆ ಸಂಯುಕ್ತಾ ಮಾಡಿರುವ ಪಾತ್ರದ ಬಗ್ಗೆ ಗೊತ್ತಿರುತ್ತದೆ. ಸಖತ್ ಬೋಲ್ಡ್ ಅಂಡ್ ತರೆಲ ಪಾತ್ರ. ಇತ್ತೀಚಿನ ದಿನಗಳಲ್ಲಿ ಅಷ್ಟೊಂದು ತರೆಲ ಪಾತ್ರ ಬಂದಂತಿರಲಿಲ್ಲ. ಸಖತ್ ಕ್ಯೂಟ್ ಆಗಿ ಪಟಪಟನೇ ಮಾತನಾಡುತ್ತಲೇ ಪ್ರೇಕ್ಷಕರ ಮನಕ್ಕೆ ಲಗ್ಗೆ ಇಡುವ ಪಾತ್ರದಲ್ಲಿ ಸಂಯುಕ್ತಾ ಮಿಂಚಿದ್ದರು. ಗಾಂಧಿನಗರದಲ್ಲಿ ಒಂದು ನಿಯಮವಿದೆ. ಯಾರಾದರೂ ಒಂದು ಪಾತ್ರದಲ್ಲಿ ಮಿಂಚಿದರೆ, ಮುಂದೆ ಅವರಿಗೆ ಅದೇ ಪಾತ್ರವನ್ನು ಆಫರ್ ಮಾಡುವ ನಿರ್ದೇಶಕರ ಸಂಖ್ಯೆ ಹೆಚ್ಚಿರುತ್ತದೆ. ಸಂಯುಕ್ತಾ ವಿಷಯದಲ್ಲೂ ಇದೇ ಆಗಿದೆ. ಸಖತ್ ಬೋಲ್ಡ್ ಪಾತ್ರ ಮೂಲಕ ಗಮನ ಸೆಳೆದ ಸಂಯುಕ್ತಾಗೆ ಈಗ ಮತ್ತೆ ಅಂತಹುದೇ ಪಾತ್ರಗಳು ಹುಡುಕಿಕೊಂಡು ಬರುತ್ತಿವೆಯಂತೆ. ಆದರೆ, ಸಂಯುಕ್ತಾಗೆ ಮತ್ತೆ ಅಂತಹುದೇ ಪಾತ್ರ ಮಾಡಲು ಇಷ್ಟವಿಲ್ಲವಂತೆ. ಮಾಡಿದ ಪಾತ್ರವನ್ನೇ ಮಾಡಿದರೆ ತನ್ನ ಟ್ಯಾಲೆಂಟ್ ತೋರಿಸಲು ಅವಕಾಶವಿಲ್ಲ ಎಂಬುದು ಸಂಯುಕ್ತಾಗೆ ಗೊತ್ತಿದೆ. ಹಾಗಾಗಿ, ಯಾವುದೆ ಆಫರ್‌ಗಳನ್ನು ಒಪ್ಪಿಕೊಂಡಿಲ್ಲ. “ಸದ್ಯ “ಕಿರಿಕ್ ಪಾರ್ಟಿ’ ಹಿಟ್ ಆದ ಖುಷಿಯಲ್ಲಿದ್ದೇನೆ. ಸಿನಿಮಾಕ್ಕೆ ಎಲ್ಲಾ ಕಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನನ್ನ ಪಾತ್ರವನ್ನೂ ಜನ ಇಷ್ಟಪಟ್ಟಿದ್ದಾರೆ. ಇಲ್ಲಿವರೆಗೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ.ನನಗೆ ಸಿನಿಮಾ ಮೇಲೆ ಸಿನಿಮಾ ಮಾಡಬೇಕೆಂಬ ಆಸೆ ಇಲ್ಲ. ನಿಧಾನವಾಗಿಯಾದರೂ ಒಳ್ಳೆಯ ಸಿನಿಮಾ ಮಾಡಿದರೆ ಸಾಕು ಎಂಬ ಆಸೆ ಇದೆ. ಬಂದ ಕಥೆಗಳನ್ನು ಕೇಳುತ್ತಿದ್ದೇನೆ. ಯಾವುದೂ ಇನ್ನೂ ಫೈನಲ್ ಆಗಿಲ್ಲ’ ಎಂಬುದು ಸಂಯುಕ್ತಾ ಮಾತು.
ಇನ್ನು, ಸಂಯುಕ್ತಾಗೆ ಚಿತ್ರರಂಗದಲ್ಲಿ ಯಾರೊಬ್ಬರು ಗಾಡ್‌ಫಾದರ್ ಇಲ್ಲವಂತೆ. ಮೂಲತಃ ಡ್ಯಾನ್ಸರ್ ಆಗಿರುವ ಸಂಯುಕ್ತಾಗೆ ಸದ್ಯ ಗಾಡ್‌ಫಾದರ್ ಅಂದರೆ ಅದು ರಕ್ಷಿತ್ ಶೆಟ್ಟಿ. ಮುಂದೆಯೂ ರಕ್ಷಿತ್ ಶೆಟ್ಟಿಯವರ ಮಾರ್ಗದರ್ಶನದಲ್ಲೇ ಸಿನಿಮಾ ಒಪ್ಪಿಕೊಳ್ಳುವುದಾಗಿ ಹೇಳುತ್ತಾರೆ. ಸಂಯುಕ್ತಾಗೆ ಯಾವ ತರಹದ ಪಾತ್ರ ಇಷ್ಟ ಎಂದು ನೀವು ಕೇಳಬಹುದು. ಬಹುತೇಕ ನಟಿಯರು ಸವಾಲಿನ ಪಾತ್ರಗಳೆಂದರೆ ಇಷ್ಟ ಎನ್ನುತ್ತಾರೆ. ಆದರೆ, ಸಂಯುಕ್ತಾಗೆ ಸವಾಲು ಎನ್ನುವುದಕ್ಕಿಂತ ಜನರಿಗೆ ಬೇಗನೇ ಹತ್ತಿರವಾಗುವ, ಇಷ್ಟವಾಗುವ ಪಾತ್ರಗಳೆಂದರೆ ಇಷ್ಟವಂತೆ. ಅದೇ ಕಾರಣಕ್ಕೆ ಆಕೆ “ಕಿರಿಕ್ ಪಾರ್ಟಿ’ಯನ್ನು ಒಪ್ಪಿಕೊಂಡಿದ್ದಂತೆ. “ನನಗೆ ಜನಕ್ಕೆ ಇಷ್ಟವಾಗುವಂತಹ ಪಾತ್ರ ಮಾಡಬೇಕೆಂಬ ಆಸೆ. ಕೆಲವು ಪಾತ್ರಗಳು ಬೇಗನೇ ಪ್ರೇಕ್ಷಕರ ಗಮನ ಸೆಳೆಯುತ್ತವೆ. “ಕಿರಿಕ್ ಪಾರ್ಟಿ’ಯಲ್ಲಿ ನನ್ನ ಪಾತ್ರ ದ್ವಿತೀಯಾರ್ಧದಲ್ಲಿ ಬಂದರೂ ಜನ ಅದನ್ನು ಇಷ್ಟಪಟ್ಟರು. ನನಗೆ ಆ ತರಹದ ಪಾತ್ರಗಳು ಇಷ್ಟ. ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು, ಕೈ ತುಂಬಾ ಸಿನಿಮಾ ಇರಬೇಕೆಂಬ ಆಸೆ ನನಗಿಲ್ಲ’ ಎಂದು ನೇರವಾಗಿ ಹೇಳುತ್ತಾರೆ ಸಂಯುಕ್ತಾ. ಸಿನಿಮಾದಲ್ಲಿ ಎಷ್ಟೇ ಬಿಝಿಯಾದರೂ ತನ್ನ ಡ್ಯಾನ್ಸ್ ಮುಂದುವರಿಸುತ್ತೇನೆ ಎನ್ನಲು ಸಂಯುಕ್ತಾ ಮರೆಯುವುದಿಲ್ಲ.
ಬರಹ: ರವಿ ರೈ; ಚಿತ್ರಗಳು: ಮನು ಮತ್ತು ಸಂಗ್ರಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.