“ದೇಹಿ”ಯಲ್ಲಿ ಕಿಶೋರ್
Team Udayavani, Jan 17, 2019, 11:00 AM IST
ಭಾರತದ ಅತ್ಯಂತ ಪ್ರಾಚೀನ ಸಮರ ಕಲೆಗಳಲ್ಲಿ ಕಳರಿಪಯಟ್ಟು ಕೂಡ ಒಂದು. ದಕ್ಷಿಣ ಭಾರತದ ಕರಾವಳಿ ತೀರದಲ್ಲಿ, ಅದರಲ್ಲೂ ಕೇರಳದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ಸಮರಕಲೆಯ ವಿಶೇಷತೆಗಳನ್ನು ತಿಳಿಸುವ ಚಿತ್ರವೊಂದು ತಯಾರಾಗುತ್ತಿದೆ. ಚಿತ್ರಕ್ಕೆ ‘ದೇಹಿ’ ಎಂದು ಹೆಸರಿಡಲಾಗಿದ್ದು, ಕಳರಿಪಯಟ್ಟು ಸಮರ ಕಲೆಯನ್ನು ಉಳಿಸಿ, ಬೆಳೆಸಲು ಶ್ರಮಿಸುತ್ತಿರುವ ಕಳರಿ ಗುರುಕುಲಂ ತರಬೇತಿ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಿದೆ.
ನಟ ಕಿಶೋರ್ ಈ ಚಿತ್ರದಲ್ಲಿ ಕಳರಿಪಯಟ್ಟು ಸಮರ ಕಲೆಯನ್ನು ಕಲಿಸುವ ಗುರುವಿನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಉಳಿದಂತೆ ಕಳರಿ ಗುರುಕುಲಂ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇಂಥದ್ದೊಂದು ಪ್ರಾಚೀನ ಸಮರ ಕಲೆಯನ್ನು ಚಿತ್ರವಾಗಿ ತೆರೆಮೇಲೆ ತರುತ್ತಿರುವುದರ ಬಗ್ಗೆ ಮಾತನಾಡುವ ‘ಕಳರಿ ಗುರುಕುಲಂ’ನ ಮುಖ್ಯಸ್ಥ ರಂಜನ್ ಮುಲ್ಲರತ್, ‘ಕಳರಿಪಯಟ್ಟು ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಕಲೆ. ಈಗ ಈ ಕಲೆಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ, ಮನ್ನಣೆ ಸಿಗುತ್ತಿದೆ.
ಇದನ್ನು ಇನ್ನಷ್ಟು ಜನರಿಗೆ ತಿಳಿಸಿ, ಅದರತ್ತ ಆಸಕ್ತರಾಗುವಂತೆ ಮಾಡುವ ಸದುದ್ದೇಶದಿಂದ ಕಳರಿಪಯಟ್ಟು ಕಲೆಯನ್ನು ಆಧರಿಸಿ ಸಿನಿಮಾ ಮಾಡುವ ಯೋಚನೆ ಬಂತು. ಆಗ ನಮ್ಮ ‘ಕಳರಿ ಗುರುಕುಲಂ’ಗೆ ವಿದ್ಯಾರ್ಥಿಯಾಗಿ ಬರುತ್ತಿದ್ದ ನಟ ಕಿಶೋರ್ ಅವರಿಗೂ ನಮ್ಮ ಯೋಚನೆಯನ್ನು ಹೇಳಿದೆವು. ಅವರು ಕೂಡ ಇದನ್ನು ಸಿನಿಮಾ ಮಾಡಲು ಖುಷಿಯಿಂದ ಒಪ್ಪಿಕೊಂಡರು. ಈಗ ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಮುಂಬರುವ ಏಪ್ರಿಲ್ ವೇಳೆಗೆ ‘ದೇಹಿ’ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆ ಇದೆ’ ಎನ್ನುತ್ತಾರೆ.
ಇನ್ನು ಕಳರಿ ಪಯಟ್ಟು ಸಮರ ಕಲೆಯ ವಿಶೇಷತೆಗಳ ಬಗ್ಗೆ ಮಾತನಾಡುವ ರಂಜನ್, ‘ಮನಸ್ಸು ಹಾಗೂ ದೇಹದ ನಡುವೆ ಸಮತೋಲನ ಸಾಧಿಸಲು ಕಳರಿಪಯಟ್ಟು ಉತ್ತಮ ವಿದ್ಯೆ. ಸತತ ಅಭ್ಯಾಸದಿಂದ ವ್ಯಕ್ತಿಯ ಜೀವನದಲ್ಲಿ ಶಿಸ್ತು ಮೂಡಿಸುತ್ತದೆ. ಮನಸ್ಸನ್ನು ಹದಗೊಳಿಸಿ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ಇದೇ ಕಾರಣದಿಂದ ಹಲವರು ಕಳರಿಪಯಟ್ಟು ಕಲಿಯಲು ಗುರುಕುಲಂಗೆ ಬರುತ್ತಿದ್ದಾರೆ ಎನ್ನುವರು. ಜಿಮ್‌ಗೆ ಹೋಗುವುದರಿಂದ ದೇಹವನ್ನು ಮಾತ್ರ ಹುರಿಗೊಳಿಸಬಹುದು. ದೇಹ ಮತ್ತು ಮನಸ್ಸಿನ ನಡುವಿನ ಸಮತೋಲನ ಸಾಧ್ಯವಿಲ್ಲ.
ಕಳರಿ ಅಥವಾ ಯೋಗದಿಂದ ದೇಹ ಮತ್ತು ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಕಳರಿಪಯಟ್ಟು ಕಲಿಯುವುದರಿಂದ ಅನಿವಾರ್ಯ ಸಂದರ್ಭಗಳಲ್ಲಿ ಆತ್ಮರಕ್ಷಣೆಗೆ ಸಹಾಯಕವಾಗುವುದು. ಈ ಸಮರ ಕಲೆಯನ್ನು ಕೇವಲ ವ್ಯಾಯಾಮವಾಗಿ ನೋಡಬಾರದು’ ಎನ್ನುತ್ತಾರೆ.
ಈ ಬಗ್ಗೆ ಮಾತನಾಡುವ ನಟ ಕಿಶೋರ್ ‘ಕತ್ತಿ ಝಳಪಿಸುತ್ತಾ ಅತ್ತಿತ್ತ ಜಿಗಿದು, ಮೇಲಕ್ಕೆ ನೆಗೆದು ಪ್ರದರ್ಶಿಸುವ ಸಮರ ಕಲೆ ಕಳರಿಪಯಟ್ಟು ನೋಡುವಾಗ ಎಂಥವರಿಗೂ ಮೈ ಜುಮ್ ಎನಿಸುತ್ತದೆ. ಕತ್ತಿ ಮತ್ತು ಗುರಾಣಿ ಹಿಡಿದು ಸಾಂಪ್ರದಾಯಿಕ ರೀತಿಯ ಕಾದಾಟದ ಮಾನಸಿಕವಾಗಿ, ದೈಹಿಕವಾಗಿ ಸದೃಢರನ್ನಾಗಿಸುತ್ತದೆ. ಇಂಥದ್ದೊಂದು ಅಪರೂಪದ ಕಲೆ ಸಿನಿಮಾವಾಗುತ್ತಿರುವುದು ಖುಷಿಯ ವಿಚಾರ. ರಂಜನ್ ಮುಲ್ಲರತ್, ಸುಮಾರು 20 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕಳರಿ ಅಕಾಡೆಮಿ ಆರಂಭಿಸಿದ್ದರು. ಅದು ಈಗ ‘ಕಳರಿ ಗುರುಕುಲಂ’ ಹೆಸರಿನಲ್ಲಿ ಪ್ರಸಿದ್ಧಿ ಪಡೆದಿದೆ. ಈ ಗುರುಕುಲದಲ್ಲಿ 200 ಕ್ಕೂ ಹೆಚ್ಚು ಮಂದಿ ಕಳರಿಪಯಟ್ಟು ಕಲಿಯುತ್ತಿದ್ದಾರೆ’ ಎನ್ನುತ್ತಾರೆ.
ಇನ್ನು ಕಳರಿಪಯಟ್ಟು ಸಮರಕಲೆ ಆಧರಿತ ‘ದೇಹಿ’ ಚಿತ್ರವನ್ನು ಹಂಪಿ, ಬೇಲೂರು, ಬೆಂಗಳೂರು ಸುತ್ತಮುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಆನಂದ್ ಸುಂದರೇಶ್ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ನೋಬಿನ್ ಪೌಲ್ ಸಂಗೀತ ಸಂಯೋಜನೆ ಇದೆ. ಜಯಮೋಹನ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.