ಎಲ್ಲವನ್ನು ಕೋರ್ಟ್‌ನಲ್ಲಿ ಹೇಳುತ್ತೇನೆ
Team Udayavani, Oct 22, 2018, 11:51 AM IST
ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಶುರುವಾಗಿರುವ ಮಿಟೂ ಅಭಿಯಾನ ದೊಡ್ಡ ಸಂಚಲನಕ್ಕೆ ಕಾರಣವಾಗಿರುವುದು ಗೊತ್ತೇ ಇದೆ. ಮೊನ್ನೆಯಷ್ಟೇ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮಿಟೂ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್, “ನನಗೆ ಯಾವುದೇ ಪಬ್ಲಿಸಿಟಿಯ ಅಗತ್ಯವಿಲ್ಲ. ಪಬ್ಲಿಸಿಟಿಗಾಗಿ ನಾನು ಈ ಆರೋಪ ಮಾಡಿಲ್ಲ. ಅವರು ಏನೆಲ್ಲಾ ಮಾಡಿದ್ದರು ಎಂಬ ಬಗ್ಗೆ ಹೇಳಿದ್ದಾಗಿದೆ.
ನಾನೂ ಕಾನೂನು ಮೂಲಕ ಹೋರಾಡುತ್ತೇನೆ. ಅದಕ್ಕೆ ಬೇಕಾದ ಸಾಕ್ಷ್ಯಗಳನ್ನು ಆಲ್ಲೇ ಒದಗಿಸುತ್ತೇನೆ…’ ಹೀಗೆ ಹೇಳುವ ಮೂಲಕ ಪುನಃ, ಅರ್ಜುನ್ ಸರ್ಜಾ ಅವರ ಮೇಲಿನ ಆರೋಪವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಮಾಧ್ಯಮ ಮುಂದೆ ಶ್ರುತಿಹರಿಹರನ್ ಹೇಳಿದ್ದಿಷ್ಟು.
ಎಲ್ಲವನ್ನು ಕೋರ್ಟ್‌ನಲ್ಲೇ ಹೇಳ್ತೀನಿ: ಈ ಹಿಂದೆಯೂ ನಾನು “ಕಾಸ್ಟಿಂಗ್ ಕೌಚ್’ ವಿರುದ್ಧ ಮಾತನಾಡಿದ್ದೆ. ಈಗ ಅರ್ಜುನ್ ಸರ್ಜಾ ಅವರ ಹೆಸರನ್ನು ಮಾತ್ರ ಹೇಳಿದ್ದೇಕೆ ಎಂಬ ಪ್ರಶ್ನೆಗೆ, ನಾನು ಕೋರ್ಟ್‌ನಲ್ಲೇ ವಿವರಿಸುತ್ತೇನೆ. ಎಲ್ಲರೂ ಒಂದೂವರೆ ವರ್ಷದ ಹಿಂದಿನ ಘಟನೆ ಬಗ್ಗೆ ಈಗ ಹೇಳುವ ಅಗತ್ಯವೇನಿತ್ತು, ಅಂದೇ ಹೇಳಬಹುದಿತ್ತಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಆ ಸಮಯದಲ್ಲಿ ನಾನು ರಿಹರ್ಸಲ್‌ಗೆ ಬರುವುದಿಲ್ಲ.
ನೇರವಾಗಿ ಸೆಟ್‌ಗೆ ಬರುತ್ತೇನೆ ಎಂದು ನಿರ್ದೇಶಕರಿಗೆ ಹೇಳಿದ್ದೆ. ಆ ನಂತರವೂ ನಾನು ಕೆಲಸ ಮುಗಿಸಿ, ಸೀದಾ ಕ್ಯಾರವಾನ್‌ಗೆ ಹೋಗುತ್ತಿದ್ದೆ. ಅಷ್ಟಾದರೂ ಅವರು ಡಿನ್ನರ್‌ಗೆ ಬರಬಹುದಲ್ವಾ? ಅಂತ ಹೇಳಿದಾಗಲೂ ನಾನು “ನೋ’ ಎಂದು ಹೇಳಿದ್ದೂ ಇದೆ. ಅವರು ಪದೇ ಪದೇ ಕರೆಯುತ್ತಿದ್ದರು. ಅವರ ಉದ್ದೇಶ ಸರಿಯಿರಲಿಲ್ಲ. ಅಂದೇ ನಾನು ಮಾಧ್ಯಮ ಮುಂದೆ ಬರಬಹುದಿತ್ತು. ಆರೋಪ ಮಾಡಬಹುದಿತ್ತು. ಆಗ, ನನಗೆ ಆ ಧೈರ್ಯ ಇರಲಿಲ್ಲ. ಈಗ ಮಿಟೂ ಅಭಿಯಾನದಿಂದ ಸ್ವಲ್ಪ ಧೈರ್ಯ ಬಂದಿದೆ.
ಕೆಟ್ಟದಾಗಿ ಮೆಸೇಜ್ ಮಾಡಿಲ್ಲ: ನಾನು ಸುದೀಪ್, ದರ್ಶನ್ ಸೇರಿದಂತೆ ಹಲವು ನಟರ ಜೊತೆ ಕೆಲಸ ಮಾಡಿದ್ದೇನೆ. ಯಾವತ್ತಿಗೂ ಆ ನಟರುಗಳು ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡಿಲ್ಲ. ನಾನಿಲ್ಲಿ ಅರ್ಜುನ್ ಸರ್ಜಾ ಅವರನ್ನೇ ಟಾರ್ಗೆಟ್ ಮಾಡಿದ್ದೀನಿ ಅಂತೆಲ್ಲಾ ಮಾತುಗಳು ಕೇಳಿಬರುತ್ತಿವೆ. ಅದು ಅವರು ಮಾಡಿರುವ ತಪ್ಪು ತುಂಬಾ ಮುಖ್ಯವಾದದ್ದು.
ನಾನು ಯಾಕೆ ಅವರ ಹೆಸರನ್ನು ಹೇಳುತ್ತಿದ್ದೇನೆ ಅಂತ ಪ್ರಶ್ನಿಸಬೇಡಿ. ನನ ಬಳಿ ಅದಕ್ಕೆಲ್ಲಾ ಸಾಕ್ಷಿ ಇದೆ. ಸಮಯ ಬಂದಾಗ ತೋರಿಸುತ್ತೇನೆ. ಇನ್ನು, ಅವರು ಮೂರು ಫಾರ್ವರ್ಡ್ ಮೆಸೇಜ್ ಕಳುಹಿಸಿದ್ದರು. ಅದು ಅವರ ಚಿತ್ರದ ಟ್ರೇಲರ್ ಅಷ್ಟೇ. ಅದು ಬಿಟ್ಟರೆ, ಬಾಯಿ ಮಾತಲ್ಲಿ ಡಿನ್ನರ್ ಹಾಗು ರೆಸಾರ್ಟ್‌ಗೆ ಕರೆದಿದ್ದು ನಿಜ. ಅದು ಬಿಟ್ಟರೆ, ಬೇರೇನು ಮೆಸೇಜ್ ಮಾಡಿಲ್ಲ.
ಫ್ಯಾನ್ಸ್‌ನಿಂದ ಬೆದರಿಕೆ ಕಾಲ್ ಬರುತ್ತಿವೆ: ನನಗೀಗ ಈ ಆರೋಪ ಮಾಡಿದ ಬಳಿಕ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿವೆ. ಟ್ರೂಕಾಲ್‌ನಲ್ಲಿ ನೋಡಿದಾಗ, ಅದು ಸರ್ಜಾ ಫ್ಯಾನ್ಸ್ ಹೆಸರುಗಳನ್ನು ತೋರಿಸುತ್ತಿದೆ. ಅರ್ಜುನ್ ಸರ್ಜಾ ಅವರ ಬಗ್ಗೆ ಮಾಡಿದ ಆರೋಪಕ್ಕೆ ಹಿರಿಯ ನಟರಾದ ರಾಜೇಶ್ ಅವರು ನನ್ನ ಬಗ್ಗೆ ಕೇವಲವಾಗಿ ಮಾತಾಡಿದರು. ಧ್ರುವಸರ್ಜಾ ಹಾಗೆಲ್ಲಾ ಮಾತನಾಡಬಾರದಿತ್ತು. ನಾನು ಹಾಕುವ ಬಟ್ಟೆ-ಬರೆ, ಮಾಡುವ ಸೀನ್‌ಗಳು ಹೇಗೇ ಇರಬಹುದು. ಆದರೆ, ನನ್ನ ವೈಯಕ್ತಿಕ ವಿಷಯಕ್ಕೆ ಬಂದರೆ, ಯಾರನ್ನೂ ಹತ್ತಿರ ಸೇರಿಸುವುದಿಲ್ಲ.
ಸಿನಿಮಾ ಮಾಡ್ತಾನೆ ಇರ್ತೀನಿ: ಅರ್ಜುನ್ ಸರ್ಜಾ ಅವರ ವರ್ತನೆಯ ವಿರುದ್ಧ ನಾನು ಧ್ವನಿ ಎತ್ತಿದ್ದರಿಂದ ಮುಂದೆ ನನಗೆ ಕನ್ನಡ ಸಿನಿಮಾದಿಂದ ಅವಕಾಶ ಸಿಗಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ನಾನು ಅದನ್ನು ಒಪ್ಪುವುದಿಲ್ಲ. ನನಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ, ವರ್ಷ ವರ್ಷ ನಾನು ಸಿನಿಮಾ ಮಾಡ್ತಾನೆ ಇರ್ತೀನಿ. ನನಗೆ ಆ ಭಯವಿಲ್ಲ.
ಕ್ಷಮೆ ಕೇಳಿದರೂ ಇಲ್ಲಿಗೆ ನಿಲ್ಲಲ್ಲ: ಅರ್ಜುನ್ ಸರ್ಜಾ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಿದರೂ ಈ ವಿಚಾರ ಇಲ್ಲಿಗೆ ನಿಲ್ಲೋದಿಲ್ಲ. ಬೇರೆ ಯಾವ ಹೆಣ್ಣುಮಕ್ಕಳಿಗೂ ಈ ತರಹ ಆಗಬಾರದು. ಅರ್ಜುನ್ ಸರ್ಜಾ ಅವರ ವರ್ತನೆ ವಿರುದ್ಧ ಇನ್ನೂ ನಾಲ್ಕು ಮಂದಿ ಮುಂದೆ ಬಂದಿದ್ದಾರೆ. ಇದಕ್ಕೆ ಏನು ಹೇಳಬೇಕು?
ಕಿರುಕುಳಕ್ಕೊಳಗಾದವರ ಪರ ಫೈರ್: ಚಿತ್ರರಂಗದ ಯಾವುದೇ ವಿಭಾಗದಲ್ಲಿ ಕೆಲಸ ಮಾಡುವ ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸಿದ್ದರೆ, ಅಂತಹವರ ಪರವಾಗಿ ಧ್ವನಿ ಎತ್ತಲು “ಫೈರ್’ (ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ) ಹೆಸರಿನ ಸಂಘಟನೆ ಆರಂಭವಾಗಿರುವುದು ಗೊತ್ತೇ ಇದೆ. ಇದು ಕೇವಲ ಚಿತ್ರರಂಗ ಮಾತ್ರವಲ್ಲ, ಯಾವುದೇ ಕ್ಷೇತ್ರದ ಮಹಿಳೆಯರಿಗೆ ಅನ್ಯಾಯವಾದರೂ ಈ ಫೈರ್ ಧ್ವನಿ ಎತ್ತಲಿದೆ. ಮಿಟೂ ಅಭಿಯಾನಕ್ಕೂ ಮುನ್ನವೇ ಹುಟ್ಟಿಕೊಂಡ ಸಂಸ್ಥೆ ಇದು.
ಈ ಕುರಿತು ವಿವರ ನೀಡುವ ಫೈರ್‌ನ ಸೂತ್ರದಾರ ನಟ ಚೇತನ್, “ಒಂದಷ್ಟು ಸಮಾನ ಮನಸ್ಕರು ಸೇರಿ “ಫೈರ್’ “ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ’ ಸಂಘಟನೆ ಹುಟ್ಟು ಹಾಕಿದ್ದೇವೆ. ಇದರೊಂದಿಗೆ ಇಂಟರ್ನಲ್ ಕಂಪ್ಲೆಂಟ್ಸ್ ಕಮಿಟಿ (ಐಸಿಸಿ) ಆರಂಭಿಸಿದ್ದು, ಈ ಸಮಿತಿಗೆ ಅಧ್ಯಕ್ಷರಾಗಿ ಕವಿತಾ ಲಂಕೇಶ್ ಇದ್ದಾರೆ. ರೇಖಾರಾಣಿ, ರೂಪಾ ಅಯ್ಯರ್, ಡಾ. ವಿಜಯಮ್ಮ, ಪಂಚಮಿ, ಶ್ರುತಿಹರಿಹರನ್, ಮಾರುತಿ ಜೇಡಿಯವರ್ ಸೇರಿದಂತೆ ಅನೇಕರು ಕೈ ಜೋಡಿಸಿದ್ದಾರೆ. ಇದು ಕೇವಲ ಚಿತ್ರರಂಗಕ್ಕೆ ಸೀಮಿತವಾಗಿಲ್ಲ.
ಮಹಿಳೆಯರಷ್ಟೇ ಅಲ್ಲ, ಪುರುಷರು ಇಲ್ಲಿ ದೂರು ಸಲ್ಲಿಸಬಹುದು. ಈ ಹಿಂದೆ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ವಿಷಯ ಎದ್ದಾಗ, ಯಾರೂ ಧ್ವನಿ ಎತ್ತಲಿಲ್ಲ. ಆಗ ಈ ಖಾಯಿಲೆ ವಾಸಿ ಮಾಡೋಕೆ ಒಂದು ದಾರಿ ಕಂಡುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಶುರುವಾದ ಈ ಸಂಸ್ಥೆ, ಈಗ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಲು ಹೊರಟಿದೆ. ಇದರ ಮುಖ್ಯ ಉದ್ದೇಶ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಕ್ಕೆ ಪರಿಹಾರ ಕೊಡಿಸುವುದು, ಇಲ್ಲಿ ಎಲ್ಲವೂ ಗೌಪ್ಯವಾಗಿಡುವುದು ಮತ್ತೂಂದು ಉದ್ದೇಶ.
ನಮ್ಮ ಈ ಐಸಿಸಿಗೆ ದೂರು ಬಂದರೆ, ಅದರ ವಿಚಾರಣೆಗೆ ಒಂದಷ್ಟು ಸಮಯ ಬೇಕಾಗುತ್ತದೆ. ಅಷ್ಟರೊಳಗಾಗಿ ತನಿಖೆ ನಡೆಸಿ, ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ಯೋಜನೆ ಸಂಸ್ಥೆಯದ್ದು. ಇನ್ನು, ಯಾರೇ ಆರೋಪ ಮಾಡಿದರೂ ಇಲ್ಲಿ ಲಿಖೀತ ರೂಪದಲ್ಲಿ ದೂರು ಕೊಡಬೇಕು. ಆ ನಂತರ ತನಿಖೆ ನಡೆಸಲಾಗುತ್ತದೆ. ಈಗಾಗಲೇ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಪರವಾಗಿಯೂ ಸಂಸ್ಥೆ ಕೆಲಸ ಮಾಡುತ್ತಿದೆ.
ಬರಹಗಾರರ ಭದ್ರತೆಗೂ ಹಲವು ರೂಪುರೇಷೆ ನಡೆಸಿದೆ. ಸದ್ಯಕ್ಕೆ ಚಲನಚಿತ್ರ ಮಂಡಳಿಗೆ ಹೋಗಿ, ಲೈಂಗಿಕ ಕಿರುಕುಳ ದೂರು ಬಂದಲ್ಲಿ, ನಮ್ಮ ಸಂಸ್ಥೆಗೆ ವರ್ಗಾಯಿಸಿ, ನಾವು ಅದನ್ನು ಕಾನೂನಾತ್ಮಕವಾಗಿ ಸೂಕ್ಷ್ಮತೆಯಿಂದ ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಹೇಳಿದ್ದೇವೆ. ಮುಂದಿನ ದಿನಗಳಲ್ಲಿ ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ ಹಾಗೂ ಕಲಾವಿದರ ಸಂಘಕ್ಕೂ ಮನವಿ ಮಾಡುತ್ತೇವೆ. ಇಲ್ಲಿ ಸಿನಿಮಾ ರಂಗದಲ್ಲಿರುವ ಯಾವುದೇ ವಿಭಾಗದವರಿದ್ದರೂ, ಸದಸ್ಯರಾಗಬಹುದು’ ಎನ್ನುತ್ತಾರೆ ಚೇತನ್.
ಕ್ಷಮೆ ಕೇಳುವುದು ದೊಡ್ಡತನ – ಪ್ರಕಾಶ್ ರೈ: ಅರ್ಜುನ್ ಸರ್ಜಾ ವಿರುದ್ಧ ಮಿಟೂ ಆರೋಪ ಮಾಡಿರುವ ಶ್ರುತಿ ಹರಿಹರನ್ ಬಹುಭಾಷಾ ನಟ ಪ್ರಕಾಶ್ ರೈ ಬೆಂಬಲ ಸೂಚಿಸಿದ್ದಾರೆ. “ಅರ್ಜುನ್ ಸರ್ಜಾ ಅವರು ಶ್ರುತಿ ಆರೋಪವನ್ನು ಅಲ್ಲಗಳೆದರೂ, ಅಂದಿನ ಅವರ ವರ್ತನೆಯಿಂದ ಆಕೆಯಲ್ಲಿ ಉಂಟಾದ ನೋವಿಗೆ ಅವರು ಕ್ಷಮೆ ಕೇಳುವುದು ದೊಡ್ಡತನ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.