ಸಿನಿಮಾದ ಹಲವು ಮಜಲು ಮತ್ತು ಕಾರ್ನಾಡ್ ಹೆಜ್ಜೆಗುರುತು
Team Udayavani, Jun 11, 2019, 3:01 AM IST
ಕೆಲವು ನಿರ್ದೇಶಕರು ಹೆಚ್ಚು ಸಿನಿಮಾ ಮಾಡಿರುವುದಿಲ್ಲ. ಆದರೆ, ಅವರು ಮಾಡಿದ ಅಷ್ಟೂ ಸಿನಿಮಾಗಳು ಚಿತ್ರರಂಗ ಇರುವಷ್ಟು ದಿನ ನೆನೆಯುವಂತಿರುತ್ತದೆ ಮತ್ತು ಚಿತ್ರರಂಗಕ್ಕೊಂದು ಹೆಮ್ಮೆಯ ಗರಿಯಾಗಿರುತ್ತವೆ. ಆ ಸಾಲಿಗೆ ಸೇರುವ ನಿರ್ದೇಶಕ ಎಂದರೆ ಅದು ಗಿರೀಶ್ ಕಾರ್ನಾಡ್. ಗಿರೀಶ್ ಕಾರ್ನಾಡ್ ಅವರಿಗೆ ಭಾರತೀಯ ಚಿತ್ರರಂಗದಲ್ಲೇ ಒಂದು ವಿಶೇಷವಾದ ಸ್ಥಾನವಿದೆ.
ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ಅವರ ಸ್ಥಾನ ಮಹತ್ತರವಾದುದು. ಗಿರೀಶ್ ಕಾರ್ನಾಡ್ ಅವರನ್ನು ಕೇವಲ ಒಬ್ಬ ನಿರ್ದೇಶಕನಾಗಿ ಕಟ್ಟಿಕೊಡುವುದು ಕಷ್ಟ. ಏಕೆಂದರೆ ಅವರದು ಬಹುಮುಖ ಪ್ರತಿಭೆ. ಕನ್ನಡ ಚಿತ್ರರಂಗದ ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡವರು ಗಿರೀಶ್ ಕಾರ್ನಾಡ್. ನಿರ್ದೇಶನ, ಚಿತ್ರಕಥೆ, ನಟನೆ … ಹೀಗೆ ಹಲವು ವಿಭಾಗಗಳಲ್ಲಿ ತಮ್ಮ ಛಾಪು ಮೂಡಿಸಿದ್ದರು ಕಾರ್ನಾಡ್.
ಗಿರೀಶ್ ಕಾರ್ನಾಡ್ ಕನ್ನಡದಲ್ಲಿ ನಿರ್ದೇಶಿಸಿದ್ದು, ಕೇವಲ ಐದೇ ಐದು ಸಿನಿಮಾ. ಆದರೆ, ಆ ಐದು ಸಿನಿಮಾಗಳು ತಮ್ಮ ಕಥಾಹಂದರ ಹಾಗೂ ಸಮಾಜದ ಮೇಲೆ ಬೀರಿದ ಪರಿಣಾಮಗಳ ಮೂಲಕ ಆ ಸಿನಿಮಾಗಳು ಇಂದಿಗೂ ಪ್ರಸ್ತುತವಾಗಿವೆ. “ಸಂಸ್ಕಾರ’ ಸಿನಿಮಾಕ್ಕೆ ಚಿತ್ರಕಥೆಗಾರನಾಗಿ ಯಶಸ್ವಿ ಎನಿಸಿಕೊಂಡ, ಕಾರ್ನಾಡ್ ಮೊದಲ ಬಾರಿಗೆ ನಿರ್ದೇಶಕರಾಗಿ ಪರಿಚಯವಾಗಿದ್ದು, “ವಂಶವೃಕ್ಷ’ ಚಿತ್ರದ ಮೂಲಕ. ಎಸ್.ಎಲ್.ಭೈರಪ್ಪನವರ ಕಾದಂಬರಿಯನ್ನಾಧರಿಸಿ ಮಾಡಿದ ಈ ಸಿನಿಮಾದ ನಿರ್ದೇಶನದಲ್ಲಿ ಕಾರ್ನಾಡ್ ಜೊತೆ ಬಿ.ವಿ.ಕಾರಂತ್ ಕೂಡಾ ಕೈ ಜೋಡಿಸಿದ್ದರು.
ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವ ಜೊತೆಗೆ ನಿರ್ದೇಶನ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಗೂ ಭಾಜನವಾಯಿತು. ಈ ಮೂಲಕ ಮೊದಲ ನಿರ್ದೇಶನದಲ್ಲೇ ಗಿರೀಶ್ ಕಾರ್ನಾಡ್ ಸೈ ಎನಿಸಿಕೊಂಡರು. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಇದು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಮೊದಲ ಸಿನಿಮಾ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದರು.
ಆ ನಂತರ “ಕಾಡು’, ನಾಸಿರುದ್ದೀನ್ ಶಾ ನಟನೆಯ “ತಬ್ಬಲಿಯು ನೀನಾದೆ ಮಗನೇ’, ಶಂಕರ್‌ನಾಗ್ ನಟನೆಯ ಮೊದಲ ಚಿತ್ರ “ಒಂದಾನೊಂದು ಕಾಲದಲ್ಲಿ ‘,”ಕಾನೂರ ಹೆಗ್ಗಡತಿ’ ಸಿನಿಮಾಗಳನ್ನು ನಿರ್ದೇಶಿಸಿದ ಕಾರ್ನಾಡ್, ಪ್ರತಿ ಸಿನಿಮಾದಲ್ಲಿ ಹೊಸ ವಿಷಯಗಳನ್ನು ಆಯ್ಕೆ ಮಾಡುತ್ತಾ ಹೋದರು. “ಕಾನೂರ ಹೆಗ್ಗಡತಿ’ ಚಿತ್ರದ ನಂತರ ಕಾರ್ನಾಡ್ ಅವರು ಸಿನಿಮಾ ನಿರ್ದೇಶನದಿಂದ ದೂರವೇ ಉಳಿದರು. ಸಾಹಿತ್ಯ, ರಂಗಭೂಮಿ ಕಡೆಗೆ ಹೆಚ್ಚು ತೊಡಗಿಕೊಂಡರು.
ನಿರ್ದೇಶನದ ಸಿನಿಮಾಗಳಿಗೆ ಪ್ರಶಸ್ತಿ ಗರಿ: ಕಾರ್ನಾಡ್ ನಿರ್ದೇಶಿಸಿದ ಪ್ರತಿಯೊಂದು ಚಿತ್ರಗಳು ಕೂಡಾ ಒಂದಲ್ಲ, ಒಂದು ಪ್ರಶಸ್ತಿಗೆ ಭಾಜನವಾಗುವ ಮೂಲಕ ಚಿತ್ರದ ಸತ್ವವನ್ನು ಸಾಬೀತುಪಡಿಸುತ್ತಿದ್ದವು. ಮೊದಲ ನಿರ್ದೇಶನದ “ವಂಶವೃಕ್ಷ’ ಚಿತ್ರಕ್ಕೆ ಅತ್ಯುತ್ತಮ ಚಿತ್ರದ ಜೊತೆಗೆ ನಿರ್ದೇಶನ ವಿಭಾಗದಲ್ಲೂ ರಾಷ್ಟ್ರಪ್ರಶಸ್ತಿಗೆ ಪಾತ್ರವಾಯಿತು. ಅಲ್ಲದೇ ಈ ಚಿತ್ರ ಆರು ವಿಭಾಗಗಳಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ನಂತರ ಕಾರ್ನಾಡ್ ನಿರ್ದೇಶಿಸಿದ “ಕಾಡು’ ಚಿತ್ರಕ್ಕೂ ಹಲವು ವಿಭಾಗಳಲ್ಲಿ ರಾಷ್ಟ್ರಪ್ರಶಸ್ತಿ ಪಡೆಯಿತು. “ಒಂದಾನೊಂದು ಕಾಲದಲ್ಲಿ’ ಚಿತ್ರ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡರೆ, “ತಬ್ಬಲಿಯು ನೀನಾದೆ ಮಗನೇ’ ಚಿತ್ರ ಕೂಡಾ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಯಿತು. ಅವರ ನಿರ್ದೇಶನದ ಕೊನೆಯ ಕನ್ನಡ ಚಿತ್ರ “ಕಾನೂರ ಹೆಗ್ಗಡತಿ’ ಚಿತ್ರಕ್ಕೆ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಯ ಮನ್ನಣೆ ಪಡೆದಿದೆ.
ನಟರಾಗಿ ಹೆಚ್ಚು ಹತ್ತಿರ: ಗಿರೀಶ್ ಕಾರ್ನಾಡ್ ನಿರ್ದೇಶಕರಾಗಿ ಹೇಗೆ ತಮ್ಮದೇ ಆದ ಛಾಪು, ಸ್ಥಾನ ಗಳಿಸಿದ್ದಾರೋ, ಅದಕ್ಕಿಂತ ಹೆಚ್ಚಾಗಿ ಒಬ್ಬ ನಟನಾಗಿ ಪ್ರೇಕ್ಷಕನಿಗೆ ಹೆಚ್ಚು ಹತ್ತಿರವಾಗಿದ್ದಾರೆ. ಅವರು ಕನ್ನಡದಲ್ಲಿ ನಿರ್ದೇಶಿಸಿದ್ದು ಐದೇ ಸಿನಿಮಾವಾದರೂ, ನಟರಾಗಿ ಸಾಕಷ್ಟು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಜವಾಬ್ದಾರಿಯುತ ತಂದೆಯಾಗಿ, ಸೀರಿಯಸ್ ಆಫೀಸರ್, ಪ್ರಾಮಾಣಿಕ ಮಂತ್ರಿ … ಹೀಗೆ ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದವರು ಕಾರ್ನಾಡ್.
“ನೀ ತಂದ ಕಾಣಿಕೆ’, “ನೆನಪಿನ ದೋಣಿ’, “ಕಾಡಿನ ಬೆಂಕಿ’, “ಪ್ರಥಮ ಉಷಾಕಿರಣ’, “ಮೈಸೂರು ಮಲ್ಲಿಗೆ’, “ಎ.ಕೆ.47′, “ಜನುಮದಾತ’, “ವಂದೇ ಮಾತರಂ’, “ಕೆಂಪೇಗೌಡ’, “ಆ ದಿನಗಳು’, “ರುದ್ರ ತಾಂಡವ’, “ಸವಾರಿ 2′, “ರಣವಿಕ್ರಮ’, “ಯಾರೇ ಕೂಗಾಡಲಿ’, “ಸ್ವೀಟಿ’ … ಕನ್ನಡದ ಅನೇಕ ಸಿನಿಮಾಗಳಲ್ಲಿ ಗಿರೀಶ್ ಕಾರ್ನಾಡ್ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರದಲ್ಲೊಂದು ಗಂಭೀರ ಹಾಗೂ ಅರ್ಥಪೂರ್ಣ ಪಾತ್ರವಿದೆ ಎಂದಾಗ ಸಿನಿಮಾ ಮಂದಿಗೆ ನೆನಪಾಗುತ್ತಿದ್ದ ಹೆಸರು ಕಾರ್ನಾಡ್ ಅವರದು.
ಬಹುಭಾಷಾ ನಟ: ಗಿರೀಶ್ ಕಾರ್ನಾಡ್ ನಟರಾಗಿ ಎಲ್ಲಾ ಭಾಷೆಗಳಲ್ಲೂ ಬೇಡಿಕೆಯಲ್ಲಿದ್ದವರು. ಕನ್ನಡದಿಂದ ಹಿಡಿದು ತಮಿಳು, ತೆಲುಗು, ಮಲಯಾಳಂ, ಮರಾಠಿ ಹಿಂದಿ … ಹೀಗೆ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದವರು ಕಾರ್ನಾಡ್. ಎಲ್ಲಾ ಭಾಷೆಗಳಲ್ಲೂ ನಟಿಸಿದ್ದರೂ ಕಾರ್ನಾಡ್‌ಗೆ ಕನ್ನಡದ ನಂತರ ಹಿಂದಿ ಸಿನಿಮಾರಂಗದ ನಂಟು ಹೆಚ್ಚಿತ್ತು. ಹಿಂದಿಯಲ್ಲಿ “ತಬ್ಬಲಿಯು ನೀನಾದೇ ಮಗನೇ’ ಆಧರಿಸಿ “ಗೋಧೂಳಿ’ ಹಾಗೂ “ಉತ್ಸವ್’ ಎಂಬ ಎರಡು ಸಿನಿಮಾಗಳನ್ನು ಕೂಡಾ ಹಿಂದಿಯಲ್ಲಿ ನಿರ್ದೇಶಿಸಿದ ಕಾರ್ನಾಡ್, ನಟರಾಗಿ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ನಿರ್ದೇಶನದ “ನಿಶಾಂತ್’, “ಮಂಥನ್’ ಚಿತ್ರಗಳ ಜೊತೆಗೆ “ಸ್ವಾಮಿ’, “ಜೀವನ್ ಮುಕ್¤’, “ಸಂಪರ್ಕ್’ ನಿಂದ ಹಿಡಿದು ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ಸಲ್ಮಾನ್ ಖಾನ್ ಅಭಿನಯದ “ಏಕ್ತಾ ಟೈಗರ್’, “ಟೈಗರ್ ಜಿಂದಾ ಹೈ’, ಅಜೇಯ್ ದೇವಗನ್ ಅವರ “ಶಿವಾಯ್’ ವರೆಗೂ ಹಲವು ಹಿಂದಿ ಸಿನಿಮಾಗಳಲ್ಲಿ ಕಾರ್ನಾಡ್ ನಟಿಸಿದ್ದಾರೆ. ಹಾಗಾಗಿ, ಕಾರ್ನಾಡ್ ಅವರಿಗೆ ನಟರಾಗಿ ಕನ್ನಡದಲ್ಲಿ ಎಷ್ಟು ಚಿರಪರಿಚಿತರಾಗಿದ್ದರೋ, ಹಿಂದಿಯಲ್ಲೂ ಅಷ್ಟೇ ಪರಿಚಿತ ನಟರಾಗಿದ್ದರು.
ಗಿರೀಶ್ ಕಾರ್ನಾಡ್ ಅವರು ಹಿರಿತೆರೆ ಜೊತೆ ಕಿರುತೆರೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. “ಮಾಲ್ಗುಡಿ ಡೇಸ್’, “ಇಂದ್ರಧನುಶ್’ ಧಾರಾವಾಹಿಗಳಲ್ಲೂ ನಟಿಸಿದ್ದರು. ಇದಲ್ಲದೇ ಪೂರ್ಣಚಂದ್ರ ತೇಜಸ್ವಿಯವರ “ಚಿದಂಬರ ರಹಸ್ಯ’ ಕಾದಂಬರಿಯನ್ನು ದೃಶ್ಯರೂಪಕ್ಕೆ ತಂದ ಕಾರ್ನಾಡ್, ಧಾರಾವಾಹಿ ರೂಪದಲ್ಲಿ ಮನೆ ಮನೆಗೆ ತಲುಪಿಸಿದರು. ಈ ಧಾರಾವಾಹಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. ಸಿನಿಮಾ, ಧಾರಾವಾಹಿ ಜೊತೆಗೆ ಕಾರ್ನಾಡ್ ಹಲವು ವಿಷಯಗಳ ಕುರಿತಾಗಿ ಸಾಕ್ಷ್ಯ ಚಿತ್ರಗಳನ್ನು ಕೂಡಾ ಮಾಡಿದ್ದಾರೆ. ಡಿ.ಆರ್.ಬೆಂದ್ರೆ, ಕನಕ ಪುರಂದರ, “ದಿ ಲ್ಯಾಂಪ್ ದಿ ನೀಶೆ’ ಹಾಗೂ “ಚೆಲುವಿ’, “ವಾವ್ ಘರ್’, “ದುರ್ಗ ಇನ್ ಮಹೇಂದರ್’ ಎಂಬ ಸರಣಿ ಚಿತ್ರ ಹಾಗೂ ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿದ್ದಾರೆ.
ಕಾರ್ನಾಡ್ ನಿರ್ದೇಶನದ ಚಿತ್ರಗಳು
* ವಂಶವೃಕ್ಷ
* ಕಾಡು
* ತಬ್ಬಲಿಯು ನೀನಾದೆ ಮಗನೇ
* ಒಂದಾನೊಂದು ಕಾಲದಲ್ಲಿ
* ಕಾನೂರ ಹೆಗ್ಗಡತಿ
ನಿರ್ದೇಶನದ ಹಿಂದಿ ಚಿತ್ರ
* ಗೋಧೂಳಿ
* ಉತ್ಸವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.