ಮಾಸ್ ಕರಿಯನ ಲಾಸ್ ಸ್ಟೋರಿ
Team Udayavani, Oct 14, 2017, 7:15 PM IST
“ಅಮ್ಮಾ …’ ಅಂತ ಕೂಗು ಕೇಳಿಬಿಟ್ಟರೆ ಅವನು ತಕ್ಷಣ ಫ್ರೀಜ್ ಆಗಿಬಿಡುತ್ತಾನೆ. ಆ ಸಂದರ್ಭದಲ್ಲಿ ಅವನಿಗೆ ಜಗತ್ತಿನ ಪರಿವಯೇ ಇರುವುದಿಲ್ಲ. ಶಿಲೆಯಂತೆ ನಿಂತುಬಿಡುವ ಅವನನ್ನು ಮತ್ತೆ ಈ ಲೋಕಕ್ಕೆ ಕರೆದುಕೊಂಡು ಬರಬೇಕಾದರೆ, ಅವನನ್ನು ಅಲುಗಾಡಿಸಬೇಕು. ಆಗ ಅವನಿಗೆ ಪ್ರಜ್ಞೆ ಬರುತ್ತದೆ. ಈ ರೋಗಕ್ಕೆ ಇಂಗ್ಲೀಷ್‌ನಲ್ಲಿ ಇಷ್ಟುದ್ಧ ಏನೋ ಹೇಳುತ್ತಾರೆ. ಕನ್ನಡದಲ್ಲಿ ಸರಳವಾಗಿ ಅದಕ್ಕೆ ಮೆಮೊರಿ ಲಾಸ್ (ಅಂದರೆ ನೆನಪಿನ ಶಕ್ತಿಯ ಕೊರತೆ) ಎನ್ನುತ್ತಾರೆ. ಒಂದು ಕಾಲದಲ್ಲಿ ಫುಲ್ ಹವಾ ಇಟ್ಟಿರುವ ರೌಡಿಯೊಬ್ಬ, ಈಗ ಈ ಸ್ಥಿತಿಗೆ ಬರಲು ಕಾರಣವೇನು? ತನ್ನ ಹೆಸರನ್ನೇ ಮರೆತು, ಹುಚ್ಚನಂತೆ ಬೀದಿಬೀದಿ ಸುತ್ತುವುದಕ್ಕೆ ಕಾರಣರ್ಯಾರು? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರಗಳು “ಕರಿಯ – 2′ ಚಿತ್ರದಲ್ಲೇ ಇದೆ.
“ಕರಿಯ -2′ ಒಂದು ಅಪ್ಪಟ ರೌಡಿಸಂ ಚಿತ್ರ. ಹಾಗಂತ 15 ವರ್ಷಗಳ ಹಿಂದೆ ಬಿಡುಗಡೆಯಾದ “ಕರಿಯ’ ಚಿತ್ರಕ್ಕೂ, ಈ ಚಿತ್ರಕ್ಕೂ ಸಂಬಂಧವಿಲ್ಲ. ಹೆಸರಿನ ಮುಂದೆ “2′ ಸೇರಿಕೊಂಡಿದೆ ಎನ್ನುವುದು ಬಿಟ್ಟರೆ ಮತ್ತು ಇದೂ ಒಂದು ರೌಡಿಸಂ ಚಿತ್ರ ಎನ್ನುವುದು ಬಿಟ್ಟರೆ ಸಂಬಂಧ, ಸಾಮ್ಯತೆ ಯಾವುದೂ ಇಲ್ಲ. ರೌಡಿಸಂ ಕಥೆಯಾದರೂ ವಿಭಿನ್ನವಾದ ಕಥೆಯೇನಲ್ಲ. ಆದರೆ, ಅದನ್ನು ಹೇಳುವ ರೀತಿ ಸ್ವಾರಸ್ಯಕರವಾಗಿದೆ. ಮಾನಸಿಕ ಅಸ್ವಸ್ಥನೊಬ್ಬ ಎಲ್ಲವನ್ನೂ ಮರೆತು ಓಡಾಡುತ್ತಿರುತ್ತಾನೆ. ಅವನನ್ನು ನೋಡಿ ಹುಡುಗಿಯೊಬ್ಬಳು ಹೆದರಿ ಓಡುತ್ತಾಳೆ. ಅದೇ ಸಮಯದಲ್ಲಿ ಒಂದು ರೌಡಿಗಳ ಗುಂಪು ಆತನನ್ನು ಹುಡುಕಿಕೊಂಡು ಓಡಾಡುತ್ತಿರುತ್ತದೆ. ಆ ಗುಂಪಿಗೆ ಅವನು ಯಾವುದೋ ಒಂದು ಕಾರಣಕ್ಕೆ ಬೇಕೇ ಬೇಕು. ಆ ಹುಡುಗಿಗೆ ಅವನು ಇರುವುದೇ ಬೇಡ. ಇದ್ಯಾವುದರ ಪರಿವೆಯೂ ಇಲ್ಲದ ಆಸೆ ಬಿರಿಯಾನಿ ಹೋಟೆಲ್‌ವೊಂದರಲ್ಲಿ, ಜಗತ್ತನ್ನೇ ಮರೆತು, ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿರುತ್ತಾನೆ. ಈ ಮೂವರಿಗೂ ಒಂದು ಲಿಂಕ್ ಇದೆ. ಆ ಲಿಂಕ್ ಏನು ಎಂಬ ಕುತೂಹಲವಿದ್ದರೆ ಚಿತ್ರ ನೋಡಬೇಕು.
ಮೊದಲೇ ಹೇಳಿದಂತೆ, ಒಂದು ಹಳೆಯ ಸೇಡಿನ ಕಥೆಗೆ ಸುಣ್ಣ-ಬಣ್ಣ ಹೊಡೆದು ಹೊಸ ರೂಪ ಕೊಡುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಪ್ರಭು ಶ್ರೀನಿವಾಸ್. ಹಲವು ತಿರುವುಗಳ ಮೂಲಕ ಪ್ರೇಕ್ಷಕರ ಕುತೂಹಲವನ್ನು ಕೆರಳಿಸುತ್ತಾ ಹೋಗುತ್ತಾರೆ. ಬಹುಶಃ ಆ ತಿರುವುಗಳಿಲ್ಲದಿದ್ದಲ್ಲಿ, ಚಿತ್ರ ಒಂದು ಸಾಧಾರಣ ಚಿತ್ರವಾಗುವ ಅಪಾಯವಿತ್ತು. ತಿರುವುಗಳ ನಂತರವೂ ಚಿತ್ರ ಅದ್ಭುತವಾಗಿದೆ ಎಂದು ಹೇಳುವುದು ಕಷ್ಟ. ಏಕೆಂದರೆ, ತಿರುವುಗಳಿದ್ದರೂ ನಿಧಾನ ನಿರೂಪಣೆ, ಬೇಡದ ಕಿರುಚಾಟ, ಅತಿಯಾದ ಹೊಡೆದಾಟ … ಇವೆಲ್ಲಾ ಪ್ರೇಕ್ಷಕರನ್ನು ಹೊಡೆದುರುಳಿಸಬಹುದು. ಆದರೂ ಮಾಸ್ ಪ್ರೇಕ್ಷಕರು ಇವೆಲ್ಲವನ್ನೂ ಇಷ್ಟಪಡುವ ಸಾಧ್ಯತೆ ಇದೆ. ಅದೇ ಕಾರಣಕ್ಕೆ ಮಾಸ್ ಅಂಶಗಳನ್ನೆಲ್ಲಾ ಸೇರಿಸಿ ಈ ಚಿತ್ರ ಮಾಡಲಾಗಿದೆ. ಹಾಗಂತ ಕ್ಲಾಸ್ ಜನರಿಗೆ ಏನೂ ಇಲ್ಲ ಅಂತಂದುಕೊಳ್ಳುವುದು ಬೇಡ. ನಾಯಕ ಮತ್ತು ನಾಯಕಿಯ ನಡುವಿನ ಸಂಬಂಧವೇ ಬಹಳ ಕ್ಲಾಸ್ ಆಗಿದೆ. ಹಾಗಾಗಿ ಆ ವರ್ಗದವರು ಸಹ ಚಿತ್ರ ನೋಡಬಹುದು.
“ಗಣಪ’ಗೆ ಹೋಲಿಸಿದರೆ ಸಂತೋಷ್ ಇನ್ನಷ್ಟು ಸುಧಾರಿಸಿದ್ದಾರೆ. ಎರಡು ಶೇಡ್‌ಗಳಲ್ಲಿರುವ ಅವರ ಪಾತ್ರಕ್ಕೆ ಮಾತು ಕಡಿಮೆಯೇ. ಮೌನದಲ್ಲೇ ಮಾತನಾಡುವ ಸಂತೋಷ್, ಹೊಡೆದಾಟಗಳಲ್ಲಿ ಮಿಂಚಿದ್ದಾರೆ. ಆದರೆ, ಆ ಹೊಡೆದಾಟಗಳು ವಿಪರೀತ ಎನಿಸುವಷ್ಟು ಪ್ರೇಕ್ಷಕರನ್ನು ಹಿಂಸೆ ಮಾಡುತ್ತದೆ. ಮಯೂರಿ ಪಾತ್ರವು ಚಿತ್ರದ ಹೈಲೈಟ್ ಎಂದರೆ ತಪ್ಪಿಲ್ಲ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿರುವ ಅಜಯ್ ಘೋಶ್ ಫ್ರೆಶ್ ಆಗಿ ಕಾಣುತ್ತಾರಾದರೂ, ಆರ್ಭಟ ಜಾಸ್ತಿ. ಸಾಧು ಕೋಕಿಲ ಆಗಾಗ ನಗಿಸುವ ಪ್ರಯತ್ನ ಮಾಡುತ್ತಾರೆ. ಹಾಡುಗಳು, ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.
– ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.