Max Movie: ಅಮ್ಮನ ಆಸೆ ಈಡೇರಲಿಲ್ಲ ಎಂದ ಕಿಚ್ಚ ಸುದೀಪ
Team Udayavani, Dec 3, 2024, 12:39 PM IST
ಕಿಚ್ಚ ಸುದೀಪ್ (Kiccha Sudeepa) ಅವರ ನಟನೆಯ ಮ್ಯಾಕ್ಸ್ ಚಿತ್ರವು (Max Movie) ಬಿಡುಗಡೆಗೆ ಸಜ್ಜಾಗಿದೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ನಿರ್ದೇಶನ ಮಾಡಿರುವ ಮ್ಯಾಕ್ಸ್ ಚಿತ್ರವು ಡಿ.25ರಂದು ರಿಲೀಸ್ ಆಗುತ್ತಿದೆ. ಚಿತ್ರದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್ ಅವರು ತಾಯಿಯ ಬಗ್ಗೆ ಹೇಳಿ ಭಾವುಕರಾದರು.
ಮ್ಯಾಕ್ಸ್ ಸಿನಿಮಾವನ್ನು ನೋಡಬೇಕು ಎಂಬ ಆಸೆ ಸುದೀಪ್ ಅವರ ತಾಯಿಗೆ ಇತ್ತಂತೆ. ಆದರೆ ಅದು ಈಡೇರಿಲ್ಲ ಎಂಬ ಬೇಸರ ಸುದೀಪ್ ಅವರಿಗಿದೆ.
ಈ ಕುರಿತು ಮಾತನಾಡುವ ಸುದೀಪ್, “ನಾನು ಸಿನಿಮಾದ ಕೆಲವು ತುಣುಕುಗಳನ್ನು ಅಮ್ಮನಿಗೆ ತೋರಿಸುತ್ತಿದ್ದೆ. ಅದನ್ನು ನೋಡಿ ಖುಷಿಪಟ್ಟಿದ್ದರು. ಜೊತೆಗೆ ಸಿನಿಮಾ ಮುಗಿದಿದೆ, ಯಾವಾಗ ರಿಲೀಸ್ ಮಾಡ್ತೀರಾ ಎಂದು ಪದೇ ಪದೇ ಕೇಳುತ್ತಿದ್ದರು. ಆದರೆ, ಈಗ ರಿಲೀಸ್ ಆಗುತ್ತಿದೆ. ನೋಡಲು ಅವರೇ ಇಲ್ಲ’ ಎಂದು ಭಾವುಕರಾದರು.
ಹೀರೋಯಿನ್ ಇಲ್ಲ ಎಂದ ಕಿಚ್ಚ
“ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್ ಅವರಿಗೆ ಹೀರೋಯಿನ್ ಇಲ್ಲ. ಅದಕ್ಕೆ ಕಾರಣ ಸ್ಕ್ರಿಪ್ಟ್. ಇಡೀ ಸಿನಿಮಾ ಒಂದು ದಿನದಲ್ಲಿ ನಡೆಯುವ ಕಥೆಯನ್ನು ಹೊಂದಿದ್ದು, ಇಲ್ಲಿ ಹೀರೋಯಿನ್ ಪಾತ್ರಕ್ಕೆ ಅವಕಾಶವೇ ಇಲ್ಲ. “ಹೀರೋಯಿನ್ ಪಾತ್ರಕ್ಕೆ ಇಲ್ಲಿ ಅವಕಾಶ ಇರಲಿಲ್ಲ. ಸುಮ್ಮನೆ ಪಾತ್ರವನ್ನು ತುರುಕಬಾರದು. ನಾಳೆ ಒಂದೆರಡು ಸೀನ್‌ನಲ್ಲಿ ಬಂದು-ಹೋದ್ರು ಎಂದು ನೀವೇ (ಮಾಧ್ಯಮ) ಹೇಳುತ್ತೀರಿ’ ಎನ್ನುವುದು ಸುದೀಪ್ ಮಾತು.