ಮನವೇ ಮಂತ್ರಾಲಯ; ಕಾಳಜಿ ಇರಬೇಕು; ಸೈಕಾಲಜಿ ಗೊತ್ತಿರಬೇಕು
Team Udayavani, Sep 16, 2017, 2:28 PM IST
ಆ ಹುಡುಗನಿಗೆ ಚಿಕ್ಕಂದಿನಲ್ಲೇ ಹೆಚ್ಚೆಚ್ಚು ಸಿನಿಮಾಗಳನ್ನು ನೊಡುವ ಆಸಕ್ತಿ. ಆಗ ವಯಸ್ಸು ಸುಮಾರು 19 ರ ಆಸುಪಾಸು. ಕಾಲೇಜು ದಿನಗಳಲ್ಲಂತೂ ತರಹೇವಾರಿ ಸಿನಿಮಾಗಳನ್ನು ನೋಡುವ ಉತ್ಸಾಹ. ಆಗಲೇ ಫ್ರೆಂಚ್ ಭಾಷೆಯ ಸಿನಿಮಾವೊಂದನ್ನು ನೋಡಿ ಸಿನಿಮಾದೆಡೆಗೆ ಪ್ರಭಾವಿತಗೊಂಡಿದ್ದ! ಅಷ್ಟಕ್ಕೂ ಆ ಹುಡುಗ ನೋಡಿದ ಆ ಫ್ರೆಂಚ್ ಭಾಷೆಯ ಸಿನಿಮಾ ಯಾವುದು ಗೊತ್ತಾ? “ದಿ ವೇಜಸ್ ಆಫ್ ಫಿಯರ್’. 1953 ರಲ್ಲಿ ತೆರೆಕಂಡ ಆ ಸಿನಿಮಾಗೆ ಹೆನ್ರಿ- ಜಾರ್ಜಸ್ ಕ್ಲೋಜಟ್ ನಿರ್ದೇಶಕರು. ಆ ಸಿನಿಮಾದಿಂದ ಆ ಹುಡುಗ ಪ್ರಭಾವಿತಗೊಂಡಿದ್ದು ಯಾಕೆಂದರೆ, ಅದೊಂದು ಎರಡನೇ ಮಹಾಯುದ್ಧ ಹಿನ್ನೆಲೆ ಕುರಿತ ಸಿನಿಮಾ. ನಾಲ್ವರು ಯುವಕರು ಬಂದೂಕು ಹಿಡಿದು, ಯುದ್ಧಕ್ಕೆ ಹೋಗಬೇಕು. ಆದರೆ, ಅವರಿಗೆ ಆ ಯುದ್ಧಕ್ಕೆ ಹೋಗಲು ಇಷ್ಟವಿರಲ್ಲ. ಯುದ್ಧಕ್ಕೆ ಹೋದರೆ, ಒಂದಷ್ಟು ಮಂದಿಯನ್ನು ಕೊಲ್ಲಬೇಕು. ಅದು ಅವರಿಗೆ ಸಾಧ್ಯವಿಲ್ಲದ ಮಾತು. ಕೊನೆಗೆ ಎಲ್ಲೋ ಒಂದು ಕಡೆ ಹಣ ಕದ್ದು, ಕಣ್ಮರೆಯಾಗುತ್ತಾರೆ. ಕೊನೆಗೆ ಯುದ್ಧ ಮುಗಿದ ಮೇಲೆ ಹಿಂದಿರುಗುತ್ತಾರೆ. ಆ ಮಧ್ಯೆ ಅವರು ಏನೆಲ್ಲಾ ಮಾಡುತ್ತಾರೆ ಅನ್ನೊದು ಆ ಚಿತ್ರದ ಕಾನ್ಸೆಪ್ಟ್. ಅದನ್ನು ನೋಡಿದ್ದ ಆ ಹುಡುಗ, ಸಿನಿಮಾಗೆ ಫಿದಾ ಆಗಿದ್ದ. ಅಲ್ಲಿಂದಲೇ ಸಿನಿಮಾ ಕಡೆ ವಾಲಿ ಈವರೆಗೆ ಸುಮಾರು 6 ಚಿತ್ರಗಳನ್ನು ನಿರ್ದೇಶಿಸಿ, 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹೀರೋ ಮತ್ತು ಇತರೆ ಪ್ರಮುಖ ಪಾತ್ರ ನಿರ್ವಹಿಸಿ, ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಯನ್ನೂ ಪಡೆದು ಇಂದಿಗೂ ಸಿನಿಮಾ ನಿರ್ದೇಶನ, ನಟನೆಯಲ್ಲಿ ತೊಡಗುವ ಮೂಲಕ ಸಿನಿಮಾ ಪ್ರೀತಿ ತೋರಿಸುತ್ತಿದ್ದಾರೆ. ಅಂದಹಾಗೆ, ಅವರು ಬೇರಾರೂ ಅಲ್ಲ. ಹಿರಿಯ ನಟ, ನಿರ್ದೇಶಕ ಸುರೇಶ್ ಹೆಬ್ಳೀಕರ್. ಹೌದು, ಸುರೇಶ್ ಹೆಬ್ಳೀಕರ್ ಒಂದೂವರೆ ದಶಕದ ಬಳಿಕ ಪುನಃ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅವರ ನಿರ್ದೇಶನದ “ಮನ ಮಂಥನ’ ಚಿತ್ರ ತೆರೆಕಂಡಿದೆ. ಸುರೇಶ್ ಹೆಬ್ಳೀಕರ್ ತಮ್ಮ ಸಿನಿಪಯಣದ ಜತೆ ಈಗಿನ ಚಿತ್ರರಂಗ, ಚಿತ್ರಗಳು, ಯುವ ನಿರ್ದೇಶಕರ ಕುರಿತು ಒಂದಷ್ಟು ಮಾತಾಡಿದ್ದಾರೆ…
ಓವರ್ ಟು ಹೆಬ್ಳೀಕರ್…
“ನಾನು ಫ್ರೆಂಚ್ ಸಿನಿಮಾ ನೋಡಿ ಪ್ರಭಾವಿತಗೊಂಡವನು. ಸಿನಿಮಾ ಎಂಬುದು ಪ್ರಬಲ ಮಾಧ್ಯಮ. ಆ ಮೂಲಕ ಏನನ್ನಾದರೂ ಹೇಳಬಹುದು ಅಂತ ಪ್ರೀತಿಯಿಂದ ಈ ಫೀಲ್ಡ್‌ಗೆ ಎಂಟ್ರಿಯಾದವನು. ಹಲವು ಬಾಲಿವುಡ್ ಸಿನಿಮಾಗಳು ಕೂಡ ನನ್ನ ಮೇಲೆ ಪ್ರಭಾವ ಬೀರಿವೆ. ಕನ್ನಡದ “ಬಂಗಾರದ ಮನುಷ್ಯ’ ಕೂಡ ಅತ್ಯಂತ ಪ್ರಭಾವ ಬೀರಿದ ಸಿನಿಮಾಗಳಲ್ಲೊಂದು. ಆಗೆಲ್ಲಾ, ಕಥೆ ಹೇಳುವ ವಿಧಾನ ಚೆನ್ನಾಗಿತ್ತು. ಎಲ್ಲವೂ ಕಾದಂಬರಿ ಆಧರಿತ ಸಿನಿಮಾಗಳಾಗಿದ್ದರೂ, ನಿರ್ದೇಶಕರ ನಿರೂಪಣೆಯೇ ಅಲ್ಲಿ ಹೈಲೆಟ್ ಆಗಿರುತ್ತಿತ್ತ. ಹಾಗಾಗಿ, ಇಂದಿಗೂ ಅವು ಎವರ್‌ಗ್ರೀನ್ ಎನಿಸಿಕೊಂಡಿವೆ. ಈಗಿನ ನಿರ್ದೇಶಕರಿಗೆ ಕಲಿಕೆ ಕಡಿಮೆ. ಬಹುತೇಕ ಸಿನಿಮಾ ನೋಡಿಕೊಂಡೇ ನಿರ್ದೇಶನಕ್ಕೆ ಬರುತ್ತಾರೆ. ಅದರ ನಡುವೆಯೂ ಕೆಲವರು ಒಳ್ಳೆಯ ಚಿತ್ರ ಕೊಡುತ್ತಿದ್ದಾರೆ. ಪ್ಯಾಷನ್ ಇಟ್ಟುಕೊಂಡರಷ್ಟೇ ಸಾಲದು. ಎಲ್ಲರಿಗೂ ತಲುಪುವಂತಹ, ಇಷ್ಟವಾಗುವಂತಹ ಚಿತ್ರ ಕೊಡಬೇಕು. ಎಲ್ಲವನ್ನೂ ತಿಳಿದಿದ್ದರೂ, ಎಲ್ಲವೂ ಈಗ ಡಿಜಿಟಲ್‌ವುಯವಾಗಿದ್ದರ ಎಲ್ಲೋ ಒಂದು ಕಡೆ ಎಡವುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ, ಅಪಾಯವಿದೆ’ ಎಂಬುದು ಹೆಬ್ಳೀಕರ್ ಮಾತು.
ಒಂದೂವರೆ ದಶಕದ ಬಳಿಕ ನಿರ್ದೇಶನ
ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟು ಈಗ ಸುಮಾರು 45 ವರ್ಷಗಳೇ ಕಳೆದಿವೆ. ಇಷ್ಟು ವರ್ಷಗಳಲ್ಲಿ “ಕಾಡಿನಬೆಂಕಿ’, “ಆಗಂತುಕ’, “ಪ್ರಥಮ ಉಷಾಕಿರಣ’,”ಚಮತ್ಕಾರ’ “ಆಘಾತ’ ಮತ್ತು “ಮನ ಮಥನ’ ಸಿನಿಮಾಗಳನ್ನು ನಿರ್ದೇಶಿಸಿದ್ದೇನೆ. “ಮನ ಮಂಥನ’ ಚಿತ್ರ ಹದಿನೈದು ವರ್ಷಗಳ ಬಳಿಕ ನಿರ್ದೇಶನಕ್ಕೆ ಕೈ ಹಾಕಿದ ಸಿನಿಮಾ. ಈ ದೊಡ್ಡ ಗ್ಯಾಪ್‌ಗೆ ಹಲವು ಕಾರಣಗಳು. ನನ್ನ ಪತ್ನಿ ತೀರಿದರು. ಆಮೇಲೆ ನಾನು ಒಬ್ಬನೇ ಆದೆ. ಸಿನಿಮಾ ಮೇಲಿನ ಇಂಟ್ರೆಸ್ಟ್ ಕೂಡ ಕಡಿಮೆಯಾಗುತ್ತಾ ಹೋಯ್ತು. ಅದೇ ಟೈಮ್‌ನಲ್ಲಿ ನಾನು ಪರಿಸರ ಬಗ್ಗೆ ಒಂದಷ್ಟು ಹೆಚ್ಚು ಚರ್ಚೆ ಮಾಡತೊಡಗಿದೆ. ಅದರ ಕಡೆ ಓಡಾಟ ಜಾಸ್ತಿಯಾಯ್ತು. ಪರಿಸರ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತಿತ್ತು. ಭೂಮಿತಾಪ ಹೀಗೆ ಇನ್ನಷ್ಟು ಸಮಸ್ಯೆಗಳು ಉಂಟಾಗಿ ಘೋರ ಸಮಸ್ಯೆ ಎದುರಾದರೆ ಹೇಗೆ ಎಂಬ ಪ್ರಶ್ನೆ ಕಾಡತೊಡಗಿತು. ನೀರಿನ ಸಮಸ್ಯೆ ಬಗ್ಗೆಯೂ ಗಮನಹರಿಸಿದೆ ನಾನು ನೋಡಿದಂತೆ ಐಸ್‌ಲ್ಯಾಂಡ್, ಸ್ವೀಡನ್ ದೇಶಗಳಲ್ಲಿ ಹೆಚ್ಚು ನೀರು ಇದೆ. ಹಾಗಾಗಿ ಅಲ್ಲಿ ಇನ್‌ಕಮ್ ಕೂಡ ಜಾಸ್ತಿ ಇದೆ. ನಮ್ಮಲ್ಲಿ ನೀರಿನ ಕೊರತೆ ಹೆಚ್ಚಾಗುತ್ತಿದೆ. ಆದರೆ, ಇನಕ್‌ಮ್‌ಗೆàನೂ ಕೊರತೆ ಇಲ್ಲ. ಮೂರು ದಶಕದಿಂದಲೂ ನಾನು ನೀರು, ಪರಿಸರ ಇದರ ಕಡೆ ಗಮಹರಿಸುತ್ತಲೇ ಬಂದಿದ್ದೇನೆ. ಹಾಗಾಗಿ, ಸಿನಿಮಾ ಕಡೆ ಅಷ್ಟೊಂದು ಕಣ್ಣಾಯಿಸಲು ಸಾಧ್ಯವಾಗಲಿಲ್ಲ. ಒಂದು ಸಿನಿಮಾ ಒಪ್ಪಿಕೊಂಡರೆ, ಕನಿಷ್ಟ ಎರಡು ವರ್ಷ ಬಿಜಿಯಾಗುತ್ತೇನೆ. ಕಥೆ ಮಾಡಬೇಕು, ಚಿತ್ರಕಥೆ ಬರೆಯಬೇಕು, ನಿರ್ದೇಶನ ಮತ್ತು ಮಾರ್ಕೆಟಿಂಗ್ ಹೀಗೆ ಎಲ್ಲವನ್ನೂ ನಾನೇ ಮಾಡುವುದರಿಂದ ಜವಾಬ್ದಾರಿ ಹೆಚ್ಚಾಗುತ್ತದೆ. ಹಾಗಾಗಿ ನಾನು ಹೆಚ್ಚು ಪರಿಸರ ಬಗ್ಗೆ ಗಮನಹರಿಸಿದ್ದೆ. ಸಿನಿಮಾ ಮಾಡದಿದ್ದರೂ, ನಾನು ಪರಿಸರ ಕುರಿತು ಲೇಖನ, ಭಾಷಣ ಮಾಡುತ್ತಲೇ ಇದ್ದೆ. ಸಿನಿಮಾಗಳ ಮೂಲಕ ಸಮಾಜಕ್ಕೆ ಏನಾಗುತ್ತೆ? ಯಾರೋ ಕ್ಯಾಮೆರಾ ಹಿಡಿಯುತ್ತಾರೆ, ಇನ್ಯಾರೋ ಸಂಭಾಷಣೆ ಬರೆಯುತ್ತಾರೆ, ಮತ್ತೂಬ್ಬರು ಎಡಿಟ್ ಮಾಡುತ್ತಾರೆ. ಅದರಿಂದ ಏನಾದರೂ ಕೆಲಸಗಳಾಗುತ್ತವೆಯಾ? ಗೊತ್ತಿಲ್ಲ. ನನಗಂತೂ ಯಾವುದೇ ಸಿನಿಮಾ ವೈಯಕ್ತಿಕವಾಗಿ ಸಮಾಜಕ್ಕೆ ಕಾಂಟ್ರಿಬ್ಯೂಟ್ ಮಾಡಿದ ವಿಷಯವಂತೂ ನನಗೆ ತಾಗಲಿಲ್ಲ. ಹಾಗಾಗಿಯೇ ನಾನು, ನನ್ನ ಪಾಡಿಗೆ ಪರಿಸರ ಕುರಿತ ಕೆಲಸದಲ್ಲಿ ನಿರತನಾಗಿದ್ದೆ. ಅದಕ್ಕಾಗಿ ಇಷ್ಟೊಂದು ಗ್ಯಾಪ್ ಆಯ್ತು. ಆ ಗ್ಯಾಪ್ ಬಳಿಕ “ಮನ ಮಂಥನ’ ನಿರ್ದೇಶಿಸಿದ್ದೇನೆ.
ನನ್ನ ಅನೇಕ ಗೆಳೆಯರು ಒಮ್ಮೆ ಭೇಟಿಯಾದಾಗ, ಸಿನಿಮಾ ನಿರ್ದೇಶನ ಮಾಡು ಅಂತ ಒತ್ತಡ ಹೇರಿದ್ದು ನಿಜ. ಪರಿಸರ ಕೆಲಸವನ್ನು ನೀನೇ ಮಾಡಬೇಕೆಂದಿಲ್ಲ. ಯಾರೋ ಕೆರೆ ಕೆಲಸ ಮಾಡಬಹುದು, ಇನ್ಯಾರೋ ಗಿಡ ನೆಡಬಹುದು. ಅದಕ್ಕೆ ನೀನೊಬ್ಬನೇ ಮಾಡಬೇಕಾ ಅನ್ನೋ ಪ್ರಶ್ನೆ ಹಾಕಿದರು. ನನಗೂ ಅದು ಸರಿ ಎನಿಸಿತು. ಅವರೆಲ್ಲರ ಪ್ರೀತಿಯ ಮಾತುಗಳಿಂದ ನಾನು, ಅಶೋಕ್‌ಪೈ ಅವರಿಗೆ ಕಾಲ್ ಮಾಡಿದೆ. ಅವರೂ ಕೂಡ ನನ್ನ ಜತೆ ಸಿನಿಮಾ ಮಾಡಬೇಕು ಅಂತಾನೇ ಕಾದಿದ್ದರು. ಸಿಕ್ಕಾಗೆಲ್ಲಾ, ಸಿನಿಮಾ ಮಾಡಲ್ವೇನ್ರೀ ಅನ್ನುತ್ತಿದ್ದರು. ನಾನೂ, ನಗುತ್ತಲೇ ಸುಮ್ಮನಾಗುತ್ತಿದ್ದೆ. ಕೊನೆಗೆ, ಅವರನ್ನು ಭೇಟಿ ಮಾಡಿದಾಗ, ಒಂದಷ್ಟು ಕೇಸ್ ಬಗ್ಗೆ ಹೇಳಿದರು. ಎರಡು ವರ್ಷದ ಹಿಂದೆ ಅವರ ಜತೆ ಮಾತುಕತೆ ನಡೆಸಿ, ಅಶೋಕ್ ಪೈ ಅವರ ಮಾನಸ ಆಸ್ಪತ್ರೆಯಲ್ಲಿ ಬಂದ ಕೆಲ ಕೇಸ್‌ಗಳನ್ನು ಸ್ಟಡಿ ಮಾಡಿದೆ. ಒಂದು ಕೇಸ್ ಇಂಟ್ರೆಸ್ಟಿಂಗ್ ಆಗಿತ್ತು. ಅದನ್ನೇ ಇಟ್ಟುಕೊಂಡು “ಮನ ಮಂಥನ’ ಸಿನಿಮಾ ಮಾಡಿದ್ದಾಗಿ ಹೇಳುತ್ತ ಹೋದರು ಹೆಬ್ಳೀಕರ್.
ನಿರ್ದೇಶಕರಿಗೆ ಸೈಕಾಲಜಿ ಗೊತ್ತಿರಬೇಕು
ಅಶೋಕ್ ಪೈ ಅವರ ಜತೆ ಒಂದಷ್ಟು ಸಿನಿಮಾ ಮಾಡಿದ್ದೇನೆ. ಹಾಗಂತ, ಎಲ್ಲವೂ ಮಾನಸಿಕ ವಿಷಯ ಕುರಿತಾಗಿ ಇಲ್ಲ. “ಆಗಂತುಕ’, “ಚಮತ್ಕಾರ’ “ಅಂತರಂಗ’ ಇವುಗಳು ಬೇರೆ ಜಾನರ್‌ನ ಸಿನಿಮಾಗಳಾಗಿದ್ದವು. ಸಿನಿಮಾಗಳಲ್ಲಿ ಮಾನಸಿಕ ವಿಷಯಗಳಿದ್ದರೆ, ಎಕ್ಸೆ„ಟ್‌ಮೆಂಟ್ ಇರುತ್ತೆ. ಮನಸ್ಸು, ನಡೆತೆ, ಚಿಂತನೆಗಳು ಬದಲಾಗುತ್ತವೆ. ಇವೆಲ್ಲವೂ ಸಾಮಾಜಿಕ ವ್ಯವಸ್ಥೆಯ ಸನ್ನಿವೇಶಗಳು. ಪ್ರತಿಯೊಬ್ಬ ನಿರ್ದೇಶಕರಿಗೆ ಸೈಕಾಲಜಿ ಬಗ್ಗೆ ಮಾಹಿತಿ ಇದ್ದರೆ ಒಳ್ಳೆಯದು ಎಂದು ಹೇಳುವ ಹೆಬ್ಳೀಕರ್, ಇತ್ತೀಚೆಗೆ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಹೆಚ್ಚು ಸಿನಿಮಾ ನೋಡಲು ಸಾಧ್ಯವಾಗಲಿಲ್ಲ. ಆದರೂ ಚೈನೀಸ್, ಇಸ್ರೇಲ್ ಹಾಗೂ ಸೌತ್ ಕೋರಿಯಾ ಭಾಷೆಯ ಮೂರು ಅದ್ಭುತ ಸಿನಿಮಾಗಳನ್ನು ನೋಡಿದೆ ಎನ್ನುತ್ತಾರೆ.
ಶೋಲೆಯ ಆ ಶಾಟ್ಸ್ ಇಂಪ್ರಸ್ ಮಾಡಿತ್ತು…
ಆ ಕಾಲದಲ್ಲಿ ಟೆಕ್ನಾಲಜಿ ಇಷ್ಟೊಂದು ಇರಲಿಲ್ಲ. ಆದರೆ, ಒಳ್ಳೇ ಸಿನಿಮಾಗಳು ಬರುತ್ತಿದ್ದವು. ಈಗ ಟೆಕ್ನಾಲಜಿ ಬಂದಿದೆ. ಹಾಗಂದರೆ ಅದು ಕ್ಯಾಮೆರಾ, ಎಡಿಟಿಂಗ್‌ನಲ್ಲಿ ಮಾತ್ರ ಬದಲಾವಣೆಯಾಗಿದೆ. ಆದರೆ, ಕಥೆ ಹೇಳುವ ವಿಧಾನ ಮಾತ್ರ ಚೇಂಜ್ ಆಗಿಲ್ಲ. ಸಮಾಜದಲ್ಲಿ ಏನಾಗುತ್ತಿದೆ. ಕುಟುಂಬಗಳು ಹೇಗೆ ಬದಲಾಗಿದೆ, ಮಾನವ ಸಂಬಂಧಗಳು ಹೇಗೆಲ್ಲಾ ಚೇಂಜ್ ಆಗಿವೆ. ಇಂತಹ ಸೂಕ್ಷ್ಮ ವಿಷಯಗಳನ್ನು ಹರಿತವಾದ ಸಿನಿಮಾ ಮಾಧ್ಯಮ ಮೂಲಕ ಹೇಳಬೇಕು ಎಂಬುದು ಹೆಬ್ಳೀಕರ್ ಮಾತು.
ಸಿನಿಮಾ ಮೂಲಕ ಸಮಾಜಕ್ಕೆ ಕಾಂಟ್ರಿಬ್ಯೂಟ್ ಮಾಡಲು ಸಾಧ್ಯ ಎಂಬುದು ಜನರಿಗೂ ಅರ್ಥವಾಗಿದೆ. ಈಗ ಯುವಕರೇ ಹೆಚ್ಚು ಸಿನಿಮಾ ಹಿಂದೆ ಬರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ತಂತ್ರಜ್ಞಾನ ಬದಲಾಗಿದೆ ನಿಜ. ಆದರೆ, ಅದಕ್ಕೆ ತಕ್ಕಂತೆ ಕಥೆ ಹೇಳುವ ವಿಧಾನವೂ ಚೇಂಜ್ ಆಗಬೇಕು. ಸಿನಿಮಾಗೆ ಕಾದಂಬರಿಗಳೇ ಬೇಕಿಲ್ಲ. ಅನೇಕ ವಿಷಯ ಕೇಳಿದ್ದು, ಘಟನೆಗಳನ್ನು ನೋಡಿದ್ದು, ಪೇಪರ್, ಮ್ಯಾಗ್‌ಜಿನ್ ಇತ್ಯಾದಿ ಓದಿದ್ದು ಇವುಗಳೊಂದಿಗೆ ಒಂದಷ್ಟು ಇನ್‌ಪುಟ್ಸ್ ಪಡೆದು ಸಿನಿಮಾ ಮಾಡುವತ್ತ ಗಮನಹರಿಸಬೇಕು. ನಾನು “ಕಾಡಿನ ಬೆಂಕಿ’ ಸಿನಿಮಾ ಮಾಡಿದಾಗ, ಹೆಚ್ಚು ಜನ ಆ ಕಾದಂಬರಿ ಓದಿರಲಿಲ್ಲ. ಸಿನಿಮಾ ಬಳಿಕ ಒಂದಷ್ಟು ಜನ ಆ ಬಗ್ಗೆ ತಿಳಿದುಕೊಂಡರು. ಈಗಲೂ ಅಷ್ಟೇ ಎಷ್ಟು ಕಾದಂಬರಿ ಆಧಾರಿತ ಸಿನಿಮಾಗಳು ಗ್ರೇಟ್ ಸಿನಿಮಾ ಎನಿಸಿಕೊಂಡಿವೆ ಹೇಳಿ? ಓದಿದ ವಿಷಯ ಇಟ್ಟುಕೊಂಡೇ ಇಂಟ್ರೆಸ್ಟ್ ಆಗಿ ಸಿನಿಮಾ ಮಾಡುವ ಜಾಣತನ ಇರಬೇಕು. ನಾನು ಜರ್ಮನ್, ಫ್ರೆಂಚ್, ಸ್ಪ್ಯಾನಿಶ್ ಭಾಷೆಯ ಸಿನಿಮಾ ನೋಡುತ್ತಿರುತ್ತೇನೆ. ಅಲ್ಲಿ ಸಣ್ಣ ವಿಷಯಗಳಿದ್ದರೂ, ಅದನ್ನು ಹೇಳುವ ವಿಧಾನಗಳು ವಿಭಿನ್ನವಾಗಿರುತ್ತವೆ. ಸಣ್ಣ ದೃಶ್ಯಗಳೇ ಜನರಿಗೆ ಪ್ರಭಾವ ಬೀರುವಂತಿರಬೇಕು. ಆಗ ಮಾತ್ರ ನಿರ್ದೇಶಕನ ಕೆಲಸ ಸಾರ್ಥಕವಾಗುತ್ತೆ. ಒಂದು ಸಿನಿಮಾದಲ್ಲಿ ಯಾವುದಾದರೊಂದು ವಿಷಯ ಹಿಡಿಸಿದರೆ ಸಾಕು ಆ ಸಿನಿಮಾ ಗೆದ್ದಂತೆಯೇ. ಹಿಂದಿಯ “ಶೋಲೆ’ ಸಿನಿಮಾದಲ್ಲಿ ಟ್ರೇನ್ ಜತೆ ಕುದುರೆ ಓಡುವ ದೃಶ್ಯವನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಅದನ್ನು ನೋಡಿ ಖುಷಿಗೊಳ್ಳೋದು ಸುಲಭ. ಆದರೆ, ಅದರ ಹಿಂದೆ ಕ್ಯಾಮೆರಾಮೆನ್ ಎಷ್ಟೊಂದು ಕಷ್ಟ ಪಟ್ಟಿದ್ದಾನೆ ಅನ್ನೋದು ಗೊತ್ತಿರುವುದಿಲ್ಲ. ನಾನು “ಶೋಲೆ’ ಸಿನಿಮಾದ ಕ್ಯಾಮೆರಾಮೆನ್ ಭೇಟಿಯಾಗಿದ್ದೆ. ಕುದುರೆ ಮೇಲಿನ ಆ ದೃಶ್ಯವನ್ನು ಸೆರೆಹಿಡಿದ ಬಗ್ಗೆ ಕೇಳಿದಾಗ, ವಿದೇಶಿ ಸಿನಿಮಾಗಳನ್ನು ನೋಡಿ ಪ್ರಭಾವಗೊಂಡು, ಆ ದೃಶ್ಯವನ್ನು ಸೆರೆ ಹಿಡಿದ ಬಗ್ಗೆ ತಿಳಿಸಿದ್ದನ್ನು ಕೇಳಿ ಫೆಂಟಾಸ್ಟಿಕ್ ಜಾಬ್ ಎನಿಸಿತ್ತು.
ಒಬ್ಬರೇ ಎಲ್ಲವನ್ನೂ ಮಾಡಬಾರದು
ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿವೆಯಾದರೂ, ಮಾರುಕಟ್ಟೆ ಇನ್ನಷ್ಟು ವಿಸ್ತಾರಗೊಳ್ಳಬೇಕು. ತೆಲುಗು, ತಮಿಳು ಭಾಷೆಯ ಸಿನಿಮಾಗಳನ್ನು ಎಲ್ಲರೂ ನೋಡುತ್ತಾರೆ. ಆದರೆ, ನಮ್ಮ ಸಿನಿಮಾಗಳನ್ನು ನಮ್ಮವರೇ ನೋಡುವುದಿಲ್ಲ. ಪರಭಾಷೆಯ ಚಿತ್ರಗಳಂತೆ ನಮ್ಮ ಚಿತ್ರಗಳಿಗೂ ಹೊರಗಡೆ ರಿಲೀಸ್ ಆಗಲು ಅವಕಾಶ ಸಿಗಬೇಕು. ಆಗಷ್ಟೇ ಜನಪ್ರಿಯಗೊಳ್ಳಲು ಸಾಧ್ಯ. ಈಗಿನ ಕಾಲಕ್ಕೆ ತಕ್ಕಂತೆ ಸಿನಿಮಾ ಮಾಡಬೇಕು. ಈಗಂತೂ ಡಿಜಿಟಲ್ ಇರುವುದರಿಂದ ಎಲ್ಲವೂ ಸುಲಭ. ಅದನ್ನು ಬಳಸಿಕೊಂಡು ಇಷ್ಟವಾಗುವ ಸಿನಿಮಾ ಮಾಡುವತ್ತ ಯುವ ನಿರ್ದೇಶಕರು ಮುಂದಾಗಬೇಕು.
ಯಾರು ಯಾವುದನ್ನು ಮಾಡಬೇಕೋ ಅದನ್ನಷ್ಟೇ ಮಾಡಿದರೆ ಚೆನ್ನಾಗಿರುತ್ತೆ. ಎಲ್ಲವನ್ನೂ ಒಬ್ಬರೇ ಮಾಡಿದಾಗ, ಅದು ಹಾಳಾಗುತ್ತೆ. ನಾನು ಧಾರವಾಡದಲ್ಲೇ ಹುಟ್ಟಿ ಬೆಳೆದವನು. ಆಗ ನನಗೆ ಸಂಗೀತ ಮೇಲೆ ಆಸಕ್ತಿ ಇತ್ತು. ಬಸವರಾಜ ರಾಜಗುರು, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಹೀಗೆ ಅವರ ಸಂಗೀತದಿಂದ ಪ್ರಭಾವಗೊಂಡವನು. ರಾತ್ರಿಯೆಲ್ಲಾ ಅವರ ಹಾಡು ಕೇಳಿ ಅವರಂತೆಯೇ ಹಾಡಬೇಕು ಎಂದು ಕನಸು ಕಂಡವನು. ಆದರೆ, ಸಿನಿಮಾಗೆ ಹಾಡೋದು ಇಷ್ಟ ಇರಲಿಲ್ಲ. ಚಂದ್ರಶೇಖರ ಕಂಬಾರರು “ಉಡುಗೊರೆ’ ಸಿನಿಮಾದಲ್ಲಿ ಹಾಡುವ ಅವಕಾಶ ಕೊಟ್ಟರು. ಆದರೆ, ನನಗೆ ಹಾಡುವ ಆಸೆ ದೊಡ್ಡದಾಗಿರಲಿಲ್ಲ. ಸಿನಿಮಾ ನಿರ್ದೇಶನ ಮಾಡುವ ಆಸೆ ಇತ್ತು. ಹಾಗಾಗಿ, ಗಾಯನ ಬಿಟ್ಟು, ನಿರ್ದೇಶನಕ್ಕೆ ಬಂದೆ.
25 ವರ್ಷದಿಂದಲೂ ಸೆಲ್ಫ್ ಕಟಿಂಗ್!
ಸುರೇಶ್ ಹೆಬ್ಳೀಕರ್ ಅವರು ಮೊದಲಿನಿಂದಲೂ ಸ್ಪೆಷಲ್ ವ್ಯಕ್ತಿಯಾಗಿಯೇ ಗುರುತಿಸಿಕೊಂಡವರು. ಅವರ ಲೈಫ್ನಲ್ಲೂ ಹಲವು ವಿಶೇಷತೆಗಳಿವೆ. ಅದರಲ್ಲೊಂದು ಹೇಳುವುದಾದರೆ, ಅವರು ಸುಮಾರು 25 ವರ್ಷಗಳಿಂದಲೂ ಕಟಿಂಗ್ ಶಾಪ್‌ಗೆ ಹೋಗಿಲ್ಲ! ಮನೆಯಲ್ಲಿ ಅವರೇ ಸ್ವತಃ ಕಟಿಂಗ್ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಹೌದು, ಅದಕ್ಕೆ ಕಾರಣವೂ ಇದೆ. ಒಮ್ಮೆ ಕಟಿಂಗ್ ಶಾಪ್‌ಗೆ ಹೋಗಿದ್ದಾಗ, ಕಟಿಂಗ್ ಮಾಡುವಾತ, ತಲೆಯನ್ನು ಹಿಡಿದು, ಮೇಲೆತ್ತೋದು, ಕೆಳಗಿಳಿಸೋದು, ಪಕ್ಕಕ್ಕೆ ಸರಿಸೋದು, ಹೀಗೆ ಮಾಡಿ, ಹಾಗೆ ಮಾಡಿ ಅನ್ನೋದು ಅವರಿಗೆ ಕಿರಿ ಕಿರಿಯಾಗಿದೆ. ಯಾವಾಗ ಅದು ಬೋರ್ ಅನಿಸೋಕೆ ಶುರುವಾಯೊ, ಆಗಿನಿಂದ ಅವರು ಮನೆಯಲ್ಲೇ ಸೆಲ್ ಕಟಿಂಗ್ ಮಾಡಿಕೊಳ್ಳೋಕೆ ಶುರುಮಾಡಿಬಿಟ್ಟರು. ಇಂದಿಗೂ ಅವರು ಕಟಿಂಗ್ ಶಾಪ್ ಕಡೆ ಮುಖ ಮಾಡಿಲ್ಲ. ಇನ್ನೊಂದು ವಿಷಯ ಹೇಳಲೇಬೇಕು. ಮೊದಲ ಬಾರಿಗೆ ಹೆಬ್ಳೀಕರ್ ಎಚ್‌ಐವಿ ಕುರಿತು ಡಾಕ್ಯುಮೆಂಟರಿ ಮಾಡಿದ್ದರು. ಅದಕ್ಕಾಗಿ ಮುಂಬೈನ ಹಲವು ವೈದ್ಯರನ್ನು ಸಂಪರ್ಕಿಸಿ, ರೋಗಿಗಳನ್ನು ಸಂದರ್ಶಿಸಿದ್ದರಂತೆ. ರೆಡ್‌ಲೈಟ್ ಏರಿಯಾಗೂ ಹೋಗಿದ ಅನುಭವ ಬಿಚ್ಚಿಡುತ್ತಾರೆ ಹೆಬ್ಳೀಕರ್.
ಬರಹ: ವಿಜಯ್ ಭರಮಸಾಗರ; ಚಿತ್ರಗಳು: ಮನು ಮತ್ತು ಸಂಗ್ರಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.