ಮುಗುಳು ನಗೆ ಇಂದೇ ಪ್ರದರ್ಶನ
Team Udayavani, Aug 31, 2017, 5:13 PM IST
ಗಣೇಶ್ ಅಭಿನಯದ, ಯೋಗರಾಜ್ ಭಟ್ ನಿರ್ದೇಶನದ “ಮುಗುಳು ನಗೆ’ ಚಿತ್ರ ನಾಳೆ ರಾಜ್ಯಾದ್ಯಂತ
ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಆದರೆ, ಅದಕ್ಕೂ ಮುನ್ನ, ಇಂದು ರಾತ್ರಿ ಚಿತ್ರದ ವಿಶೇಷ ಪ್ರದರ್ಶನಗಳು
ಆಯೋಜಿತವಾಗಿದ್ದು, ಒರಾಯನ್ ಮಾಲ್‌ನ ಪಿವಿಆರ್ ಮಲ್ಟಿಪ್ಲೆಕ್ಸ್‌ನ ಐದು ಪರದೆಗಳು ಹಾಗೂ ವೀರೇಶ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನವಾಗಲಿದೆ. ಅಷೇ ಅಲ್ಲ, ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಮೂಲಕ ಹೌಸ್‌ಫುಲ್ ಆಗಿದೆ ಎಂಬುದು ವಿಶೇಷ.
ಹೌದು, ಇದೇ ಮೊದಲ ಬಾರಿಗೆ ಗಣೇಶ್ ಅವರ ಈ ಚಿತ್ರ ಮುಂಗಡ ಬುಕ್ಕಿಂಗ್ ಹೌಸ್‌ಫುಲ್ ಕಾಣುತ್ತಿದ್ದು, ಅದರ ಜೊತೆಗೆ, ಗೋಲ್ಡ್ ಕ್ಲಾಸ್‌ನಲ್ಲಿ ಮಹಿಳೆಯರಿಗಾಗಿಯೇ ವಿಶೇಷ ಪ್ರದರ್ಶನವನ್ನು ಚಿತ್ರತಂಡ ಏರ್ಪಡಿಸಲಾಗಿದೆ. ಈ ಹಿಂದೆ ನಿರ್ದೇಶಕ ಯೋಗರಾಜ್ ಭಟ್ ಅವರು, “ಮುಗುಳು ನಗೆ’ ಹೆಸರಲ್ಲಿ ಮಹಿಳೆಯರು ಸೆಲ್ಫಿಯಲ್ಲಿ ಸ್ಮೈಲ್ ಮಾಡಿರುವ ಫೋಟೋ ಕಳುಹಿಸುವ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದರು.
ನೂರಾರು ಮಹಿಳೆಯರು ಸ್ಮೈಲ್ ಮಾಡಿ ಸೆಲ್ಫಿ ಕಳುಹಿಸಿದ್ದರು. ಆ ಪೈಕಿ 200 ಮಹಿಳೆಯರನ್ನು ಆಯ್ಕೆ ಮಾಡಿದ್ದು, ಅವರಿಗೆಲ್ಲ ಗುರುವಾರ ರಾತ್ರಿ ಒರಾಯನ್ ಮಾಲ್‌ನ ಗೋಲ್ಡ್ ಕ್ಲಾಸ್‌ನಲ್ಲಿ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ಮಹಿಳಾ ಸೆಲೆಬ್ರೆಟಿಗಳೂ ಚಿತ್ರ ವೀಕ್ಷಣೆ ಮಾಡಲಿದ್ದಾರೆ. ಈ ಪ್ರದರ್ಶನಕ್ಕೆ ಮಹಿಳೆಯರ ಹೊರತಾಗಿ ಯಾವೊಬ್ಬ ಗಂಡಸು ಹೋಗುವಂತಿಲ್ಲ ಎಂಬುದು ವಿಶೇಷ. ಇಷ್ಟಕ್ಕೂ ಮಹಿಳೆಯರಿಗೆ ಭಟ್ಟರು ಈ ಸ್ಪರ್ಧೆ ಇಟ್ಟಿದ್ದು ಯಾಕೆ ಗೊತ್ತಾ? ಮಹಿಳೆಯರು ರಾತ್ರಿ 7 ಗಂಟೆಗೆ ಕಿರುತೆರೆಯಲ್ಲಿ ಬರುವ ಧಾರಾವಾಹಿ ವೀಕ್ಷಣೆಗೆ ಕೂರುತ್ತಾರೆ. ಅವರು
ಸಹ “ಮುಗುಳು ನಗೆ’ ನೋಡಲು ಹೊರಬರಲಿ ಎಂಬ ಕಾರಣಕ್ಕೆ ಈ ಸ್ಪರ್ಧೆ ಏರ್ಪಡಿಸಿ, ಅದರಂತೆ 200 ಮಹಿಳೆಯರಿಗೆ ಪ್ರದರ್ಶನ ಮಾಡುತ್ತಿದ್ದಾರೆ. ಅಂದಹಾಗೆ, ವಿತರಕ ಜಾಕ್ ಮಂಜು ಅವರು ಮಲ್ಟಿಪ್ಲೆಕ್ಸ್ ಸೇರಿದಂತೆ ಸುಮಾರು 240 ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಇನ್ನು, ಗಣೇಶ್‌ಗೆ ಕಳೆದ ಸೋಮವಾರದಿಂದ ರಾತ್ರಿ ನಿದ್ದೆಯೇ ಬರುತ್ತಿಲ್ಲವಂತೆ. ಅದಕ್ಕೆ ಕಾರಣ, “ಮುಗುಳು ನಗೆ’ ಎನ್ನುತ್ತಾರೆ ಅವರು. ಪ್ರತಿ ದಿನ ರಾತ್ರಿ 9.30ಕ್ಕೆ ಮಲಗುತ್ತಿದ್ದ ಅವರು, ಈ ಚಿತ್ರದ ಬಿಡುಗಡೆ ದಿನ ಹತ್ತಿರ ಬರುತ್ತಿದ್ದಂತೆ ನಿದ್ದೆಯೇ ಮಾಯವಾಗಿದೆಯಂತೆ. ಹತ್ತು ವರ್ಷಗಳ ನಂತರ ಭಟ್ಟರ ಜತೆ ಕೆಲಸ ಮಾಡಿರುವ ಖುಷಿ, ಭಯ ಎರಡೂ ಅವರಿಗಿದೆಯಂತೆ. ಅದೇನೆ ಇರಲಿ, ಗಣೇಶ್‌ಗೆ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಂತೂ ಇದ್ದೇ ಇದೆ. ಅವರು ಇದುವರೆಗೆ ಮಾಡಿದ ಚಿತ್ರಗಳ ಪೈಕಿ “ಮುಂಗಾರು ಮಳೆ’, “ಗಾಳಿಪಟ’ ಹಾಗೂ “ಮುಗುಳು ನಗೆ’ ಚಿತ್ರದ ಸ್ಕ್ರಿಪ್ಟ್ ಪ್ರತ್ಯೇಕವಾಗಿ ಎತ್ತಿಟ್ಟುಕೊಂಡಿದ್ದಾರಂತೆ.
ಈ ಹಿಂದೆ “ಮುಂಗಾರು ಮಳೆ’ ಸ್ಕ್ರಿಪ್ಟ್ನಲ್ಲಿ ಎರಡು ಸೀನ್ ಗೆ ಮಾರ್ಕ್ ಮಾಡಿದ್ದರಂತೆ. ಚಿತ್ರ ಬಿಡುಗಡೆಯಾದ ಬಳಿಕ ಜನ ಸಹ ಆ ದೃಶ್ಯಗಳನ್ನು ಖುಷಿಪಟ್ಟರಂತೆ. ಈಗ “ಮುಗುಳು ನಗೆ’ ಚಿತ್ರದ ಸ್ಕ್ರಿಪ್ಟ್ನಲ್ಲಿ ಎಂಟು ಸೀನ್ ಮಾರ್ಕ್ ಮಾಡಿದ್ದಾರಂತೆ. ಆ ಎಂಟು ಸೀನ್ ಯಾವುದು ಅನ್ನೋದಕ್ಕೆ ಸಿನಿಮಾ ಹೊರಬರೋವರೆಗೆ ಕಾಯಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.