ನನ್ನ ಹಾಡು ನನ್ನದು: ಶೇಷಗಿರಿಯ ಸ್ವಗತಲಹರಿ
Team Udayavani, Oct 4, 2017, 12:48 PM IST
ಆ ಹುಡುಗನಿಗೆ ಸಂಗೀತದ ಮೇಲೆ ಪ್ರೀತಿ ಇತ್ತು. ಆದರೆ, ಯಾವುದೇ ಸಂಗೀತದ ಕಲಿಕೆ ಗೊತ್ತಿಲ್ಲ. ಆ ಹುಡುಗನ ತಂದೆಗೆ ಹಿನ್ನೆಲೆ ಗಾಯಕ ಆಗಬೇಕೆಂಬ ಆಸೆ ಇತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಕೊನೆಗೆ, ಮಗನನ್ನಾದರೂ ಹಿನ್ನೆಲೆ ಗಾಯಕನನ್ನಾಗಿಸಬೇಕು ಎಂಬ ಆಸೆ ಚಿಗುರಿತು. ಆಗಷ್ಟೇ ಆ ಹುಡುಗ ಬಿಕಾಂ ಓದುತ್ತಿದ್ದ. ಅವನ ಬಳಿ ಬಂದ ತಂದೆ, ನಿನಗೆ ಸಂಗೀತದ ಮೇಲೆ ಆಸಕ್ತಿ ಇದೆಯಾ, ಹಾಡೋಕೆ ಇಷ್ಟನಾ ಅಂತ ಕೇಳಿಯೇಬಿಟ್ಟರು. ಆಗ, ಆ ಹುಡುಗನಿಗೆ ಸ್ವಲ್ಪ ಗೊಂದಲ. ಬಿಕಾಂ ಓದು ಮುಂದುವರೆಸುವುದಾ, ಸಂಗೀತದ ಕಡೆ ವಾಲುವುದಾ ಅಂತ. ಕೊನೆಗೆ ಎರಡನ್ನೂ ಮ್ಯಾನೇಜ್ ಮಾಡೋದು ಕಷ್ಟ ಅಂತಂದುಕೊಂಡು, ಹಾಡೋದು ಇಷ್ಟ ಅಂದರು. ಆ ಹುಡುಗ ಹಾಗೆ ಹೇಳಿದ್ದೇ ತಡ, ತಂದೆಗೂ ಖುಷಿಯಾಯ್ತು. ಆದರೆ, ಆ ಹುಡುಗ ಬಿ.ಕಾಂ ಓದನ್ನು ಅರ್ಧಕ್ಕೆ ನಿಲ್ಲಿಸಿ, ನನಗೆ ಮೂರು ತಿಂಗಳು ಟೈಮ್ ಕೊಡಿ. ಅಷ್ಟರಲ್ಲಿ ನಾನು ಪ್ರೂವ್ ಮಾಡ್ತೀನಿ ಅಂತ ಹೇಳಿದಾಗ, ತಂದೆಯ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿತು. ಹಾಗೆ ಸಿಕ್ಕ ಸಿಗ್ನಲ್ ಇಲ್ಲಿಯವರೆಗೂ ಸ್ಟಾಪ್ ಆಗಿಲ್ಲ. ಈಗ ಆ ಹುಡುಗ ಕನ್ನಡ ಚಿತ್ರರಂಗದಲ್ಲಿ ಮೆಚ್ಚಿನ ಗಾಯಕ ಎನಿಸಿಕೊಂಡಿದ್ದಾನೆ. ಬರೋಬ್ಬರಿ 360 ಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಎಲ್ಲರ ಫೇವರೇಟ್ ಆಗಿದ್ದಾನೆ. ಅದು ಬೇರಾರೂ ಅಲ್ಲ, “ರಾಜಕುಮಾರ’ ಚಿತ್ರದ “ಯಾರಿವನು ಕನ್ನಡದವನು…’ ಖ್ಯಾತಿಯ ಶಶಾಂಕ್ ಶೇಷಗಿರಿ. ಅವರು ಗಾಯಕರಾಗಿದ್ದು, ಬೆಳೆದದ್ದು ಇತ್ಯಾದಿ ಕುರಿತು ಸ್ವತಃ ಶಶಾಂಕ್ ಶೇಷಗಿರಿ “ರೂಪತಾರಾ’ ಜತೆ ಮಾತಾಡಿದ್ದಾರೆ.
ಓವರ್ ಟು ಶಶಾಂಕ್…
ಇಂಟ್ರಡಕ್ಷನ್ ಹಾಡೆಂದರೆ ನೆನಪಾಗ್ತಿನಿ…
ನಾನು ಮೂಲತಃ ಮೈಸೂರಿನವನು. ನನ್ನ ತಂದೆ ಶೇಷಗಿರಿ. ಅವರಿಗೂ ಹಿನ್ನೆಲೆ ಗಾಯಕ ಆಗಬೇಕೆಂಬ ಆಸೆ ಇತ್ತು. ಆದರೆ, ಆಗಲಿಲ್ಲ. ಆ ಆಸೆಯನ್ನು ನನ್ನ ಮೂಲಕ ಈಡೇರಿಸಿಕೊಂಡಿದ್ದಾರೆ. ಅವರ ಸಹಕಾರ, ಪ್ರೋತ್ಸಾಹದಿಂದಲೇ ಇಂದು ನಾನು ಗಾಯಕನಾಗಲು ಸಾಧ್ಯವಾಗಿದೆ. ನಾನು ಕನ್ನಡ ಚಿತ್ರರಂಗಕ್ಕೆ ಬಂದಿದ್ದು 2007ರಲ್ಲಿ. “ಹಾಡಿನ ಬಂಡಿ’ ಎಂಬ ರಿಯಾಲಿಟಿ ಷೋ ಮೂಲಕ ನನ್ನ ಗಾಯನ ಪಯಣ ಶುರುವಾಯಿತು. ನಾನು ಹಾಡಿದ ಮೊದಲ ಚಿತ್ರ “ಮೇಘವೇ ಮೇಘವೇ’. ಆ ಚಿತ್ರದಲ್ಲಿ ನನಗೆ ಮೊದಲ ಸಲ ಹಾಡಲು ಅವಕಾಶ ಕೊಟ್ಟಿದ್ದು ನಿರ್ದೇಶಕ, ಗೀತರಚನೆಕಾರ ನಾಗೇಂದ್ರಪ್ರಸಾದ್. ನನ್ನ ಪಾಲಿಗೆ ಅವರು ಗುರು. ಅವರಿಂದಲೇ ಇಂದು ನಾನು ಗಾಯಕನಾಗಿ ಬಿಜಿಯಾಗಿದ್ದೇನೆ. ಇಲ್ಲಿಯವರೆಗೆ ನಾನು ಸುಮಾರು 360 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದೇನೆ. ಹೆಮ್ಮೆ àನೆಂದರೆ, ಸ್ಟಾರ್ ನಟರಾದ ಪುನೀñ …ರಾಜಕುಮಾರ್, ಶಿವರಾಜಕುಮಾರ್, ದರ್ಶನ್, ದುನಿಯಾ ವಿಜಯ್, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ … ಹೀಗೆ ಹಲವು ನಟರಿಗೆ ಹಾಡಿದ್ದೇನೆ. ಮಾಸ್ ಹೀರೋಗಳ ಇಂಟ್ರಡಕ್ಷನ್ ಹಾಡುಗಳಿಗೆ ನನ್ನ ದನಿಯೇ ಇದೆ ಅನ್ನೋದು ವಿಶೇಷ. ಹೀರೋಗಳ ಇಂಟ್ರಡಕ್ಷನ್ ಹಾಡುಗಳೆಂದರೆ, ಶಶಾಂಕ್ ಶೇಷಗಿರಿ ಅನ್ನುವಷ್ಟರ ಮಟ್ಟಿಗೆ ಮಾಸ್ ಹಾಡುಗಳನ್ನು ಹಾಡಿದ್ದೇನೆ. ದರ್ಶನ್ ಅವರ “ಐರಾವತ’ ಚಿತ್ರದಲ್ಲಿ “ಏ ಐರಾವತ …’ ಮತ್ತು “ಗುಡಿ ಮೇಲೆ ಗಂಟೆ …’ ಎಂಬ ಹಾಡುಗಳನ್ನಲ್ಲದೆ, “ಜಗ್ಗುದಾದ’, “ವಿರಾಟ್ ಹೀಗೆ ಅವರ ಒಂದಷ್ಟು ಚಿತ್ರಗಳಿಗೆ ಹಾಡಿದ್ದೇನೆ. ನನಗೆ ತುಂಬಾ ಜನಪ್ರಿಯ ತಂದುಕೊಟ್ಟಿದ್ದು “ದುನಿಯಾ’ ವಿಜಯ್ ಅಭಿನಯದ “ಜರಾಸಂಧ’ ಚಿತ್ರದ “ಯಾರಾದ್ರೂ ಹಾಳಾಗೋಗ್ಲಿ …’ ಎಂಬ ಹಾಡು. ಆ ಹಾಡು ಎಲ್ಲೆಡೆ ಹಿಟ್ ಆಯ್ತು. ಆ ಹಾಡಿನಿಂದ ನನಗೆ ಸಾಕಷ್ಟು ಅವಕಾಶಗಳೂ ಹುಡುಕಿ ಬಂದವು. ನಾನು ಹೆಚ್ಚು ಇಂಟ್ರಡಕ್ಷನ್ ಹಾಡು ಹಾಡೋಕೆ ಹರಿಕೃಷ್ಣ ಅವರೇ ಕಾರಣ. ಅವರ ಸಹಕಾರ, ಪ್ರೋತ್ಸಾಹ ಹೆಚ್ಚಾಗಿಯೇ ಇದೆ. ಗುರುಕಿರಣ್ ಅವರನ್ನು ಹೊರತುಪಡಿಸಿ, ಕನ್ನಡ ಚಿತ್ರರಂಗದ ಬಹುತೇಕ ಸಂಗೀತ ನಿರ್ದೇಶಕರಿಗೆ ಹಾಡಿದ್ದೇನೆ. ಹಳೆಯ, ಹೊಸ ಸಂಗೀತ ನಿರ್ದೇಶಕರ ಚಿತ್ರಗಳಿಗೂ ಹಾಡಿರುವುದುಂಟು.
ಸಂಗೀತ ನಿರ್ದೇಶನಕ್ಕೂ ಎಂಟ್ರಿ…
ನಾನು ಕನ್ನಡ ಚಿತ್ರರಂಗಕ್ಕೆ ಬಂದು ಹನ್ನೆರೆಡು ವರ್ಷಗಳಾಗಿವೆ. ಸುಮಾರು 350 ಚಿತ್ರಗಳಿಗೆ ಹಾಡಿದ್ದೇನೆ. “ಬೆಳ್ಳಿ’ ಚಿತ್ರದ “ಡೂನ ಡೂನ …’ ಹಾಡಿಗೆ ಮಿರ್ಚಿ ಅವಾರ್ಡ್ ಸಿಕ್ಕಿದೆ. ಅಷ್ಟೇ ಅಲ್ಲ, ಬಹುತೇಕ ಹಾಡುಗಳು ಫಿಲ್ಮ್ಫೇರ್‌ಗೆ ನಾಮನಿರ್ದೇಶನವಾಗಿದ್ದೂ ಉಂಟು. ಇನ್ನು, ಸರ್ಕಾರದ ಅಕಾಡೆಮಿ ಪ್ರಶಸ್ತಿಯೊಂದು “ದೇವದಾಸ್’ ಚಿತ್ರದ “ನಿಮ್ಮಪ್ಪನ ಗಂಟು ಎಲ್ಲೋಗಲ್ವೋ …’ ಹಾಡಿಗೆ ಸಿಕ್ಕಿದೆ. ನಾನು ಪ್ರಶಸ್ತಿಗಾಗಿ ಹಾಡುವುದಿಲ್ಲ. ಜನರಿಗೆ ಮತ್ತು ಅವರ ಮನರಂಜನೆಗೆ ಹಾಡುತ್ತೇನೆ. ನನ್ನ ಹಾಡು ಎಲ್ಲರಿಗೂ ಇಷ್ಟ ಆಗಬೇಕು ಎಂಬ ಉದ್ದೇಶ ನನ್ನದು.
ಎಂಸಿಬಿ (ಮಿಡಲ್ ಕ್ಲಾಸ್ ಬಾಯ್ಸ) ಎಂಬ ಕನ್ನಡ ವೀಡಿಯೋ ಆಲ್ಬಂವೊಂದಕ್ಕೆ ಸಂಗೀತ ನೀಡಿದ್ದೇನೆ. ಆ ಮೂಲಕ ಸಂಗೀತ ನಿರ್ದೇಶನಕ್ಕೂ ಕಾಲಿಟಿದ್ದೇನೆ. ಇನ್ನು, ನನ್ನ ಕೈಯಲ್ಲಿ ನಾಲ್ಕು ಚಿತ್ರಗಳಿವೆ. ಆ ಎಲ್ಲಾ ಸಿನಿಮಾಗಳಿಗೆ ಸಂಗೀತ ನೀಡುವ ಅವಕಾಶ ದೊರೆತಿದೆ. ಈಗಾಗಲೇ “ರಾಂಧವ’ ಎಂಬ ಹೊಸಬರ ಚಿತ್ರಕ್ಕೆ ಸಂಗೀತ ನೀಡಿದ್ದೇನೆ. ಆ ಚಿತ್ರಕ್ಕೆ ಸನೀಲ್ ಆಚಾರ್ಯ ನಿರ್ದೇಶಕರು. ಭುವನ್ ಪೊನ್ನಣ್ಣ ನಾಯಕರಾಗಿದ್ದಾರೆ. ಆ ಚಿತ್ರದಲ್ಲಿ ಐದು ಹಾಡುಗಳಿವೆ. ಈಗಾಗಲೇ ಹಾಡುಗಳು ರೆಡಿಯಾಗಿವೆ. ಚಿತ್ರೀಕರಣಕ್ಕೆ ಹೋಗುವ ಮುನ್ನವೇ, ಆಡಿಯೋ ರಿಲೀಸ್ ಮಾಡುವ ಯೋಚನೆ ನಿರ್ದೇಶಕರಿಗಿದೆ. ಉಳಿದಂತೆ ಇನ್ನು ಮೂರು ಚಿತ್ರಗಳಿಗೂ ಸಂಗೀತ ನೀಡುತ್ತಿದ್ದೇನೆ.
ಕನ್ನಡ ಹಾಡನ್ನು ಕನ್ನಡದವರೇ ಹಾಡಿದರೆ ಚಂದ
ಈಗ ಕೆಲವು ಗಾಯಕರು ಸಂಗೀತ ನಿರ್ದೇಶಕರಿಗೆ ಹಾಡಿ ಕಳುಹಿಸುತ್ತಾರೆ. ನನ್ನ ಪ್ರಕಾರ ಗಾಯಕರು ಸಂಗೀತ ನಿರ್ದೇಶಕರು ಹೇಳುವ ಸ್ಟುಡಿಯೋಗೆ ಬಂದು ಹಾಡಿದರೆ ಚೆನ್ನಾಗಿರುತ್ತೆ. ಯಾಕೆಂದರೆ, ಗಾಯಕ ಹೇಗೆ ಹಾಡಬೇಕು, ಹೇಗೆ ಫೀಲ್ ಕೊಡಬೇಕು ಎಂಬುದನ್ನು ಸಂಗೀತ ನಿರ್ದೇಶಕರು ಹೇಳಿಕೊಡುತ್ತಾರೆ. ಅವರಿಗೆ ಹೇಗೆ ಬೇಕೋ ಹಾಗೆ ಹಾಡಿಸಿಕೊಳ್ಳುತ್ತಾರೆ. ಹಾಗಾಗಿ, ಗಾಯಕರು ಸ್ಟುಡಿಯೋಗೆ ಬಂದು ಹಾಡುವುದೇ ಒಳ್ಳೆಯದು. ಅದು ಅರ್ಥಪೂರ್ಣವಾಗಿರುತ್ತೆ. ಹರಿಕೃಷ್ಣ ಅವರ ಕೆಲಸ ಕೂಡ ಒಂದಷ್ಟು ವಿಭಿನ್ನವಾಗಿರುತ್ತೆ. ಅವರು ಟ್ಯೂನ್ ಮಾಡಿ, ಸಾಹಿತ್ಯ ಜತೆಗೆ ವಾಟ್ಸಾಪ್ ಮಾಡುತ್ತಾರೆ. ಒಂದು ಫೀಲ್ ಹೇಳಿ, ಆ ಫೀಲ್‌ನಲ್ಲಿ ಹಾಡಿ ಕಳುಹಿಸಿ ಎನ್ನುತ್ತಾರೆ. ಅದು ಅವರ ವಿಭಿನ್ನ ಕೆಲಸ. ಅದೊಂದು ರೀತಿ ಚಾಲೆಂಜಿಂಗ್ ಆಗಿಯೂ ಇರುತ್ತೆ. ಹಾಡಿ ಕಳುಹಿಸಿದ ಬಳಿಕ ಸ್ಟುಡಿಯೋಗೆ ಹೋಗಿ ಅಂತಿಮವಾಗಿ ಹಾಡಿಬರುತ್ತೇನೆ. ನನ್ನ ಪ್ರಕಾರ ಗಾಯಕರು ಬೇರೆಲ್ಲೋ ಹಾಡಿ ಕಳುಹಿಸುವುದಕ್ಕಿಂತ, ಸಂಗೀತ ನಿರ್ದೇಶಕರು ಹೇಳುವ ಸ್ಟುಡಿಯೋಗೆ ಹೋಗಿ ಹಾಡುವುದು ಸರಿ ಎನಿಸುತ್ತೆ.
ಒಮ್ಮೊಮ್ಮೆ ನಾವು ಹಾಡಿದ ಹಾಡು ಚೆನ್ನಾಗಿದ್ದರೂ, ಕೆಲವೊಮ್ಮೆ ಕೊನೆಕ್ಷಣದಲ್ಲಿ ಬದಲಾಗುತ್ತೆ. ಇನ್ನೇನು ಮಾಸ್ಟರಿಂಗ್ ಹೋಗುವಾಗಲೂ ಎಷ್ಟೋ ಸಲ, ಮಗದೊಮ್ಮೆ ಹಾಡಿದ ಉದಾಹರಣೆಯೂ ಉಂಟು. ಕೆಲವು ಸಲ ಮಾಸ್ಟರಿಂಗ್ ಆದಮೇಲೂ ಹಾಡಿದ್ದಿದೆ. ಹರಿಕೃಷ್ಣ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಷನ್‌ನಲ್ಲಿ ಇಂತಹ ಉದಾಹರಣೆ ಹೆಚ್ಚು ಸಿಗುತ್ತವೆ. ಆಡಿಯೋ ರಿಲೀಸ್ ಆಗುವ ಹಿಂದಿನ ದಿನವೂ ಸಹ ಬದಲಾವಣೆ ಆಗಿರುವುದುಂಟು. ಅದು ಬರೆದವರಿಗೆ ಹಾಗೂ ಆ ಹಾಡು ಸಂಯೋಜಿಸಿದವರಿಗೆ ತೃಪ್ತಿ ಆಗಬೇಕು ಅಷ್ಟೇ. ಅಲ್ಲಿ ಪದಗಳು ತೃಪ್ತಿ ಆಗದಿರುವುದಕ್ಕೋ ಅಥವಾ, ಸ್ವಲ್ಪ ಪದ ಸಾಲು ಬದಲಾವಣೆ ಮಾಡುವುದಕ್ಕೋ ಅಂತಹ ಕೆಲಸ ನಡೆದಿದ್ದಿದೆ. ಒಂದು ಹಾಡು ಸುಮಾರು ಹದಿನೈದು ಸಲ ಕರೆಕ್ಷನ್ ಆಗಿದೆ ಎಂಬುದು ವಿಶೇಷ. ಹಾಗೆ ಆದಂತಹ ಹಾಡು ಹಿಟ್ ಕೂಡ ಆಗಿದೆ. ಗಾಯಕರ ಗಾಯನದಲ್ಲಿ ಅಂತಹ ಸಮಸ್ಯೆ ಇರಲ್ಲ. ಪದಗಳ ಬದಲಾವಣೆ, ಸಂಯೋಜನೆಯಲ್ಲಿ ಇನ್ನೇನೋ ಬದಲಾವಣೆ ಬೇಕೆನಿಸಿದಾಗ, ಆ ರೀತಿ ಆಗುತ್ತೆ. “ರಾಜಕುಮಾರ’ ಚಿತ್ರದ “ಯಾರಿವನು ಕನ್ನಡದವನು …’ ಹಾಡನ್ನು ಟ್ರಾಕ್ ಹಾಡಿದ್ದೆ. ಅದನ್ನು ದೇವಿ ಶ್ರೀಪ್ರಸಾದ್ ಅವರಿಂದ ಹಾಡಿಸಲಾಗಿತ್ತು. ಆದರೆ, ಸ್ವತಃ ಸಂಗೀತ ನಿರ್ದೇಶಕರಿಗೇ ಅದೇಕೋ ಇಷ್ಟವಾಗಲಿಲ್ಲ. ಕೊನೆಗೆ ಎಲ್ಲರೂ ಟ್ರಾಕ್ ಕೇಳಿಸಿಕೊಂಡು, ಶಶಾಂಕ್ ಅವರಿಂದಲೇ ಹಾಡಿಸಿ ಅಂತ ನಿರ್ಧರಿಸಿದಾಗ, ಆ ಹಾಡು ನಾನೇ ಹಾಡುವಂತಾಯಿತು. ಯಾಕೆಂದರೆ, ಹಾಡಲ್ಲಿ, ಪದಗಳಲ್ಲಿ ಸ್ಪಷ್ಟತೆ, ಉಚ್ಛಾರಣೆ ಇರಬೇಕು. ಕನ್ನಡ ಹಾಡುಗಳನ್ನು ಕನ್ನಡದವರೇ ಹಾಡಿದರೆ. ಬ್ರೈಟ್‌ನೆಸ್ ಇರುತ್ತೆ. ಹಾಡಿಗೆ ಭಾವ ತುಂಬಿ ಹಾಡಬಹುದು. ಫೀಲ್ ಕೊಟ್ಟು ಗುನುಗಬಹುದು. ಕನ್ನಡ ಹಾಡಿಗೆ ಸ್ಪಷ್ಟತೆ ಕೊಡಬಹುದು.
ತಮಿಳು, ತುಳು, ಹಿಂದಿಗೂ ಹಾಡು
ಪರಭಾಷೆ ಗಾಯಕರು ಕನ್ನಡದ ಅದೆಷ್ಟೋ ಹಾಡುಗಳನ್ನು ಹಾಡಿದ್ದಾರೆ. ಇಲ್ಲಿಯವರೂ ಬೇರೆ ಭಾಷೆಯ ಹಾಡುಗಳನ್ನು ಹಾಡಿರುವುದುಂಟು. ಅಂತಹ ಅವಕಾಶ ನನಗೂ ಸಿಕ್ಕಿದೆ. ನಾನು ತಮಿಳು, ತುಳು, ಹಿಂದಿ ಚಿತ್ರಗಳಿಗೂ ಹಾಡಿದ್ದೇನೆ. ಮಣಿಶರ್ಮ ಅವರ ತೆಲುಗಿನ ಹಲವು ಚಿತ್ರಗಳಿಗೆ ಟ್ರಾಕ್ ಹಾಡಿದ್ದೇನೆ. ಬಾಲಿವುಡ್ ಸಂಗೀತ ನಿರ್ದೇಶಕ ಸಲೀಂ ಸುಲೇಮಾನ್ ಅವರ “ಜಾಸ್ಮಿನ್’ ಚಿತ್ರಕ್ಕೆ ಹಾಡಿದ್ದೆ. ಆ ಚಿತ್ರಕ್ಕೆ ಅಕ್ಷಯ್ ಹಾಗೂ ಕತ್ರಿನಾಕೈಫ್ ನಾಯಕ,ನಾಯಕಿ. ಆದರೆ, ಸಿನಿಮಾ ಶೂಟಿಂಗ್ ನಡೆಯುವಾಗಲೇ ನಿರ್ಮಾಪಕರು ಸಾವನ್ನಪ್ಪಿದರು. ಆ ಚಿತ್ರ ಅಲ್ಲಿಗೇ ನಿಂತುಹೋಯಿತು. ನಾನು ಹಾಡಿದ ಹಾಡು ಅಲ್ಲೇ ಸ್ಟಾಪ್ ಆಯ್ತು.
ಗಾಯಕನಾದವನಿಗೆ ಸದಾ ಚಾಲೆಂಜ್ ಇದ್ದೇ ಇರುತ್ತೆ. ನಾನು ಮೊದ ಮೊದಲು ಇಂಟ್ರಡಕ್ಷನ್ ಸಾಂಗ್‌ಗೆ ಬ್ರಾಂಡ್ ಆಗಿದ್ದೆ. ಆದರೆ, ಅಜನೀಶ್ ಲೋಕನಾಥ್ ಅವರು “ಶ್ರೀಕಂಠ’ ಚಿತ್ರದಲ್ಲಿ “ಅಂತರಂಗದೂರಿಗೆ…’ ಎಂಬ ಮೆಲೋಡಿ ಹಾಡನ್ನು ಹಾಡಿಸಿದರು. ಆ ಬಳಿಕ ಸಾಕಷ್ಟು ಅದೇ ರೀತಿಯ ಮೆಲೋಡಿ ಹಾಡು ಹುಡುಕಿ ಬಂದದ್ದು ನಿಜ. ನನಗೆ ಮೆಲೋಡಿ ಹಾಡು ಹಾಡುವ ಆಸೆಯೂ ಇದೆ. ಪ್ಯಾಥೋದಲ್ಲಿ ಹೈ ರೇಂಜ್ ಇರಲಿ, ಸ್ಲೋ ರೇಂಜ್ ಇರಲಿ ಹಾಡ್ತೀನಿ. ಹೈ ಪೀಕ್ ಇದ್ದರೆ ಯಾವುದೇ ತೊಂದರೆ ಇಲ್ಲ. ಪ್ಯಾಥೋ ಸಾಂಗ್ ಜನರಿಗೆ ಟಚ್ ಆಗುತ್ತೆ. ಹಾಗಾಗಿ ಅಂತಹ ಹಾಡು ಹಾಡುವ ಬಯಕೆ ನನಗಿದೆ.
ಸ್ಟೈಲಿಶ್ ವಿಲನ್ ಆಗುವಾಸೆ…!
ಶಶಾಂಕ್ ಗಾಯಕರಾಗಿದ್ದಾಗಿದೆ. ಈಗ ಸಂಗೀತ ನಿರ್ದೇಶಕರೂ ಆಗಿದ್ದಾರೆ. ಅವರಿಗೆ ನಟನೆಯಲ್ಲೂ ಆಸಕ್ತಿ ಇದೆ. ಈಗಾಗಲೇ “ಜಲ್ಸಾ’ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಭಟ್ಟರು ಬರೆದ “ನಾಳೆ ನಾಡಿದ್ದು ಮದುವೆ…’ ಎಂಬ ಹಾಡು ಹಾಡಿ, ಅದರಲ್ಲೂ ನಟಿಸಿದ್ದಾರೆ. ಒಂದು ಸಿನಿಮಾಗಾಗಿ ಫಿಟ್ ಆಗುತ್ತಿದ್ದಾರೆ. ಆ ಬಳಿಕ ಕ್ಯಾಮೆರಾ ಮುಂದೆ ನಿಲ್ಲಲಿದ್ದಾರೆ. ಶಶಾಂಕ್‌ಗೆ ಸ್ಟೈಲಿಷ್ ವಿಲನ್ ಪಾತ್ರ ಮಾಡುವ ಆಸೆ ಇದೆ. ಅವರಿಗೆ ಹೀರೋ ಆಗುವ ಆಸೆ ಇಲ್ಲ. ವಿಲನ್ ಆಗಿ, ಗುರುತಿಸಿಕೊಳ್ಳಬೇಕೆಂಬ ಬಯಕೆ ಅವರದು. ಅಂದಹಾಗೆ, ಶಶಾಂಕ್ ದಿನಚರಿ ಹೇಗಿರುತ್ತೆ ಗೊತ್ತಾ? 7ಗಂಟೆಗೆ ಎದ್ದು ಅವರು ಸಂಗೀತ ಅಭ್ಯಾಸ ಮಾಡ್ತಾರೆ. ಅದು ಪ್ರತಿದಿನ ಇರುವುದಿಲ್ಲ. ಕೆಲವೊಮ್ಮೆ ರಾತ್ರಿ ಸಂಗೀತದ ಕೆಲಸ ಇದ್ದಾಗ, ಮಲಗುವುದು, ಏಳುವುದು ತಡವಾದಾಗ, ಸಂಗೀತಾಭ್ಯಾಸ ಇರುವುದಿಲ್ಲ. ಅವರು ಸ್ವರಸ್ಥಾನ ಬಿಗಿ ಮಾಡಿಕೊಳ್ಳುವುದಕ್ಕೆ ಸಮಯ ಸಿಕ್ಕಾಗೆಲ್ಲ ಅರ್ಧ ತಾಸು ಅಭ್ಯಾಸ ಮಾಡುತ್ತಾರೆ. ಮನೆಯಲ್ಲೇ ಶ್ರುತಿಪೆಟ್ಟಿಗೆ ಹಿಡಿದು ಕೂತು ಅಭ್ಯಾಸಿಸುತ್ತಾರೆ. ಮೊದಲೆಲ್ಲಾ ಅವರು ಜಿಮ್‌ಗೆ ಹೋಗುತ್ತಿದ್ದರು. ಆಗೆಲ್ಲಾ ದಿನವೊಂದಕ್ಕೆ ಮೂರು, ನಾಲ್ಕು ಹಾಡುಗಳನ್ನು ಹಾಡುತ್ತಿದ್ದರು. ಹಾಡಿನ ನಡುವೆ ಒಂದು ತಾಸು ಬಿಡುವು ಮಾಡಿಕೊಂಡು ಸಂಗೀತ ನಿರ್ದೇಶಕರ ಜತೆ ಶಟಲ್‌ಕಾಕ್ ಇತ್ಯಾದಿ ಆಟಗಳನ್ನು ಸಂಜೆ ವೇಳೆ ಆಡುತ್ತಿರುತ್ತಾರಂತೆ. ಭಾನುವಾರ ಮಾತ್ರ ಹಾಡಿಗೆ ರಜೆ ಕೊಡುವುದನ್ನು ಮಾತ್ರ ಎಂದಿಗೂ ಮರೆಯುವುದಿಲ್ಲ ಎನ್ನುವ ಶಶಾಂಕ್‌ಗೆ ಗಾಯಕ ಹರಿಹರನ್ ತುಂಬಾ ಅಚ್ಚುಮೆಚ್ಚು. ಬಿಟ್ಟರೆ, ಅರ್ಜಿತ್ ಸಿಂಗ್ ವಾಯ್ಸ ಅವರಿಗಿಷ್ಟ.
ಗಾಯಕರು ಯಾವ ಭಾಷಿಗರಾದರೇನು, ಸಂಗೀತಕ್ಕೆ ಕೊಡುವ ಗೌರವ ಕೊಡಬೇಕು ಎಂದು ಪ್ರೀತಿಯಿಂದ ಹೇಳುವ ಶಶಾಂಕ್, ಇತ್ತೀಚೆಗೆ ಕನ್ನಡದಲ್ಲಿ ಟ್ರೆಂಡ್ ಸೆಟ್ ಸಂಗೀತ ನಿರ್ದೇಶಕರು ಬರುತ್ತಿರುವುದನ್ನು ಸ್ವಾಗತಿಸುತ್ತಾರೆ. ಜ್ಯೂಡಸ್ಯಾಂಡಿ, ಅಜನೀಶ್ ಲೋಕನಾಥ್, ಚರಣ್‌ರಾಜ್, ಮಿದುನ್ ಮುಕುಂದನ್, ಭರತ್ ಸೇರಿದಂತೆ ಇತರೆ ಯುವ ಸಂಗೀತ ನಿರ್ದೇಶಕರು ಒಂದು ಹೊಸ ಟ್ರೆಂಡ್‌ಸೆಟ್ ಮಾಡಿದ್ದಾರೆ. ಕನ್ನಡ ಚಿತ್ರರಂಗ ಯಾವ ಚಿತ್ರರಂಗಕ್ಕೂ ಕಮ್ಮಿ ಇಲ್ಲದಂತೆ ಹಾಡುಗಳ ಗುಣಮಟ್ಟ ಕೊಡುತ್ತಲೇ ಬಂದಿದೆ ಎನ್ನುತ್ತಾರೆ ಅವರು.
ಸ್ವರ, ತಾಳ ತಂದೆ ತಾಯಿ ಇದ್ದಂಗೆ…
ಶಶಾಂಕ್ ಶೇಷಗಿರಿಗೆ ಮಕ್ಕಳು ರಿಯಾಲಿಟಿ ಶೋಗೆ ಹೋಗುವುದನ್ನು ಕಂಡರೆ ಸಣ್ಣ ಬೇಸರವಿದೆ. ಹಲವು ರಿಯಾಲಿಟಿ ಷೋಗಳಿಗೆ ಮಕ್ಕಳನ್ನು ಹಾಡಲು ಬಳಸಿಕೊಳ್ಳಲಾಗುತ್ತಿದೆ. ಅದು ತಪ್ಪು ಎಂಬುದು ಶಶಾಂಕ್ ಭಾವನೆ. ಅವರ ಪ್ರಕಾರ, ಮಕ್ಕಳು ಹಾಗೆ ಹೋಗಿಬಿಟ್ಟರೆ, ಅವರಿಗೆ ಸ್ಟಾರ್ ಎಂಬ ಭಾವನೆೆ ಬಂದುಬಿಡುತ್ತೆ. ಅವರ ಮೇಲೆ ಕೆಟ್ಟ ಪರಿಣಾ ಆಗುತ್ತೆ. ಅವರ ಹಾವಭಾವಗಳೂ ಬದಲಾಗುತ್ತಾ ಹೋಗುತ್ತವೆ. ವಿದ್ಯಾಭ್ಯಾಸಕ್ಕೂ ತೊಂದರೆ ಆಗುತ್ತೆ. ಪರೀಕ್ಷೆಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತೆ. ಹಾಗಾಗಿ, ಒಂದು ಹಂತದವರೆಗೆ ಅದು ಸರಿಯಲ್ಲ ಎನ್ನುತ್ತಾರೆ. ಸಂಗೀತ ಅಭ್ಯಾಸ ಇರಬೇಕು. ಕ್ಲಾಸಿಕಲ್ ಟಚ್ ಇದ್ದರೆ ಸಾಕು. ಸ್ವರಸ್ಥಾನ ಗೊತ್ತಿದ್ದರೆ ಬೇರೇನೂ ಬೇಕಿಲ್ಲ. ಮೆಲೋಡಿ ಹಾಡಬೇಕು ಎಂಬ ಆಸೆ ಇದ್ದರೆ, ಕ್ಲಾಸಿಕಲ್ ಕಲಿಯಬೇಕು. ಯಾಕೆಂದರೆ, ಸ್ವರ ಮತ್ತು ತಾಳ ತಂದೆ, ತಾಯಿ ಇದ್ದಂಗೆ. ಸ್ವತ, ತಾಳ ಗೊತ್ತಿದ್ದರೆ ಸಾಕು. ಗಾಯಕರಾಗಬಹುದು. ಸಿನಿಮಾ ಗಾಯಕರಾಗಲು ಯಾವುದೇ ವಿದ್ವತ್ ಇರಲಿ, ಜೂನಿಯರ್ ಸೀನಿಯರ್ ಎಂಬುದಾಗಲಿ ಬೇಡ. ಬೇಸಿಕ್ ತಿಳುವಳಿಕೆ ಇದ್ದರೆ ಆಷ್ಟು ಸಾಕು ಎನ್ನುತ್ತಾರೆ ಶಶಾಂಕ್.
ಹಾಡುವ ಹುಡುಗನಿಗೆ ನೂರು ಆಸೆ
* ಕಾಡುವಂತೆ ಹಾಡಬೇಕು
* ಡೈರೆಕ್ಟರ್ ಆಗಬೇಕು
* ಆ್ಯಕ್ಟಿಂಗ್ ಮಾಡಬೇಕು
* ಖಳನಾಗಿ ಮಿಂಚಬೇಕು
ಬರಹ: ವಿಜಯ್ ಭರಮಸಾಗರ; ಚಿತ್ರಗಳು: ಮನು ಮತ್ತು ಸಂಗ್ರಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.