Namo Bharath Review; ದೇಶಭಕ್ತ ಸೈನಿಕನ ತಲ್ಲಣಗಳ ಚಿತ್ರಣ
Team Udayavani, Mar 2, 2024, 3:16 PM IST
ಆತ ಬಾಲ್ಯದಿಂದಲೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಬೆಳೆದ ಹುಡುಗ ಭರತ್. ಹೆತ್ತ ತಾಯಿ ಕಲಿಸಿದ ರಾಷ್ಟ್ರಭಕ್ತಿಯ ಪಾಠ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಸ್ತು ಮತ್ತು ಸಂಸ್ಕಾರ ಭವಿಷ್ಯದಲ್ಲಿ ಭರತ್‌ನನ್ನು ದೇಶದ ಗಡಿ ಕಾಯುವ ವೀರ ಯೋಧನನ್ನಾಗಿ ಮಾಡುತ್ತದೆ. ಒಂದೆಡೆ ಗಡಿಯಲ್ಲಿ ದೇಶದ ಮೇಲೆ ಎರಗಿ ಬರುವ ಶತ್ರುಗಳ ರುಂಡ ಚೆಂಡಾಡುವ ಭರತ್, ಮತ್ತೂಂದೆಡೆ ತಾನು ಹುಟ್ಟಿ ಬೆಳೆದ ಹಳ್ಳಿಯನ್ನು ಮಾದರಿ ಗ್ರಾಮವಾಗಿ ಮಾಡಲು ಪಣ ತೊಡುತ್ತಾನೆ. ಇಂಥ ಯುವಕ ಭರತ್‌ನ ಎರಡೂ ಥರದ ಹೋರಾಟ ಹೇಗಿರುತ್ತದೆ ಎಂಬುದೇ ಈ ವಾರ ತೆರೆಗೆ ಬಂದಿರುವ “ನಮೋ ಭಾರತ್’ ಸಿನಿಮಾದ ಕಥೆಯ ಎಳೆ.
ಯುವಕನ ದೇಶಭಕ್ತಿ, ದೇಶದಲ್ಲಿ ನಡೆಯುತ್ತಿರುವ ರಾಜಕೀಯ, ಭ್ರಷ್ಟಾಚಾರ, ರೈತರ ಸಮಸ್ಯೆ, ಪ್ರೀತಿ-ಪ್ರೇಮ, ಕೌಟುಂಬಿಕ ಸಂಬಂಧ ಹೀಗೆ ಎಲ್ಲವನ್ನೂ ಜೋಡಿಸಿ “ನಮೋ ಭಾರತ್’ ಸಿನಿಮಾವನ್ನು ತೆರೆಮೇಲೆ ತಂದಿದ್ದಾರೆ ಸಿನಿಮಾದ ನಾಯಕ, ನಿರ್ದೇಶಕ ಕಂ ನಿರ್ಮಾಪಕ ರಮೇಶ್ ಎಸ್. ಪರವಿನಾಯ್ಕರ್. ಪ್ರಸ್ತುತ ಪ್ರಚಲಿತ ವಿಷಯವನ್ನು ಸಿನಿಮಾದ ಕಥಾಹಂದರವನ್ನಾಗಿ ಇಟ್ಟುಕೊಂಡು ಅದರ ಜೊತೆಗೆ ಆ್ಯಕ್ಷನ್, ಲವ್, ರೊಮ್ಯಾನ್ಸ್, ಸೆಂಟಿಮೆಂಟ್, ಕಾಮಿಡಿ ಹೀಗೆ ಒಂದಷ್ಟು ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಅಂಶಗಳನ್ನೂ ಸೇರಿ “ನಮೋ ಭಾರತ್’ ಸಿನಿಮಾವನ್ನು ಕ್ಲಾಸ್ ಮತ್ತು ಮಾಸ್ ಎರಡೂ ಥರದ ಆಡಿಯನ್ಸ್‌ಗೆ ಇಷ್ಟವಾಗುವಂತೆ ತೆರೆಮೇಲೆ ತರಲು ಚಿತ್ರತಂಡ ಹಾಕಿರುವ ಪರಿಶ್ರಮ ಕಾಣುತ್ತದೆ.
ಸಿನಿಮಾದ ಕಥೆಗೆ ತಕ್ಕಂತೆ ಚಿತ್ರಕಥೆ ಮತ್ತು ನಿರೂಪಣೆಗೆ ಕೊಂಚ ವೇಗ ಸಿಕ್ಕಿದ್ದರೆ, “ನಮೋ ಭಾರತ್’ ಇನ್ನಷ್ಟು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ನೋಡುಗರ ಮನಮುಟ್ಟುವ ಸಾಧ್ಯತೆಗಳಿದ್ದವು.
ಇನ್ನು ನಾಯಕ ರಮೇಶ್ ಪರವಿನಾಯ್ಕರ್ ತೆರೆಮೇಲೆ ಯೋಧನಾಗಿ, ಹಳ್ಳಿಯ ಉದ್ಧಾರಕ್ಕೆ ಹೋರಾಡುವ ಯುವಕನಾಗಿ ಎರಡು ಶೇಡ್‌ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎರಡೂ ಶೇಡ್‌ನಲ್ಲೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಳಿದಂತೆ ಸೋನಾಲಿ ಪಂಡಿತ್, ಸುಷ್ಮಾ ರಾಜ್, ಪ್ರೊ. ದೊಡ್ಡರಂಗೇಗೌಡ, ಭವ್ಯಾ, ಮೈಕೋ ನಾಗರಾಜ್, ವೈಜನಾಥ್ ಬಿರಾದಾರ್, ಶಂಕರ್ ಭಟ್, ನವನೀತ, ಶ್ರವಣ ಪಂಡಿತ್ ಹೀಗೆ ಬೃಹತ್ ಕಲಾವಿದರ ತಾರಾಗಣವೇ ಸಿನಿಮಾದಲ್ಲಿದೆ. ಸಿನಿಮಾದಲ್ಲಿ ಕಾಶ್ಮೀರದ ಸೊಬಗು ಮತ್ತು ಕರ್ನಾಟಕದ ಗ್ರಾಮೀಣ ಸೊಗಡು ಎರಡನ್ನೂ ಸೆರೆಹಿಡಿಯುವ ಪ್ರಯತ್ನ ಕೆಲಸ ಆಗಿದೆ.
ಒಂದೆರಡು ಹಾಡುಗಳು ಅಲ್ಲಲ್ಲಿ ಗುನುಗುಡುವಂತಿದೆ. ಸಿನಿಮಾದ ಹಿನ್ನೆಲೆ ಸಂಗೀತ, ಸಂಕಲನದ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ಕೊಡಬಹುದಿತ್ತು.
ಜಿ.ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.