ನಟ ಸಾರ್ವಭೌಮ ಹಾಡಿಗೆ ಭರ್ಜರಿ ಸೆಟ್
Team Udayavani, Nov 13, 2018, 11:20 AM IST
ಪುನೀತ್‌ರಾಜಕುಮಾರ್ ಅಭಿನಯದ “ನಟ ಸಾರ್ವಭೌಮ’ ಚಿತ್ರ ಮತ್ತೂಂದು ಹೊಸ ಸುದ್ದಿಗೆ ಕಾರಣವಾಗಿದೆ. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಪೂರ್ಣಗೊಂಡಿದ್ದು, ಹಾಡೊಂದನ್ನು ಚಿತ್ರೀಕರಿಸಿದರೆ ಚಿತ್ರಕ್ಕೆ ಕುಂಬಳಕಾಯಿ ಹೊಡೆಯುವ ಉತ್ಸಾಹದಲ್ಲಿದೆ ಚಿತ್ರತಂಡ. ಆ ಕೊನೆಯ ಹಾಡೇ ಈಗ ಸುದ್ದಿಯ ಕೇಂದ್ರಬಿಂದು. ಹೌದು, ಚಿತ್ರದಲ್ಲಿ ಪುನೀತ್‌ರಾಜಕುಮಾರ್ ಅವರನ್ನು ಪರಿಚಯಿಸುವ ಹಾಡಿಗೆ ಅದ್ಧೂರಿ ವೆಚ್ಚದ ಸೆಟ್ ನಿರ್ಮಿಸುವ ಮೂಲಕ ಚಿತ್ರತಂಡ ಹೊಸ ದಾಖಲೆ ಬರೆದಿದೆ.
ಸೋಮವಾರದಿಂದ ಆ ಹಾಡಿನ ಚಿತ್ರೀಕರಣ ಶುರುವಾಗಿದ್ದು, ಆರು ದಿನಗಳ ಕಾಲ ನಡೆಯುತ್ತಿರುವುದು ವಿಶೇಷ. ನಿರ್ದೇಶಕ ಪವನ್ ಒಡೆಯರ್ ಅವರೇ ಬರೆದಿರುವ “ನಟ ಸಾರ್ವಭೌಮ ಈ ಇಸ್ ಕಿಂಗ್ ಆಫ್ ದಿ ಸಿನಿಮಾ…’ ಎಂದು ಶುರುವಾಗುವ ಹಾಡಿಗೆ ಪುನೀತ್ ಅವರು ಭರ್ಜರಿ ಸ್ಟೆಪ್ ಹಾಕುತ್ತಿದ್ದಾರೆ ಎಂಬುದು ನಿರ್ದೇಶಕರ ಮಾತು. ಚಿತ್ರದಲ್ಲಿ ಬರುವ ಈ ಹಾಡಿಗಾಗಿ ನಾಲ್ಕು ಕಡೆ ಭರ್ಜರಿ ಸೆಟ್ ಹಾಕಿರುವುದು ವಿಶೇಷ. ಕಲಾನಿರ್ದೇಶಕರಾದ ಗುಣ (ಭೂಪತಿ) ಅವರು ಸೆಟ್ ಹಾಕಿದ್ದಾರೆ.
ರಾಕ್‌ಲೈನ್ ಸ್ಟುಡಿಯೋದಲ್ಲೊಂದು ಅದ್ಧೂರಿ ಸೆಟ್, ಮಾಗಡಿ ರಸ್ತೆ ಸಮೀಪದಲ್ಲೊಂದು ಸೆಟ್, ಬಾಗಲೂರು ಹಾಗು ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ವೆಚ್ಚ ಮಾಡಿ ಸೆಟ್ ನಿರ್ಮಿಸಿ, ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ಅಂದಹಾಗೆ, ನೃತ್ಯ ನಿರ್ದೇಶಕ ಭೂಷಣ್ ಅವರು, ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಪುನೀತ್‌ರಾಜಕುಮಾರ್ ಹಾಡಿಗಾಗಿಯೇ ಹಲವು ದಿನಗಳ ಕಾಲ ಅಭ್ಯಾಸ ಕೂಡ ನಡೆಸಿದ್ದು, ಈ ಹಾಡಿಗೆ ಹಿಂದೆಂದೂ ಹಾಕದ ಸಖತ್ ಸ್ಟೆಪ್ ಈ ಹಾಡಲ್ಲಿ ಹಾಕಲಿದ್ದಾರೆ ಎಂಬುದು ನಿರ್ದೇಶಕ ಪವನ್ ಒಡೆಯರ್ ಅವರ ಖುಷಿಯ ಮಾತು.
ಚಿತ್ರದಲ್ಲಿ ಪುನೀತ್ ಅವರು ಪತ್ರಕರ್ತರಾಗಿ ಕಾಣಿಸಿಕೊಂಡಿದ್ದು, ಆ ಪಾತ್ರಕ್ಕೂ ಮತ್ತು ಸಿನಿಮಾದ ಕಥೆಗೂ ಪೂರಕವಾಗಿರುವಂತೆ ಹಾಡು ಬರೆಯಲಾಗಿದೆ. ಆ ಹಾಡಿಗೆ ಸ್ಟೆಪ್ ಹಾಕಲು ಒಂದಷ್ಟು ಪೂರ್ವ ತಯಾರಿ ಮಾಡಿಕೊಂಡಿರುವ ಪುನೀತ್, ಇಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುವಂತಹ ಸ್ಟೆಪ್ ಹಾಕಲಿದ್ದಾರೆ ಎಂದು ಉತ್ಸಾಹದಿಂದ ಹೇಳುತ್ತಾರೆ ಪವನ್ ಒಡೆಯರ್. ಚಿತ್ರಕ್ಕೆ ವೈದಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಡಿ.ಇಮಾನ್ ಅವರು ಸಂಗೀತ ನೀಡಿದ್ದಾರೆ. ಸದ್ಯಕ್ಕೆ ಚಿತ್ರೀಕರಿಸುತ್ತಿರುವ ಹಾಡು ಪೂರ್ಣಗೊಂಡರೆ, ಚಿತ್ರ ಪೂರ್ಣಗೊಳ್ಳಲಿದೆ.
ಈಗಾಗಲೇ ಚಿತ್ರ ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿರುವ ಚಿತ್ರತಂಡ, ಮೊದಲರ್ಧ ಸಿನಿಮಾವನ್ನು ರೆಡಿ ಮಾಡಿದೆ. ಇನ್ನುಳಿದ ಸಿನಿಮಾ ಕೆಲಸಗಳು ಜೋರಾಗಿ ನಡೆಯುತ್ತಿವೆ ಎಂಬುದು ಚಿತ್ರತಂಡದ ಮಾತು. ಅದೇನೆ ಇರಲಿ, “ನಟ ಸಾರ್ವಭೌಮ’ ಚಿತ್ರದ ಬಳಿಕ ಮುಂದಿನ ದಿನಗಳಲ್ಲಿ ಪುನೀತ್ ಅವರನ್ನು ಅವರ ಅಭಿಮಾನಿಗಳು “ನಟ ಸಾರ್ವಭೌಮ’ ಎಂದು ಕರೆದರೆ ಅಚ್ಚರಿಯೇನಿಲ್ಲ. ರಾಕ್‌ಲೈನ್ ವೆಂಕಟೇಶ ನಿರ್ಮಾಣದ ಈ ಚಿತ್ರದಲ್ಲಿ ಪುನೀತ್‌ರಾಜಕುಮಾರ್ ಅವರ ಹೇರ್‌ಸ್ಟೈಲ್ ಸಂಪೂರ್ಣ ಬದಲಾಗಿರುವುದು ವಿಶೇಷ. ಅವರಿಲ್ಲಿ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ
Bhuvanam Gaganam Movie: ಭುವನಂ ವಿತರಣಾ ಹಕ್ಕು ಕೋಟಿ ಬೆಲೆಗೆ ಮಾರಾಟ
State Film Awards: 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ; ಇಲ್ಲಿದೆ ಸಂಪೂರ್ಣ ಪಟ್ಟಿ
ಚೀನಾದ ಸೂಪರ್ ಮಾರ್ಕೆಟ್‌ನಲ್ಲಿ ಡಾ. ರಾಜ್‌ಕುಮಾರ್ ʼಗಂಧದ ಗುಡಿʼ ಹಾಡು: ವಿಡಿಯೋ ವೈರಲ್
Sandalwood: ಥಿಯೇಟರ್, ಓಟಿಟಿ ಬಳಿಕ ಟಿವಿಯಲ್ಲಿ ಬರಲಿದೆ ʼಭೈರತಿ ರಣಗಲ್ʼ: ಯಾವಾಗ, ಎಲ್ಲಿ?