ಪ್ರಚಾರಕ್ಕೆ ಬಾರದ ಅಂತಹ ನಟಿಯರು ಬೇಕಾ?
Team Udayavani, Nov 28, 2017, 1:27 PM IST
“ತೊಂಭತ್ತು ದಿನ ಹೊಟ್ಟೆಗೆ ಅನ್ನಹಾಕಿ, ಹೇಳಿದಷ್ಟು ಸಂಭಾವನೆ ಕೊಟ್ಟು, ಕೇಳಿದ ಕಾಸ್ಟೂಮ್ಸ್ ಕೊಡಿಸಿ, ಅವರಿಗೊಂದು ಸಪರೇಟ್ ಕ್ಯಾರವಾನ್ ತರಿಸಿ, ಚೆನ್ನಾಗಿ ನೋಡಿಕೊಂಡರೂ ಆ ನಟಿ ದ್ರೋಹ ಬಗೆದಿದ್ದಾರೆ…’ ಹೀಗೆ ಕೊಂಚ ಗರಂ ಆಗಿಯೇ ಹೇಳಿಕೊಂಡರು ನಿರ್ಮಾಪಕ ಪದ್ಮನಾಭ್. ಅವರು ಹೇಳಿದ್ದು “ಕಾಲೇಜ್ ಕುಮಾರ’ ಸಿನಿಮಾ ನಾಯಕಿ ಸಂಯುಕ್ತ ಹೆಗ್ಡೆ ಬಗ್ಗೆ.
ಹೌದು, ಸಂಯುಕ್ತ ಹೆಗ್ಡೆ ಮೇಲೆ ನಿರ್ಮಾಪಕ ಪದ್ಮನಾಭ್ ಬೇಸರಿಸಿಕೊಂಡಿದ್ದಾರೆ. ಅವರಷ್ಟೇ ಅಲ್ಲ, ಇಡೀ ಚಿತ್ರತಂಡವೇ ಸಂಯುಕ್ತ ಹೆಗ್ಡೆ ಅವರ ವರ್ತನೆ ಕುರಿತು ಬೇಸರ ಹೊರಹಾಕಿದ್ದಾರೆ. ಇಷ್ಟಕ್ಕೂ ಪದ್ಮನಾಭ್ ಅವರು ಸಂಯುಕ್ತ ಹೆಗ್ಡೆ ಮೇಲೆ ಕೋಪಿಸಿಕೊಳ್ಳಲು ಕಾರಣವೇನು ಗೊತ್ತಾ? ಸಂಯುಕ್ತ ಸಿನಿಮಾ ಪ್ರಚಾರಕ್ಕೆ ಬರದೇ ಇದ್ದದ್ದು, ಆರಂಭದಿಂದಲೂ ಒಂದಲ್ಲ ಒಂದು ಸಮಸ್ಯೆ ಹುಟ್ಟುಹಾಕಿದ್ದು. ಆ ನಟಿ ಕುರಿತು ಪದ್ಮನಾಭ್ ಹೇಳಿದ್ದಿಷ್ಟು.
“ಕಲೆಗೆ ಬೆಲೆ ಕೊಡದವರು, ನಿರ್ಮಾಪಕರ ಕಷ್ಟ ಅರ್ಥ ಮಾಡಿಕೊಳ್ಳದವರು, ತನ್ನ ಸಿನಿಮಾ ಅಂತ ಪ್ರೀತಿಸದ ನಟಿಯ ಮೇಲೆ ಈ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ನಾನು ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ, ಕಲಾವಿದರ ಸಂಘಕ್ಕೆ ದೂರು ನೀಡುತ್ತೇನೆ. ಮೊದಲ ದಿನದಿಂದಲೂ ಸಂಯುಕ್ತ ಹೆಗ್ಡೆ ಚಿತ್ರಕ್ಕೆ ಸಮಸ್ಯೆ ಮಾಡುತ್ತಲೇ ಬಂದಿದ್ದಾರೆ. ನಿರ್ಮಾಪಕರ ಕಷ್ಟ ಏನು ಅಂತ ಅವರಿಗೆ ಗೊತ್ತಿಲ್ಲ.
ನನ್ನ ಸಿನಿಮಾ ಮೂಲಕ ನಾಯಕಿ ಪಟ್ಟ ಪಡೆದ ಆ ಹುಡುಗಿಗೆ ನಿರ್ಮಾಪಕರ ಸಮಸ್ಯೆ ಗೊತ್ತಿಲ್ಲ. ಒಂದು ಚಿತ್ರಕ್ಕೆ ಹೇಗೆ ಕೆಲಸ ಮಾಡಬೇಕು ಎಂಬುದರ ಅರಿವಿಲ್ಲ. ಅಂತಹ ನಟಿಯನ್ನು ಹಾಕಿಕೊಂಡು ಸಿನಿಮಾ ಮಾಡುವ ನಿರ್ಮಾಪಕ, ನಿರ್ದೇಶಕರಿಗೆ ಸಮಸ್ಯೆ ಹೆಚ್ಚು. ಯಾರೂ ಸಹ ಅಂತಹ ನಟಿಗೆ ಸಹಕಾರ ಕೊಡಬೇಡಿ’ ಎಂದರು ಪದ್ಮನಾಭ್. ಸಂಯುಕ್ತ ಹೆಗ್ಡೆ ಇದ್ದರೆ ಜನ ಸಿನಿಮಾ ನೋಡ್ತಾರೆ ಎಂಬ ಭ್ರಮೆ ಅವರಲ್ಲಿದೆ ಎಂದ ಪದ್ಮನಾಭ್, “ಅವರೊಬ್ಬರಿಂದಲೇ ಸಿನಿಮಾ ಆಗುವುದಿಲ್ಲ.
ಸೆಟ್‌ನಲ್ಲಿ ಲೈಟ್‌ಬಾಯ್‌ನಿಂದ ಹಿಡಿದು, ಕಲಾವಿದರು, ತಂತ್ರಜ್ಞರಿಂದ ಸಿನಿಮಾ ಆಗುತ್ತೆ. ಅವರಿಗೆ ಪ್ರಾಮಾಣಿಕತೆ ಇಲ್ಲ. ನಮ್ಮ ಸಿನಿಮಾದ ಪ್ರಚಾರ ಕಾರ್ಯಕ್ಕೆ ಬಂದಿಲ್ಲ, ಅವರಿಗೆ ಸಿನಿಮಾ ಹಾಗೂ ನಿರ್ಮಾಪಕರ ಮೇಲೆ ಕಾಳಜಿ ಇಲ್ಲ. ಅವರು ಕೇಳಿದ್ದನ್ನೆಲ್ಲಾ ಕೊಟ್ಟಿದ್ದೇವೆ. ಕಾಲ್‌ಶೀಟ್‌ನಲ್ಲೂ ಸಹ ಪ್ರಚಾರಕ್ಕೆ ಬರಬೇಕು ಅಂತಾನೂ ಅಗ್ರಿಮೆಂಟ್ ಮಾಡಿಸಿಕೊಳ್ಳಲಾಗಿದೆ. ಇದುವರೆಗೆ ಚಿತ್ರರಂಗಕ್ಕೆ ಅವರ ಕೊಡುಗೆ ಏನಿದೆ?
ಇನ್ನು ಬೆಳೆದೇ ಇಲ್ಲ, ಈಗಲೇ ಹೀಗೆ ಮಾಡಿದರೆ, ಮುಂದೆ ಬೇರೆ ಸಿನಿಮಾಗಳ ನಿರ್ಮಾಪಕ, ನಿರ್ದೇಶಕರ ಗತಿ ಏನು? ಮುಂದೆ ಸಂಯುಕ್ತ ಹೆಗ್ಡೆ ನಾಯಕಿ ಮಾಡಿ ಸಿನಿಮಾ ಮಾಡುವ ಮುನ್ನ ನಿರ್ಮಾಪಕರು ಯೋಚಿಸಬೇಕು. ಕನ್ನಡದಲ್ಲಿ ಬಹಳಷ್ಟು ಒಳ್ಳೆಯ ನಟಿಯರಿದ್ದಾರೆ. ನಿರ್ಮಾಪಕ,ನಿರ್ದೇಶಕರ ಮೇಲೆ ಕಾಳಜಿ ಇಟ್ಟುಕೊಂಡ ಅನೇಕರು ಸಿಗುತ್ತಾರೆ ಅಂತಹವರಿಗೆ ಸಹಕಾರ ಕೊಡಿ’ ಎಂದು ಮನವಿ ಇಟ್ಟರು ಪದ್ಮನಾಭ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.