ನೆಗೆಟಿವ್ ಶೇಡ್‌ನ ಪಾಸಿಟಿವ್ ಸಿನಿಮಾ “ಧರ್ಮಸ್ಯ’
Team Udayavani, Jan 13, 2019, 6:27 AM IST
ಭಗವದ್ಗೀತೆಯಲ್ಲಿ ಬರುವ “ಯದಾ ಯದಾ ಹೀ ಧರ್ಮಸ್ಯ’ ಎಂಬ ಸಾಲನ್ನು ನೀವೆಲ್ಲ ಕೇಳಿರುತ್ತೀರಿ. ಈಗ ಇದೇ ಸಾಲು ಕನ್ನಡ ಚಿತ್ರವೊಂದರ ಶೀರ್ಷಿಕೆಯಾಗಿ ತೆರೆಮೇಲೆ ಬರುತ್ತಿದೆ. ಹೌದು, ಸದ್ದಿಲ್ಲದೆ ತನ್ನ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ “ಯದಾ ಯದಾ ಹೀ ಧರ್ಮಸ್ಯ’ ಚಿತ್ರ ತೆರೆಗೆ ಬರೋದಕ್ಕೆ ತೆರೆಮರೆಯಲ್ಲೇ ಸಿದ್ಧತೆ ನಡೆಸುತ್ತಿದೆ. ಸದ್ಯ ಚಿತ್ರದ ಪ್ರಮೋಷನ್ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಕಸರತ್ತು ನಡೆಸುತ್ತಿದೆ.
ಭರಪೂರ ಮನರಂಜನೆ: “ಯದಾ ಯದಾ ಹೀ ಧರ್ಮಸ್ಯ’ ಚಿತ್ರಕ್ಕೆ ನವ ಪ್ರತಿಭೆ ವಿರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ, ತಮಿಳು ಮತ್ತು ತೆಲುಗಿನ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ವಿರಾಜ್, ಮೊದಲ ಬಾರಿಗೆ “ಯದಾ ಯದಾ ಹೀ ಧರ್ಮಸ್ಯ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ವಿರಾಜ್, “ಇದೊಂದು ಕಂಪ್ಲೀಟ್ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಚಿತ್ರ. ಆ್ಯಕ್ಷನ್ ಕಥಾಹಂದರ ಚಿತ್ರದಲ್ಲಿದೆ. ಉಳಿದಂತೆ ಲವ್, ಆ್ಯಕ್ಷನ್, ಮೆಲೋಡಿ ಸಾಂಗ್ಸ್, ಮಸ್ತ್ ಡ್ಯಾನ್ಸ್ ಹೀಗೆ ಪಕ್ಕಾ ಎಂಟರ್‌ಟೈನ್ಮೆಂಟ್ ಸಿನಿಮಾದಲ್ಲಿ ಆಡಿಯನ್ಸ್ ಏನೇನು ನಿರೀಕ್ಷೆ ಮಾಡುತ್ತಾರೋ, ಅದೆಲ್ಲವೂ “ಯದಾ ಯದಾ ಹೀ ಧರ್ಮಸ್ಯ’ ಚಿತ್ರದಲ್ಲಿದೆ. ಇಡೀ ಸಿನಿಮಾ ಆಡಿಯನ್ಸ್‌ಗೆ ಭರಪೂರ ಮನರಂಜನೆ ನೀಡೋದು ಗ್ಯಾರೆಂಟಿ’ ಎನ್ನುತ್ತಾರೆ.
ಕಥೆಯಲ್ಲಿ ಮತ್ತು ಪಾತ್ರಗಳಲ್ಲಿ ನೆಗೆಟೀವ್ ಶೇಡ್: ಚಿತ್ರತಂಡ ಹೇಳುವ ಪ್ರಕಾರ “ಯದಾ ಯದಾ ಹೀ ಧರ್ಮಸ್ಯ’ ಚಿತ್ರದ ಬಹುಭಾಗದ ಕಥಾಹಂದರ ಮತ್ತು ಬಹುತೇಕ ಪಾತ್ರಗಳು ಅವುಗಳ ನಿರೂಪಣೆ ನೆಗೆಟೀವ್ ಶೇಡ್‌ನಲ್ಲಿ ಸಾಗುತ್ತದೆಯಂತೆ. ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರದ್ದು ಸಂಪೂರ್ಣ ನೆಗೆಟೀವ್ ಶೇಡ್ ಪಾತ್ರವಂತೆ.
ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದಲ್ಲಿರುವ “ಮಾರಿ’ ಎನ್ನುವ ಖಳನಾಯಕನ ಪಾತ್ರದಲ್ಲಿ ಸಾಯಿಕುಮಾರ್ ಕಾಣಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಯಾವ ಚಿತ್ರದಲ್ಲೂ ಕಾಣದ ಹೊಸಗೆಟಪ್ ಸಾಯಿಕುಮಾರ್ ಅವರಿಗೆ ಈ ಪಾತ್ರದಲ್ಲಿ ಸಿಕ್ಕಿದೆಯಂತೆ. ಇನ್ನು ವಿಜಯ ರಾಘವೇಂದ್ರ ಚಿತ್ರದ ನಾಯಕ ನಟನಾದರೂ, ಅವರ ಪಾತ್ರದಲ್ಲೂ ನೆಗೆಟೀವ್ ಶೇಡ್ ಕಾಣಬಹುದು ಎನ್ನುತ್ತದೆ ಚಿತ್ರತಂಡ.
ಕನ್ನಡದ ಮೇಲಿನ ಪ್ರೀತಿಗೆ ಇಂಧೋರ್ ನಿರ್ಮಾಪಕ: ಇನ್ನೊಂದು ವಿಶೇಷವೆಂದರೆ, “ಯದಾ ಯದಾ ಹೀ ಧರ್ಮಸ್ಯ’ ಚಿತ್ರವನ್ನು ನಿರ್ಮಿಸುತ್ತಿರುವವರು ಇಂಧೋರ್ ಮೂಲದ ಅಕ್ಷರ ತಿವಾರಿ. ಕನ್ನಡ ಬಾರದಿದ್ದರೂ, ಕನ್ನಡದ ಮೇಲಿನ ಪ್ರೀತಿ, ಮತ್ತು ಇತ್ತೀಚೆಗೆ ಬರುತ್ತಿರುವ ಹೊಸತರದ ಕನ್ನಡ ಚಿತ್ರಗಳ ಮೇಲಿನ ಆಸಕ್ತಿಯಿಂದಾಗಿ ಅಕ್ಷರ ತಿವಾರಿ, “ಅಕ್ಷರ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಪ್ರಥಮ ಚಿತ್ರವಾಗಿ “ಯದಾ ಯದಾ ಹೀ ಧರ್ಮಸ್ಯ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
“ಇತ್ತೀಚೆಗೆ ಬರುತ್ತಿರುವ ಕನ್ನಡದ ಚಿತ್ರಗಳು ಹೊಸಪ್ರಯೋಗಗಳಿಂದ ಗಮನ ಸೆಳೆಯುತ್ತಿವೆ. ಹೊಸಬರು ಹೊಸಥರದ ಚಿತ್ರಗಳನ್ನು ಕೊಡುತ್ತಿದ್ದಾರೆ. ಕನ್ನಡ ಪ್ರೇಕ್ಷಕರು ಕೂಡ ಇಂಥ ಚಿತ್ರಗಳನ್ನು ಸ್ವೀಕರಿಸುತ್ತಿದ್ದಾರೆ. ಈ ಚಿತ್ರ ಕೂಡ ಸಾಕಷ್ಟು ಹೊಸತನದಿಂದ ಕೂಡಿದ್ದು, ಕನ್ನಡದ ಪ್ರೇಕ್ಷಕರು ಸ್ವೀಕರಿಸುತ್ತಾರೆ ಎಂಬ ನಂಬಿಕೆಯಿಂದ ಇದನ್ನು ನಿರ್ಮಿಸುತ್ತಿದ್ದೇವೆ’ ಎನ್ನುತ್ತಾರೆ ನಿರ್ಮಾಪಕ ಅಕ್ಷರ ತಿವಾರಿ. ಇಂಧೋರ್ ಮೂಲದ ಮತ್ತೂಬ್ಬ ಕನ್ನಡ ಸಿನಿಮಾಸಕ್ತ ವಿಶಾಲ್ ತಿವಾರಿ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ.
ಜನಪ್ರಿಯ ಕಲಾವಿದರು, ನುರಿತ ತಂತ್ರಜ್ಞರ ತಾರಾಗಣ: “ಯದಾ ಯದಾ ಹೀ ಧರ್ಮಸ್ಯ’ ಚಿತ್ರದಲ್ಲಿ ವಿಜಯ ರಾಘವೇಂದ್ರ, ಪ್ರಜ್ವಲ್ ದೇವರಾಜ್, ಸಾಯಿ ಕುಮಾರ್, ಶ್ರಾವ್ಯಾ, ಸಾಧುಕೋಕಿಲ, ಉಮೇಶ್, ಗಡ್ಡಪ್ಪ, ಪ್ರಥಮ್, ಪದ್ಮಾವಾಸಂತಿ ಮತ್ತಿತರ ಕಲಾವಿದರ ಬೃಹತ್ ತಾರಾಗಣವಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಜ್ಯೂಡಾ ಸ್ಯಾಂಡಿ ಮತ್ತು ಪರಾಗ್ ಈ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ವಿರಾಜ್, ಗಿರಿದೇವ್, ಮೋಹನ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಇನ್ನು “ಯದಾ ಯದಾ ಹೀ ಧರ್ಮಸ್ಯ’ ಚಿತ್ರದ ದೃಶ್ಯಗಳನ್ನು ಛಾಯಾಗ್ರಹಕ ಶಂಕರ್ ಆರಾಧ್ಯ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಚಿತ್ರಕ್ಕೆ ಕೆ.ಎಂ ಪ್ರಕಾಶ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಚಿತ್ರದ ಹಾಡುಗಳಿಗೆ ಸ್ಟಾರ್ ನಾಗಿ, ಮನು ನೃತ್ಯ ಸಂಯೋಜಿಸಿದರೆ, ಚಿತ್ರದಲ್ಲಿ ಸುಮಾರು ಆರು ಭರ್ಜರಿ ಸಾಹಸ ದೃಶ್ಯಗಳಿಗೆ ವಿಜಯ್, ಮಾಸ್ ಮಾದ, ವಿನೋದ್ ಸಾಹಸ ಸಂಯೋಜನೆ ಮಾಡಿದ್ದಾರೆ.
ತೆರೆಮೇಲೆ ಸುಂದರ ದೃಶ್ಯಗಳ ಚಿತ್ರಣ: “ಯದಾ ಯದಾ ಹೀ ಧರ್ಮಸ್ಯ’ ಚಿತ್ರವನ್ನು ಬೆಂಗಳೂರು, ಮುರುಡೇಶ್ವರ, ಗೋಕರ್ಣ, ಸಕಲೇಶಪುರ ಸ್ತುಮುತ್ತ ಮತ್ತು ಗೋವಾ, ಕೇರಳದ ಸುಂದರ ತಾಣಗಳಲ್ಲಿ ಸುಮಾರು 65 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಚಿತ್ರದ ಪ್ರತಿಯೊಂದು ದೃಶ್ಯಗಳು ಅದ್ಧೂರಿಯಾಗಿ ಮೂಡಿಬಂದಿದ್ದು, ನೋಡುಗರಿಗೆ ಹೊಸ ಅನುಭವ ನೀಡಲಿದೆ ಎಂಬ ವಿಶ್ವಾಸ ಚಿತ್ರತಂಡದ್ದು. “ಚಿತ್ರದಲ್ಲಿ ಯಾವುದಕ್ಕೂ ಕೊರತೆಯಾಗದಂತೆ ಅಂದುಕೊಂಡಿರುವುದನ್ನು ತೆರೆಮೇಲೆ ತರಲು ಯಶಸ್ವಿಯಾಗಿದ್ದೇವೆ. ನಮ್ಮ ಪ್ರಯತ್ನ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ’ ಎನ್ನುವ ಮಾತುಗಳನ್ನಾಡುತ್ತದೆ ಚಿತ್ರತಂಡ.
ಮನರಂಜನೆಯ ಜೊತೆಗೊಂದು ಸಂದೇಶವಿದೆ: “ಯದಾ ಯದಾ ಹೀ ಧರ್ಮಸ್ಯ’ ಔಟ್ ಆ್ಯಂಡ್ ಔಟ್ ಮಾಸ್ ಎಂಟರ್‌ಟೈನ್ಮೆಂಟ್ ಸಿನಿಮಾವಾದರೂ, ಅದರಲ್ಲಿ ಒಂದು ಸಂದೇಶವಿದೆ’ ಎನ್ನುತ್ತಾರೆ ನಿರ್ದೇಶಕ ವಿರಾಜ್. ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತ ಬಂದ ವ್ಯಕ್ತಿ ದುಡ್ಡಿನ ಹಿಂದೆ ಬಿದ್ದಾಗ, ಅವನ ಹಿಂದೆ ಅವನಿಗೇ ಗೊತ್ತಿಲ್ಲದಂತೆ ಒಂದು ವ್ಯೂಹ ರಚನೆಯಾಗುತ್ತದೆ. ಮುಂದೆ ಅವನ ಜೀವನದಲ್ಲಿ ಏನೇನು ನಡೆಯುತ್ತದೆ ಎನ್ನುವುದು ಚಿತ್ರದ ಕಥೆಯ ಒಂದು ಎಳೆ. ಜೀವನದಲ್ಲಿ ದುಡ್ಡೇ ಎಲ್ಲದಕ್ಕಿಂತಲೂ ಮುಖ್ಯವಲ್ಲ. ಅದಕ್ಕಿಂತಲೂ ಮುಖ್ಯವಾದ ಅದೆಷ್ಟೋ ಸಂಗತಿಗಳು ನಮ್ಮ ನಡುವೆ ಇರುತ್ತದೆ. ಅದಕ್ಕೆ ಬೆಲೆ ಕಟ್ಟಲಾಗದು ಎಂಬ ಸಂದೇಶ ಕೂಡ ಚಿತ್ರದಲ್ಲಿದೆ.
ತೆರೆಗೆ ಬರಲು ಸಿದ್ಧತೆ: ಚಿತ್ರತಂಡದ ಪ್ರಕಾರ “ಯದಾ ಯದಾ ಹೀ ಧರ್ಮಸ್ಯ’ ಚಿತ್ರದ ಕೆಲಸಗಳು ಸುಮಾರು ಎರಡು ವರ್ಷದ ಹಿಂದೆಯೇ ಆರಂಭವಾಗಿದ್ದು, ಇದೀಗ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ಚಿತ್ರ ಪ್ರಾದೇಶಿಕ ಸೆನ್ಸಾರ್ ಮಂಡಳಿ ಮುಂದಿದೆ. ಸೆನ್ಸಾರ್ ಅನುಮತಿ ಸಿಗುತ್ತಿದ್ದಂತೆ ಚಿತ್ರವನ್ನು ತೆರೆಮೇಲೆ ತರುವ ಸಿದ್ಧತೆಯಲ್ಲಿದೆ ಚಿತ್ರತಂಡ. ಇದೇ ಜ. 18ಕ್ಕೆ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದ್ದು, ಅದಾದ ಬಳಿಕ ಚಿತ್ರದ ಆಡಿಯೋ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ. ಎಲ್ಲ ಅಂದುಕೊಂಡಂತೆ ನಡೆದರೆ, ಫೆಬ್ರವರಿ ಎರಡನೇ ವಾರದೊಳಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಆಲೋಚನೆಯಲ್ಲಿದ್ದೇವೆ ಎನ್ನುತ್ತದೆ ಚಿತ್ರತಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.