![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 21, 2023, 10:35 AM IST
ಮಹಾನಗರ: ವರುಣ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಮೂಡಿ ಬಂದಿರುವ “ನಿಮ್ಮೆಲ್ಲರ ಆಶೀರ್ವಾದ’ ಕನ್ನಡ ಚಲನಚಿತ್ರ ಜು. 21ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಲನಚಿತ್ರದ ನಿರ್ಮಾಪಕ ವರುಣ್ ಹೆಗ್ಡೆ ಹೇಳಿದರು.
ನಿರ್ದೇಶಕ ರವಿಕಿರಣ್ ಮಾತನಾಡಿ, ನಾಯಕ ನಟನಾಗಿ ಪ್ರತೀಕ್ ಶೆಟ್ಟಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ನಾಯಕ ನಟಿಯಾಗಿ ಪಾಯಲ್ ರಾಧಾಕೃಷ್ಣ ನಟಿಸಿದ್ದಾರೆ.
ಸುಂದರ ಕರಾವಳಿಯ ಸೊಗಡಿನ ಒಳ್ಳೆಯ ಜನರಿರುವ ಒಂದು ಸಣ್ಣ ಊರು, ಆ ಊರಿನ ಓರ್ವ ಪೊಲೀಸ್ ಅಧಿಕಾರಿ ಸಿನೆಮಾದ ನಾಯಕ “ಆಶೀರ್ವಾದ್’. ಅವನು ಹಲವು ಏಳು ಬೀಳುಗಳನ್ನು ಕಂಡು ಹೇಗೆ ಪೋಲಿಸ್ ಆದ ಎನ್ನುವುದೇ ಸಿನೆಮಾದ ಕಥೆ. ಜತೆಗೆ ಪಾಯಲ್ ರಾಧಾಕೃಷ್ಣ ಹಾಗೂ ಆಶೀರ್ವಾದನ ನಡುವಿನ ಸುಂದರ ಪ್ರೇಮಕಥೆ ಈ ಚಿತ್ರದಲ್ಲಿ ಇರಲಿದೆ. ಕರಾವಳಿ ಭಾಗದಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ ಎಂದರು.
ಕನ್ನಡದ ಮೇರು ನಟಿ ಎಂ.ಎನ್. ಲಕ್ಷ್ಮೀ ದೇವಿ, ಮೈಮ್ ರಾಮದಾಸ್, ಅರವಿಂದ ಬೋಳಾರ್, ಸ್ವಾತಿ ಗುರುದತ್ತ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ, ಸದಾಶಿವ ಅಮೀನ್, ಖಳನಟನಾಗಿ ಕೆಜಿಎಫ್ ಖ್ಯಾತಿಯ ದಿನೇಶ್ ಮಂಗಳೂರು ಮಿಂಚಿದ್ದಾರೆ. ವರುಣ್ ಹೆಗ್ಡೆ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ರವಿಕಿರಣ್ ಕಥೆ-ನಿರ್ದೇಶನ, ಸರವಣನ್ ಜಿ.ಎನ್. ಛಾಯಾಗ್ರಹಣ, ರಾಷ್ಟ್ರ ಪ್ರಶಸ್ತಿ ವಿಜೇತ ಸುರೇಶ್ ಆರುಮುಗಮ್ ಸಂಕಲನ, ಸುನಾದ್ ಗೌತಮ್ ಸಂಗೀತ, ವಿವೇಕ್ ಚಕ್ರವರ್ತಿ ಹಿನ್ನೆಲೆ ಸಂಗೀತ ಚಿತ್ರದಲ್ಲಿದೆ ಎಂದರು.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಸುಮಧುರ ಹಾಡುಗಳು ಎಲ್ಲರ ಗಮನಸೆಳೆದಿದೆ. ರಘು ದೀಕ್ಷಿತ್ ಹಾಡಿರುವ “ರಕ್ಷಕ’ ಹಾಡಿನ ಮುಖಾಂತರ “ನಿಮ್ಮೆಲ್ಲರ ಆಶೀರ್ವಾದ’ ಚಿತ್ರತಂಡ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸಿದೆ. ಹಾಡುಗಳಿಗೆ ರಜತ್ ಹೆಗ್ಡೆ, ನಿನಾದ ನಾಯಕ್, ನಿಹಾಲ್ ತಾವ್ರೋ ಧ್ವನಿ ನೀಡಿದ್ದಾರೆ.
ನಿರ್ಮಾಪಕ ಉದಯ್ ಕುಮಾರ್ ಹೆಗ್ಡೆ, ವಾಲ್ಟರ್ ನಂದಳಿಕೆ, ನಟ ಪ್ರತೀಕ್ ಶೆಟ್ಟಿ, ಅರವಿಂದ್ ಬೋಳಾರ್, ಮೈಮ್ ರಾಮದಾಸ್, ಪುರುಷೋತ್ತಮ್ ಭಂಡಾರಿ ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.