ಓಂ ಪ್ರಕಾಶ್ ರಿಟರ್ನ್ಸ್!
Team Udayavani, Jul 29, 2017, 10:54 AM IST
ಸಿನಿಮಾ ಮೇಲೆ ಸಿನಿಮಾ ಮಾಡುತ್ತಾ ಸದಾ ಬಿಝಿಯಾಗಿರುತ್ತಿದ್ದ ಓಂ ಪ್ರಕಾಶ್ ರಾವ್ ಇತ್ತೀಚೆಗೆ ಸ್ವಲ್ಪ ಮಂಕಾಗಿದ್ದರು. ಯಾವ ಸಿನಿಮಾವನ್ನು ಮಾಡಿರಲಿಲ್ಲ. ಈ ನಡುವೆಯೇ ಕೆಲವು ಸಿನಿಮಾಗಳನ್ನು ಅನೌನ್ಸ್ ಮಾಡಿದ್ದರೂ, ಆ ಸಿನಿಮಾಗಳು ಆರಂಭವಾಗಲೇ ಇಲ್ಲ. ಇಂತಿಪ್ಪ ಓಂಪ್ರಕಾಶ್ ರಾವ್ ಮತ್ತೆ ಬಂದಿದ್ದಾರೆ. ಅದು ಕೈ ತುಂಬಾ ಸಿನಿಮಾಗಳೊಂದಿಗೆ. ಈಗಾಗಲೇ ಅವರು ಆರಂಭಿಸಿರುವ “ಹುಚ್ಚ-2′ ಚಿತ್ರ ಪೂರ್ಣಗೊಂಡಿದ್ದು, ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಮಾಡುವ ಯೋಚನೆ ಓಂಪ್ರಕಾಶ್ ಅವರಗಿದೆ.
ಓಂಪ್ರಕಾಶ್ ರಾವ್ ತುಂಬಾ ನಿರೀಕ್ಷೆ ಇಟ್ಟಿರುವ ಸಿನಿಮಾ. ಈ ಸಿನಿಮಾ ಮೂಲಕ ತನಗೆ ಮತ್ತೂಂದು ದೊಡ್ಡ ಗೆಲುವು ಸಿಗುತ್ತದೆ ಎಂಬ ವಿಶ್ವಾಸ ಓಂಪ್ರಕಾಶ್ ಅವರಿಗಿದೆ. ಈ ಚಿತ್ರದ ಮೂಲಕ ನಾಯಕ “ಮದರಂಗಿ’ ಕೃಷ್ಣ ಅವರಿಗೂ ಒಂದು ದೊಡ್ಡ ಗೆಲುವು ಸಿಗುತ್ತದೆ ಎನ್ನುತ್ತಾರೆ ಓಂ. ಇದ ಬಿಡುಗಡೆಗೆ ರೆಡಿಯಾಗಿರುವ ಚಿತ್ರವಾದರೆ ಓಂಪ್ರಕಾಶ್ ಅವರ ಮತ್ತೆರಡು ಚಿತ್ರಗಳು ಆರಂಭವಾಗಲಿವೆ. ಅದರಲ್ಲಿ “ಅಯ್ಯ-2′ ಹಾಗೂ “ಚಂದ್ರಲೇಖಾ ರಿಟರ್ನ್ಸ್’.
ಈಗಾಗಲೇ “ಅಯ್ಯ-2′ ಚಿತ್ರೀಕರಣ ಆರಂಭವಾಗಿರುವ, ಆ ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಆದರೆ, ಈಗ “ಅಯ್ಯ-2′ ಚಿತ್ರವನ್ನು ಹೊಸದಾಗಿ ಆರಂಭಿಸಲು ಓಂ ನಿರ್ಧರಿಸಿದ್ದಾರೆ. ಅದು ಬದಲಾದ ನಾಯಕನೊಂದಿಗೆ. ಈಗ ಚಿರಂಜೀವಿ ಸರ್ಜಾ ಜಾಗಕ್ಕೆ ವಿನೋದ್ ಪ್ರಭಾಕರ್ ಬಂದಿದ್ದಾರೆ. ಜೊತೆಗೆ “ಅಯ್ಯ-2′ ಚಿತ್ರದ ಟೈಟಲ್ ಕೂಡಾ ಬದಲಾಗಲಿದೆ. ಅದೇ ಕಥೆಯೊಂದಿಗೆ ಹೊಸ ಟೈಟಲ್ ಹಾಗೂ ಹೊಸ ಹೀರೋನೊಂದಿಗೆ ಮತ್ತೆ ಸಿನಿಮಾ ಆರಂಭಿಸಲಿದ್ದಾರೆ ಓಂ.
ಅಷ್ಟಕ್ಕೂ ಚಿರಂಜೀವಿ ಸರ್ಜಾ ಬದಲಾಗಿದ್ದು ಯಾಕೆ ಎಂಬ ಪ್ರಶ್ನೆ ಬರುತ್ತದೆ. ಅದಕ್ಕೂ ಓಂ ಉತ್ತರಿಸುತ್ತಾರೆ. “ನನಗೆ ಸಿನಿಮಾ ಪ್ರೀತಿಸುವವರು ಮುಖ್ಯ. ನಾನು ಸಿನಿಮಾಕ್ಕಾಗಿ ಸೋಲಲು ರೆಡಿ. ಆದರೆ ಯಾವುದೋ ವ್ಯಕ್ತಿಗಾಗಿ ಸೋಲುವುದಿಲ್ಲ. ನಾನು ಸಿನಿಮಾ ಮಾಡುವ ಮೂಡ್‌ನಲ್ಲಿದ್ದಾಗ, ಖ್ಯಾತ ಸ್ಟಂಟ್ ಮಾಸ್ಟರ್ ವಿಜಯನ್ ಅವರನ್ನು ಕರೆತಂದಾಗ, ಚಿರಂಜೀವಿ ಸಿಸಿಎಲ್‌ಗಾಗಿ ಅರ್ಧದಲ್ಲಿ ಬಿಟ್ಟು ಹೋದರು. ನನಗೆ ಸಿನಿಮಾ ಮಾಡುವ ಮೂಡ್ ಹಾಳಾಯಿತು.
ನನ್ನಿಂದ ಅಥವಾ ಯಾವುದೋ ನಟರಿಂದ ನಿರ್ಮಾಪಕರಿಗೆ ತೊಂದರೆಯಾಗಬಾರದು. ಹಾಗಾಗಿ, ಈಗ ಹೊಸದಾಗಿ ಸಿನಿಮಾ ಆರಂಭಿಸುತ್ತೇನೆ’ ಎನ್ನುತ್ತಾರೆ ಓಂ. ಈಗಾಗಲೇ “ಅಯ್ಯ-2′ ಚಿತ್ರದ 28 ದಿನಗಳ ಚಿತ್ರೀಕರಣವಾಗಿದ್ದು, ಈಗ ಅದನ್ನು ಪಕ್ಕಕ್ಕಿಟ್ಟು ಹೊಸದಾಗಿ ಸಿನಿಮಾ ಮಾಡಲಿದ್ದಾರಂತೆ. ಇದಲ್ಲದೇ “ಚಂದ್ರಲೇಖಾ ರಿಟರ್ನ್ಸ್’ ಎಂಬ ಕಥೆಯೂ ರೆಡಿ ಇದ್ದು, ಈ ಚಿತ್ರದಲ್ಲಿ “ಮದರಂಗಿ’ ಕೃಷ್ಣ ಹಾಗೂ ಮೈಸೂರು ಬೆಡಗಿ ಕೃತಿಕಾ ನಟಿಸಲಿದ್ದಾರಂತೆ. ಆ ಚಿತ್ರ ಕೂಡಾ ಯಾವಾಗ ಬೇಕಾದರೂ ಆರಂಭವಾಗಬಹುದು.
ಈ ನಡುವೆಯೇ ಧನಂಜಯ್ ಜೊತೆ ಸಿನಿಮಾ ಮಾಡುವುದಾಗಿ ಓಂ ಪ್ರಕಾಶ್ ಹೇಳಿದ್ದಲ್ಲದೇ ಫೋಟೋಶೂಟ್ ಕೂಡಾ ಆಗಿತ್ತು. ಆದರೆ, ಆ ಪ್ರಾಜೆಕ್ಟ್ ಕೂಡಾ ನಿಂತು ಹೋಗಿದೆ. ಯಾಕೆಂದರೆ ಹೀರೋ ಬಿಝಿ, ಅವರು ಬದಲಾಗಿದ್ದಾರೆ ಎಂಬ ಉತ್ತರ ಓಂನಿಂದ ಬರುತ್ತದೆ. “ಧನಂಜಯ್ ಅವರು ಒಂದೇ ಒಂದು ದೃಶ್ಯ ನೋಡಿ ಮೊಟ್ಟ ಮೊದಲ ಬಾರಿಗೆ ಅಡ್ವಾನ್ಸ್ ಮಾಡಿದವ ನಾನು. ಫೋಟೋಶೂಟ್ ಕೂಡಾ ಮಾಡಿಸಿದೆ. ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿ, ಫೋಟೋಶೂಟ್, ಫೋಸ್ಟರ್ ಮಾಡಿಸಿದೆ.
ಇವತ್ತು ಅವೆಲ್ಲವೂ ಗೋದಾಮಿನಲ್ಲಿದೆ. ಕಾರಣ ಹೀರೋ ಬದಲಾಗಿದ್ದಾರೆ. ಅವರ ಆ್ಯಟಿಟ್ಯೂಡ್ ತುಂಬಾ ಬಿಝಿ ತರಹ ಇದೆ. ಸಿನಿಮಾ ಮಾಡಬೇಕೆಂದು ಹೋದಾಗ ಇನ್ಯಾರಲ್ಲೋ ಕೇಳುತ್ತಾರೆ. “ಮುಂದೆ ಗಾಂಧಿನಗರದ ಇಡ್ಲಿ ವಡೆ ನಿಮ್ಮನ್ನು ಬದಲಿಸಬಹುದು’ ಎಂದು ಅವತ್ತೇ ಹೇಳಿದ್ದೆ. ಈಗ ಅದರಂತೆ ಆಗಿದೆ’ ಎಂದು ಧನಂಜಯ್ ವಿರುದ್ಧ ಬೇಸರ ತೋಡಿಕೊಳ್ಳುತ್ತಾರೆ. ಈ ನಡುವೆಯೇ ಓಂ ಪ್ರಕಾಶ್ ರಾವ್ ಅವರು ಶಿವರಾಜಕುಮಾರ್‌ಗೆ ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ.
ಅದು “ತ್ರಿವಿಕ್ರಮ’. ಈ ವರ್ಷಾಂತ್ಯ ಅಥವಾ ಮುಂದಿನ ವರ್ಷಾರಂಭದಲ್ಲಿ ಸಿನಿಮಾ ಆರಂಭವಾಗಬಹುದು ಎನ್ನುತ್ತಾರೆ ಓಂ. ಅಂದಹಾಗೆ, ಇಷ್ಟು ಸಿನಿಮಾಗಳ ನಿರ್ಮಾಪಕರು ಉಮೇಶ್ ರೆಡ್ಡಿ. ಈಗಾಗಲೇ “ಕಟ್ಟೆ’ ಸಿನಿಮಾ ಮಾಡಿದ್ದಾರೆ ಉಮೇಶ್. “ಕಟ್ಟೆ ಸಿನಿಮಾ ನನಗೆ ದೊಡ್ಡ ಹೊಡೆತ ಕೊಟ್ಟಿತು. ನನ್ನ ಯಾವ ಸಿನಿಮಾವೂ ಆ ಮಟ್ಟಕ್ಕೆ ಸೋತಿರಲಿಲ್ಲ. ನಾನು ನಿರ್ಮಾಪಕರನ್ನು ಉಳಿಸಬೇಕು. ಅದಕ್ಕಾಗಿ ಒಳ್ಳೆಯ ಸಿನಿಮಾ ಕೊಡಲು ಪ್ರಯತ್ನಿಸುತ್ತಿದ್ದೇನೆ’ ಎನ್ನುವುದು ಓಂಪ್ರಕಾಶ್ ರಾವ್ ಮಾತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.