ಒಂದು ಮೊಟ್ಟೆಯ ಆರಂಭದ ಕಥೆ
Team Udayavani, May 1, 2017, 12:29 PM IST
ಒಂದು ಮೊಟ್ಟೆಯ ಕಥೆ’ ಟ್ರೇಲರ್ ನೋಡಿದವರು ಅದರಲ್ಲಿನ ಜನಾರ್ದನ ಪಾತ್ರವನ್ನು ಖಂಡಿತಾ ಇಷ್ಟಪಟ್ಟಿರುತ್ತಾರೆ. ಯಾವುದೇ ಹೀರೋಯಿಸಂ ಇಲ್ಲದ ಪಾತ್ರವದು. ತಲೆಗೂದಲು ಇಲ್ಲದ ಕನ್ನಡ ಮೇಷ್ಟ್ರು ಜನಾರ್ದನನ ಮನಸ್ಥಿತಿ, ಸುಂದರ ಹುಡುಗಿ ಸಿಗಬೇಕೆಂಬ
ಆಸೆಯಿಂದ ಆತ ತಯಾರಾಗುವ ಪರಿ, ಆತನ ವಿನಯವಂತಿಕೆ ಹಾಗೂ ಕಾಲೇಜಿನಲ್ಲಿ ಹುಡುಗರು ರೇಗಿಸುವ ರೀತಿಯನ್ನು ವಿಭಿನ್ನವಾಗಿ ತೋರಿಸುವ ಮೂಲಕ “ಒಂದು ಮೊಟ್ಟೆಯ ಕಥೆ’ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಅಷ್ಟಕ್ಕೂ ಆ ಜನಾರ್ದನ ಪಾತ್ರ ಮಾಡಿದವರನ್ನು ಖಂಡಿತಾ ನೀವು ಈ ಹಿಂದೆ ಯಾವುದೇ ಸಿನಿಮಾಗಳಲ್ಲಿ ನೋಡಿರಲಿಕ್ಕಿಲ್ಲ. ಹಾಗಾದರೆ ಯಾರವರು, ಅವರ ಹಿನ್ನೆಲೆಯೇನು ಎಂಬ ಪ್ರಶ್ನೆಗೆ ಉತ್ತರ ರಾಜ್ ಬಿ ಶೆಟ್ಟಿ.
ಹೌದು, “ಒಂದು ಮೊಟ್ಟೆಯ ಕಥೆ’ ಚಿತ್ರವನ್ನು ನಿರ್ದೇಶನ ಮಾಡಿರುವ ರಾಜ್ ಬಿ ಶೆಟ್ಟಿಯವರೇ ಜನಾರ್ದನ ಪಾತ್ರದಲ್ಲೂ
ನಟಿಸಿದ್ದಾರೆ. ಈ ಮೂಲಕ ಮೊದಲ ಸಿನಿಮಾದಲ್ಲೇ ನಿರ್ದೇಶನ ಹಾಗೂ ನಟರಾಗಿಯೂ ಗಮನ ಸೆಳೆದಿದ್ದಾರೆ. ರಾಜ್ ಶೆಟ್ಟಿ ಮಂಗಳೂರಿನ ಸುರತ್ಕಲ್‌ನವರು. ಆರ್‌ಜೆ ಆಗಿದ್ದ ರಾಜ್ ಅವರಿಗೆ ಸಿನಿಮಾದಲ್ಲೂ ಆಸಕ್ತಿ ಇತ್ತು. ಹಾಗಾಗಿ, ಗೆಳೆಯರ ಜೊತೆ ಸೇರಿಕೊಂಡು “ಸುಮ್ನೆ ನಮಗ್ಯಾಕೆ’ ಹಾಗೂ “5 ಲೆಟರ್’ ಎಂಬ ಎರಡು ಶಾರ್ಟ್ μಲಂಗಳನ್ನು ಮಾಡಿದ್ದಾರೆ. ಹೀಗೆ ಸಿನಿಮಾ ಆಸಕ್ತಿ ಬೆಳೆದ ರಾಜ್ ಆರಂಭಿಸಿದ್ದೇ “ಒಂದು ಮೊಟ್ಟೆಯ ಕಥೆ’.
ತುಳು ಸಿನಿಮಾ “ರಂಗ್’ ಮಾಡಿದ್ದ ಸುಹಾನ್ ಪ್ರಸಾದ್ ಈ ಸಿನಿಮಾ ನಿರ್ಮಾಣ ಮಾಡುವ ಜವಾಬ್ದಾರಿ ಕೂಡಾ ಹೊತ್ತುಕೊಳ್ಳುವ ಮೂಲಕ ಸಿನಿಮಾ ಆರಂಭವಾಗಿಯೇ ಬಿಡುತ್ತದೆ. “ಒಂದು ಮೊಟ್ಟೆಯ ಕಥೆ’ಯಲ್ಲಿ ರಾಜ್ ಅವರು ಒಬ್ಬ ಸಾಮಾನ್ಯ ವ್ಯಕ್ತಿಯ ಲವ್‌ಸ್ಟೋರಿಯನ್ನು ಹೇಳಲು ಹೊರಟಿದ್ದಾರೆ. ಅದರಲ್ಲೂ, ಏನಾದರೊಂದು ಸಣ್ಣ ಲೋಪವಿರುವ ವ್ಯಕ್ತಿಯ ಲವ್‌ಸ್ಟೋರಿ ಹಾಗೂ ಆ ವ್ಯಕ್ತಿಯ ಮನಸ್ಥಿತಿ ಹೇಗಿರಬಹುದೆಂಬುದನ್ನು ಸಿನಿಮಾ ಮಾಡಿದ್ದಾರೆ ರಾಜ್ ಬಿ ಶೆಟ್ಟಿ. “ಒಬ್ಬ ಸಾಮಾನ್ಯ ವ್ಯಕ್ತಿ. ಅದರಲ್ಲೂ ತಲೆಯಲ್ಲಿ ಕೂದಲು ಇಲ್ಲದ ವ್ಯಕ್ತಿಗೆ ಬರುವಂತಹ ಕಾಮೆಂಟ್‌ಗಳು, ಸ್ನೇಹಿತರು ಮಾಡುವ ತಮಾಷೆಗಳು ಹೇಗಿರುತ್ತವೆ ಮತ್ತು ಆತ ಅದಕ್ಕೆ ಹೇಗೆ ರಿಯಾಕ್ಟ್ ಮಾಡುತ್ತವೆ ಎಂಬುದು ನನಗೆ ತುಂಬಾ ಆಸಕ್ತಿ ಎನಿಸಿತು. ಅದರಲ್ಲೂ ತುಂಬಾ ಇನ್‌ಸೆಕ್ಯುರ್ ಆಗಿರುವಂತಹ, ಒಬ್ಬ ವಿನಯವಂತಹ ಕನ್ನಡ ಲೆಕ್ಚರ್‌ಗೆ ಬಂದರೆ ಆತ ಹೇಗೆ ವರ್ತಿಸಬಹುದು ಎಂಬ ಅಂಶದೊಂದಿಗೆ ಈ ಸಿನಿಮಾ ಮಾಡಿದ್ದೇನೆ’ ಎನ್ನುವುದು ರಾಜ್ ಶೆಟ್ಟಿ ಮಾತು.
ಇಡೀ ಸಿನಿಮಾ 16 ದಿನಗಳ ಕಾಲ ಮಂಗಳೂರಿನಲ್ಲೇ ಚಿತ್ರೀಕರಣವಾಗಿದೆ. ಈ ಚಿತ್ರದಲ್ಲಿ ಮಂಗಳೂರು ಕನ್ನಡವನ್ನೇ ಬಳಸಲಾಗಿದೆ. ಹಾಗಂತ ಕಾಮಿಡಿಗಲ್ಲ. ಬದಲಾಗಿ ಪಾತ್ರಕ್ಕೆ ಅದು ಅಗತ್ಯವಿದೆ. “ಕೆಲವು ಕನ್ನಡ ಸಿನಿಮಾಗಳಲ್ಲಿ ಮಂಗಳೂರು ಕನ್ನಡವನ್ನು ಕಾಮಿಡಿಗಾಗಿ ಕೆಟ್ಟದಾಗಿ ಬಳಸುತ್ತಾರೆ. ಆದರೆ ಮಂಗಳೂರು ಕನ್ನಡ ಕಾಮಿಡಿಯಲ್ಲ. ಅದಕ್ಕೆ ಅದರದ್ದೇ ಆದ ಒಂದು ಶೈಲಿ ಇದೆ, ಅದರಲ್ಲೊಂದು ವಿನಯವಂತಿಕೆ ಇದೆ. ನಾನು ಬರೆದ ಪಾತ್ರ ಕೂಡಾ ಆ ತರಹದ್ದೇ ಆದ್ದರಿಂದ ಮಂಗಳೂರು ಕನ್ನಡವನ್ನೇ ಬಳಸಿದ್ದೇವೆ’ ಎನ್ನುತ್ತಾರೆ.
ಅನಿವಾರ್ಯವಾಗಿ ಪಾತ್ರವಾದ ರಾಜ್ ಶೆಟ್ಟಿ
ಟ್ರೇಲರ್ ಬಿಡುಗಡೆಗೆ ಮುನ್ನ ರಾಜ್ ಶೆಟ್ಟಿಯಾಗಿದ್ದವರು ಈಗ ಟ್ರೇಲರ್ ಬಿಡುಗಡೆ ನಂತರ “ಜನಾರ್ದನ’, “ಮೊಟ್ಟೆ’ ಎಂದು ಫೇಮಸ್ ಆಗಿದ್ದಾರೆ. ಅದಕ್ಕೆ ಕಾರಣ ನಿರ್ದೇಶಕ ರಾಜ್, ಜನಾರ್ದನ ಪಾತ್ರದಲ್ಲಿ ಕಾಣಿಸಿಕೊಂಡಿರೋದು. ಅಷ್ಟಕ್ಕೂ ನಿರ್ದೇಶನ, ನಟನೆ ಎರಡೂ ಜೊತೆಗೆ ಮಾಡುವ ಉದ್ದೇಶವಿತ್ತೇ ಎಂದರೆ ಖಂಡಿತಾ ಇಲ್ಲ ಎಂಬ ಉತ್ತರ ರಾಜ್ ರಿಂದ ಬರುತ್ತದೆ. ಮಂಗಳೂರು ಮೂಲದ 53 ಜನ ಹೊಸ ಪ್ರತಿಭೆಗಳು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅವರೆಲ್ಲರೂ ರಿಹರ್ಸಲ್ ಮಾಡಿ, ಅಂಡರ್‌ಪ್ಲೇ ಮಾಡುವಷ್ಟು ಪಕ್ಕಾ ಆಗಿ ಶೂಟಿಂಗ್‌ಗೆ ರೆಡಿಯಾಗಿದ್ದರಂತೆ.
ಆದರೆ, ಚಿತ್ರದ ಮುಖ್ಯ ಪಾತ್ರ ಜನಾರ್ದನನ ಆಯ್ಕೆಯೇ ಚಿತ್ರತಂಡಕ್ಕೆ ಕಷ್ಟವಾಯಿತಂತೆ. ಅದಕ್ಕೆ ಕಾರಣ ಚಿತ್ರತಂಡದ ಷರತ್ತುಗಳು. ಜನಾರ್ದನ ಪಾತ್ರ ಮಾಡುವ ವ್ಯಕ್ತಿಗೆ ತಲೆಗೂದಲು ಉದುರಿರಬೇಕು, ತೆಳ್ಳಗಿರಬೇಕು ಹಾಗೂ ಸ್ಪಷ್ಟವಾಗಿ ಮಂಗಳೂರು ಕನ್ನಡವನ್ನು ಮಾತನಾಡಬೇಕು. ಈ ಷರತ್ತುಗಳೊಂದಿಗೆ ಒಂದಷ್ಟು ಮಂದಿಯನ್ನು ಹುಡುಕಿದರೂ ಯಾರೂ ಸಿಗಲಿಲ್ಲವಂತೆ. ಆಗ ಚಿತ್ರತಂಡದವರೆಲ್ಲಾ ನಿರ್ದೇಶಕ ರಾಜ್‌ರತ್ತ ಕೈ ತೋರಿಸಿ ನೀವೇ ಮಾಡಬಹುದಲ್ವಾ ಎಂದರಂತೆ.
ಅದಕ್ಕೆ ಕಾರಣ ಚಿತ್ರತಂಡದ ಷರತ್ತುಗಳಿಗೆ ರಾಜ್ ಹೊಂದುವಂತೆ ಇದ್ದಿದ್ದು. ರಾಜ್ ಶೆಟ್ಟಿಗೂ ಸ್ವಲ್ಪ ತಲೆಗೂದಲು ಉದುರಿದೆ, ತೆಳ್ಳಗೆ ಇದ್ದಾರೆ, ಜೊತೆ ಮಂಗಳೂರು ಕನ್ನಡವನ್ನು ಮಂಗಳೂರು ಕನ್ನಡದಲ್ಲೇ ಮಾತನಾಡುತ್ತಾರೆ. ಹಾಗಾಗಿ, ಎಲ್ಲರೂ ಈ ಪಾತ್ರವನ್ನು ರಾಜ್ ಮಾಡಿದರೇನೇ ಚೆಂದ ಎಂದರಂತೆ. ಹಾಗಾಗಿ, ರಾಜ್ ಶೆಟ್ಟಿ ಜನಾರ್ದನನಾಗಿ ಬದಲಾಗುತ್ತಾರೆ. “ಜನಾರ್ದನ ಪಾತ್ರ ತುಂಬಾ ಅಂಡರ್‌ಪ್ಲೇ ಮಾಡಬೇಕಿತ್ತು. ಅದಕ್ಕಾಗಿ ನಾನು ಸಾಕಷ್ಟು ತಯಾರಿ ನಡೆಸಿದ್ದೆ. ಸುಮಾರು 15 ದಿನಗಳ ಕಾಲ ಆ ಪಾತ್ರವಾಗಿ ನಾನು ಜೀವಿಸಿದ್ದೆ. ಜನಿವಾರ, ಕನ್ನಡಕ ಹಾಗೂ ಜನಾರ್ದನ ಪಾತ್ರ ಹಾಕಬೇಕಿದ್ದ ಬಟ್ಟೆ, ಚಪ್ಪಲಿ ಹಾಕಿಕೊಂಡು ನಾನು ಪಾತ್ರಕ್ಕೆ ಸಿದ್ಧನಾದೆ.
ಬಾಡಿ ಲಾಂಗ್ವೇಜ್ ಕೂಡಾ ಬದಲಿಸಿದೆ’ ಎಂದು ಪಾತ್ರದ ಬಗ್ಗೆ ಹೇಳುತ್ತಾರೆ ರಾಜ್ ಶೆಟ್ಟಿ. ಈಗ ಹೋದಲ್ಲೆಲ್ಲಾ “ಮೊಟ್ಟೆ’ ಎಂದು ತಮಾಷೆ ಮಾಡುತ್ತಾರೆ ಎಂದು ನಗುತ್ತಾರೆ. “ಒಂದು ಮೊಟ್ಟೆಯ ಕಥೆ’ ಸಿನಿಮಾ ಮಾಡಿದ ಪವನ್ ಖುಷಿಯಾಗಿ ಆ ಸಿನಿಮಾವನ್ನು ಪವನ್ ಕುಮಾರ್ ಸ್ಟುಡಿಯೋಗೆ ತಗೊಂಡಿದ್ದಾರೆ. ಅಲ್ಲಿಗೆ ಮೂಲ ನಿರ್ಮಾಪಕರು ಸೇಫ್. ಮೇ 6 ರಂದು ನ್ಯೂಯಾರ್ಕ್ μಲಂ ಫೆಸ್ಟಿವಲ್‌ನಲ್ಲಿ ಪ್ರೀಮಿಯರ್ ನಡೆಯಲಿದೆ. ಆ ನಂತರ ಬೇರೆ ಬೇರೆ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ನಂತರ ಚಿತ್ರ ರಾಜ್ಯದಲ್ಲಿ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.