ಮಾರ್ಚ್ 30ಕ್ಕೆ ಭರ್ಜರಿ ಶತದಿನೋತ್ಸವ
Team Udayavani, Mar 29, 2018, 12:56 PM IST
ಧ್ರುವ ಸರ್ಜಾ ಅಭಿನಯದ ಮೂರನೆಯ ಚಿತ್ರವಾದ “ಭರ್ಜರಿ’ ನೂರು ದಿನಗಳನ್ನು ಪೂರೈಸಿ ಕೆಲವು ದಿನಗಳೇ ಆಗಿವೆ. ಈ ಮಧ್ಯೆ ಚಿತ್ರದ ಶತದಿನೋತ್ಸವ ಸಂಭ್ರಮವನ್ನು ಆಚರಿಸುವುದಕ್ಕೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಸಿದ್ಧತೆ ನಡೆಸಿದ್ದಾರೆ. ಇದೇ 30ರಂದು ಕನಕಪುರ ಮುಖ್ಯ ರಸ್ತೆಯಲ್ಲಿರುವ ಮುನೇಶ್ವರ ದೇವಸ್ಥಾನದ ಬಳಿ ಈ ಕಾರ್ಯಕ್ರಮ ನಡೆಯಲಿದೆ.
ಅಂದಿನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸಚಿವ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಶಾಸಕ ಆರ್.ವಿ. ದೇವರಾಜ್, ವಿತರಕ ಭಾಷಾ ಮುಂತಾದವರು ಭಾಗವಹಿಸಲಿದ್ದಾರೆ. ಮೂಲಗಳ ಪ್ರಕಾರ, ಅಂದಿನ ಸಮಾರಂಭದಲ್ಲಿ ಚಿತ್ರತಂಡದ ಬಹಳಷ್ಟು ಕಲಾವಿದರು ಮತ್ತು ತಂತ್ರಜ್ಞರು ಭಾಗವಹಿಸುತ್ತಿಲ್ಲವಂತೆ. “ಭರ್ಜರಿ’ ಚಿತ್ರದ ಬಿಡುಗಡೆಯ ನಂತರ ನಿರ್ಮಾಪಕ ಕನಕಪುರ ಶ್ರೀನಿವಾಸ್ ಮತ್ತು ಚಿತ್ರತಂಡದವರ ಮಧ್ಯೆ ದೊಡ್ಡ ಕಂದಕ ಏರ್ಪಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.
ಚಿತ್ರದ ಬಿಡುಗಡೆಗೂ ಮುನ್ನವೇ ನಿರ್ಮಾಪಕರು ಮತ್ತು ಚಿತ್ರತಂಡದವರ ಮಧ್ಯೆ ಮನಸ್ಥಾಪವಿತ್ತಂತೆ. ಅದು ಚಿತ್ರದ ಬಿಡುಗಡೆಯ ನಂತರ ಬಯಲಾಗಿದೆ. ಚಿತ್ರವು ಸುಮಾರು 50 ಕೋಟಿ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡದವರು ಹೇಳಿಕೊಂಡಿದ್ದರು. ಅದಕ್ಕೆ ಪ್ರತಿಯಾಗಿ ಕನಕಪುರ ಶ್ರೀನಿವಾಸ್ ಅವರು, ಅದೆಲ್ಲಾ ಸುಳ್ಳು ಎಂದು ಹೇಳುವುದರ ಜೊತೆಗೆ, ಕೆಲವರು ಅಷ್ಟೊಂದು ದೊಡ್ಡ ಮೊತ್ತವನ್ನು ಹೇಳಿರುವುದು ತಮ್ಮ ಸಂಭಾವನೆಯನ್ನು ಏರಿಸಿಕೊಳ್ಳುವುದಕ್ಕೆ ಎಂದು ಆರೋಪಿಸಿದ್ದರು.
ಇದೆಲ್ಲದರಿಂದ ಚಿತ್ರತಂಡದ ಮಧ್ಯೆ ದೊಡ್ಡ ಬಿರುಕು ಬಿಟ್ಟಿದ್ದು, ಅದೇ ಕಾರಣಕ್ಕೆ ಚಿತ್ರತಂಡದ ಯಾವೊಬ್ಬ ಸದಸ್ಯರು ಸಹ ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. “ಭರ್ಜರಿ’ ಚಿತ್ರ ಶತದಿನ ಸಮಾರಂಭದಲ್ಲಿ ಚಿತ್ರತಂಡದ ಯಾವೊಬ್ಬ ಸದಸ್ಯರು ಭಾಗವಹಿಸುತ್ತಿಲ್ಲ ಎಂಬುದು ಒಂದು ವಿಷಯವಾದರೆ, ಚಿತ್ರತಂಡದ ಕೆಲವರು ಚಿತ್ರವು ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅಷ್ಟೇ ಅಲ್ಲ, ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ತಂತ್ರಜ್ಞರ ಮನೆಗೆ ಫಲಕಗಳನ್ನು ತಲುಪಿಸಲಾಗಿದೆ ಎಂಬಂತಹ ಮಾತುಗಳು ಕೇಳಿ ಬರುತ್ತಿದೆ. ಹೀಗೆ ಚಿತ್ರತಂಡದವರು ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರಿಗೆ ಅನಿಸಿದ್ದರಿಂದ, ಅವರೇ ಈಗ ಪ್ರತ್ಯೇಕವಾಗಿ ಇನ್ನೊಂದು ಸಮಾರಂಭ ಮಾಡಿ, ಅಲ್ಲಿ “ಭರ್ಜರಿ’ ಚಿತ್ರದ ಶತದಿನೋತ್ಸವವನ್ನು ಆಚರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಚಿತ್ರತಂಡದವರನ್ನೆಲ್ಲಾ ಒಟ್ಟಿಗೆ ಸೇರಿಸಬೇಕಿದ್ದ ಚಿತ್ರದ ಶತದಿನೋತ್ಸವ ಸಮಾರಂಭವು ಚಿತ್ರತಂಡದವರನ್ನೆಲ್ಲಾ ದೂರ ಮಾಡುತ್ತಿದೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿವೆ. ಸಮಾರಂಭಕ್ಕೆ ಇನ್ನೂ ಒಂದು ದಿನ ಇದೆ. ಅಷ್ಟರಲ್ಲಿ ನಿರ್ಮಾಪಕರು ಮತ್ತು ಉಳಿದ ಚಿತ್ರತಂಡದವರೆಲ್ಲಾ ತಮ್ಮ ನಡುವಿನ ಮನಸ್ಥಾಪ ಮರೆತು, ಶತದಿನೋತ್ಸವ ವೇದಿಕೆಯಲ್ಲಿ ಒಟ್ಟಾಗುತ್ತಾರಾ ಎಂದು ಕಾದು ನೋಡಬೇಕು. ಒಟ್ಟಾಗಲಿ ಎಂಬುದು ಎಲ್ಲರ ಹಾರೈಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.