ಪರಮಾತ್ಮನಿಲ್ಲದ ಒಂದು ವರುಷ..; ಅಭಿಮಾನಿಗಳಲ್ಲಿ ಅಪ್ಪು ನೆನಪು
Team Udayavani, Oct 29, 2022, 7:42 AM IST
ಕರುನಾಡಿನ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಅಕ್ಟೋಬರ್ 29ಕ್ಕೆ ಒಂದು ವರ್ಷ. ಆದರೆ, ಈ ಒಂದು ವರ್ಷದಲ್ಲಿ ಕರುನಾಡು ಪುನೀತ್ ರಾಜ್‌ಕು ಮಾರ್ ಅವರನ್ನು ನೆನೆಯದ ದಿನವಿಲ್ಲ. ಅವರ ಅಭಿಮಾನಿಗಳು ನೋವಿನಲ್ಲೇ ದಿನ ದೂಡುತ್ತಿದ್ದಾರೆ.
ಅಕ್ಟೋಬರ್ 29, 2021- ಸಿನಿಪ್ರಿಯರಿಗೆ ಕರಾಳ ದಿನ. ಎಲ್ಲರೂ ಖುಷಿ ಖುಷಿಯಿಂದ ಇದ್ದ ಸಮಯದಲ್ಲಿ ಬಂದಂತಹ ಸುದ್ದಿಯೊಂದು ಬರಸಿಡಿಲಿನಂತೆ ಹೊಡೆಯಿತು. ಆ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಕಷ್ಟು ಸಮಯವೇ ಬೇಕಾಯಿತು. ಅದು ತಮ್ಮ ನೆಚ್ಚಿನ ನಟ ಇನ್ನಿಲ್ಲ ಎಂಬ ಸುದ್ದಿ. ಫಿಟ್ ಅಂಡ್ ಫೈನ್ ಆಗಿ, ಚಿತ್ರರಂಗಕ್ಕೆ ಬರುವ ನವ ನಟರಿಗೆಲ್ಲಾ ಬೆನ್ನು ತಟ್ಟುತ್ತಿದ್ದ ದೊಡ್ಮನೆಯ ಕುಡಿ, ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬ ಸುದ್ದಿಯನ್ನು ಇವತ್ತಿಗೂ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಈ ಕಷ್ಟದಲ್ಲೇ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಅಕ್ಟೋಬರ್ 29ಕ್ಕೆ ಒಂದು ವರ್ಷವಾಗುತ್ತದೆ. ಆದರೆ, ಈ ಒಂದು ವರ್ಷದಲ್ಲಿ ಕರುನಾಡು ಪುನೀತ್ ರಾಜ್‌ಕುಮಾರ್ ಅವರನ್ನು ನೆನೆಯದ ದಿನವಿಲ್ಲ. ಅವರ ಅಭಿಮಾನಿಗಳು ನೋವಿನಲ್ಲೇ ದಿನ ದೂಡುತ್ತಿದ್ದಾರೆ.
ಅಭಿಮಾನಿಗಳು ಭಾವುಕ
ಪುನೀತ್ ರಾಜ್‌ಕುಮಾರ್ ಸಮಾಧಿಗೆ ಸತತ ಒಂದು ವರ್ಷದಿಂದ ಅಭಿಮಾನಿಗಳು ಭೇಟಿ ನೀಡುತ್ತಲೇ ಇದ್ದಾರೆ. ಅಭಿಮಾನಿಗಳಿಗೆ ಅದು ಸಮಾಧಿಯಲ್ಲ, ದೇವಸ್ಥಾನ. ನವಜೋಡಿಗಳಿಂದ ಹಿಡಿದು, ಮಗುವಿನ ನಾಮಕರಣವನ್ನೂ ಅಲ್ಲಿ ಮಾಡುತ್ತಿದ್ದಾರೆಂದರೆ ಅದಕ್ಕೆ ಕಾರಣ ಪುನೀತ್ ರಾಜ್‌ಕುಮಾರ್ ಮೇಲಿನ ಅಭಿಮಾನ. ಇಡೀ ಕರುನಾಡು ತನ್ನ ಮನೆಯ ಯಾರೋ ಸದಸ್ಯರನ್ನೇ ಕಳೆದುಕೊಂಡಂತಹ ದುಃಖ ಸಾಗರದಲ್ಲಿ ಮುಳುಗಿದೆ. ಇದೇ ವೇಳೆ ಪುನೀತ್ ಪ್ರಚಾರದ ಹಂಗಿಲ್ಲದೇ ಮಾಡಿದ ಸಹಾಯಗಳು ಈ ಒಂದು ವರ್ಷದಲ್ಲಿ ಒಂದೊಂದಾಗಿಯೇ ಬೆಳಕಿಗೆ ಬರುತ್ತಿವೆ. ಕನ್ನಡ ಚಿತ್ರರಂಗ ಕೂಡಾ ಪುನೀತ್ ನಿಧನದ ನಂತರ ಯಾವುದೇ ಕಾರ್ಯಕ್ರಮ ಮಾಡಿದರೂ ಮೊದಲು ಅಲ್ಲಿ ಪುನೀತ್ ಸ್ಮರಣೆ ಮಾಡಿಯೇ ಕಾರ್ಯಕ್ರಮ ಶುರು ಮಾಡುತ್ತಿದೆ. ಜೊತೆಗೆ ಅನೇಕ ಅಭಿಮಾನಿಗಳು, ಸಿನಿಮಾ ಮಂದಿ ಪುನೀತ್ ರಾಜ್‌ಕುಮಾರ್ ಕುರಿತಾದ ಆಲ್ಬಂ ಹೊರತರುತ್ತಿದ್ದಾರೆ. ಸಾಕಷ್ಟು ಕಡೆಗಳಲ್ಲಿ ಪುನೀತ್ ಅವರ ಪುತ್ಥಳಿ ನಿರ್ಮಾಣವಾಗುತ್ತಿದೆ. ಅದೇನೇ ಆದರೂ ಪುನೀತ್ ಇಲ್ಲ ಎಂಬ ನೋವನ್ನು ಮಾತ್ರ ಹೃದಯದಿಂದ ಕಿತ್ತಾಕಲು ಯಾರಿಂದಲೂ ಸಾಧ್ಯವಿಲ್ಲ. ಅದೇ ನೋವಲ್ಲಿ ಅಭಿಮಾನಿಗಳು ಅಪ್ಪು ಸ್ಮರಣೆ ಮಾಡುತ್ತಿದ್ದಾರೆ.
ಜೇಮ್ಸ್-ಲಕ್ಕಿಮ್ಯಾನ್ ನೋಡಿ ಫ್ಯಾನ್ಸ್ ಕಣ್ಣೀರು
ಪುನೀತ್ ರಾಜ್‌ಕುಮಾರ್ ಅಭಿಮಾನಿಗಳನ್ನು ಅಗಲಿದ ನಂತರ ಅವರ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. “ಜೇಮ್ಸ್’ ಹಾಗೂ “ಲಕ್ಕಿಮ್ಯಾನ್’. ಜೇಮ್ಸ್‌ನಲ್ಲಿ ಪುನೀತ್ ಹೀರೋ ಆದರೆ, “ಲಕ್ಕಿಮ್ಯಾನ್’ನಲ್ಲಿ ಅತಿಥಿ ಪಾತ್ರ. ಈ ಎರಡೂ ಚಿತ್ರಗಳನ್ನು ನೋಡಿದ ಅಭಿಮಾನಿಗಳು ಚಿತ್ರಮಂದಿರದಲ್ಲಿ ಕಣ್ಣೀರಿಟ್ಟಿದ್ದಾರೆ. ತಮ್ಮ ನೆಚ್ಚಿನ ನಟ ಇನ್ನಿಲ್ಲವಲ್ಲ, ಇನ್ನು ಈ ತರಹದ ಸಿನಿಮಾಗಳನ್ನು ನೋಡಲು ಸಾಧ್ಯವಿಲ್ಲ ಎಂಬ ಬೇಸರದಿಂದ ಅಭಿಮಾನಿಗಳು ಮರುಗಿದ್ದಾರೆ.
ಪ್ರತಿ ಸಿನಿಮಾಗಳಲ್ಲೂ ಪುನೀತ್ ನಮನ
ಪುನೀತ್ ತೀರಿಕೊಂಡ ದಿನದಿಂದ ಇಲ್ಲಿವರೆಗೆ ಬಿಡುಗಡೆಯಾದ ಪ್ರತಿ ಸಿನಿಮಾಗಳಲ್ಲೂ ಅಪ್ಪು ನಮನ ನಡೆಯುತ್ತಲೇ ಬಂದಿದೆ. ಆರಂಭದ ಒಂದಷ್ಟು ತಿಂಗಳು ಸಿನಿಮಾ ಕಾರ್ಯಕ್ರಮಗಳಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಮೂಲಕ ಕಾರ್ಯಕ್ರಮ ಆರಂಭವಾಗುತ್ತಿತ್ತು. ಜೊತೆಗೆ ಸಿನಿಮಾ, ಟೀಸರ್, ಟ್ರೇಲರ್ ಏನೇ ಕಾರ್ಯಕ್ರಮವಿದ್ದರೂ ಅಲ್ಲಿ ಪುನೀತ್ ನಮನದೊಂದಿಗೆ ಆರಂಭವಾಗುತ್ತಿದೆ. ಇದು ಸಿನಿಮಾ ಮಂದಿ ಅಪ್ಪು ಅವರ ಮೇಲಿಟ್ಟಿರುವ ಪ್ರೀತಿಗೆ ಸಾಕ್ಷಿ.
ಪರಭಾಷೆಯಲ್ಲೂ ಪುನೀತ್ ನೆನಪು
ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅಕಾಲಿಕ ನಿಧನದ ದುಃಖ ಕೇವಲ ಕನ್ನಡ ಚಿತ್ರರಂಗ ಮತ್ತು ಕನ್ನಡ ಚಿತ್ರ ಪ್ರೇಮಿಗಳಿಗೆ ಮಾತ್ರವಲ್ಲ, ಪರಭಾಷೆಯ ಚಿತ್ರರಂಗ, ಅಲ್ಲಿನ ಸಿನಿಮಂದಿ ಮತ್ತು ಸಿನಿಪ್ರಿಯರನ್ನೂ ಕಾಡುತ್ತಿದೆ. ಕಳೆದ ಒಂದು ವರ್ಷದಿಂದ ಕನ್ನಡದ ಜೊತೆಗೆ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಸೇರಿದಂತೆ ಬಹುತೇಕ ಎಲ್ಲ ಭಾಷೆಗಳ ಚಿತ್ರರಂಗದ ಬಹುತೇಕ ಸಭೆ -ಸಮಾರಂಭಗಳಲ್ಲಿ, ಸಿನಿಮಾಗಳ ಪ್ರಚಾರದ ವೇಳೆ ಅಲ್ಲಿನ ದೊಡ್ಡ ಸ್ಟಾರ್, ನಿರ್ಮಾಪಕ, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಅಪ್ಪುವಿನ ಗುಣಗಾನ ಮಾಡುತ್ತಿದ್ದಾರೆ. ರಾಜಮೌಳಿ ನಿರ್ದೇಶನದ “ಆರ್‌ಆರ್‌ಆರ್’, ಕಮಲ್ ಹಾಸನ್ ಅಭಿನಯದ “ವಿಕ್ರಂ’, ವಿಜಯ್ ದೇವರಕೊಂಡ ಅಭಿನಯದ “ಲೈಗರ್’, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ “ಬ್ರಹ್ಮಾಸ್ತ್ರ’, ಪ್ರಭಾಸ್ ಅಭಿನಯದ “ರಾಧೆ ಶ್ಯಾಮ್’, ಚಿಯಾನ್ ವಿಕ್ರಂ ಅಭಿನಯದ “ಕೋಬ್ರಾ’, ಮಣಿರತ್ನಂ ನಿರ್ದೇಶನದ “ಪೊನ್ನಿಯನ್ ಸೆಲ್ವನ್-1′, ಚಿರಂಜೀವಿ ಅಭಿನಯದ “ಆಚಾರ್ಯ’ ಹೀಗೆ ಈ ವರ್ಷ ತೆರೆಕಂಡ ಭಾರತೀಯ ಚಿತ್ರರಂಗದ ಬಹುತೇಕ ಎಲ್ಲ ಭಾಷೆಗಳ ಬಿಗ್ ಬಜೆಟ್ ಸ್ಟಾರ್ ಸಿನಿಮಾಗಳ ಪ್ರಚಾರ ಮತ್ತು ಪ್ರೀ-ರಿಲೀಸ್ ಇವೆಂಟ್‌ನಂತಹ ಕಾರ್ಯಕ್ರಮಗಳಲ್ಲೂ ಚಿತ್ರತಂಡಗಳು ಪುನೀತ್ ರಾಜಕುಮಾರ್ ಅವರಿಗೆ ನುಡಿನಮನ ಸಲ್ಲಿಸಿದ್ದವು.
ಅಪ್ಪು ಇದ್ದಿದ್ದರೆ..
ಪುನೀತ್ ರಾಜ್‌ಕುಮಾರ್ ನಮ್ಮೊಂದಿಗಿದ್ದಿದ್ದರೆ ಈ ಒಂದು ವರ್ಷದಲ್ಲಿ ಏನೇನಾಗುತ್ತಿತ್ತು ಎಂದು ಯೋಚಿಸಿದಾಗ ಸಾಕಷ್ಟು ಅಂಶಗಳು ಕಣ್ಣ ಮುಂದೆ ಬರುತ್ತವೆ. ಅದು ಸಿನಿಮಾದಿಂದ ಹಿಡಿದು ಅವರ ಸಾಮಾಜಿಕ ಕಾರ್ಯಗಳವರೆಗೂ. ಸಿನಿಮಾ ವಿಚಾರಕ್ಕೆ ಬರುವುದಾದರೆ ಪವನ್ ಜೊತೆಗಿನ “ದ್ವಿತ್ವ’ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸುತ್ತಿತ್ತು. ಇದಲ್ಲದೇ ಒಂದಷ್ಟು ಹೊಸಬರ ಸಿನಿಮಾಗಳ ಟ್ರೇಲರ್, ಟೀಸರ್‌ಗೆ ಪುನೀತ್ ಸಾಥ್ ನೀಡಿ, ಅವರು ಬೆನ್ನುತಟ್ಟುತ್ತಿದ್ದರು.
ಈ ಒಂದು ವರ್ಷದಲ್ಲಿ ಅನೇಕ ಸಿನಿಮಾಗಳಿಗೆ ಪುನೀತ್ ಹಾಡುತ್ತಿದ್ದರು. ಪುನೀತ್ ಅವರೇ ಹಾಡಬೇಕೆಂದು ಕಾದು ಕುಳಿತ ಹೊಸಬರಿಗೂ ನೋವು ಮಾಡದೇ, ಖುಷಿಯಿಂದ ಹಾಡುತ್ತಿದ್ದ ವ್ಯಕ್ತಿತ್ವ ಪುನೀತ್ ಅವರದ್ದು. ಆ ಕಾರಣದಿಂದಲೇ ಪುನೀತ್ ಇದ್ದಿದ್ದರೆ ಒಂದಷ್ಟು ವಿಭಿನ್ನ ಹಾಡುಗಳು ಅಪ್ಪು ಕಂಠಸಿರಿಯಲ್ಲಿ ಮೂಡಿಬರುತ್ತಿದ್ದವು. ಸಾಮಾಜಿಕ ಕಾರ್ಯಗಳ ವಿಚಾರಕ್ಕೆ ಬರುವುದಾದರೆ ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯದಂತೆ ಸಹಾಯ ಮಾಡುವ ಗುಣ ಪುನೀತ್ ಅವರದು. ಅದೇ ಕಾರಣದಿಂದಲೇ ಈ ಒಂದು ವರ್ಷದಲ್ಲಿ ಪುನೀತ್ ಬದುಕಿರುತ್ತಿದ್ದರೆ ಸೂರಿಲ್ಲದವರಿಗೆ ಸೂರು ಕಟ್ಟಿಕೊಳ್ಳಲು, ವೈದ್ಯಕೀಯ, ಶೈಕ್ಷಣಿಕ ಸೇರಿದಂತೆ ಸಾಕಷ್ಟು ಕ್ಷೇತ್ರಗಳಿಗೆ ಪುನೀತ್ ಸಹಾಯ ಮಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.