300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಾಜ್-ವಿಷ್ಣು
Team Udayavani, Aug 3, 2017, 10:46 AM IST
ಈ ಹಿಂದೆ, ವರಮಹಾಲಕ್ಷ್ಮೀ ಹಬ್ಬದಂದು ಹಲವು ಚಿತ್ರಗಳು ಬಿಡುಗಡೆಯಾಗಿರುವುದಷ್ಟೇ ಅಲ್ಲ, ಸೂಪರ್ ಹಿಟ್ ಎನಿಸಿಕೊಂಡಿವೆ. ಡಾ. ವಿಷ್ಣುವರ್ಧನ್ ಅಭಿನಯದ “ಆಪ್ತಮಿತ್ರ’, ಶಿವರಾಜಕುಮಾರ್ ಅಭಿನಯದ “ಜೋಗಿ’ ಮುಂತಾದ ಚಿತ್ರಗಳನ್ನು ಬೇಕಾದರೆ ಈ ಸಾಲಿನಲ್ಲಿ ಉದಾಹರಿಸಬಹುದು. ಈ ಸಾಲಿಗೆ ಶರಣ್ ಮತ್ತು ಚಿಕ್ಕಣ್ಣ ಅಭಿನಯದೆ “ರಾಜ್-ವಿಷ್ಣು’ ಚಿತ್ರವನ್ನು ಸಹ ಸೇರಿಸಬಹುದಾಗಿದ್ದು, ಚಿತ್ರ ಈ ಬಾರಿ ವರಮಹಾಲಕ್ಷ್ಮೀ ಹಬ್ಬದಂದು ಅಂದರೆ ನಾಳೆ (ಆಗಸ್ಟ್ 4) ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಶರಣ್ ಅವರ ಚಿತ್ರಜೀವನದಲ್ಲೇ ಇದುವರೆಗೂ ಯಾವೊಂದು ಚಿತ್ರವೂ ಅಷ್ಟೊಂದು ಚಿತ್ರಮಂದಿಗಳಲ್ಲಿ ಪ್ರದರ್ಶನವನ್ನು ಕಂಡಿರಲಿಲ್ಲ. ಈಗ “ರಾಜ್-ವಿಷ್ಣು’ ಮೊದಲ ಬಾರಿಗೆ ಅಂಥದ್ದೊಂದು ದಾಖಲೆ ಮಾಡುತ್ತಿದೆ. ಚಿತ್ರವನ್ನು 300ಕ್ಕೂ ಹೆಚ್ಚು ಚಿತ್ರಮಂದರಿಗಳಲ್ಲಿ ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕ ಕಂ ವಿತರಕ ರಾಮು ಮುಂದಾಗಿದ್ದಾರೆ. ಇದವರ ಸಂಸ್ಥೆಯ 37ನೇ ಚಿತ್ರವಾಗಿದ್ದು, ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಎಂದು ರಾಮು ಸಜ್ಜಾಗಿದ್ದಾರೆ.
“ಇದು ನನ್ನ ನಿರ್ಮಾಣದ 37ನೇ ಚಿತ್ರ. ಇದುವರೆಗೂ ಹಲವು ಆ್ಯಕ್ಷನ್ ಚಿತ್ರಗಳನ್ನು ನಿರ್ಮಿಸಿದ್ದೇನೆ. ಇದೇ ಮೊದಲ ಬಾರಿಗೆ ಪಕ್ಕಾ ಮನರಂಜನಾತ್ಮಕ ಚಿತ್ರವೊಂದನ್ನು ನಿರ್ಮಿಸಿದ್ದೀನಿ. ಈಗಾಗಲೇ ಚಿತ್ರದ ಹಾಡುಗಳು ಹಿಟ್ ಆಗಿ, ಎಲ್ಲೆಡೆ ಒಳ್ಳೆಯ ಅಭಿಪ್ರಾಯ ಕೇಳಿ ಬರುತ್ತಿದೆ’ ಎನ್ನುತ್ತಾರೆ ರಾಮು. ರಾಮು ಈ ಚಿತ್ರ ನಿರ್ಮಿಸುತ್ತಿರುವುದಕ್ಕೆ ಮುಖ್ಯ ಕಾರಣ “ಅಧ್ಯಕ್ಷ’ ಚಿತ್ರದ ಯಶಸ್ಸು. “ಅಧ್ಯಕ್ಷ’ ಚಿತ್ರದ ಮೈಸೂರು ವಿತರಣೆಯ ಹಕ್ಕನ್ನು ನಿರ್ಮಾಪಕ ರಾಮು ಪಡೆದಿದ್ದರಂತೆ.
ಆ ಚಿತ್ರದ ಕಲೆಕ್ಷನ್ ನೋಡಿ ಅವರಿಗೆ ಆಶ್ಚರ್ಯವಾಯಿತಂತೆ. ಆ ಮಟ್ಟಕ್ಕೆ ಜನ ಶರಣ್ ಹಾಗೂ ಚಿಕ್ಕಣ್ಣ ಅವರ ಕಾಂಬಿನೇಶನ್ ಅನ್ನು ಇಷ್ಟಪಟ್ಟಿದ್ದರಂತೆ. ಆಗಲೇ ರಾಮು ತಲೆಯಲ್ಲಿ ಅವರಿಬ್ಬರನ್ನು ಹಾಕಿಕೊಂಡು ಸಿನಿಮಾ ಮಾಡುವ ಆಲೋಚನೆ ಬಂದಿದ್ದು. “ಅಧ್ಯಕ್ಷ’ ಚಿತ್ರದ ಕಲೆಕ್ಷನ್ ನೋಡಿ ನನಗೆ ಆಶ್ಚರ್ಯವಾಯಿತು. ಆ ಚಿತ್ರ ತುಂಬಾ ಚೆನ್ನಾಗಿ ಕಲೆಕ್ಷನ್ ಮಾಡಿತು. ಈಗ “ರಾಜ್ ವಿಷ್ಣು’ ಚಿತ್ರವನ್ನು ಕೂಡಾ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ.
ಮೂಲ ಚಿತ್ರದ ಒಂದೆಳೆಯನ್ನಷ್ಟೇ ತಗೊಂಡು, ಉಳಿದಂತೆ ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದೇವೆ’ ಎನ್ನುತ್ತಾರೆ ರಾಮು. ಅಂದಹಾಗೆ, ಇದು ತಮಿಳಿನ “ರಜನಿ ಮುರುಗನ್’ ಚಿತ್ರದ ರೀಮೇಕ್. ಕೆ. ಮಾದೇಶ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶರಣ್ ಮತ್ತು ಚಿಕ್ಕಣ್ಣ ಜೊತೆಗೆ ವೈಭವಿ ಶಾಂಡಿಲ್ಯ, ಸಾಧು ಕೋಕಿಲ ಸೇರಿದಂತೆ ಹಲವರು ನಟಿಸಿದ್ದಾರೆ. ಮುರಳಿ ಅವರ ಅತಿಥಿ ಪಾತ್ರವಿದೆ. ಅರ್ಜುನ್ ಜನ್ಯ ಸಂಗೀತ ಮತ್ತು ರಾಜೇಶ್ ಕಟ್ಟ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.