ದಶಕದ ಬಳಿಕ ಮತ್ತೆ ಸಿನ್ಮಾಗೆ ರಕ್ಷಿತಾ
ಸಹೋದರನ ಚಿತ್ರದಲ್ಲಿ ರಚಿತಾ ಜೊತೆ ಹಾಡಿಗೆ ಹೆಜ್ಜೆ
Team Udayavani, Oct 3, 2019, 3:03 AM IST
ರಕ್ಷಿತಾ ಪ್ರೇಮ್ ಈಗ ಕಿರುತೆರೆಯಲ್ಲಿ ತುಂಬಾ ಬಿಝಿ. ಹೌದು, “ಕಾಮಿಡಿ’ ಕಾರ್ಯಕ್ರಮವೊಂದರ ತೀರ್ಪುಗಾರರಾಗಿ ಕಾಣಿಸಿಕೊಂಡಿರುವ ರಕ್ಷಿತಾ ಪ್ರೇಮ್, ಈಗ ಇನ್ನೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ. ಆ ಸುದ್ದಿಯ ವಿಶೇಷವೆಂದರೆ, ಸುಮಾರು 12 ವರ್ಷಗಳ ಬಳಿಕ ರಕ್ಷಿತಾ ಪ್ರೇಮ್ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. “ತಾಯಿಯ ಮಡಿಲು’ ಸಿನಿಮಾ ಬಳಿಕ ರಕ್ಷಿತಾ ಅವರು ಸಿನಿಮಾ ನಟನೆಯಿಂದ ದೂರ ಉಳಿದಿದ್ದರು.
ಆ ಮಧ್ಯೆ ಕಿರುತೆರೆಯಲ್ಲಿ ಮೆಲ್ಲನೆ ಸದ್ದು ಮಾಡುತ್ತಿದ್ದ ಅವರೀಗ, ಪುನಃ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಎಂಬುದೇ ಈ ಹೊತ್ತಿನ ವಿಶೇಷ. ಅಂದಹಾಗೆ, ರಕ್ಷಿತಾ ಪ್ರೇಮ್ ಕಾಣಿಸಿಕೊಳ್ಳುತ್ತಿರುವುದು ಅವರ ಸಹೋದರ ರಾಣಾ ಅಭಿನಯದ “ಏಕ್ ಲವ್ ಯಾ’ (ಏಕಲವ್ಯ) ಚಿತ್ರದಲ್ಲಿ. ಈ ಚಿತ್ರವನ್ನು ಪ್ರೇಮ್ ನಿರ್ದೇಶಿಸುತ್ತಿದ್ದು, ರಕ್ಷಿತಾ ಅವರೇ ನಿರ್ಮಾಣ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು.
ಹಾಗಾದರೆ, ರಕ್ಷಿತಾ “ಏಕ್ ಲವ್ ಯಾ’ ಚಿತ್ರದಲ್ಲಿ ಯಾವ ಪಾತ್ರ ಮಾಡುತ್ತಾರೆ ಎಂಬುದಕ್ಕೆ ಸದ್ಯ ಉತ್ತರವಿಲ್ಲ. ಆದರೆ, ನಟಿ ರಚಿತಾರಾಮ್ ಜೊತೆ ರಕ್ಷಿತಾ ಅವರು ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ ಎಂಬುದು ಪಕ್ಕಾ ಆಗಿದೆ. ಲವ್ ಫೇಲ್ಯೂರ್ ಹಾಡೊಂದರಲ್ಲಿ ರಕ್ಷಿತಾ ಪ್ರೇಮ್ ಹಾಗು ರಚಿತಾರಾಮ್ ಇಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಲವ್ ಬ್ರೇಕ್ ಅಪ್ ಆದ ಹುಡುಗಿಯ ಮೇಲೆ ಸಾಗುವ ಈ ಹಾಡಲ್ಲಿ ಈ ಇಬ್ಬರು ನಾಯಕಿಯರು ಹೆಜ್ಜೆ ಹಾಕುತ್ತಿದ್ದಾರೆ.
ಇದು ಹುಡುಗಿಯರಿಗಾಗಿಯೇ ಬರೆದಂತಹ ಹಾಡು ಆಗಿರುವುದರಿಂದ, ಚಿತ್ರತಂಡ, ಈ ಹಾಡನ್ನು ಎಲ್ಲಾ ಹುಡುಗಿಯರಿಗೆ ಅರ್ಪಿಸಲಿದೆಯಂತೆ. ಈಗಾಗಲೇ “ಏಕ್ ಲವ್ ಯಾ’ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಸದ್ಯದಲ್ಲೇ ಹಾಡಿನ ಚಿತ್ರೀಕರಣದಲ್ಲಿ ರಕ್ಷಿತಾ ಹಾಗು ರಚಿತಾ ಕಾಣಿಸಿಕೊಳ್ಳಲಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಈಗಾಗಲೇ ಈ ಹಾಡಿನ ಚಿತ್ರೀಕರಣ ನಡೆಯಬೇಕಿತ್ತು. ಕಾರಣಾಂತರಗಳಿಂದ ಶುರುವಾಗಿಲ್ಲ. ಅಂದಹಾಗೆ, ಈ ಹಾಡಿಗೆ ಮೋಹನ್ ನೃತ್ಯ ಸಂಯೋಜನೆ ಇದೆ.
ಅರ್ಜುನ್ ಜನ್ಯ ಅವರ ಸಂಗೀತವಿದೆ. ಅದೇನೆ ಇರಲಿ, ರಕ್ಷಿತಾ ಪುನಃ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡು ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿರುವ ಸುದ್ದಿ ಅವರ ಅಭಿಮಾನಿಗಳ ಪಾಲಿಗಂತೂ ಖುಷಿಯ ವಿಚಾರ. ಇತ್ತೀಚೆಗಷ್ಟೇ ರಕ್ಷಿತಾ ಅವರು, ದರ್ಶನ್ ಜೊತೆ ಸೆಲ್ಫಿ ತೆಗೆದುಕೊಂಡು ಟ್ವಿಟ್ಟರ್‌ನಲ್ಲಿ ಹಾಕಿದ್ದರು. ಎಲ್ಲರಿಗೂ ರಕ್ಷಿತಾ ಮತ್ತೆ ಸಿನಿಮಾಗೆ ಬರುತ್ತಾರಾ? ಎಂಬ ಪ್ರಶ್ನೆ ಗಿರಕಿ ಹೊಡೆಯುತ್ತಿತ್ತು. ಆದರೆ, ಈಗ ರಕ್ಷಿತಾ ಅವರ ಸಹೋದರನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸುದ್ದಿ ಹೊರಬಿದ್ದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.