“ರಂಗನಾಯಕ’ನ ಹೊಸಲುಕ್, ಟೀಸರ್‌ನಲ್ಲಿ ಕಾಮಿಡಿ ಝಲಕ್
ಗುರುಪ್ರಸಾದ್-ಜಗ್ಗೇಶ್ ಕಾಂಬಿನೇಶನ್‌ನ ಮೂರನೇ ಚಿತ್ರ
Team Udayavani, Oct 10, 2019, 3:04 AM IST
ಕೆಲ ದಿನಗಳ ಹಿಂದಷ್ಟೇ “ಮಠ’ ಮತ್ತು “ಎದ್ದೇಳು ಮಂಜುನಾಥ’ ಚಿತ್ರಗಳ ಖ್ಯಾತಿಯ ಜೋಡಿ ನಿರ್ದೇಶಕ ಗುರುಪ್ರಸಾದ್ ಮತ್ತು ನಟ ಜಗ್ಗೇಶ್ ಒಟ್ಟಾಗಿ “ರಂಗನಾಯಕ’ ಅನ್ನೋ ಹೆಸರಿನಲ್ಲಿ ಹೊಸಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು ನಿಮಗೆ ಗೊತ್ತಿರಬಹುದು. ಬಳಿಕ ಚಿತ್ರತಂಡ ಕೂಡ ಈ ಸುದ್ದಿಯನ್ನು ಖಚಿತಪಡಿಸಿದ್ದು, ಇದೀಗ ಈ ಚಿತ್ರದ ಫಸ್ಟ್ ಟೀಸರ್ ಕೂಡ ಹೊರಬಿದ್ದಿದೆ.
ಹೌದು, ದಸರಾ ಹಬ್ಬದ ಕೊನೆಯ ದಿನ ವಿಜಯದಶಮಿಯಂದು “ರಂಗನಾಯಕ’ ಚಿತ್ರದ ಟೀಸರ್ ಅನ್ನು ಚಿತ್ರತಂಡ ಅದ್ಧೂರಿಯಾಗಿ ಬಿಡುಗಡೆ ಮಾಡಿದೆ. ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ, ಚಿತ್ರದ ನಿರ್ದೇಶಕ ಗುರುಪ್ರಸಾದ್, ನಟ ಜಗ್ಗೇಶ್, ನಿರ್ಮಾಪಕ ವಿಖ್ಯಾತ್, ಶಶಿಧರ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಛಾಯಾಗ್ರಹಕ ಮನೋಹರ್ ಜೋಶಿ ಸೇರಿದಂತೆ ಚಿತ್ರತಂಡದ ಸದಸ್ಯರು ಮತ್ತು ಚಿತ್ರರಂಗದ ಹಲವು ಗಣ್ಯರ ಸಮ್ಮುಖದಲ್ಲಿ “ರಂಗನಾಯಕ’ನ ಟೀಸರ್ ಬಿಡುಗಡೆಯಾಯಿತು.
ಒಂದು ಮಾತು ಬರುತ್ತೆ, ಹೋಗುತ್ತೆ. ಅದನ್ನೆಲ್ಲ ಬದಿಗಿಟ್ಟು ಮುಂದೆ ಹೋಗ್ಬೇಕು: ಇದೇ ಸಂದರ್ಭದಲ್ಲಿ ನಿರ್ದೇಶಕ ಮಠ ಗುರುಪ್ರಸಾದ್ ಮತ್ತು ತಂಡವನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಮಾತಿಗಿಳಿದ ನಟ ಜಗ್ಗೇಶ್, “ನಾನು ಇಲ್ಲಿಯವರೆಗೂ ನೂರಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದರೂ, ಇಂದಿಗೂ ಜನ ಗುರುತಿಸುವುದು “ಮಠ’ ಮತ್ತು “ಎದ್ದೇಳು ಮಂಜುನಾಥ’ ಚಿತ್ರಗಳ ಮೂಲಕ. ನನ್ನ ಸಿನಿಮಾ ಕೆರಿಯರ್‌ನಲ್ಲಿ ಆ ಚಿತ್ರಗಳನ್ನ, ಅದನ್ನು ನಿರ್ದೇಶಿಸಿದ ಗುರುಪ್ರಸಾದ್ ಅವರನ್ನು ಎಂದಿಗೂ ಮರೆಯುವಂತಿಲ್ಲ.
ಆದರೆ ಕೆಲವೊಂದು ಭಿನ್ನಾಭಿಪ್ರಾಯಗಳು ಇಷ್ಟು ವರ್ಷ ನಮ್ಮಿಬ್ಬರನ್ನು ದೂರ ಮಾಡುವಂತೆ ಮಾಡಿತು. ಈಗ ಹಿಂದಿನದ್ದನ್ನೆಲ್ಲ ಮರೆತು ಕನ್ನಡ ಪ್ರೇಕ್ಷಕರನ್ನು ರಂಜಿಸುವ ಉದ್ದೇಶದಿಂದ ಮತ್ತೆ ಒಂದಾಗಿದ್ದೇವೆ. ಸದ್ಯ ಅದ್ಭುತವಾದ ಚಿತ್ರವನ್ನ ಕೊಡೋದಷ್ಟೇ ನಮ್ಮಿಬ್ಬರ ಗುರಿ. ಗಂಡ-ಹೆಂಡತಿ, ಮನೆ-ಸಂಸಾರ ಅಂದಮೇಲೆ ದೊಡ್ಡವರಿಗೆ “ನಾನು’ ಅನ್ನೋದು ಇರುತ್ತೆ. ಕೆಲವೊಮ್ಮೆ ಒಂದು ಮಾತು ಬರುತ್ತೆ, ಹೋಗುತ್ತೆ. ಅದನ್ನೆಲ್ಲ ಬದಿಗಿಟ್ಟು ಮುಂದೆ ಹೋಗಬೇಕು. ನನ್ನ ಮತ್ತು ಗುರುಪ್ರಸಾದ್ ವಿಚಾರದಲ್ಲೂ ಹಾಗೇ ಆಗಿರುವುದು’ ಎಂದರು.
ನಿಮ್ಮ ಬಿಲ್ಡಪ್‌ಗ್ಳಿಗಾಗಿ, ನಿರ್ದೇಶಕರಿಗೆ ಮೂಗುದಾರ ಹಾಕಬೇಡಿ: ಇದೇ ವೇಳೆ ಚಿತ್ರಗಳಲ್ಲಿ ನಿರ್ದೇಶಕನ ಮಹತ್ವದ ಬಗ್ಗೆ ಮಾತನಾಡಿ ಜಗ್ಗೇಶ್, “ನಮ್ಮನ್ನು ಒಬ್ಬ ಕಲಾವಿದನನ್ನಾಗಿ ಗುರುತಿಸುವಂತೆ ಮಾಡೋದು ಒಬ್ಬ ನಿರ್ದೇಶಕ. ನಮಗೆ ಎಷ್ಟೇ ಚಪ್ಪಾಳೆ ಬಿದ್ದರೂ ಅದಕ್ಕೆಲ್ಲ ಕಾರಣಕರ್ತ ಕೂಡ ಒಬ್ಬ ನಿರ್ದೇಶಕ. ಅವರಿಲ್ಲದಿದ್ದರೆ, ಇವತ್ತು ನಾವಿಲ್ಲಿ ಇರೋದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ. ಅಂಥ ನಿರ್ದೇಶಕರಿಗೆ ದಯವಿಟ್ಟು ಗೌರವ ಕೊಡಿ’ ಎಂದರು.
“ನಿರ್ದೇಶಕರು ಇದ್ದರೇ ಕಲಾವಿದರು. ಒಬ್ಬ ನಿರ್ದೇಶಕನಿಗೆ ಮೂಗುದಾರ ಹಾಕಬೇಡಿ. ಅವರನ್ನು ಸ್ವಾತಂತ್ರ್ಯವಾಗಿ ಬಿಡಿ. ನಿಮ್ಮ ಬಿಲ್ಡಪ್‌ಗ್ಳಿಗೆ ನೀವೇ ಶಾಟ್‌ಗಳನ್ನು ತೆಗೆಸಿಕೊಳ್ಳಬೇಡಿ. ನಿರ್ದೇಶಕನನ್ನು ಎಷ್ಟು ಮುಂದೆ ಬಿಡುತ್ತೀರೋ, ಅವನು ನಿಮ್ಮನ್ನು ಅಷ್ಟು ಮೆರೆಸುತ್ತಾನೆ. ಅದಕ್ಕೆ ಯಾವತ್ತೂ ಕೂಡ ನಿರ್ದೇಶಕನಿಗೆ ಗೌರವ ನೀಡಬೇಕು’ ಎಂದು ನಾಯಕ ನಟರಿಗೆ ಕಿವಿಮಾತು ಹೇಳಿದರು.
ಮೊದ್ಲು ಗುರುವೇ ನಮಃ ಅಂತಾರೆ, ಆಮೇಲೆ ಗುರುವೇನ್ ಮಹಾ ಅಂತಾರೆ…: ಇದೇ ವೇಳೆ ಮಾತನಾಡಿದ ನಿರ್ದೇಶಕ ಗುರುಪ್ರಸಾದ್, “ನಾನು ಸುನೀಲ್ ಕುಮಾರ್ ದೇಸಾಯಿ ಚಿತ್ರಗಳನ್ನು ನೋಡಿಕೊಂಡು ಬಂದವನು. ಅವರು ನನ್ನ ಗುರು. ನಮ್ಮಿಬ್ಬರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ, ಆದ್ರೆ ಕೇವಲ ವಿಚಾರಗಳಲ್ಲಿ ಮಾತ್ರವೇ ಹೊರತು ವ್ಯಕ್ತಿತ್ವದಲ್ಲಿ ಅಲ್ಲ. ಕೆಲವರು ತಮ್ಮ ಕೆಲಸ ಆಗುವ ಮುಂಚೆ ಗುರುವೇ ನಮಃ ಅಂತಾರೆ, ಆಮೇಲೆ ಗುರುವೇನ್ ಮಹಾ ಅಂತಾರೆ. ಆದ್ರೆ ನಾನು ಹಾಗಲ್ಲ.
ಇನ್ನು ಜಗ್ಗೇಶ್ ವಿಚಾರದಲ್ಲೂ ಇದೇ ಥರ ಆಗಿದೆ. ನಾನು ಜಗ್ಗೇಶ್ ಸಿನಿಮಾ ನೋಡಿ ಹುಚ್ಚು ಹಿಡಿದು, ಸಿನಿಮಾ ಮಾಡೋಕೆ ಬಂದವನು ನಾನು. ಕೆಲ ವೈಚಾರಿಕ ಭಿನ್ನಾಭಿಪ್ರಾಯ ನಮ್ಮನ್ನು ಕೆಲಕಾಲ ದೂರ ಮಾಡಿತ್ತು. ಆದ್ರೆ ಇಂದಿಗೂ ಆತ ನನ್ನ ಅಣ್ಣನೇ. ಕೇವಲ ಕಮರ್ಶಿಯಲ್ ಇದ್ರೆ ಸಾಕಾಗಲ್ಲ, ಬೇರೇನೋ ಕಂಟೆಂಟ್ ಇರಬೇಕು ಅಲ್ಲಿ. ಒಳ್ಳೆ ಕಥೆ ಮಾಡು. ಅದಿಲ್ಲ ಅಂದ್ರೂ ಸುಮ್ಮನಿದ್ದರೂ ಪರವಾಗಿಲ್ಲ, ಆದ್ರೆ ಚಿತ್ರದಲ್ಲಿ ನನ್ನ ಮಾನ ಮಾತ್ರ ಕಳೆಯಬೇಡ, ಅಂಥ ಜಗ್ಗೇಶ್ ಹೇಳಿದ್ರು.
ಒಟ್ಟಿನಲ್ಲಿ ಖಂಡಿತ, ಒಂದೊಳ್ಳೆ ಚಿತ್ರವಂತೂ ಕೊಡುತ್ತೇವೆ’ ಎಂದು ಭರವಸೆಯನ್ನು ನೀಡಿದರು. ಸದ್ಯ ಯಕ್ಷಗಾನದ ಭಾಗವತಿಕೆ ರೂಪದಲ್ಲಿ “ರಂಗನಾಯಕ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ನಿಧಾನವಾಗಿ ನೋಡುಗರ ಗಮನ ಸೆಳೆಯುತ್ತಿದೆ. ಒಟ್ಟಾರೆ ಈ ಹಿಂದೆ “ಅದೇಮಾ’ ಚಿತ್ರವನ್ನು ಶುರು ಮಾಡಿದ್ದ ಗುರುಪ್ರಸಾದ್, ಆ ಚಿತ್ರವನ್ನು ಅಲ್ಲಿಗೇ ಬಿಟ್ಟು ಈಗ “ರಂಗನಾಯಕ’ನ ಬೆನ್ನೇರಿದ್ದು, “ರಂಗನಾಯಕ’ ತೆರೆಮೇಲೆ ಯಾವಾಗ ಬರುತ್ತಾನೆ ಅನ್ನೋ ಗುಟ್ಟನ್ನು ಮಾತ್ರ ಎಲ್ಲೂ ಬಿಟ್ಟುಕೊಟ್ಟಿಲ್ಲ.
ಟೀಸರ್‌ನಲ್ಲೂ ತೋರಿಸಿದ್ರ ರಾಜಕಾರಣ!: ಇನ್ನು ನಟ ಜಗ್ಗೇಶ್ ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಗುರುತಿಸಿಕೊಂಡವರು. ಹಾಗಾಗಿ ಜಗ್ಗೇಶ್ ಏನೇ ಹೇಳಿದರೂ, ಏನೇ ಮಾಡಿದರೂ ಅವರ ಅಭಿಮಾನಿಗಳು ಮತ್ತು ರಾಜಕೀಯದವರು ಅವರದ್ದೇ ಆದ ದೃಷ್ಟಿಕೋನದಲ್ಲಿ ನೋಡುತ್ತಾರೆ. ಇನ್ನು ಈಗ ಬಿಡುಗಡೆಯಾಗಿರುವ “ರಂಗನಾಯಕ’ ಟೀಸರ್‌ನಲ್ಲೂ ರಾಜಕೀಯದ ಛಾಯೆ ದಟ್ಟವಾಗಿಯೇ ಕಾಣುತ್ತಿದೆ. ಚಿತ್ರದ ಟೀಸರ್‌ನಲ್ಲಿ ಜಗ್ಗೇಶ್ ಕಮಲ ಮತ್ತು ಹಸ್ತದ ಚಿನ್ಹೆಗಳನ್ನು ನೋಡುವುದು ಕೊನೆಗೆ ಕಮಲವನ್ನು ಆಯ್ಕೆ ಮಾಡಿಕೊಳ್ಳುವುದು. ಮುಂದುವರೆಯುತ್ತ ರಾಹುಲ್ ಗಾಂಢಿ ಮತ್ತು ನಮ್ಮ ಮೋದಿಜೀ ಎಂಬ ಪದಗಳನ್ನು ಬಳಸಿರುವುದು ಕೂಡ ಹಲವು ಚರ್ಚೆಗೆ ಕಾರಣವಾಗಿದ್ದು, ಹಲವರ ಕಣ್ಣು ಕೆಂಪಾಗುವಂತೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.