ಭಗವಾನ್..; ಬೆಳ್ಳಿತೆರೆಯಲ್ಲಿ ಬಂಗಾರದ ಚಿತ್ರಗಳನ್ನು ಬಿಟ್ಟು ಮರೆಯಾದ ಮಾಣಿಕ್ಯ
Team Udayavani, Feb 21, 2023, 10:20 AM IST
ಕನ್ನಡ ಚಿತ್ರರಂಗದಲ್ಲಿ ದೊರೆ ಭಗವಾನ್ ಜೋಡಿಯಲ್ಲಿ ಒಬ್ಬರಾಗಿದ್ದವರು ಎಸ್.ಕೆ ಭಗವಾನ್. ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ಎಂಬುದು ಎಸ್. ಕೆ ಭಗವಾನ್ ಅವರ ಪೂರ್ಣ ಹೆಸರು. 5 ಜುಲೈ 1933 ರಂದು ಮೈಸೂರಿನ ಹಳ್ಳದಕೇರಿ ಅಯ್ಯಂಗಾರಿ ಬ್ರಾಹ್ಮಣ ಮನೆತನದಲ್ಲಿ ಜನಿಸಿದ, ಎಸ್. ಕೆ ಭಗವಾನ್ ನಂತರ ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರು ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು.
ಚಿಕ್ಕ ವಯಸ್ಸಿ ನಲ್ಲಿಯೇ ನಾಟಕದ ಬಗ್ಗೆ ವಿಶೇಷ ಆಸಕ್ತಿಯನ್ನು ಬೆಳೆಸಿ ಕೊಂಡಿದ್ದ ಎಸ್. ಕೆ ಭಗವಾನ್, ಶಾಲಾ ದಿನಗಳಿಂದಲೇ ಹಿರಣ್ಣಯ್ಯ ಮಿತ್ರ ಮಂಡಳಿಯವರೊಂದಿಗೆ ರಂಗ ನಾಟಕಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದ್ದರು. ಬಳಿಕ ಜಿ. ವಿ ಅಯ್ಯರ್ ಮುನ್ನಡೆಸುತ್ತಿದ್ದ ಎಡತೊರೆ ನಾಟಕ ಕಂಪೆನಿ ಸೇರಿಕೊಂಡ ಭಗವಾನ್ ಅಲ್ಲಿ ಪ್ರಾಕ್ಟೀಸ್ ಮ್ಯಾನೇಜರ್ ಆಗಿ ಕೆಲ ಕಾಲ ಕೆಲಸ ಮಾಡಿದರು.
1956ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಯವರ ಬಳಿ ಸಹಾಯಕರಾಗಿ ಸೇರಿದ ಭಗವಾನ್ “ಭಾಗ್ಯೋದಯ’ ಚಿತ್ರದ ಮೂಲಕ ತಮ್ಮ ಸಿನಿಮಾ ಜೀವನ ಆರಂಭಿಸಿದರು. 1966ರಲ್ಲಿ “ಸಂಧ್ಯಾರಾಗ’ ಚಿತ್ರವನ್ನು ಎ. ಸಿ ನರಂಸಿಂಹ ಮೂರ್ತಿ ಅವರೊಡೆನೆ ಜೊತೆಯಾಗಿ ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿ ಬೆಳ್ಳಿತೆರೆಗೆ ಪರಿಚಯವಾದರು. ಅದಾದ ನಂತರ 1967ರಲ್ಲಿ ತೆರೆಕಂಡ “ರಾಜದುರ್ಗದ ರಹಸ್ಯ’ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಭಗವಾನ್ ಕೆಲಸ ಮಾಡಿದರು. ದೊರೆ-ಭಗವಾನ್ ಎಂಬ ಹೆಸರಿನಲ್ಲಿ ನಿರ್ದೇಶಕ ದೊರೆ ಹಾಗೂ ನಟ ರಾಜ್‌ಕುಮಾರ್ ಜೊತೆ 1968ರಲ್ಲಿ ಮಾಡಿದ “ಜೇಡರ ಬಲೆ’ ದೊರೆ ಭಗವಾನ್ ಜೋಡಿಗೆ ದೊಡ್ಡ ಹೆಸರು ಮತ್ತು ಜನಪ್ರಿಯತೆ ತಂದುಕೊಟ್ಟಿತು. 1968 ರಿಂದ 1990ರ ವರೆಗೆ ದೊರೆ-ಭಗವಾನ್ ಜೋಡಿ ಸೇರಿ ಬರೋಬ್ಬರಿ 27 ಚಿತ್ರಗಳನ್ನು ನಿರ್ದೇಶಿಸಿದ್ದು, ಇದರಲ್ಲಿ ಬಹುತೇಕ ಚಿತ್ರಗಳು ಸೂಪರ್ ಹಿಟ್ ಸಾಲಿನಲ್ಲಿ ಸ್ಥಾನಪಡೆದುಕೊಂಡಿವೆ.
ಇನ್ನು ಕನ್ನಡದಲ್ಲಿ ಮೊದಲ ಬಾರಿಗೆ “ಜೇಮ್ಸ್ ಬಾಂಡ್’ ಶೈಲಿಯ ಸಿನಿಮಾಗಳನ್ನು ಪರಿಚಯಿಸಿದ ಬಹುದೊಡ್ಡ ಹೆಗ್ಗಳಿಕೆ ಕೂಡ ಭಗವಾನ್ ಅವರಿಗೆ ಸಲ್ಲುತ್ತದೆ. “ಜೇಡರ ಬಲೆ’, “ಗೋವಾದಲ್ಲಿ ಸಿಐಡಿ 999′, “ಆಪರೇಷನ್ ಜಾಕಾಪಾಟ್‌ನಲ್ಲಿ ಸಿಐಡಿ 999′ ಹಾಗೂ “ಆಪರೇಷನ್ ಡೈಮಂಡ್ ರಾಕೆಟ್’ ನಂತಹ ಬಾಂಡ್ ಶೈಲಿಯ ಸಿನಿಮಾಗಳನ್ನು ಕನ್ನಡದಲ್ಲಿ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು.
ಕಾದಂಬರಿ ಆಧಾರಿತ ಚಿತ್ರಗಳ ಸರದಾರ
ಭಗವಾನ್ ಕನ್ನಡ ಚಿತ್ರರಂಗದಲ್ಲಿ ಹೊಸ ಶೈಲಿಯ ಮತ್ತು ಹೊಸ ಪ್ರಯೋಗದ ಸಿನಿಮಾಗಳಿಗೆ ಹೆಸರಾಗಿದ್ದರು. ತಮ್ಮ ಚಿತ್ರಗಳ ಮೂಲಕ ಸಮಾಜದಲ್ಲಿ ಹೊಸ ಚಿಂತನೆಗಳನ್ನು ಮೂಡಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದರು. ಜನಪ್ರಿಯ ಬಾಂಡ್ ಶೈಲಿಯ ಸಿನಿಮಾಗಳ ಜೊತೆ ಜೊತೆಗೇ ಕಾದಂಬರಿ ಆಧಾರಿತ, ಸಾಮಾಜಿಕ ವಿಷಯಗಳನ್ನು ಇಟ್ಟುಕೊಂಡು ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿದ ಶ್ರೇಯಸ್ಸು ಕೂಡ ದೊರೆ ಭಗವಾನ್ ಅವರಿಗೆ ಸಲ್ಲುತ್ತದೆ. ಕನ್ನಡದಲ್ಲಿ ತರಾಸು, ಭಾರತಿ ಸುತ, ಚಿತ್ರಲೇಖಾ, ಅಶ್ವಥ್, ವಾಣಿ, ಟಿ. ಕೆ ರಾಮರಾವ್, ಎನ್. ಪಂಕಜಾ ಹೀಗೆ ಜನಪ್ರಿಯ ಲೇಖಕರ ಸರಿ ಸುಮಾರು 24ಕ್ಕೂ ಹೆಚ್ಚು ಪ್ರಸಿದ್ಧ ಕಾದಂಬರಿಗಳನ್ನು ಸಿನಿಮಾ ರೂಪದಲ್ಲಿ ತೆರೆಗೆ ತಂದು ಯಶಸ್ವಿಯಾಗಿಸಿದ್ದರು ಎಸ್. ಕೆ ಭಗವಾನ್. “ಕಸ್ತೂರಿ ನಿವಾಸ’, “ಎರಡು ಕನಸು’, “ಚಂದನದ ಗೊಂಬೆ’, “ಗಿರಿ ಕನ್ಯೆ’, “ವಸಂತ ಗೀತ’, “ಸಮಯದ ಗೊಂಬೆ’, “ಯಾರಿವನು’, “ಜೀವನ ಚೈತ್ರ’, “ಒಡಹುಟ್ಟಿದವರು’ ಸೇರಿದಂತೆ ಹತ್ತಾರು ಕೌಟುಂಬಿಕ ಮನರಂಜನೆಯ ಸಿನಿಮಾಗಳನ್ನು ನಿರ್ದೇಶಿಸಿ ಫ್ಯಾಮಿಲಿ ಆಡಿಯನ್ಸ್‌ಗೂ ಅಚ್ಚುಮೆಚ್ಚಿನ ನಿರ್ದೇಶಕರು ಎನಿಸಿಕೊಂಡಿದ್ದರು ದೊರೆ ಭಗವಾನ್ ಜೋಡಿ
ಇಳಿ ವಯಸ್ಸಿನಲ್ಲೂ ಬತ್ತದ ಉತ್ಸಾಹ
ತೊಂಬತ್ತರ ಇಳಿ ವಯಸ್ಸಿನಲ್ಲೂ ಹತ್ತೂಂಬತ್ತರ ಹರೆಯದ ಯುವಕರನ್ನು ನಾಚಿಸುವಂತೆ ಕ್ರಿಯಾಶೀಲರಾಗಿದ್ದರು ನಿರ್ದೇಶಕ ಎಸ್. ಕೆ ಭಗವಾನ್. ಸದಾ ಓದು, ಬರವಣಿಗೆ, ಓಡಾಟ ಹೀಗೆ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ಸದಾ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತಮ್ಮ 87ನೇ ವಯಸ್ಸಿನಲ್ಲಿ “ಆಡುವ ಗೊಂಬೆ’ ಸಿನಿಮಾವನ್ನು ನಿರ್ದೇಶಿಸಿ ಸಿನಿಮಂದಿಯ ಹುಬ್ಬೇರುವಂತೆ ಮಾಡಿದ್ದರು. ಅಷ್ಟೇ ಅಲ್ಲದೆ, ಯಾರೇ ಹೊಸಬರು ತಮ್ಮ ಸಿನಿ ಮಾದ ಮುಹೂರ್ತ, ಟೈಟಲ್ ಲಾಂಚ್, ಆಡಿಯೋ ಬಿಡುಗಡೆ, ಪ್ರೀ-ರಿಲೀಸ್ ಇವೆಂಟ್ ಹೀಗೆ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ, ತಪ್ಪದೇ ಆ ಕಾರ್ಯಕ್ರಮಕ್ಕೆ ನಿಗಧಿತ ಸಮಯಕ್ಕೆ ಚಿತ್ರತಂಡದವರಿಗಿಂತ ಮೊದಲೇ ಭಗವಾನ್ ಹಾಜರಾಗಿರುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಹೊಸಬರ ಸಿನಿಮಾ ಒಂದರ ಆಡಿಯೋ ಬಿಡುಗಡೆಗೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಎಸ್. ಕೆ ಭಗವಾನ್ ಅವರನ್ನು “ಈ ವಯಸ್ಸಿನಲ್ಲೂ ಯುವಕರನ್ನೂ ನಾಚಿಸುವಂತಿರುವ ನಿಮ್ಮ ಉತ್ಸಾಹದ ಗುಟ್ಟೇನು?’ ಎಂದು ಕೆಲ ಪತ್ರಕರ್ತರು ಪ್ರಶ್ನಿಸಿದ್ದರು. ಅದಕ್ಕೆ ಭಗವಾನ್, “ವಯಸ್ಸು ಅನ್ನೋದು ದೇಹಕ್ಕೆ ಮಾತ್ರ ಆಗೋದು, ಮನಸ್ಸಿಗಲ್ಲ… ನನಗೆ ವಯಸ್ಸಾಗಿದೆ ಅಂಥ ಯಾರಾದ್ರೂ ಹೇಳಿದ್ರೇ ಮಾತ್ರ ಅದರ ಬಗ್ಗೆ ನೆನಪಾಗೋದು… ಪ್ರತಿದಿನ ಮಾಡೋದಕ್ಕೆ ತುಂಬ ಕೆಲಸವಿರುತ್ತದೆ. ಕೆಲಸವಿಲ್ಲದೆ ಕೂತಾಗ ವಯಸ್ಸಿನ ಬಗ್ಗೆ ಯೋಚನೆ ಬರುತ್ತದೆ’ ಎಂದು ಮುಗುಳು ನಗುತ್ತ ಉತ್ತರಿಸಿದ್ದರು.
ದೊರೆ ಅಗಲಿಕೆ ಬಳಿಕ ನಿರ್ದೇಶನದಿಂದ ದೂರ…
ಕನ್ನಡದಲ್ಲಿ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ದೊರೆ-ಭಗವಾನ್ ಎಂಬುದು ಒಬ್ಬರೇ ವ್ಯಕ್ತಿಯ ಹೆಸರಿರಬೇಕು ಎನ್ನುವಷ್ಟರ ಮಟ್ಟಿಗೆ ನಡೆದುಕೊಂಡಿದ್ದರು ದೊರೆ- ಭಗವಾನ್ ಜೋಡಿ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾ ಗಳಿಂದ ಹೆಸರು, ಹಣ, ಖ್ಯಾತಿ ಎಲ್ಲವೂ ಬಂದಿದ್ದರೂ, ಸುಮಾರು 49 ವರ್ಷಗಳ ಕಾಲ ಈ ಜೋಡಿ ಒಟ್ಟಾಗಿಯೇ ದೊರೆ-ಭಗವಾನ್ ಹೆಸರಿನಲ್ಲೇ ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಿಸಿಕೊಂಡು ಬಂದಿದ್ದು, ಇಬ್ಬರ ನಡುವಿನ ಅಗಾಧ ಸ್ನೇಹ ಬಂಧಕ್ಕೆ ಸಾಕ್ಷಿಯಾಗಿತ್ತು. 2000ನೇ ಇಸವಿಯಲ್ಲಿ ದೊರೆ-ಭಗವಾನ್ ಜೋಡಿಯಲ್ಲಿ ಒಬ್ಬರಾದ ದೊರೆ ನಿಧನರಾದ ನಂತರ ಭಗವಾನ್ ಕೂಡ ಸಿನಿಮಾಗಳ ನಿರ್ದೇಶನ ಮತ್ತು ನಿರ್ಮಾಣದಿಂದ ದೂರ ಉಳಿದರು. ಆದರೂ ಚಿತ್ರರಂಗದ ಅನೇಕ ಆಪ್ತರ ಅತಿಯಾದ ಒತ್ತಾಯದ ಮೇರೆಗೆ ಭಗವಾನ್ ಒಬ್ಬರೇ “ಆಡುವ ಗೊಂಬೆ’ ಸಿನಿಮಾವನ್ನು ನಿರ್ದೇಶಿಸಿದ್ದರು. ಅದೇ ಭಗವಾನ್ ಒಬ್ಬರೇ ನಿರ್ದೇಶಿಸಿದ ಮೊದಲ ಮತ್ತು ಕೊನೆ ಸಿನಿಮಾ ಕೂಡ ಆಯಿತು.
ನಿರ್ದೇಶನಕ್ಕೂ ಸೈ, ನಟನೆಗೂ ಸೈ
ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕನಾಗಿ ಹತ್ತಾರು ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಎಸ್. ಕೆ. ಭಗವಾನ್, ನಂತರ ನಿರ್ದೇಶನದ ಜೊತೆಯಲ್ಲಿ ಕೆಲ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟನಾಗಿಯೂ ಬಣ್ಣ ಹಚ್ಚಿದ್ದಾರೆ. “ಹೊಸ ಬೆಳಕು’, “ಭಾಗ್ಯೋದಯ’, “ಮಂಗಳ ಸೂತ್ರ’, “ರೌಡಿ ರಂಗಣ್ಣ’, “ವಸಂತ ಗೀತ’, “ಹಾಲು ಜೇನು’, “ಜೀವನ ಚೈತ್ರ’, “ಬೆಂಗಳೂರು ಮೇಲ್’ಸಿನಿಮಾಗಳಲ್ಲಿ ಎಸ್. ಕೆ ಭಗವಾನ್ ನಟನಾಗಿ ಕಾಣಿಸಿಕೊಂಡಿದ್ದಾರೆ. ಅನೇಕರಿಗೆ ಗೊತ್ತಿರದ ಇನ್ನೊಂದು ವಿಷಯವೆಂದರೆ, ಆರಂಭದಲ್ಲಿ ರಂಗಭೂಮಿಯಲ್ಲಿ ಸ್ತ್ರೀ ಪಾತ್ರದ ಮೂಲಕವೇ ಎಸ್. ಕೆ ಭಗವಾನ್ ಅವರ ಬಣ್ಣದ ಲೋಕದ ನಂಟು ಶುರುವಾಗಿತ್ತು! ಹೌದು, ಕರ್ನಾಟಕ ನಾಟಕ ಸಭಾದ “ವೀರಪುತ್ರ’ ನಾಟಕದಲ್ಲಿ ಭಗವಾನ್ ನಿರ್ವಹಿಸುತ್ತಿದ್ದ “ಗಾಯತ್ರಿ’ ಪಾತ್ರ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿತ್ತು. ಅದಾದ ನಂತರ ಕೂಡ ಹಲವು ನಾಟಕಗಳಲ್ಲಿ ಭಗವಾನ್ ಸ್ತ್ರೀ ಪಾತ್ರ ನಿರ್ವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.