Rishab Shetty: ಕಾಂತಾರ-1 ಈ ವರ್ಷ ಬರಲ್ಲ; ರಿಷಬ್ ಶೆಟ್ಟಿ ಮುಕ್ತ ಮಾತು
Team Udayavani, Jun 4, 2024, 11:58 AM IST
“ಕಾಂತಾರ’ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ನಟ ರಿಷಬ್ ಶೆಟ್ಟಿ ಈಗ “ಕಾಂತಾರ-1′ ಚಿತ್ರದಲ್ಲಿ ಬಿಝಿ. ಈ ಬಾರಿ ಚಿತ್ರದ ಗಾತ್ರ ಎಲ್ಲಾ ವಿಚಾರದಲ್ಲೂ ಹಿರಿದಾಗಿದೆ. ಅದು ಬಜೆಟ್‌ನಿಂದ ಹಿಡಿದು ತಾರಾಗಣ, ಸೆಟ್, ಶೂಟಿಂಗ್ ದಿನಗಳು.. ಹೀಗೆ ಎಲ್ಲದರಲ್ಲೂ ಚಿತ್ರ ಸದ್ದು ಮಾಡುತ್ತಿದೆ. ಇತ್ತೀಚೆಗೆ ಮಾತಿಗೆ ಸಿಕ್ಕ ರಿಷಬ್ ಶೆಟ್ಟಿ “ಕಾಂತಾರ-1′ ಹಾಗೂ ಇತರ ಅಂಶ ಕುರಿತು ಮಾತನಾಡಿ ದ್ದಾರೆ..
“ಕಾಂತಾರ-1′ ಸಿನಿಮಾ ಶೂಟಿಂಗ್, ಅದರ ಒತ್ತಡ ಹೇಗಿದೆ?
ನಾನು ಯಾವುದೇ ಒತ್ತಡ ಅಥವಾ ಭ್ರಮೆಯಲ್ಲಿ ಕೆಲಸ ಮಾಡುತ್ತಿಲ್ಲ, ಪ್ಯಾನ್ ಇಂಡಿಯಾ ಎಂಬ ಕಾರಣಕ್ಕೆ ಬೇರೆ ಬೇರೆ ಭಾಷೆಯ ಕಲಾವಿದರೇ ಬೇಕೆಂಬ ಯೋಚನೆಯಲ್ಲೂ ನಾನಿಲ್ಲ. ಮುಂದೆ ಒಂದೊಂದೇ ಅನೌನ್ಸ್‌ಮೆಂಟ್ ಬರುವಾಗ ಅದು ನಿಮಗೂ ಗೊತ್ತಾಗುತ್ತದೆ. ಆ ತರಹದ ಗೊಂದಲಗಳಿಂದ ಮುಕ್ತವಾಗಿದ್ದೇನೆ. ನನಗೆ ನನ್ನ ಸಿನಿಮಾ, ಅದರೊಳಗಿನ ಪಾತ್ರಗಳಷ್ಟೇ ಮುಖ್ಯ. ದೊಡ್ಡ ಸಿನಿಮಾ, ದೊಡ್ಡ ಬಜೆಟ್ ಎಂಬ ಲೆಕ್ಕಾಚಾರವೂ ನನಗಿಲ್ಲ. ಸಣ್ಣ ಬಜೆಟ್‌ನಲ್ಲಿ ಮಾಡಿದ ಸರ್ಕಾರಿ ಶಾಲೆ ಚಿತ್ರಮಂದಿರಲ್ಲಿ 20 ಕೋಟಿ ಕಲೆಕ್ಷನ್ ಮಾಡಿದೆ. ಇಲ್ಲಿ ಎಲ್ಲಾ ಸಿನಿಮಾನೂ ದೊಡ್ಡ ಸಿನಿಮಾ, ಜನರಿಗೆ ಇಷ್ಟವಾದರೆ…
ಸಿನಿಮಾ ತುಂಬಾ ಸಮಯ ತೆಗೆದುಕೊಳ್ಳುತ್ತಿದೆಯಲ್ಲ?
ಕಾಂತಾರ ನಂತರ ಗ್ಯಾಪ್ ಆಗಿದ್ದು ನಿಜ. ನನಗೂ ಇದು ಹೊಸ ಅನುಭವ. ಅದಕ್ಕೆ ಕಾರಣವೂ ಇದೆ. ಕಾಂತಾರ-1 ಕಥೆ ಬರೆದು ಮುಗಿಸಲು ಒಂದು ವರ್ಷ ಬೇಕಾಯಿತು. ಪ್ರತಿಯೊಂದು ಅಂಶವನ್ನು ಎಷ್ಟು ಚೆಂದ ಮಾಡಬಹುದು ಎಂದು ತಲೆಕೆಡಿಸಿಕೊಂಡು ಅದಕ್ಕೆ ಸಮಯ ಕೊಡಲೇ ಬೇಕು. ಕಥೆಯ ಕುರಿತಾದ ರಿಸರ್ಚ್, ನಿರೂಪಣೆ, ತಂಡಕ್ಕೆ, ನಿರ್ಮಾಣ ಸಂಸ್ಥೆಗೆ ಕಥೆಯ ನರೇಶನ್, ಡಿಸ್ಕಶನ್, ಸೆಟ್ ವರ್ಕ್… ಈ ತರಹದ ಅಂಶಗಳಿಗೆ ಸಮಯಬೇಕು. ಜೊತೆಗೆ ಪಾತ್ರಕ್ಕೆ ಬೇಕಾದ ತಯಾರಿ, ಲುಕ್ಸ್, ಕಾಸ್ಟ್ಯೂಮ್.. ಎಲ್ಲವೂ ಒಂದೊಂದು ಫ್ಯಾಕ್ಟರಿ ತರಹ ನಡೆಯುತ್ತಿದೆ. ಎಷ್ಟು ಬಾರಿ ನನಗೂ ಅನಿಸಿದೆ, ಒಂದು ಸಿನಿಮಾ ಮಾಡಿದ ನಂತರ “ಕಾಂತಾರ-1′ ಮಾಡಬಹುದಿತ್ತೆಂದು. ಆದರೆ, ಮತ್ತೆ ಅಷ್ಟೇ ಸಮಯಕೊಡಬೇಕು.
ನಿರ್ಮಾಪಕ ವಿಜಯ್ ಕುಮಾರ್ ಬಗ್ಗೆ ಹೇಳ್ಳೋದಾದರೆ?
ಹೊಂಬಾಳೆ ಸಂಸ್ಥೆಯ ವಿಜಯ್ ಕುಮಾರ್ ಬೆಸ್ಟ್ ಜಡ್ಜ್. ಅವರು ಸ್ಕ್ರಿಪ್ಟ್ ನೋಡೋ ರೀತಿಯೇ ಬೇರೆ. ಏನೇ ಇದ್ದರೂ ನೇರ ಹೇಳುತ್ತಾರೆ. ನಾನೂ ಅಷ್ಟೇ, “ನಿಮಗೆ ಅನಿಸಿದ್ದನ್ನು ನೇರವಾಗಿ ಹೇಳಿ’ ಅಂದಿದ್ದಾನೆ. ಈ ಐಡಿಯಾ ವರ್ಕ್ ಆಗುತ್ತೆ ಅಥವಾ ಆಗಲ್ಲ ಎಂಬುದುನ್ನು ಅವರು ಹೇಳು ತ್ತಾರೆ. ನಮ್ಮ ನಡುವೆ ಒಳ್ಳೆಯ ಡಿಸ್ಕಶನ್ ಆಗುತ್ತದೆ.
ಶೂಟಿಂಗ್ ಅನುಭ ಹೇಗಿದೆ?
ಈಗಾಗಲೇ ಒಂದು ಶೆಡ್ನೂಲ್ ಮುಗಿಸಿದ್ದೇವೆ. ಒಂದು ಫೈಟ್ ಮಾಡಿದ್ದೇವೆ. ಚಿತ್ರದಲ್ಲಿ ಆ್ಯಕ್ಷನ್ ಹೆಚ್ಚಿದೆ. ಬೆಳಗ್ಗೆ ನಾಲ್ಕೂವರೆಗೆ ಎದ್ದು ಐದು ಗಂಟೆಗೆ ಮೇಕಪ್‌ಗೆ ಕೂರುತ್ತೇವೆ. ಡೇ ಲೈಟ್ ಬರುತ್ತಿದ್ದಂತೆ ಶೂಟಿಂಗ್ ಶುರು. ಈ ಸಿನಿಮಾಕ್ಕಾಗಿ 10 ಕೆಜಿ ತೂಕ ಹೆಚ್ಚಿಸಿ ಮತ್ತೆ 8 ಕೆಜಿ ಇಳಿಸಿದ್ದೇನೆ. ಚಿತ್ರಕ್ಕಾಗಿ ಕಲರಿಪಯಟ್ಟು ಸೇರಿದಂತೆ ಒಂದಷ್ಟು ತರಬೇತಿ ಪಡೆದಿದ್ದೇನೆ. ಸುಮಾರು 100ಕ್ಕೂ ಹೆಚ್ಚು ದಿನ ಚಿತ್ರೀಕರಣವಾಗಲಿದೆ ಈ ಸಿನಿಮಾ. ಇದು ಪಕ್ಕಾ ಕನ್ನಡ ಸಿನಿಮಾ. ಇಲ್ಲಿಂದ ಬೇರೆ ಭಾಷೆಗೆ ಹೋಗುತ್ತಿದೆ.
ಕಾಂತಾರ ನಂತರ ನಿಮ್ಮ ಆಯ್ಕೆ ಹೇಗೆ?
“ಕಾಂತಾರ-1′ ಮುಗಿದ ನಂತರ ನನಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುವ ಆಸೆ ಇದೆ. ಒಂದು ಸಣ್ಣ ಬಜೆಟ್‌ನಲ್ಲಿ ಬೆಲ್ ಬಾಟಂ, ಸರ್ಕಾರಿ ಶಾಲೆ ಸಿನಿಮಾ ತರಹದ ಚಿತ್ರ ಮಾಡಬೇಕು. ಆದರೆ, ಕಾಂತಾರ ಮುಗಿಯದೇ ಯಾವುದನ್ನೂ ಮುಟ್ಟಲ್ಲ. ಏಕೆಂದರೆ ಕಥೆಯಿಂದ ಹಿಡಿದು ಸಿನಿಮಾ ರಿಲೀಸ್ ಆಗುವವರೆಗೆ ಎಲ್ಲಾ ವಿಭಾಗದಲ್ಲೂ ನನ್ನನ್ನು ನಾನು ತೊಡಗಿಸಿ ಕೊಳ್ಳುತ್ತೇನೆ
ಕನ್ನಡ ಸಿನಿಮಾಗಳ ಸದ್ಯದ ಸೋಲು ಮತ್ತು ಮಲಯಾಳಂನ ಗೆಲುವಿನ ಬಗ್ಗೆ ಏನಂತೀರಿ? ನಾವೀಗ ಮಲಯಾಳಂ ಸಿನಿಮಾ ಬಗ್ಗೆ ಮಾತನಾಡುತ್ತೇವೆ. ಆದರೆ, ಅಲ್ಲಿ ಹೇಗೆ ಕೆಲಸ ಮಾಡುತ್ತಾರೆ, ಅಲ್ಲಿನ ಸಿನಿಮಾ ಮಂದಿಯ ಬೆಂಬಲ ಹೇಗಿದೆ ಎಂಬುದನ್ನು ನೋಡಬೇಕು. ಅಲ್ಲಿ ಒಂದು ಸಿನಿಮಾ ಶೂಟಿಂಗ್ ಆಗುತ್ತಿದ್ದರೆ ಆ ಸೆಟ್‌ಗೆ ತುಂಬಾ ಜನ ನಿರ್ದೇಶಕರು ಭೇಟಿ ಕೊಡುತ್ತಿರುತ್ತಾರೆ. ಆ ತರಹದ ಮನಸ್ಥಿತಿ ಇದೆ. ಆದರೆ, ನಮ್ಮಲ್ಲಿ ಒಟ್ಟಿಗೆ ಸೇರಿಕೊಳ್ಳುವ ಸಂಸ್ಕೃತಿ ಕಡಿಮೆ.
ಒಳ್ಳೆಯ ಕಂಟೆಂಟ್ ಸಿನಿಮಾಗಳು ಸೋಲುತ್ತಿವೆ?
ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳು ಇವತ್ತು ರೀಚ್ ಆಗುತ್ತಿಲ್ಲವೆಂದರೆ ಅಲ್ಲೇನೋ ಮಿಸ್ ಆಗಿದೆ ಎಂದರ್ಥ. ಇಲ್ಲಿ ಒಬ್ಬ ಕಥೆಗಾರನ ಒಂದು ಸಿನಿಮಾ ಹಿಟ್ ಆದರೆ, ಮುಂದಿನ ವರ್ಷ ಆತನೇ ನಿರ್ದೇಶಕರನಾಗಿರುತ್ತಾನೆ. ನಮ್ಮಲ್ಲಿ ಬರಹಗಾರರ ಕೊರತೆ ಇದೆ. ರೈಟರ್ ಅನ್ನು ಬೆಳೆಸಬೇಕು. ನಮ್ಮ ಚಿತ್ರರಂಗದಲ್ಲಿ ವರ್ಕ್‌ಶಾಪ್ ಆಗಲೀ, ಚರ್ಚೆಯಾಗಲೀ ಜಾಸ್ತಿ ನಡೆಯುತ್ತಿಲ್ಲ. ಮುಖ್ಯವಾಗಿ ಚಿತ್ರಮಂದಿರದೊಳಗೆ ಜನ ಎಂಜಾಯ್ ಮಾಡಲು ಏನು ಬೇಕು ಅದನ್ನು ಕೊಡುವ ನಿಟ್ಟಿನಲ್ಲಿ ನಾವು ಪ್ರಯತ್ನಿಸಬೇಕು. ನನ್ನ ಪ್ರಕಾರ ಅದೇ ಅಂತಿಮ. ಸಿನಿಮಾ ನೋಡೋರಿ ಗಿಂತ ಮಾಡೋರು ಜಾಸ್ತಿಯಾಗಿ ದ್ದಾರೆ. ಹೆಚ್ಚು ಸಿನಿಮಾ ಬರುತ್ತಿದ್ದಂತೆ ಏನೋ ಬರಿ¤ದೆ ಎಂಬ ಭಾವನೆ ಪ್ರೇಕ್ಷಕರಲ್ಲಿ ಮೂಡಿದೆ ಅನಿಸುತ್ತದೆ.
ಓಟಿಟಿಗಳು ಕನ್ನಡಕ್ಕೆ ಮನ್ನಣೆ ಕೊಡುತ್ತಿಲ್ಲ ಎಂಬ ಮಾತಿದೆ?
ಓಟಿಟಿಯಲ್ಲಿ ಕನ್ನಡ ಸಿನಿಮಾವನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದು ನಿಜ. ಹಾಗಂತ ಎಲ್ಲವೂ ಅವರ ತಪ್ಪು ಎಂದು ಹೇಳುವುದಕ್ಕಾಗಲ್ಲ. ಏಕೆಂದರೆ ಅವರು ಇಲ್ಲಿ ಎಷ್ಟು ವೀಕ್ಷಕರ ಸಂಖ್ಯೆ ಇದೆ ಎಂಬುದನ್ನು ನೋಡುತ್ತಾರೆ. ಹಾಗಂತ ಕನ್ನಡಕ್ಕೆ ವೀವರ್‌ಶಿಪ್ ಇಲ್ಲ ಎಂದಲ್ಲ. ಅವರದ್ದೇ ಆದಂತಹ ಒಂದು ರಿಸರ್ಚ್ ಇರುತ್ತೆ. ಅವರದ್ದೇ ಆದ ಬಿಝಿನೆಸ್ ಲೆಕ್ಕಾಚಾರವಿದೆ. ನಾವು ನಮ್ಮ ಸಿನಿಮಾ ತಗೊಳಿ ಎಂದಷ್ಟೇ ಹೇಳಬಹುದು. ಅಂತಿಮವಾಗಿ ಬಿಝಿನೆಸ್ ಮುಖ್ಯವಾಗುತ್ತದೆ. ಕೆಲವೊಮ್ಮೆ ದೊಡ್ಡ ಸಿನಿಮಾಗಳನ್ನು ತಗೊಂಡು ಅದರಿಂದ ನಷ್ಟವಾದಾಗ ಅದು ಇತರ ಸಿನಿಮಾಗಳ ಮೇಲೆ ಪ್ರಭಾವ ಬೀರುತ್ತದೆ. ಕೆಲವೊಂದು ಓಟಿಟಿಗಳು “ನಾವು ಇನ್ನೂ ಕನ್ನಡಕ್ಕೆ ಎಂಟ್ರಿನೇ ಆಗಿಲ್ಲ. ನಾವು ಎಂಟ್ರಿಕೊಟ್ಟರೆ ನಮಗೆ ಸತತ ಫಾಲೋಅಪ್ ಬೇಕು ಎನ್ನುತ್ತಿವೆ. ನಮ್ಮಲ್ಲಿ ಶಂಕರ್ ನಾಗ್ ಇದ್ದಿದ್ದರೆ ನಮ್ಮದೇ ಆದ ಒಂದು ಓಟಿಟಿ ಆಗುತ್ತಿತ್ತೇನೋ..
ಈ ವರ್ಷ ಸಿನಿಮಾ ರಿಲೀಸ್ ಆಗುತ್ತಾ?
ಇಲ್ಲ, ಹೊಸ ವರ್ಷಕ್ಕೆ ಸಿನಿಮಾ ರಿಲೀಸ್ ಆಗಲಿದೆ. ರಿಲೀಸ್ ಡೇಟನ್ನು ನಿರ್ಮಾಣ ಸಂಸ್ಥೆ ನಿರ್ಧರಿಸಲಿದೆ.
125 ಕೋಟಿಗೆ ಓಟಿಟಿ ರೈಟ್ಸ್ ಸೇಲ್ ಆಗಿದೆಯಂತೆ?: ನಾನು ನಂಬರ್ ಬಗ್ಗೆ ಮಾತನಾಡನಲ್ಲ. ಆದರೆ, ಅದರ ಸುತ್ತಮುತ್ತಲೇ ಇದೆ. ನನಗೂ “ಅಯ್ಯಯ್ಯೋ ಸೂಪರ್ ಅಲ್ಲಾ..’ ಅನಿಸಿದ್ದು ನಿಜ. ಏಕೆಂದರೆ ನನ್ನ ಕೆರಿಯರ್‌ನಲ್ಲಿ ಈ ತರಹ ಎಲ್ಲಾ ಆಗುತ್ತೆ ಎಂದು ಅಂದುಕೊಂಡಿರಲಿಲ್ಲ. ಇನ್ಸಿಟ್ಯೂಟ್‌ನಲ್ಲಿ ತರಬೇತಿ ಮುಗಿಸಿ, ಸೈನೈಡ್ ಸೇರಿ ಕೆಲವು ಸಿನಿಮಾಗಳಲ್ಲಿ ಕೆಲಸ ಮಾಡಿ, ಅಲ್ಲಿಂದ ನಿರ್ಮಾಪಕ ಎಸ್.ವಿ.ರಾಜೇಂದ್ರ ಬಾಬು ಅವರಿಂದ ಈಗ ಹೊಂಬಾಳೆಯಂತಹ ಸಂಸ್ಥೆಗೆ ಸಿನಿಮಾ ಮಾಡುತ್ತೇನೆ ಎಂದು ನಾನಂದುಕೊಂಡಿರಲಿಲ್ಲ. ಇದು ಯಾರೋ ಮಾಡಿದ ಪುಣ್ಯ. ಜನ ತೋರಿಸಿದ ಪ್ರೀತಿಯನ್ನು ಮರೆಯುವಂತಿಲ್ಲ.
ನೀವೀಗ ಊರಾ, ಬೆಂಗಳೂರಾ?
ನಾನು ಸದ್ಯ ಊರಿಗೆ ಶಿಫ್ಟ್ ಆಗಿದ್ದೇನೆ. ಮಗನನ್ನು ಊರಿನಲ್ಲೇ ಶಾಲೆಗೆ ಸೇರಿಸಿದ್ದೇನೆ. ಕಾಂತಾರ ಮುಗಿಯುವವರೆಗೆ ಅಲ್ಲೇ ಇರುತ್ತೇನೆ. ಜಂಜಾಟ ಬೇಡ ಎಂಬ ಕಾರಣಕ್ಕೆ ಊರಿಗೆ ಹೋಗೋದು. ನಾನು ಬಿಝಿನೆಸ್ ಬಗ್ಗೆ, ದೊಡ್ಡ ನಂಬರ್ ಬಗ್ಗೆ ಟೆನÒನ್ ಮಾಡಲ್ಲ. ವರ್ಲ್ಡ್ವೈಡ್ ರಿಲೀಸ್ ಬಗ್ಗೆಯೂ ನಾನು ಯೋಚಿಸಲ್ಲ. ಕಾಂತಾರದೊಳಗೆ ಒಂದು ಕಥೆ ಹೇಳುವುದಷ್ಟೇ ನನ್ನ ಜವಾಬ್ದಾರಿ.
ಪ್ರತಿ ಸಿನಿಮಾಕ್ಕೂ ಶಕ್ತಿ ಇದೆ…
ಒಂದು ಸಿನಿಮಾವನ್ನು ಮತ್ತೂಂದು ಸಿನಿಮಾ ಮೀರಿಸುತ್ತದೆ ಎಂದು ನಾನು ನಂಬುವುದಿಲ್ಲ. ಪ್ರತಿ ಸಿನಿಮಾಕ್ಕೂ ಅದರದ್ದೇ ಆದ ಶಕ್ತಿ ಇದೆ. ಯಾವ ಸಿನಿಮಾವನ್ನು ಜನ ನೋಡಿ ಇಷ್ಟಪಡು ತ್ತಾರೋ ಅದು ದೊಡ್ಡ ಸಿನಿಮಾ.
-ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.