ಸಂಕ್ರಾಂತಿ ಸಿನಿಹಬ್ಬ
Team Udayavani, Jan 15, 2019, 5:38 AM IST
ಇಂದು ಸಂಕ್ರಾಂತಿ ಹಬ್ಬ. ಎಲ್ಲರಲ್ಲೂ ಸಂಭ್ರಮ ಮನೆ ಮಾಡಿದೆ. ಸಿನಿಮಂದಿ ಕೂಡಾ ಈ ಸಂಭ್ರಮದಿಂದ ಹೊರತಾಗಿಲ್ಲ. ಅನೇಕ ಚಿತ್ರತಂಡಗಳು ಸಂಕ್ರಾಂತಿ ಹಬ್ಬದಂದು ಸಿನಿಪ್ರಿಯರಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಸಿನಿಮಾ ಮಂದಿ ಏನು ಗಿಫ್ಟ್ ಕೊಡಬಹುದು ಎಂದು ನೀವು ಕೇಳಬಹುದು. ತಮ್ಮ ಸಿನಿಮಾಗಳ ಹಾಡು, ಟ್ರೇಲರ್, ಟೀಸರ್‌ಗಳನ್ನು ಕೆಲವು ಚಿತ್ರತಂಡಗಳು ಬಿಡುಗಡೆ ಮಾಡಿದರೆ, ಇನ್ನು ಕೆಲವು ಚಿತ್ರತಂಡಗಳು ತಮ್ಮ ಸಿನಿಮಾದ ಟ್ರೇಲರ್, ಆಡಿಯೋ ಬಿಡುಗಡೆ ದಿನಾಂಕ, ಚಿತ್ರದ ಸಾಂಗ್ ರೆಕಾರ್ಡಿಂಗ್‌ಗೆ ಚಾಲನೆ …. ಹೀಗೆ ಸಂಕ್ರಾಂತಿಯಂದು ಹಲವು ಕಾರ್ಯಕ್ರಮಗಳನ್ನು ಇಟ್ಟುಕೊಂಡಿವೆ. ಆ ಕುರಿತು ಒಂದು ರೌಂಡಪ್ …
ಯಜಮಾನ ಮೊದಲ ಹಾಡು: ದರ್ಶನ್ ನಾಯಕರಾಗಿರುವ “ಯಜಮಾನ’ ಚಿತ್ರದ ಮೊದಲ ಹಾಡು “ಶಿವನಂದಿ’ ಇಂದು ಬಿಡುಗಡೆಯಾಗುತ್ತಿದೆ. ಇಂದು ಬೆಳಗ್ಗೆ 11.04 ನಿಮಿಷಕ್ಕೆ ಚಿತ್ರದ ಹಾಡು ಬಿಡುಗಡೆಯಾಗಲಿದ್ದು, ದರ್ಶನ್ ಅಭಿಮಾನಿಗಳು ಈ ಹಾಡಿಗಾಗಿ ಎದುರು ನೋಡುತ್ತಿದ್ದಾರೆ. ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡನ್ನು ಚೇತನ್ ಕುಮಾರ್ ಬರೆದಿದ್ದಾರೆ. ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಸಿನಿಮಾ ಬಗೆಗಿನ ಕುತೂಹಲವನ್ನು ಹೆಚ್ಚಿಸಿತ್ತು. ಈಗ ಆ ಸಾಲಿಗೆ ಚಿತ್ರದ ಮೊದಲ ಹಾಡು ಕೂಡಾ ಸೇರಿಕೊಳ್ಳಲಿದೆ.
ಈ ಹಾಡು ದಿ ಬೀಟ್ಸ್ ಯೂ ಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ಸಂಕ್ರಾಂತಿ ಬಳಿಕ ಪ್ರತಿ ಎರಡು, ಮೂರು ದಿನಗಳ ಅಂತರದಲ್ಲಿ ಬಾಕಿ ಇರುವ ಹಾಡುಗಳನ್ನು ಸಹ ಒಂದೊಂದಾಗಿಯೇ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆಯಂತೆ ಚಿತ್ರತಂಡ. ಚಿತ್ರವನ್ನು ಹರಿಕೃಷ್ಣ ಹಾಗೂ ಪೊನ್ ಕುಮಾರ್ ನಿರ್ದೇಶಿಸಿದ್ದು, ಮೀಡಿಯಾ ಹೌಸ್ ಬ್ಯಾನರ್‌ನಡಿ ಬಿ.ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯಾ ಹೋಪ್ ನಾಯಕಿಯರು. ಚಿತ್ರ ಫೆಬ್ರವರಿಯಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
ಪೈಲ್ವಾನ್ ಟ್ರೇಲರ್: ಸುದೀಪ್ ಅವರ “ಪೈಲ್ವಾನ್’ ಚಿತ್ರತಂಡ ಕೂಡಾ ಸಂಕ್ರಾಂತಿಗೆ ಅಭಿಮಾನಿಗಳಿಗೆ ಕೊಡುಗೆ ನೀಡುತ್ತಿದೆ. ಅದು ಚಿತ್ರದ ಮೊದಲ ಟೀಸರ್. ಹೌದು, ಇಂದು ಸಂಜೆ 4.45 ನಿಮಿಷಕ್ಕೆ “ಪೈಲ್ವಾನ್’ ಚಿತ್ರದ ಫಸ್ಟ್‌ಲುಕ್ ಟೀಸರ್ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರತಂಡ ಇದನ್ನು ಘೋಷಿಸಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ಕಿಚ್ಚನ ಗೆಟಪ್ ನೋಡಲು ಕಾತುರರಾಗಿದ್ದಾರೆ. ಈ ಹಿಂದೆ “ಹೆಬ್ಬುಲಿ’ ಚಿತ್ರವನ್ನು ನಿರ್ದೇಶಿಸಿದ್ದ ಕೃಷ್ಣ ಈಗ “ಪೈಲ್ವಾನ್’ ಚಿತ್ರವನ್ನು ನಿರ್ದೇಶಿಸುವ ಜೊತೆಗೆ ನಿರ್ಮಾಣ ಕೂಡಾ ಮಾಡಿದ್ದಾರೆ. ಈ ಸಿನಿಮಾ ಮೇಲೆ ಸುದೀಪ್ ಕೂಡಾ ಸಾಕಷ್ಟು ನಿರೀಕ್ಷೆ ಇಟ್ಟಿದ್ದು, ಮೊದಲ ಬಾರಿಗೆ ಕುಸ್ತಿ ಅಖಾಡದಲ್ಲಿ ತೊಡೆ ತಟ್ಟಿ ನಿಂತಿದ್ದಾರೆ. ಈಗಾಗಲೇ ಸುದೀಪ್ ಪೈಲ್ವಾನ್ ಗೆಟಪ್‌ನಲ್ಲಿರುವ ಫೋಟೋಗಳು ಚಿತ್ರದ ಬಗೆಗಿನ ಕುತೂಹಲವನ್ನು ಹೆಚ್ಚಿಸಿದೆ.
ಸೀತಾರಾಮನ ಮದುವೆ ಸಾಂಗ್: ನಿಖಿಲ್ ಕುಮಾರ್ ನಾಯಕರಾಗಿರುವ “ಸೀತಾರಾಮ ಕಲ್ಯಾಣ’ ಚಿತ್ರ ತನ್ನ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದು, ಇದೇ ಜ. 25ರಂದು ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಕೆಲವು ಹಾಡುಗಳು ಬಿಡುಗಡೆಯಾಗಿದ್ದು, ಆ ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. “ಸೀತಾರಾಮ ಕಲ್ಯಾಣ’ ಚಿತ್ರತಂಡ ಸಂಕ್ರಾಂತಿ ವಿಶೇಷವಾಗಿ ಇಂದು ಚಿತ್ರದ ಮದುವೆ ಹಾಡೊಂದನ್ನು ಬಿಡುಗಡೆ ಮಾಡುತ್ತಿದೆ. ವಿ. ನಾಗೇಂದ್ರ ಪ್ರಸಾದ್ ಬರೆದಿರುವ “ಮಾಂಗಲ್ಯಂ ತಂತುನಾನೇನ’ ಎಂಬ ಹಾಡು ಇಂದು ಬೆಳಗ್ಗೆ 11.04 ನಿಮಿಷಕ್ಕೆ ಬಿಡುಗಡೆಯಾಗುತ್ತಿದೆ. “ಸೀತಾರಾಮ ಕಲ್ಯಾಣ’ ಚಿತ್ರವನ್ನು ಎ.ಹರ್ಷ ನಿರ್ದೇಶಿಸಿದ್ದು, ಚೆನ್ನಾಂಬಿಕಾ ಫಿಲಂಸ್‌ನಡಿ ಚಿತ್ರ ನಿರ್ಮಾಣವಾಗಿದೆ. ಚಿತ್ರದಲ್ಲಿ ರಚಿತಾ ರಾಮ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.
ಮದಗಜನಿಗೆ ಹಾಡಿನ ಪೂಜೆ: ಶ್ರೀಮುರಳಿ ಅಭಿನಯಿಸಲಿರುವ “ಮದಗಜ’ ಚಿತ್ರದ ಹಾಡುಗಳ ಧ್ವನಿಮುದ್ರಣ ಕೂಡ ಸಂಕ್ರಾಂತಿಹ ಹಬ್ಬದಂದೇ ನಡೆಯುತ್ತಿದೆ. ಮೈಸೂರಿನ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಪೂಜೆ ನೆರವೇರಿಸಲಿರುವ ಚಿತ್ರತಂಡ ಆ ಬಳಿಕ ಚಾಮುಂಡೇಶ್ವರಿ ಬೆಟ್ಟದ ತುದಿಯಲ್ಲೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಂದ ಹೊಸ ರಾಗ ಸಂಯೋಜನೆಗೆ ಚಾಲನೆ ಕೊಡುವ ಮೂಲಕ ಹಾಡುಗಳ ಮುದ್ರಣ ಕಾರ್ಯ ನೆರವೇರಿಸಲಿದೆ.
ಅರ್ಜುನ್ ಜನ್ಯ ಅವರ ರಾಗ ಸಂಯೋಜನೆಗೆ ಚೇತನ್‌ಕುಮಾರ್ ಅವರು ಅಲ್ಲಿಯೇ ಗೀತೆ ಬರೆಯಲಿದ್ದು, ಆ ಬಳಿಕ ಅರ್ಜುನ್ ಜನ್ಯ ಅವರೇ ಆ ಹಾಡನ್ನು ಹಾಡುವ ಮೂಲಕ ಸಾಂಗ್ ರೆಕಾರ್ಡಿಂಗ್ ಮಾಡಲಿದ್ದಾರೆ. “ಅಯೋಗ್ಯ’ ಖ್ಯಾತಿಯ ನಿರ್ದೇಶಕ ಮಹೇಶ್, ನಟ ಶ್ರೀಮುರಳಿ ಮತ್ತು ನಿರ್ಮಾಪಕ ಉಮಾಪತಿಗೌಡ ಸೇರಿದಂತೆ ಚಿತ್ರತಂಡ ಸಾಂಗ್ ರೆಕಾರ್ಡಿಂಗ್ ವೇಳೆ ಹಾಜರಾಗಲಿದೆ. ಅಂದಹಾಗೆ, ಶ್ರೀಮುರಳಿ ಅವರೀಗ ಚೇತನ್‌ಕುಮಾರ್ ನಿರ್ದೇಶನದ “ಭರಾಟೆ’ ಚಿತ್ರದಲ್ಲಿ ಬಿಜಿಯಾಗಿದ್ದು, ಆ ಚಿತ್ರೀಕರಣದ ಬಳಿಕ ಫೆಬ್ರವರಿ ಅಂತ್ಯದಲ್ಲಿ “ಮದಗಜ’ ಚಿತ್ರಕ್ಕೆ ಚಾಲನೆ ನೀಡಲು ಚಿತ್ರತಂಡ ನಿರ್ಧರಿಸಿದೆ.
ನಟಸಾರ್ವಭೌಮ ಟ್ರೇಲರ್ ಡೇಟ್: ಪುನೀತ್ ರಾಜಕುಮಾರ್ ನಾಯಕರಾಗಿರುವ “ನಟಸಾರ್ವಭೌಮ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ಅದ್ಧೂರಿಯಾಗಿ ನಡೆದಿದ್ದು, ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಚಿತ್ರದ ಟ್ರೇಲರ್ ಬಿಡುಗಡೆಗೆ ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. ಚಿತ್ರದ ಟ್ರೇಲರ್ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಸಂಕ್ರಾಂತಿಗೆ ಒಂದು ದಿನ ಮೊದಲು ಅಂದರೆ ಸೋಮವಾರ ಸಂಜೆ ಘೋಷಿಸಿದ್ದು, ಜ.25 ರಂದು ಟ್ರೇಲರ್ ಬಿಡುಗಡೆಯಾಗಲಿದೆ.
ಹಾರಲು ರೆಡಿಯಾದ ಬಟರ್ ಫ್ಲೈ: ರಮೇಶ್ ಅರವಿಂದ್ ನಿರ್ದೇಶನದ “ಬಟರ್‌ಫ್ಲೈ’ ಚಿತ್ರದ ಹಾಡು ಸಂಕ್ರಾಂತಿಯ ಮರುದಿನ ಅಂದರೆ ಜ.16 ರಂದು ಬಿಡುಗಡೆಯಾಗುತ್ತಿದೆ. ಇದು ಕೂಡಾ ಮದುವೆ ಹಾಡಾಗಿದ್ದು “ನಾಳೆ ನಮ್ಮ ಮನೆಯಲ್ಲೊಂದು …’ ಎಂದು ಈ ಹಾಡು ಆರಂಭವಾಗುತ್ತಿದೆ. ಪಾರುಲ್ ಯಾದವ್ ಈ ಚಿತ್ರದ ನಾಯಕಿ. ಈ ಚಿತ್ರ ನಾಲ್ಕು ಭಾಷೆಯಲ್ಲಿ ತಯಾರಾಗುತ್ತಿದೆ. ಕನ್ನಡದಲ್ಲಿ ಪಾರುಲ್ ನಟಿಸಿದ್ದಾರೆ.
ಐ ಲವ್ ಯೂ ಆಡಿಯೋ: ಆರ್. ಚಂದ್ರು ನಿರ್ದೇಶನ, ನಿರ್ಮಾಣದ “ಐ ಲವ್ ಯು’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ, ಮೆಚ್ಚುಗೆ ಪಡೆಯುತ್ತಿದೆ. ಈಗ ಚಿತ್ರದ ಆಡಿಯೋ ಬಿಡುಗಡೆಗೆ ವೇದಿಕೆ ಸಿದ್ಧವಾಗಿದೆ. ಚಿತ್ರದ ಆಡಿಯೋ ಬಿಡುಗಡೆ ದಾವಣಗೆರೆಯಲ್ಲಿ 19ರಂದು ನಡೆಯಲಿದ್ದು, ಆಡಿಯೋ ಬಿಡುಗಡೆಯಾಗುವ ಜಾಗ ಹಾಗೂ ಸಮಯವನ್ನು ಚಿತ್ರತಂಡ ಇಂದು ಅನೌನ್ಸ್ ಮಾಡುತ್ತಿದೆ.
11.04ಕ್ಕೆ ಎರಡು ಚಿತ್ರಗಳ ಹಾಡು: ಇಂದಿನ ವಿಶೇಷವೆಂದರೆ 11.04 ನಿಮಿಷಕ್ಕೆ ಎರಡು ಚಿತ್ರಗಳ ಹಾಡುಗಳು ಬಿಡುಗಡೆಯಾಗುತ್ತಿರುವುದು. ದರ್ಶನ್ ನಾಯಕರಾಗಿರುವ “ಯಜಮಾನ’ ಚಿತ್ರದ ಹಾಡು ಬೆಳಗ್ಗೆ 11.04ಕ್ಕೆ ಬಿಡುಗಡೆಯಾಗುವುದಾಗಿ ಚಿತ್ರತಂಡ ಘೋಷಿಸಿಕೊಂಡಿದೆ. ಇತ್ತ ಕಡೆ ನಿಖಿಲ್ ಕುಮಾರ್ ನಾಯಕರಾಗಿರುವ “ಸೀತಾರಾಮ ಕಲ್ಯಾಣ’ ಚಿತ್ರದ ಮದುವೆ ಹಾಡು ಕೂಡಾ 11.04ಕ್ಕೆ ಬಿಡುಗಡೆಯಾಗಲಿದೆ. ಈ ಮೂಲಕ ಒಂದೇ ಸಮಯಕ್ಕೆ ಎರಡು ಹಾಡುಗಳಿಗೆ ಪ್ರೇಕ್ಷಕ ಕಿವಿಯಾಗಬಹುದು. ನೀವು ಇದನ್ನು ಸ್ಪರ್ಧೆ ಎಂದಾದರೂ ಭಾವಿಸಬಹುದು ಅಥವಾ ಕಾಕತಾಳೀಯ ಎಂದಾದರೂ ಕರೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.