‘ಛೂ ಮಂತರ್’ ದೆವ್ವ ಓಡಿಸಲು ರೆಡಿಯಾದ ಶರಣ್
Team Udayavani, Jan 5, 2023, 11:54 AM IST
“ಅವತಾರ ಪುರುಷ’ ಚಿತ್ರದ ಮೂಲಕ ಪ್ರೇಕ್ಷಕರನ್ನು ಹೆದರಿಸಿದ ನಟ ಶರಣ್ ಇದೀಗ, “ಛೂ ಮಂತರ್’ ಹಾಕಲು ತಯಾರಾಗಿದ್ದಾರೆ! ನಿರ್ಮಾಪಕ ತರುಣ್ ಶಿವಪ್ಪ ಹಾಗೂ ಶರಣ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ “ಛೂ ಮಂತರ್’ ಈಗ ಚಿತ್ರೀಕರಣ ಮುಗಿಸಿ, ಬಿಡುಗಡೆಯ ಹಂತಕ್ಕೆ ಬಂದಿದೆ. ಶರಣ್‌ಗೆ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ.
“ಕರ್ವ’ ನವನೀತ್ ನಿರ್ದೇಶನ ಈ ಚಿತ್ರಕ್ಕಿದ್ದು, ಇತ್ತೀಚೆಗೆ ಚಿತ್ರದ ಫಸ್ಟ್‌ಲುಕ್ ಹಾಗೂ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ನವನೀತ್, “ಛೂ ಮಂತರ್’ ಇದೊಂದು ಫ್ಯಾನ್ಸಿ ಲೋಕ. ಹೈಪರ್ ಲಿಂಕ್ ಇರುವ ಮೂರು ಭಿನ್ನ ಕಥೆಗಳು ಜೊತೆಗೆ ಸಾಗುವ ಚಿತ್ರ ಇದಾಗಿದ್ದು, ನಾಯಕ ಎಲ್ಲಾ ಕಥೆಯಲ್ಲಿ ಇರುತ್ತಾನೆ. ಶರಣ್ ಅವರು ಇಲ್ಲಿವರೆಗೆ ಪೂರ್ಣ ಪ್ರಮಾಣದ ಹಾರರ್ ಸಿನಿಮಾಗಳನ್ನು ಮಾಡಿಲ್ಲ. ಇದು ಅವರ ಕೆರಿಯರ್‌ನ ಮೊದಲ ಔಟ್ ಅಂಡ್ ಔಟ್ ಹಾರರ್ ಸಿನಿಮಾ. ನಾವು ಉತ್ತರಾಖಂಡ್‌ಗೆ ತೆರಳಿ ಹಿಮದಲ್ಲಿ ಶೂಟಿಂಗ್ ಮಾಡಿದ್ದೇವೆ’ ಎಂಬುದು ನಿರ್ದೇಶಕ ನವನೀತ್ ಮಾತು.
ಚಿತ್ರದ ನಿರ್ಮಾಪಕ ತರುಣ್ ಶಿವಪ್ಪ ಮಾತನಾಡಿ, “ಶರಣ್ ಅವರ ಜೊತೆ “ವಿಕ್ಟರಿ-2′ ಚಿತ್ರ ಮಾಡಿ ವಿಕ್ಟರಿ ಪಡೆದಿದ್ದೆ. ನಂತರ ಅವರ ಜೊತೆ ಕೆಲಸ ಮಾಡಬೇಕು ಅಂತ ಕಳೆದ ಮೂರು ವರ್ಷಗಳಿಂದ, ಹೊಸ ನಿರ್ದೇಶಕರಿಂದ ಹಿಡಿದು ಅನುಭವಿ ನಿರ್ದೇಶಕರವರೆಗೂ ಕಥೆ ಕೇಳಿಸಿದ್ದೆ. ಆದರೆ ಶರಣ್ ಚಿತ್ರಗಳ ಆಯ್ಕೆ ವಿಷಯದಲ್ಲಿ ತುಂಬಾ ಚೂಸಿಯಾಗಿದ್ದರು. ಒಳ್ಳೆ ಕಥೆ, ಪಾತ್ರ, ಭಿನ್ನತೆಯನ್ನು ಕಾಯ್ದು ಕೊಳ್ಳತ್ತಿದ್ದರು. ಇವರಿಗೆ ಕಥೆ ಹೇಳಿಸಿ ಸುಸ್ತಾಗಿದ್ದೆ. ತರುಣ್ ಸುಧೀರ್ ಅವರು ಸಿಕ್ಕಾಗ ಚಿತ್ರ ಮಾಡುವ ಬಗ್ಗೆ ಕೇಳಿದ್ದೆ. ಆಗ ಅವರು ಶರಣ್ ಕೆರಿಯರ್‌ನಲ್ಲಿ ಸಂಪೂರ್ಣ ಹಾರರ್ ಚಿತ್ರ ಮಾಡಿಲ್ಲ. ಆ ಥರದ ಕಥೆ ಇದ್ದರೆ ಪ್ರಯತ್ನ ಮಾಡಿ ಅಂದರು. ನಂತರ ಬಂದಿದ್ದೇ “ಛೂ ಮಂತರ್’. ಈ ಮೊದಲು ಮಾಡಿದ ನಾಲ್ಕು ಚಿತ್ರಗಳು ಟೈಟಲ್ ಇಡದೇ ಮುಂದುವರಿದೇ ಇಲ್ಲ. ಆದರೆ ಈ ಚಿತ್ರಕ್ಕೆ ಶೂಟಿಂಗ್ ಮುಗಿಯುವವರೆಗೂ ಯಾವ ಶೀರ್ಷಿಕೆ ಇಡಬೇಕೆಂದು ತಲೆಕೆಡಿಸಿಕೊಂಡು ನಂತರ ಛೂ ಮಂತರ್ ಅಂತ ಹೆಸರು ಇಟ್ಟೆವು’ ಎಂದರು.
ನಟ ಶರಣ್ ಮಾತನಾಡಿ, “ನಾನು ಒಬ್ಬ ಕಾಮಿಡಿಯನ್. ಆದರೆ ನನಗೆ ವೈಯಕ್ತಿವಾಗಿ ಹಾರರ್ ಚಿತ್ರಗಳು ಅಂದರೆ ತುಂಬಾ ಇಷ್ಟ. “ಛೂ ಮಂತರ್’ ನಾನು ಇಷ್ಟುಪಟ್ಟು ಮಾಡಿದ ಚಿತ್ರ. ಚಿತ್ರದ ಮೋಶನ್ ಪೋಸ್ಟರ್ ಇಷ್ಟು ಅದ್ಭುತವಾಗಿ ಮೂಡಿ ಬರಲು ಕಾರಣ ನವನೀತ್. ನಾನು ಅವರ ಗ್ರೌಂಡ್‌ನಲ್ಲಿ ಒಬ್ಬ ಆಟಗಾರ ಅಷ್ಟೇ. ಚಿತ್ರದಲ್ಲಿ ಕಾಮಿಡಿ ಇದೆಯಾ ಅನ್ನುವುದು ಎಲ್ಲರ ಪ್ರಶ್ನೆ. ಈ ಚಿತ್ರದಲ್ಲಿ ಹಾರರ್ ಇದೆ, ಕಾಮಿಡಿನೂ ಇದೆ. ಆದರೆ ಈ ಚಿತ್ರದಲ್ಲಿ ದೆವ್ವ ಬರೋದು ಹೆದರಿಸಲು, ನಗಿಸಲು ಅಲ್ಲ. ಬೇರೆ ಕಾಮಿಡಿ ದೃಶ್ಯಗಳು ಇವೆ. ಚಿತ್ರದಲ್ಲಿ ಗೌತಮ್ ಅನ್ನುವ ದೆವ್ವ ಓಡಿಸುವವನ ಪಾತ್ರ ನನ್ನದು. ಜನರಿಗೆ ಸಂಪೂರ್ಣ ಮನರಂಜನೆ ಈ ಚಿತ್ರದ ಮೂಲಕ ಸಿಗಲಿದೆ’ ಎಂದರು.
ಚಿತ್ರದ ನಾಯಕಿ ಅದಿತಿ ಪ್ರಭುದೇವ, ಹಾಗೂ ಪ್ರಭು, ಮೇಘನಾ ಗಾಂವ್ಕರ್, ರಜಿನಿ, ಧರ್ಮ ಮುಂತಾದವರು ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದರು. ಹಾಗೆಯೇ ಚಿಕ್ಕಣ್ಣ, ಶಂಕರ್ ಅಶ್ವಥ್, ಕಿರಣ್, ಓಂ ಪ್ರಕಾಶ್ ರಾವ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ಅವಿನಾಶ್ ಹಿನ್ನಲೆ ಸಂಗೀತ, ಚಂದನ್ ಶೆಟ್ಟಿ ಸಂಗೀತ, ಅನೂಪ್ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.