ಶಿವರಾಜಕುಮಾರ್ ಹೊಸ ಚಿತ್ರ “ಹರಿಹರ’
Team Udayavani, Oct 2, 2017, 1:37 PM IST
ಶಿವರಾಜ್‌ಕುಮಾರ್ ಈಗ “ವಿಲನ್’ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿರುವುದು ಗೊತ್ತೇ ಇದೆ. ಈಗ ಹೊಸ ವಿಷಯವೆಂದರೆ, ಸದ್ದಿಲ್ಲದೆಯೇ ಅವರೀಗ ಹೊಸದೊಂದು ಸಿನಿಮಾಗೆ ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ. ಹೌದು, ನಟ ಕಮ್ ನಿರ್ದೇಶಕ ಪ್ರಮೋದ್ ಚಕ್ರವರ್ತಿ ಅವರು ನಿರ್ದೇಶಿಸುತ್ತಿರುವ ಚಿತ್ರಕ್ಕೆ ಶಿವರಾಜ್‌ಕುಮಾರ್ ಹೀರೋ. ಅಂದಹಾಗೆ, ಪ್ರಮೋದ್ ಚಕ್ರವರ್ತಿ ಆ ಚಿತ್ರಕ್ಕೆ “ಹರಿಹರ’ ಎಂದು ನಾಮಕರಣ ಮಾಡಿದ್ದಾರೆ.
ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿ ಹೊತ್ತಿರುವ ನಿರ್ದೇಶಕ ಪ್ರಮೋದ್ ಚಕ್ರವರ್ತಿ, ಶಿವಣ್ಣ ಅವರನ್ನು ಈ ಸಿನಿಮಾ ಮೂಲಕ ಹೊಸ ಗೆಟಪ್‌ನಲ್ಲಿ ತೋರಿಸಲು ಉತ್ಸಾಹದಲ್ಲಿದ್ದಾರೆ. ಇನ್ನು, ಡಾಲ್ಫಿನ್ ಮೀಡಿಯಾ ಹೌಸ್ ಬ್ಯಾನರ್‌ನಲ್ಲಿ ಮಹದೇವ್ ಬಿ, ಸಂಗಪ್ಪ ಬಿ, ಹಾಗು ಶೇಷು ಚಕ್ರವರ್ತಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಶೀರ್ಷಿಕೆ ನೋಡಿದರೆ, ಇಲ್ಲಿ ಶಿವಣ್ಣ ಡಬ್ಬಲ್ ರೋಲ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಎದುರಾಗಬಹುದು. ಆದರೆ, ಶಿವಣ್ಣ ಅವರಿಗಿಲ್ಲಿ ಎರಡು ಶೇಡ್ ಇದೆ.
ಎರಡು ರೀತಿಯ ವಿಭಿನ್ನ ಪಾತ್ರದ ಮೂಲಕ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ನಿರ್ದೇಶಕರ ಮಾತು. ಇದೊಂದು ಫ್ಯಾಮಿಲಿ ಸಬ್ಜೆಕ್ಟ್. ಮನರಂಜನೆಗೆ ಬರವಿಲ್ಲದಂತೆ ಮೂಡಿಬರುವ ಸಿನಿಮಾ ಇದು. ಸೆಂಟಿಮೆಂಟ್, ರಿವೇಂಜ್, ಲವ್ ಇತ್ಯಾದಿ ಅಂಶಗಳು ಇಲ್ಲಿವೆ. ಪಕ್ಕಾ ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರವಿದು. ಶಿವರಾಜ್‌ಕುಮಾರ್ ಅವರಿಗೆ ಪಕ್ಕಾ ಹೊಂದಿಕೆಯಾಗುವಂತಹ ಪಾತ್ರವಿಲ್ಲಿದೆ. ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಣ ನಡೆಯಲಿದ್ದು, ಎರಡು ಹಾಡುಗಳನ್ನು ಮಾತ್ರ ವಿದೇಶದಲ್ಲಿ ಚಿತ್ರೀಕರಿಸುವ ಯೋಚನೆ ಇದೆ.
ಇಲ್ಲಿ ಶಿವಣ್ಣ ಅವರಿಗೊಂದು ಚೇಂಜ್ ಓವರ್ ಎನಿಸುವಂತಹ ಪಾತ್ರ ಇದಾಗಿರುವುದರಿಂದ “ಇಂಡಿಯನ್’ ಸಿನಿಮಾದ ಮೇಕಪ್ ಮ್ಯಾನ್ ಅವರನ್ನೇ ಕರೆಸಿ, ಇಲ್ಲಿ ಮೇಕಪ್ ಮಾಡಿಸಲಾಗುತ್ತಿದೆ. ಅದಕ್ಕೆ ಶಿವಣ್ಣ ಕೂಡ ಒಪ್ಪಿದ್ದಾರೆ. ಯಾಕೆಂದರೆ, ಅದೊಂದು ವಿಶೇಷತೆವುಳ್ಳ ಪಾತ್ರ ಎನ್ನುವ ನಿರ್ದೇಶಕರು. ಈ ಹಿಂದೆ “ಭೀಷ್ಮ’ ಚಿತ್ರಕ್ಕೂ “ಇಂಡಿಯನ್’ ಸಿನಿಮಾದ ಮೇಕಪ್‌ಮ್ಯಾನ್ ಅವರನ್ನು ಮೊದಲ ಸಲ ಕನ್ನಡಕ್ಕೆ ಕರೆಸಲಾಗಿತ್ತು. ಈಗಲೂ ನಾವೇ ಕರೆಸುತ್ತಿದ್ದೇವೆ.
ಉಳಿದಂತೆ ಜಗದೀಶ್ ವಾಲಿ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಎಸ್.ಆರ್.ಕ್ರಿಶ್ ಅವರು ಐದು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ವಿ.ಮನೋಹರ್, ನಾಗೇಂದ್ರಪ್ರಸಾದ್ ಗೀತೆ ಬರೆಯಲಿದ್ದಾರೆ. ಬಸವರಾಜ್ ಅರಸ್ ಸಂಕಲನ ಮಾಡುತ್ತಿದ್ದಾರೆ. ಡಿಫರೆಂಟ್ ಡ್ಯಾನಿ ಹಾಗು ವಿಜಿ ಅವರ ಸ್ಟಂಟ್ಸ್ ಚಿತ್ರಕ್ಕಿದೆ. ಇನ್ನು, ಶಿವಣ್ಣನಿಗೆ ಇಲ್ಲಿ ಮೂವರು ನಾಯಕಿಯರು ಇದ್ದಾರೆ. ಸದ್ಯಕ್ಕೆ ಆಡಿಷನ್ ನಡೆಯುತ್ತಿದೆ. ಇಷ್ಟರಲ್ಲೇ ನಾಯಕಿಯರ ಆಯ್ಕೆ ಆಗಲಿದೆ.
ರಂಗಾಯಣ ರಘು ಸೇರಿದಂತೆ ಹಲವು ಕಲಾವಿದರು ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಶಿವಣ್ಣ “ವಿಲನ್’ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಆ ಸಿನಿಮಾ ಮುಗಿದ ಬಳಿಕ ನಮ್ಮ ಸಿನಿಮಾಗೆ ಡೇಟ್ ಕೊಡಲಿದ್ದಾರೆ. ಬಹುಶಃ ಡಿಸೆಂಬರ್ ಹೊತ್ತಿಗೆ ಚಿತ್ರ ಶುರುವಾಗುವ ಯೋಚನೆ ಇದೆ. “ಗೋಲ್‌ಮಾಲ್’ ಹಾಗು “ಸುಗ್ರೀವ’ ಸಿನಿಮಾ ನಂತರ ಗ್ಯಾಪ್ ಆಗಿತ್ತು. ಈಗ “ಹರಿಹರ’ ಮೂಲಕ ರೀ ಎಂಟ್ರಿಯಾಗುತ್ತಿದ್ದೇನೆ. ಕನ್ನಡಕ್ಕೆ ಇದೊಂದು ಬೇರೆ ರೀತಿಯ ಸಿನಿಮಾ ಆಗಲಿದೆ ಎನ್ನುತ್ತಾರೆ ಪ್ರಮೋದ್ ಚಕ್ರವರ್ತಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.