ಮತ್ತೆ ವಸಂತ! ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ


Team Udayavani, Sep 23, 2017, 4:28 PM IST

k-b-1.jpg

ಗೋಡೆ ಮೇಲೆ ಪೋಸ್ಟರ್‌ ನೋಡುತ್ತಿದ್ದರೆ ಆಸೆ ಆಗುತ್ತಿತ್ತಂತೆ. ಏಕೆಂದರೆ, ಈ ಹಿಂದೆ ವಸಂತ್‌ ಕುಮಾರ್‌ ಅಲ್ಲಲ್ಲ, ಕುಮಾರ್‌ ಬಂಗಾರಪ್ಪ ಸಹ ನಟನಾಗಿ ಗುರುತಿಸಿಕೊಂಡವರೇ ಅಲ್ಲವೇ? ಮಧ್ಯದಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರಿಂದ, ವೈಯಕ್ತಿಕ ಬದುಕಿನ ಏರಿಳಿತಗಳಿಂದ ಅವರು ಚಿತ್ರಗಳಲ್ಲಿ ನಟಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಇಂಥ ಸಂದರ್ಭದಲ್ಲಿ ಯಾವುದಾದರೂ ಪೋಸ್ಟರ್‌ ನೋಡಿದರೆ, ಕಟೌಟ್‌ ಕಂಡರೆ, ಮನಸ್ಸು ಮತ್ತೆ ಚಿತ್ರರಂಗದತ್ತ ಓಡುತ್ತಿತ್ತಂತೆ. ತಾನು ಚಿತ್ರರಂಗದಲ್ಲಿ ಇರಲೇಬೇಕು ಅಂತನಿಸುತ್ತಿತ್ತಂತೆ. ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಎನ್ನುವಂತಹ ಪರಿಸ್ಥಿತಿ. ಹೀಗಿರುವಾಗಲೇ ಅವರನ್ನೊಮ್ಮೆ “ಚಕ್ರವರ್ತಿ’ ಚಿತ್ರದ ನಿರ್ದೇಶಕ ಚಿಂತನ್‌ ಸಂಪರ್ಕಿಸಿದ್ದು, ತಮ್ಮ ಚಿತ್ರದಲ್ಲಿ ನಟಿಸುವಂತೆ ಕೋರಿಕೊಂಡಿದ್ದು. ಆರಂಭದಲ್ಲಿ ಬೇಡ ಎಂದರಂತೆ ಕುಮಾರ್‌. ಕೊನೆಗೆ ಮನಸ್ಸು ಬದಲಾಯಿಸಿ ಮತ್ತೆ ಬಣ್ಣ ಹಚ್ಚಿದ್ದಾರೆ. ಬಹಳ ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಿದ್ದರ‌ ಕುರಿತು ಅವರೇನಂತಾರೆ ಎಂಬ ಕುತೂಹಲ “ರೂಪತಾರಾ’ಗೂ ಇತ್ತು. ಅದೇ ಕುತೂಹಲದಿಂದ ಸದಾಶಿವನಗರದ ಅವರ ಮನೆಗೆ ಹೋಗಿದ್ದಾಯಿತು.

ನಾನು ಯಾವಾಗಪ್ಪ ಪೋಸ್ಟರ್‌ನಲ್ಲಿ ಕಾಣಿಸಿಕೊಳ್ಳೋದು?
ಇಂಥದ್ದೊಂದು ಆಸೆ ಹಲವು ಹೊಸಬರಲ್ಲಿರುತ್ತದೆ. ಆದರೆ, ಅದೆಷ್ಟೋ ಚಿತ್ರಗಳಲ್ಲಿ ನಟಿಸಿ, ಅದೆಷ್ಟೋ ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡ ಕುಮಾರ್‌ ಬಂಗಾರಪ್ಪ ಅವರಿಗೂ ಹೀಗನಿಸುತ್ತಿತ್ತಂತೆ. 14 ವರ್ಷಗಳ ಹಿಂದೆ ಬಿಡುಗಡೆಯಾದ “ರಕ್ತ ಕಣ್ಣೀರು’ ಅವರ ಅಭಿನಯದ ಕೊನೆಯ ಚಿತ್ರವಾಗಿತ್ತು. ಆ ನಂತರ ಅವರು ಯಾವುದೇ ಚಿತ್ರದಲ್ಲೂ ನಟಿಸಿರಲಿಲ್ಲ. ಅದಕ್ಕೆ ಕಾರಣ, ರಾಜಕಾರಣ.

“ರಾಜಕೀಯಕ್ಕಾಗಿ ಇಷ್ಟು ವರ್ಷಗಳ ಗ್ಯಾಪ್‌ ಆಯ್ತು. ರಾಜಕಾರಣ ಅಂದರೆ ಗೊತ್ತಲ್ಲ. ಡೆಡಿಕೇಟೆಡ್‌ ಆಗಿರಬೇಕು. ಮಧ್ಯೆ ಚುನಾವಣೆಗಳು, ಸಮಸ್ಯೆಗಳು … ಹೀಗೆ ಹಲವು ಕಾರಣಗಳಿಂದ ಆಸೆ ಇದ್ದರೂ ಮತ್ತೆ ಬಣ್ಣ ಹಚ್ಚುವುದಕ್ಕೆ ಸಾಧ್ಯವಾಗಿರಲೇ ಇಲ್ಲ. ಸಿನಿಮಾ ಪೋಸ್ಟರ್‌ ಮತ್ತು ಜಾಹೀರಾತುಗಳನ್ನ ನೋಡಿದರೆ ಆಸೆಯಾಗೋದು. ನಾನು ಇಲ್ಲಿರಬೇಕಿತ್ತು ಅಂತ ಅನಿಸೋದು. ಜನ ಸಹ ಹೋದಲ್ಲೆಲ್ಲಾ ಕೇಳ್ಳೋರು. ಎಷ್ಟೇ ಆದರೂ, ನಾನು ಮೂಲತಃ ಬಂದಿದ್ದು ಚಿತ್ರರಂಗದಿಂದಲ್ಲವೇ. ಇವತ್ತಿಗೂ ಜನ ನನ್ನ ಗುರುತಿಸೋದು ಅದೇ “ಅಶ್ವಮೇಧ’ ಚಿತ್ರದ “ಹೃದಯ ಸಮುದ್ರ ಕಲಕಿ …’ ಹಾಡಿನಿಂದ. ಆ ಹಾಡಿನಿಂದ ನನಗೆ ಒಂದು ಗುರುತು ಸಿಕ್ಕಿತು. ಜನ ಈಗಲೂ ಆ ಹಾಡನ್ನ ಮರೆತಿಲ್ಲ. ಹೀಗಿರೋವಾಗ ನಾನು ಮರೆಯೋದಕ್ಕೆ ಸಾಧ್ಯವಾ? ಆಸೆಯೇನೋ ಇತ್ತು. ಅವಕಾಶವೂ ಇತ್ತು. ಆದರೆ, ಸಮಯ ಇರಲಿಲ್ಲ. ಹೀಗಿರುವಾಗಲೇ ನಮ್ಮ ಇವರು ಬಂದರು’ ಎಂದರು ಕುಮಾರ್‌ ಬಂಗಾರಪ್ಪ.

ಯಾರ್ಯಾರು ಬಂದರು ಎಂದು ಲೆಕ್ಕ ಹಾಕಿದರೇನೋ ಕುಮಾರ್‌. ಕೊನೆಗೆ ಒಂದು ತೀರ್ಮಾನಕ್ಕೆ ಬಂದು, “ನಮ್ಮ ದಿನಕರ್‌, ಅಣಜಿ ಮತ್ತು ಚಿಂತನ್‌ ಬಂದು “ಚಕ್ರವರ್ತಿ’ಯ ಬಗ್ಗೆ ಹೇಳಿದರು. ನಾನು ಮಾಫಿಯಾದವನು, ದರ್ಶನ್‌ ಅವರ ಕಾಂಬಿನೇಷನ್‌ನಲ್ಲಿ ನನ್ನ ದೃಶ್ಯಗಳಿರುತ್ತವೆ ಅಂತೆಲ್ಲಾ ಹೇಳಿದರು. ನಾನು ಆ ತರಹ ಪಾತ್ರ ಎಲ್ಲಾ ಮಾಡಿರಲಿಲ್ಲ. 

ಹಾಗಾಗಿ ಬೇಡ ಅಂದೆ. ಕೊನೆಗೆ ಅವರ ಮೇಲಿನ ಅಭಿಮಾನಕ್ಕೆ ಒಪ್ಪಬೇಕಾಯಿತು. ನನ್ನ ಮಟ್ಟಿಗೆ ಅದು ಸಂಪೂರ್ಣ ಹೊಸಬರ ತಂಡ. ನಾನು ಅದುವರೆಗೂ ಅವರ್ಯಾರ ಜೊತೆಗೂ ಕೆಲಸ ಮಾಡಿರಲಿಲ್ಲ. ಆದರೆ, ಹಾಗಂತ ಅನಿಸಲೇ ಇಲ್ಲ. ಮೊದಲು ಕೆಲವು ಗಂಟೆ ಅಷ್ಟೇ ಅಪರಿಚಿತ ವಾತಾವರಣ. ಆ ನಂತರ ಇಡೀ ತಂಡ ಆತ್ಮೀಯವಾಯಿತು. ನನಗೆ ತಂಡ ಅಷ್ಟೇ ಅಲ್ಲ, ಮೇಕಿಂಗ್‌ ಸಹ ಹೊಸದು. ಆಗ ಕ್ಯಾಮೆರಾದಲ್ಲಿ ಸೌಂಡ್‌ ಬರೋದು. ಈಗ ಡಿಜಿಟಲ್‌. ಸ್ಟಾರ್ಟ್‌ ಯಾವಾಗ, ಕಟ್‌ ಯಾವಾಗ ಅನ್ನುವುದೇ ಗೊತ್ತಾಗುತ್ತಿರಲಿಲ್ಲ. ಇನ್ನು ರೀಟೇಕ್‌ ತಗೊಳ್ಳೋದು ಅಂದರೆ ಭಯ ಆಗೋದು. ಈಗ ಹಾಗೇನಿಲ್ಲ. ಒಟ್ಟಾರೆ ಒಂದು ದೊಡ್ಡ ಬದಲಾವಣೆಯಾಗಿದೆ. ಸ್ಪಾಟ್‌ ಎಡಿಟಿಂಗ್‌ ಮಾಡ್ತಾರೆ. ಹೊಡೆದಾಟದಲ್ಲಿ ಸಾಕಷ್ಟು ಸೇಫ್ಟಿ ಬಗ್ಗೆ ಗಮನಹರಿಸುತ್ತಾರೆ. ಒಟ್ಟಾರೆ ಹೇಳಬೇಕು ಎಂದರೆ ಈಗ ಬಹಳ ಪ್ರೋಫೆಶನಲ್‌ ಆಗಿದೆ ಅನಿಸುತ್ತೆ. ಇಲ್ಲಿರಬೇಕು ಅಂದರೆ ಪ್ರತಿಯೊಬ್ಬರು ಸಹ ಕೆಲಸ ಮಾಡಲೇಬೇಕು. ನಾನು ಬಂಗಾರಪ್ಪನವರ ಮಗ ಅಂತ ಹೇಳ್ಳೋಕೆ ಆಗಲ್ಲ ಅಥವಾ ಇನ್ನೇನೋ ಕಾರಣ ಕೊಡೋಕೆ ಆಗಲ್ಲ. ಜನ ನಮ್ಮನ್ನ ನೋಡೋದು ನಾವು ಮಾಡುವ ಪಾತ್ರದಿಂದ ಮತ್ತು ಪಾತ್ರ ಗುರುತಿಸಿಕೊಳ್ಳಬೇಕು ಅಂದರೆ ಅದಕ್ಕೆ ಸರಿಯಾದ ತಯಾರಿ ಮಾಡಿಕೊಂಡಿರಬೇಕು’ ಎನ್ನುತ್ತಾರೆ ಕುಮಾರ್‌ ಬಂಗಾರಪ್ಪ.

ಕುಮಾರ್‌ ಗಮನಿಸಿರುವಂತೆ, ಈ 14 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. “ಕಥೆ ಚೆನ್ನಾಗಿದ್ದರೆ ಯಾರು, ಎತ್ತ ಎಂದು ಕೇಳುವುದಿಲ್ಲ. ಜನ ಹೊಸತನ ಬಯಸುತ್ತಿದ್ದಾರೆ. ಆಗ ಫ್ಯಾಮಿಲಿ ಸಿನಿಮಾಗಳು ಹೆಚ್ಚು ಬರುತ್ತಿದ್ದವು. ಈಗ ಮನರಂಜನೆಗೆ ಹೆಚ್ಚು ಪ್ರಾಮುಖ್ಯತೆ. ತುಂಬಾ ಬದಲಾವಣೆಗಳಾಗಿವೆ. ಅದರಲ್ಲಿ ಅನೂಕಲತೆಗಳೂ ಇವೆ. ಕಲಾವಿದರು ಹೆಚ್ಚು ಪ್ರೊಫೆಶನಲ್‌ ಆಗಿದ್ದಾರೆ, ಡಬ್ಬಿಂಗ್‌ ಬದಲಾಗಿದೆ, ಕ್ಯಾಮೆರಾಗಳು ಹೊಸದು ಬಂದಿವೆ. ಇನ್ನು ಸಂಗೀತದಲ್ಲೇ ತೆಗೆದುಕೊಳ್ಳಿ. ವೆಸ್ಟರ್ನ್ ಸಂಗೀತ ಬಂತು ಅಂತ ನಮ್ಮ ಸಂಗೀತಕ್ಕೇನೂ ಆಗಲಿಲ್ಲ. ಫ್ಯೂಶನ್‌ ಬಂದಿರಬಹುದು, ಪಾಶ್ಚಿಮಾತ್ಯ ಸಂಗೀತದ ಪ್ರಭಾವ ಇರಬಹುದು. ಏನೇ ಆದರೂ ನಮ್ಮ ಸಂಸ್ಕೃತಿಯನ್ನು ಬಿಟ್ಟು ಸಿನಿಮಾ ಹೋಗಿಲ್ಲ. ಅಷ್ಟೆಲ್ಲಾ ಸೂಪರ್‌ ಹೀರೋಗಳ ಮಧ್ಯೆ “ಬಾಹುಬಲಿ’ ಗೆದ್ದಿದ್ದಾನೆ. “ಚೋಟಾ ಭೀಮ್‌’ ಎಲ್ಲರಿಗೂ ಇಷ್ಟವಾಗಿದ್ದಾನೆ. ಇದೆಲ್ಲಾ ನೋಡಿದರೆ, ಖುಷಿಯಾಗುತ್ತದೆ. ಈ ತರಹ ಪ್ರಯತ್ನಗಳು ಕನ್ನಡದಲ್ಲೂ ಆಗಬೇಕು ಎಂಬುದು ನನ್ನ ಆಸೆ. ನಮ್ಮಲ್ಲಿ ಸಾಕಷ್ಟು ವಿಷಯ ಇದೆ. ಪ್ರಯೋಗಗಳಾಗಬೇಕು’ ಎನ್ನುತ್ತಾರೆ ಅವರು.

ಆವತ್ತಿನಿಂದ ಉಪಯೋಗಿಸಿಲ್ಲ
ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ, ಕುಮಾರ್‌ ಬಂಗಾರಪ್ಪ ಮೇಕಪ್‌ ಬಳಸುವುದಿಲ್ಲ ಎಂಬುದು. ಅದಕ್ಕೆ ಒಂದು ಕಾರಣವೂ ಇದೆ. “ಕ್ಷೀರ ಸಾಗರ’ ಚಿತ್ರದ ಚಿತ್ರೀಕರಣ ಬೆಂಗಳೂರು ಅರಮನೆಯಲ್ಲಿ ಶುರುವಾಗಿತ್ತಂತೆ. ಮೊದಲ ದಿನದ ಮೊದಲ ಶಾಟ್‌ ಅದು. ಮೇಕಪ್‌ ಹಾಕಿಕೊಂಡು ಬಂದ ಕುಮಾರ್‌ ಅವರನ್ನು ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್‌ ಸೂಕ್ಷ್ಮವಾಗಿ ಗಮನಿಸಿ, “ಸ್ವಲ್ಪ ಮುಖ ತೊಳೆದು ಬರಿ¤àಯ’ ಎಂದರಂತೆ. ಆಗಷ್ಟೇ ಮೇಕಪ್‌ ಆಗಿದೆ. ಇನ್ನೂ ಒಂದು ಶಾಟ್‌ ಸಹ ಆಗಿಲ್ಲ. ಹೀಗಿರುವ ಅವರು ಯಾಕೆ ಹೀಗೆ ಹೇಳುತ್ತಿದ್ದಾರೆ ಅಂತನಿಸಿ, ಮೇಕಪ್‌ ತೊಳೆದು ಬಂದರಂತೆ ಕುಮಾರ್‌. ಆ ನಂತರ ರಾವ್‌ ಅವರು, ಪ್ಯಾನ್‌ಕೇಕ್‌ ತೆಗೆದು, ಬ್ರಶ್‌ನ ಅದರ ಮೇಲೆ ಸವರಿ, ಕೊಂಚ ಟಚಪ್‌ ಮಾಡಿದರಂತೆ. “ನಿನಗೆ ಮೇಕಪ್‌ ಅವಶ್ಯಕತೆ ಇಲ್ಲ. ಹಾಗೆಯೇ ಚೆನ್ನಾಗಿ ಕಾಣುತ್ತೀಯ’ ಅಂದರಂತೆ. ಅಲ್ಲಿಂದ ಶುರುವಾಗಿದ್ದು, ಈಗಲೂ ಕುಮಾರ್‌ ಮೇಕಪ್‌ ಬಳಸುವುದಿಲ್ಲ. “ಅಮೇರಿಕಾಗೆ ಹೋಗಿದ್ದಾಗ ಮೇಕಪ್‌ ಕಿಟ್‌ ತಂದಿದ್ದು. ರಾವ್‌ ಅವರು ಹೇಳಿದ ಮೇಲೆ ಇದುವರೆಗೂ ಯೂಸ್‌ ಮಾಡಿಲ್ಲ. ಸುಮ್ಮನೆ ಲೈಟ್‌ ಆಗಿ ಟಚಪ್‌ ಅಷ್ಟೇ ಮಾಡಿಕೊಳ್ಳುತ್ತೇನೆ’ ಎನ್ನುತ್ತಾರೆ ಅವರು.

ಅವರು ಅಗಾಧವಾದ ಜ್ಞಾನ ಭಂಡಾರ
ಪೋಷಕ ಕಲಾವಿದರಿಲ್ಲದೆ, ಒಂದು ಚಿತ್ರಕ್ಕೆ ಕಳೆಯೇ ಇರುವುದಿಲ್ಲ ಎನ್ನುತ್ತಾರೆ ಕುಮಾರ್‌. “ಡಾ ರಾಜಕುಮಾರ್‌ ಚಿತ್ರಗಳನ್ನು ನೋಡಿ. ಅಲ್ಲಿ ಅಣ್ಣ, ಅತ್ತಿಗೆ ಅಂತ ಸಂಬಂಧ ಇರೋದು. ಅದಲ್ಲದೆ ಅಡುಗೆ ಭಟ್ಟ, ಡ್ರೈವರ್‌ ಮುಂತಾದ ಪಾತ್ರಗಳು ಚಿತ್ರದ ತೂಕ ಹೆಚ್ಚಿಸೋದು. ಈಗ ಕೆಲವು ಪಾತ್ರಗಳ ಸುತ್ತ ಚಿತ್ರ ಸುತ್ತುತ್ತದೆ. ಈಗ ಹೀರೋನೇ ಕಾಮಿಡಿಯನ್ನೂ ಮಾಡುತ್ತಾನೆ. ಪ್ಯಾಥೋನೂ ಮಾಡುತ್ತಾನೆ. He runs the entire show. ಒಂದು ಚಿತ್ರಕ್ಕೆ ಬಾಲಣ್ಣ ಅವರೂ ಬೇಕು, ಅಶ್ವತ್ಥ್, ಪಂಡರೀಬಾಯಿ ಎಲ್ಲರೂ ಬೇಕು. ಇತ್ತೀಚೆಗೆ ಒಂದು ಚಿತ್ರ ನೋಡುತ್ತಿದ್ದೆ. ಅನಂತ್‌ನಾಗ್‌ ಅವರು ಅದೆಲ್ಲೋ ಮೂಲೆಯಲ್ಲಿದ್ದರು. ನೋಡಿ ಬಹಳ ಬೇಸರವಾಯಿತು. ಅಂತಹ ಒಬ್ಬ ದೊಡ್ಡ ನಟನನ್ನು ಇಟ್ಟುಕೊಂಡು ಆ ತರಹ ಮಾಡಬಾರದು. ಅಂತಹ ನಟರು ಗುಂಪಿನಲ್ಲಿರಬಾರದು. You cant do that to him. ನಾನು “ಝೇಂಕಾರ’ ಎಂಬ ಚಿತ್ರ ಮಾಡಿದ ಸಂದರ್ಭದಲ್ಲಿ, ಅವರು ನನ್ನ ತಂದೆಯ ಪಾತ್ರ ಮಾಡಿದ್ದರು. ಆ ಚಿತ್ರವನ್ನ ನಾನೇ ವಿತರಣೆ ಮಾಡಿದ್ದೆ. ಪೋಸ್ಟರ್‌ನಲ್ಲಿ ಅನಂತ್‌ನಾಗ್‌ ಅವರ ದೊಡ್ಡ ಫೋಟೋ ಹಾಕಿ, ನನ್ನ ಫೋಟೋ ಚಿಕ್ಕದ್ದು ಮಾಡಿದ್ದೆ. ಇನ್ನು ಚಿತ್ರದಲ್ಲಿ ಅವರ ಹೆಸರು ಮೊದಲು ಬಂದು, ನನ್ನ ಹೆಸರು ನಂತರ ಹಾಕಿಸಿದ್ದೆ. ಅವರು ಅಗಾಧವಾದ ಜ್ಞಾನ ಭಂಡಾರ. ಆದರೆ, ಯಾವತ್ತೂ ತೋರಿಸಿಕೊಳ್ಳುವುದಿಲ್ಲ’ ಎಂದು ಅನಂತ್‌ನಾಗ್‌ ಬಗ್ಗೆ ತುಂಬು ಹೃದಯದಿಂದ ಮಾತನಾಡುತ್ತಾರೆ ಅವರು.

ಈ ಹಾಡಿನಿಂದ ದೊಡ್ಡ ಹೀರೋ ಆಗ್ತೀಯ

ಡಾ. ರಾಜಕುಮಾರ್‌ ಅಲ್ಲಿಯವರೆಗೂ ಬೇರೆಯವರ ಚಿತ್ರಗಳಿಗೆ ಹಾಡಿರಲಿಲ್ಲ. ಅವರು ಮೊದಲಿಗೆ ಹಾಡಿದ್ದು ಕುಮಾರ್‌ ಬಂಗಾರಪ್ಪ ಅಭಿನಯದ “ಅಶ್ವಮೇಧ’ ಚಿತ್ರಕ್ಕಾಗಿ. ಆ ಹಾಡು ಇವತ್ತಿಗೂ ಜನಪ್ರಿಯ. ಅದೇ “ಅಶ್ವಮೇಧ’ ಚಿತ್ರದ “ಹೃದಯ ಸಮುದ್ರ ಕಲಕಿ, ಹತ್ತಿದೆ ದ್ವೇಷದ ಬೆಂಕಿ .’ ಹಾಡು. “ಅಪ್ಪಾಜಿ ಅವರು ಅದುವರೆಗೂ ಬೇರೆಯವರ ಚಿತ್ರಗಳಿಗೆ ಹಾಡುತ್ತಿರಲಿಲ್ಲ. “ಅಶ್ವಮೇಧ’ ಚಿತ್ರದ ಟೈಟಲ್‌ ಸಾಂಗ್‌ ಹಾಡುವುದಕ್ಕೆ ಕೇಳಿದೆ. ತಕ್ಷಣವೇ, ಯಾವಾಗ ರೆಕಾರ್ಡಿಂಗ್‌ ಎಂದು ಕೇಳಿದರು. ತಕ್ಷಣ ಹಾಡು ಬರೆಸಿದೆ. ಕೇಳಿ, ಚೆನ್ನಾಗಿದೆ ಎಂದರು. ಮೊದಲು ಅದೊಂದು ಹಿನ್ನೆಲೆ ಹಾಡು ಎಂದು ಫಿಕ್ಸ್‌ ಆಗಿತ್ತು. ಚಿತ್ರೀಕರಣ ಮಾಡುವಾಗ ಡ್ಯಾನ್ಸ್‌ ಮಾಸ್ಟರ್‌, ಯಾಕೋ ಕಿಕ್‌ ಬರುತ್ತಿಲ್ಲ ಎಂದರು. ಬರೀ ಹಿನ್ನೆಲೆ ಹಾಡಾಗಿ ಬೇಡ, ಅದಕ್ಕೆ ಲಿಪ್‌ ಮೂವ್‌ಮೆಂಟ್‌ ಕೊಡಿ ಎಂದರು. ಡಾ. ರಾಜಕುಮಾರ್‌ ಅವರು ಹಾಡಿದ ಹಾಡಿಗೆ ನಾನು ಲಿಪ್‌ ಮೂವೆಂಟ್‌ ಕೊಡೋದಾ ಅಂತ ಭಯವಾಯಿತು. ಕೊನೆಗೆ ಅವರಿಗೆ ರಷಸ್‌ ತೋರಿಸಿದೆ. ಹಾಡು ನೋಡಿದವರೇ, “ಇಲ್ಲ ಕಂದ, ಇದೇ ಬಹಳ ಚೆನ್ನಾಗಿದೆ. ಹೀಗೇ ಇರಲಿ ಬಿಡು’ ಎಂದಿದ್ದರು. ಆ ಚಿತ್ರ ಬಿಡುಗಡೆಯಾದಾಗ, ಮೊದಲ ದಿನ ಅವರಿಗೆ ಊರ್ವಶಿ ಚಿತ್ರಮಂದಿರದಲ್ಲಿ ಚಿತ್ರ ತೋರಿಸಿದ್ದೆ. ಚಿತ್ರ ನೋಡಿದ ಅವರು, “ಈ ಹಾಡಿನಿಂದ ನೀನು ದೊಡ್ಡ ಹೀರೋ ಆಗ್ತಿàಯ’ ಎಂದು ಹೇಳಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಕುಮಾರ್‌ ಬಂಗಾರಪ್ಪ.

ಹೊಸ ಚಿತ್ರದಲ್ಲಿ ರಾಜ್‌ ಕೊನೆ ಹಾಡು

ಕುಮಾರ್‌ ಬಂಗಾರಪ್ಪ, ಸದ್ಯದಲ್ಲೇ ಹೊಸ ಚಿತ್ರವೊಂದನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ. ಈ ಚಿತ್ರದಲ್ಲಿ ಡಾ. ರಾಜಕುಮಾರ್‌ ಅವರ ಕೊನೆಯ ಹಾಡೊಂದನ್ನು ಬಳಸಿಕೊಳ್ಳುತ್ತಾರಂತೆ. “ಬಹಳ ವರ್ಷಗಳ ಹಿಂದೆ ಒಂದು ಚಿತ್ರ ನಿರ್ಮಿಸುವುದಕ್ಕೆ ತಯಾರಿ ನಡೆಸಿದ್ದೆ. ಆಗ ಅಪ್ಪಾಜಿ ಅವರಿಂದ ಒಂದು ಹಾಡನ್ನೂ ಹಾಡಿಸಿದ್ದೆ. ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಹಾಡು ಅದು. ಆ ನಂತರ ಏನೋ ಆಗಿ, ಆ ಚಿತ್ರವನ್ನು ಶುರು ಮಾಡುವುದಕ್ಕೆ ಸಾಧ್ಯವಾಗಲೇ ಇಲ್ಲ. ಆ ಚಿತ್ರಕ್ಕೆಂದು ಮಾಡಿಟ್ಟುಕೊಂಡಿದ್ದ ಹಾಡು, ಇನ್ನೂ ನನ್ನ ಬಳಿಯೇ ಇದೆ. ಆ ಹಾಡನ್ನು ಕೊಡಿ ಎಂದು ಹಂಸಲೇಖ ಸಹ ಕೇಳಿದರು. ಆದರೆ, ನಾನು ಯಾರಿಗೂ ಕೊಟ್ಟಿಲ್ಲ. ಆ ಹಾಡನ್ನು ಮೂಲವಾಗಿಟ್ಟುಕೊಂಡು, ಈಗೊಂದು ಚಿತ್ರ ಮಾಡುವ ಯೋಚನೆ ಇದೆ. ಸದ್ಯಕ್ಕೆ ಆ ಚಿತ್ರದ ತಯಾರಿ ನಡೆಯುತ್ತಿದೆ. ಚುನಾವಣೆಗೆ ಇನ್ನೊಂದು ವರ್ಷವಿದೆ. ಅಷ್ಟರಲ್ಲಿ ಚಿತ್ರ ಮಾಡಬೇಕು ಎಂಬ ಆಸೆ ಇದೆ’ ಎನ್ನುತ್ತಾರೆ ಕುಮಾರ್‌ ಬಂಗಾರಪ್ಪ.

ಬರಹ: ಚೇತನ್‌ ನಾಡಿಗೇರ್‌; ಚಿತ್ರಗಳು: ಡಿ.ಸಿ. ನಾಗೇಶ್‌

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.