ಸಸ್ಪೆನ್ಸ್ ಥ್ರಿಲ್ಲರ್ “ಚೆಕ್‌ಪೋಸ್ಟ್’
Team Udayavani, Feb 10, 2019, 5:47 AM IST
“ಕಮರೊಟ್ಟು ಚೆಕ್‌ಪೋಸ್ಟ್’ ಅಂದಾಕ್ಷಣ, “ರಂಗಿತರಂಗ’ ಚಿತ್ರದ ಹಾಡೊಂದರಲ್ಲಿ ಬರುವ “ಕಮರೊಟ್ಟು…’ ಎಂಬ ಊರು ನೆನಪಾಗುತ್ತೆ. ಅದೇ ಹೆಸರಿಟ್ಟುಕೊಂಡು ಚಿತ್ರವೊಂದು ತಯಾರಾಗುತ್ತಿದೆ ಅಂತ ಈ ಹಿಂದೆ ಹೇಳಲಾಗಿತ್ತು. ಈಗ ಆ ಚಿತ್ರದ ಚಿತ್ರೀಕರಣ ಮುಗಿದು, ಸೆನ್ಸಾರ್ ಅಂಗಳಕ್ಕೆ ಹೋಗಿ ಪ್ರಮಾಣ ಪತ್ರವನ್ನು ಪಡೆದಿದೆ. ಇನ್ನೇನಿದ್ದರೂ, ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ ಚಿತ್ರ.
ಚಿತ್ರ ತಯಾರು ಮಾಡಿ, ಬಿಡುಗಡೆ ಮಾಡುವುದು ಸುಲಭದ ಕೆಲಸವಲ್ಲ. ಅದರಲ್ಲೂ ಹೊಸ ಪ್ರತಿಭೆಗಳ ಸಿನಿಮಾ ಅಂದರೆ, ಚಿತ್ರಮಂದಿರಗಳು ಸಿಗುವುದಿರಲಿ, ಬಿಡುಗಡೆ ಮಾಡಲು ಬರುವ ವಿತರಕರದ್ದೇ ಸಮಸ್ಯೆ. ಆದರೆ, “ಕಮರೊಟ್ಟು ಚೆಕ್‌ಪೋಸ್ಟ್’ ಚಿತ್ರವನ್ನು ವೀಕ್ಷಿಸಿದ ವಿತರಕರೊಬ್ಬರೂ, ಇದೇ ಮೊದಲ ಬಾರಿಗೆ ಈ ಚಿತ್ರ ವಿತರಣೆ ಮಾಡುವುದರ ಜೊತೆಗೆ ವಿತರಕರಾಗಿ ಎಂಟ್ರಿಯಾಗುತ್ತಿದ್ದಾರೆ.
ಅಂದಹಾಗೆ, ವಿತರಕ ಜಯಣ್ಣ ಅವರ ಜೊತೆ ಇದ್ದ ಚೇತನ್‌ರಾಜ್ ಅವರೀಗ “ಕಮರೊಟ್ಟು ಚೆಕ್‌ಪೋಸ್ಟ್’ ಚಿತ್ರವನ್ನು ವಿತರಣೆ ಮಾಡಲು ಮುಂದಾಗಿದ್ದಾರೆ. ಚಿತ್ರ ನೋಡಿದ ಚೇತನ್‌ರಾಜ್, ಹೊಸಬರ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ಗೆಳೆಯರ ಜೊತೆಗೂಡಿ ಚಿತ್ರ ನಿರ್ದೇಶಿಸಿರುವ ಪರಮೇಶ್ ಅವರು ಚಿತ್ರ ಬಿಡುಗಡೆ ಮಾಡುವ ಬಗ್ಗೆ ಸಾಕಷ್ಟು ಗೊಂದಲದಲ್ಲಿದ್ದಾಗ, ಒಂದಷ್ಟು ಆಪ್ತರಿಗೆ ಚಿತ್ರ ತೋರಿಸುವ ನಿರ್ಧಾರ ಮಾಡಿದ್ದಾರೆ.
ಆಗ ಚೇತನ್ ರಾಜ್ ಕೂಡ ಚಿತ್ರ ವೀಕ್ಷಿಸಿದ್ದು, ಅವರಿಗೆ ಸಿನಿಮಾದಲ್ಲಿ ಒಳ್ಳೆಯ ಕಥೆ ಮತ್ತು ಗುಣಮಟ್ಟ ಇದೆ ಎಂದೆನಿಸಿ, ಚಿತ್ರ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಅಂದಹಾಗೆ, ಮಾರ್ಚ್ ವೇಳೆಗೆ “ಕಮರೊಟ್ಟು ಚೆಕ್‌ಪೋಸ್ಟ್’ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. ಈಗಾಗಲೇ ಚಿತ್ರ ಫಸ್ಟ್‌ಲುಕ್ ರಿಲೀಸ್ ಆಗಿದ್ದು, ರಾಘವೇಂದ್ರ ರಾಜ್‌ಕುಮಾರ್ ಮತ್ತು ಶಿವರಾಜಕುಮಾರ್ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
“ಕಮರೊಟ್ಟು ಚೆಕ್‌ಪೋಸ್ಟ್’ ಚಿತ್ರದ ಫಸ್ಟ್‌ಲುಕ್ ಟ್ರೇಲರ್‌ನಲ್ಲೊಂದು ವಿಶೇಷವಿದೆ. ಅದೇನೆಂದರೆ, ನಿರ್ದೇಶಕರು ಡಾ.ರಾಜಕುಮಾರ್ ಹಾಗೂ ವರದಣ್ಣ ಅವರಿಬ್ಬರ ಭಾವಚಿತ್ರದೊಂದಿಗೆ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಅದನ್ನು ವೀಕ್ಷಿಸಿ, ಖುಷಿಗೊಂಡ ರಾಘವೇಂದ್ರ ರಾಜಕುಮಾರ್, ಫಸ್ಟ್‌ಲುಕ್ ಟ್ರೇಲರ್ ಮೆಚ್ಚಿಕೊಂಡಿದ್ದಲ್ಲದೆ, ಸಿನಿಮಾ ನೋಡುವ ಬಯಕೆ ವ್ಯಕ್ತಪಡಿಸಿದ್ದಾರಂತೆ. ಇನ್ನು ಈ ಚಿತ್ರದ ಮತ್ತೂಂದು ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಊಸರವಳ್ಳಿಯನ್ನು ಅನಿಮೇಷನ್‌ನಲ್ಲಿ ಸಿದ್ಧಪಡಿಸಲಾಗಿದೆ.
ಅದು ಕೂಡಾ ಚಿತ್ರದ ಪ್ರಮುಖ ಪಾತ್ರವಾಗಿದ್ದು, ಚಿತ್ರದುದ್ದಕ್ಕೂ ಬಳಕೆ ಮಾಡಲಾಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಎಂದಷ್ಟೇ ಹೇಳುವ ಪರಮೇಶ್, ಚೆಕ್‌ಪೋಸ್ಟ್ ಬಳಿ ನಡೆದ ಆಕ್ಸಿಡೆಂಟ್‌ವೊಂದರ ಸತ್ಯಘಟನೆ ಆಧರಿಸಿ ಚಿತ್ರ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ಸನತ್ ಮತ್ತು ಉತ್ಪಲ್ ನಾಯಕರಾದರೆ, ಅವರಿಗೆ ಸ್ವಾತಿ ಕೊಂಡೆ ಹಾಗೂ ಅಹಲ್ಯಾ ನಾಯಕಿಯರಾಗಿ ನಟಿಸಿದ್ದಾರೆ. ಮಡಿಕೇರಿ, ಮಂಗಳೂರು ಸುತ್ತಮುತ್ತ ಸುಮಾರು 35 ದಿನಗಳ ಕಾಲ ಚಿತ್ರೀಕರಣವಾಗಿದೆ. ಚಿತ್ರಕ್ಕೆ ಎ.ಟಿ. ರವೀಶ್ ಅವರ ಸಂಗೀತವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.